ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಶ್ನೆ ಒಂದು– ಪ್ರಯೋಜನ ಹಲವು

ಮಕ್ಕಳು ಬೆಳೆಯತೊಡಗಿದಂತೆ ಪ್ರಶ್ನೆ ಕೇಳುವ ಉತ್ಸಾಹ ಅವರಲ್ಲಿ ಜರ್‍ರನೆ ಇಳಿಯುವುದೇಕೆ?
Last Updated 26 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಅದು, ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ. ಉಪನ್ಯಾಸದ ನಂತರ ಪ್ರಶ್ನೋತ್ತರ ಅವಧಿಯಲ್ಲಿ ಸಂದೇಹ, ಅನುಮಾನ, ಹೆಚ್ಚಿನ ಮಾಹಿತಿ, ವಿವರಣೆ ಬೇಕಾದಲ್ಲಿ ಪ್ರಶ್ನೆಗಳನ್ನು
ಕೇಳಲು ಅವಕಾಶವಿತ್ತು. ಅಲ್ಲಿದ್ದ ಸುಮಾರು ನೂರು ವಿದ್ಯಾರ್ಥಿಗಳಲ್ಲಿ ಒಬ್ಬರೂ ಬಾಯಿ ಬಿಡಲಿಲ್ಲ. ಕೆಲವರನ್ನು ಉಪನ್ಯಾಸಕರೇ ಹೆಸರಿಸಿ, ಏನನ್ನಾದರೂ ಕೇಳುವಂತೆ ಪುನಃ ಪುನಃ ಒತ್ತಾಯಿಸಿದರೂ ಮೌನವೇ ಪ್ರಶ್ನೆಯಾಗಿತ್ತು! ಸಂವಾದದ ರೂಪದಲ್ಲಿ ವಿಷಯವನ್ನು ಮನದಟ್ಟು ಮಾಡಿಸುವ ಪ್ರಯತ್ನ ವಿಫಲವಾಗಿತ್ತು.

ಕಾರ್ಯಕ್ರಮ ಮುಗಿಸಿ ಹೊರ ದಾಟುತ್ತಿದ್ದಂತೆಯೇ ವಿದ್ಯಾರ್ಥಿನಿಯರು ಉಪನ್ಯಾಸಕರನ್ನು ಮುತ್ತಿಕೊಂಡು ವಿಧ ವಿಧವಾದ ಪ್ರಶ್ನೆ ಕೇಳತೊಡಗಿದರು. ಅವರ ಸಂದೇಹಗಳಿಗೆ ತಾಳ್ಮೆಯಿಂದ ಉತ್ತರಿಸಿ ‘ಇದನ್ನೆಲ್ಲಾ ಕ್ಲಾಸ್‍ರೂಮಲ್ಲೇ ಉಪನ್ಯಾಸದ ಅವಧಿಯಲ್ಲಿ ಕೇಳಬಹುದಿತ್ತಲ್ಲ, ಆಗ ಒಬ್ಬರೂ ಬಾಯಿ ಬಿಡಲಿಲ್ಲ’ ಎಂದು ಮೆಲುವಾಗಿ ಗದರಿದಾಗ, ‘ಅಲ್ಲಿ ಕೇಳಕ್ಕೆ ಒಂಥರಾ ಆಗುತ್ತೆ ಸರ್. ಆಮೇಲೆ ಎಲ್ಲರೂ ಆಡ್ಕೊಳ್ಳಕ್ಕೆ ಶುರು ಮಾಡಿದ್ರೆ ಅಂತ ಭಯ’ ಎಂದಾಗ ಕಾಲೇಜು ಮಕ್ಕಳ ಈ ಪರಿಯ ಮನಃಸ್ಥಿತಿ ಆತಂಕ ತಂದಿತ್ತು!

ಪ್ರಾಥಮಿಕ ಶಾಲಾ ಮಕ್ಕಳಿಗೆ ಪರಿಸರ ನೈರ್ಮಲ್ಯದ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ವೊಂದರಲ್ಲಿ ಕಾಣಿಸಿದ್ದು ಸಂಪೂರ್ಣ ಬೇರೆಯದ್ದೇ ಚಿತ್ರ. ಪ್ಲಾಸ್ಟಿಕ್ ಕಸ, ಸೊಳ್ಳೆಗಳು, ಓಝೋನ್ ಪದರ ಅಂತೆಲ್ಲಾ ಮಕ್ಕಳದ್ದು ತಣಿಯದ ಕುತೂಹಲ. ಪೈಪೋಟಿಗೆ ಬಿದ್ದವರಂತೆ ಒಬ್ಬರ ನಂತರ ಒಬ್ಬರು ಪ್ರಶ್ನೆ ಕೇಳುವವರೆ. ಮನಸ್ಸಲ್ಲಿ ಮೂಡಿದ್ದನ್ನು ಕೇಳಲು ಅಲ್ಲಿ ಹಿಂಜರಿಕೆಯಾಗಲಿ, ಹೆದರಿಕೆಯಾಗಲಿ ಒಂಚೂರೂ ಇರಲಿಲ್ಲ. ಆ ಚಿಣ್ಣರ ಪ್ರಶ್ನೆಗಳ ಸುರಿಮಳೆಯಲ್ಲಿ ಉಪ ನ್ಯಾಸಕರಿಗೆ ತರಗತಿ ಮುಗಿಸುವುದೇ ಸವಾಲಾಗಿತ್ತು.

ಹೌದು, ಪ್ರಶ್ನಿಸುವ ಮನೋಭಾವ ಚಿಕ್ಕ ಮಕ್ಕಳಲ್ಲಿ ಅತಿ ಹೆಚ್ಚು. ಅವರ ಕುತೂಹಲಕ್ಕೆ ಕೊನೆ ಮೊದಲೆಂಬುದಿಲ್ಲ. ಎಲ್ಲದರ ಮೇಲೂ ಆಸಕ್ತಿ. ಗೊತ್ತಿರದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ತುಡಿತ. ಪ್ರಶ್ನಿಸುವಾಗ ಮುಜುಗರ, ಹಿಂಜರಿಕೆಯ ಭಾವನೆಯಿರುವುದಿಲ್ಲ. ಇತರರು ತಪ್ಪು ತಿಳಿದರೆ ಎಂಬ ಯೋಚನೆಯೇ ಬಾರದ ವಯಸ್ಸದು. ಅದು ಯಾಕೆ, ಇದು ಯಾಕೆ ಎಂದು ಪ್ರಶ್ನಿಸುವ ಮಗುವು ವಿಷಯ ತಿಳಿದುಕೊಳ್ಳುವುದಕ್ಕಷ್ಟೇ ಪ್ರಶ್ನಿಸುವುದಿಲ್ಲ, ಪ್ರಶ್ನಿಸುತ್ತಾ ಹೋಗುವುದು ಅದಕ್ಕೆ ಒಂಥರಾ ಖುಷಿಯ ವಿಚಾರ.

ಎಳೆಯರ ಮಾತುಕತೆಯಲ್ಲಿ ಶೇ 70-80ರಷ್ಟು ಪ್ರಶ್ನೆಗಳೇ ತುಂಬಿರುತ್ತವೆ ಎನ್ನುತ್ತದೆ ಅಧ್ಯಯನ. ಇನ್ನು ಶಾಲೆಯಲ್ಲಿ ಒಂದು ಮಗು ಪ್ರಶ್ನೆ ಹಾಕಿದರೆ ಮುಗಿಯಿತು, ಇದು ಇತರ ಮಕ್ಕಳಲ್ಲೂ ತಾವೂ ಕೇಳಬೇಕೆಂಬ ಪ್ರೇರಣೆ ಹುಟ್ಟುಹಾಕುತ್ತದೆ.

ಮಕ್ಕಳು ಬೆಳೆಯುತ್ತಿದ್ದಂತೆ ಕೇಳುವ ಉತ್ಸಾಹ ಜರ್‍ರನೆ ಇಳಿಯುತ್ತದೆ. ಹದಿಹರೆಯಕ್ಕೆ ಕಾಲಿಡುತ್ತಿ ದ್ದಂತೆಯೇ ತಾವೀಗ ದೊಡ್ಡವರಾಗಿದ್ದೇವೆ ಎಂಬ ಭಾವನೆಯು ಪ್ರಶ್ನೆ ಮಾಡುವ ಮನೋಭಾವಕ್ಕೆ ಬ್ರೇಕ್ ಹಾಕುತ್ತದೆ. ಅನುಮಾನ, ಗೊಂದಲ, ಅರ್ಥವಾಗದ ವಿಚಾರಗಳನ್ನು ಮುಕ್ತವಾಗಿ ಕೇಳಲು ಏನೋ ಹಿಂಜರಿಕೆ, ನಾಚಿಕೆ, ಮುಜುಗರ, ಭೀತಿ, ಕೀಳರಿಮೆ, ಸಹಪಾಠಿಗಳು ಹೀಯಾಳಿಸುವರೆಂಬ ಆತಂಕ, ಪ್ರಶ್ನೆ ಕೇಳಿದರೆ ವೃಥಾ ಶಿಕ್ಷಕರ ಕಣ್ಣಿಗೆ ಬೀಳುವ ಚಿಂತೆ, ಅವರು ಗದರಿದರೆ ಎಂಬ ಹೆದರಿಕೆ, ತನ್ನನ್ನು ಮೂರ್ಖ ಎಂದು ಬ್ರ್ಯಾಂಡ್ ಮಾಡಿದರೆ ಎಂಬ ತಲ್ಲಣ, ಕೇಳುವ ಮನಸ್ಸಿಲ್ಲದಿರುವುದು, ಎದ್ದು ಪ್ರಶ್ನೆ ಕೇಳಲು ಸೋಮಾರಿತನ, ಯಾವುದೂ ಅರ್ಥವಾಗದಿರು ವಾಗ ಏನು ಕೇಳಬೇಕೆಂಬ ಗೊಂದಲ... ಇಂಥದ್ದೇ ಹತ್ತಾರು ಕಾರಣಗಳಿಂದ ಹದಿಹರೆಯದ ಮಕ್ಕಳು ಪ್ರಶ್ನೆ ಕೇಳುವುದರಿಂದ ದೂರ ಉಳಿಯುತ್ತಾರೆ.

ಪ್ರಶ್ನೆಗಳನ್ನು ಕೇಳದ ಮಕ್ಕಳು ಪರಿಣಾಮಕಾರಿ ಸಂವಹನದಲ್ಲಿ ಹಿಂದುಳಿಯಬಹುದು. ಮನದೊಳಗೆ ಗೊಂದಲಗಳು ಹಾಗೆಯೇ ಉಳಿದಾಗ ಉತ್ತಮ ಅಂಕ ಗಳಿಕೆಗೂ ಹಿನ್ನಡೆ. ಇಂತಹ ಮಕ್ಕಳು ಆತ್ಮವಿಶ್ವಾಸದ ಕೊರತೆ, ಕೀಳರಿಮೆಯಿಂದ ಬಳಲುತ್ತಾ ಮುಂದೆ ಉತ್ತಮ ಉದ್ಯೋಗ ಪಡೆಯುವಲ್ಲಿ ಸೋಲಬಹುದು.

ಹೌದು, ಪ್ರಶ್ನಿಸುವುದು ಗೊಂದಲಗಳ ಪರಿಹಾರ, ಸರಿಯಾದ ವಿಚಾರಗಳ ಕಲಿಕೆಯಲ್ಲದೆ ಹೊಸ ವಿಷಯಗಳನ್ನು ಅರಿಯಲು ಸಹಕಾರಿ. ವಿಶೇಷವಾಗಿ ಗುರುತಿಸಿಕೊಳ್ಳಲು, ಸಂಭಾಷಣೆಯನ್ನು ನಿಗದಿತ ದಿಕ್ಕಿನಲ್ಲಿ ಒಯ್ಯಲು, ಭಾವನಾತ್ಮಕ ಬುದ್ಧಿವಂತಿಕೆ ಬೆಳೆಸಿಕೊಳ್ಳಲು, ಸಂಭಾಷಣೆಯ ಕೌಶಲ ಕಲಿಯಲು, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು, ಸಮಸ್ಯೆಗಳ ಪರಿಹಾರ ಮಾರ್ಗ ಕಂಡುಕೊಳ್ಳಲು, ವ್ಯಕ್ತಿಗತ ಸಂಬಂಧಗಳನ್ನು ಸುಧಾರಿಸಿಕೊಳ್ಳಲು, ಸಂದರ್ಶನಗಳನ್ನು ವ್ಯವಸ್ಥಿತವಾಗಿ ಎದುರಿಸಲು, ವೃತ್ತಿಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ವಿದ್ಯಾರ್ಥಿ ಜೀವನದಲ್ಲಿ ಪ್ರಶ್ನೆ ಕೇಳುವ ಮನೋಭಾವ ರೂಢಿಸಿ
ಕೊಳ್ಳುವುದು ಅತಿ ಮುಖ್ಯ. ಒಬ್ಬ ವಿದ್ಯಾರ್ಥಿ ತನ್ನ ಅನುಮಾನ ವ್ಯಕ್ತಪಡಿಸಿದಾಗ ಸಿಗುವ ಉತ್ತರ ಹಲವು ಮಕ್ಕಳ ಸಂದೇಹವನ್ನು ಬಗೆಹರಿಸಬಹುದು.

ಶಿಕ್ಷಕರು, ಪೋಷಕರು ಪ್ರಶ್ನೆ ಕೇಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಪಾಠ ಮಾಡುವಾಗ ಪ್ರಶ್ನೋತ್ತರ
ಕ್ಕಾಗಿ ಸಮಯ ಮೀಸಲಿಡಬೇಕು. ಪ್ರಶ್ನೆ ಕೇಳುವ ಮಗುವನ್ನು ಉತ್ತೇಜಿಸಿ ಇತರರೂ ಕೇಳುವಂತೆ ಪ್ರೇರಣೆ ನೀಡಬೇಕು. ಒಂದು ತರಗತಿಯಾಗಲಿ, ವಿಚಾರ ಸಂಕಿರಣವಾಗಿರಲಿ, ಉಪನ್ಯಾಸ ಕಾರ್ಯಕ್ರಮವಾಗಲಿ ಎಷ್ಟು ಯಶಸ್ವಿಯಾಗಿದೆ ಎಂಬುದಕ್ಕೆ ಅಳತೆಗೋಲೇ ಅಲ್ಲಿ ಮೂಡಿಬರುವ ಪ್ರಶ್ನೆಗಳು. ಹಾಗಾಗಿ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಪ್ರಶ್ನೆಯ ಮಹತ್ವ ತುಂಬಾ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT