ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜಾತಿ ಎಂಬ ಕಾಯಿಲೆಗೆ ಮದ್ದುಂಟು

ಕೈಬೆರಳ ತುದಿಯಲ್ಲಿ ವಿಶ್ವದ ಸಂಪರ್ಕವೇ ಸಾಧ್ಯವಾಗಿರುವ ಈ ಸಂದರ್ಭದಲ್ಲಿಯೂ ಜಾತಿ ಸಂಘರ್ಷಗಳು ಬೇಕೆ?
Last Updated 18 ಅಕ್ಟೋಬರ್ 2022, 22:15 IST
ಅಕ್ಷರ ಗಾತ್ರ

ಪರಿಶಿಷ್ಟ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ಆಗಾಗ್ಗೆ ವರದಿಯಾಗುತ್ತಲೇ ಇವೆ. ಇತ್ತೀಚೆಗೆ ಸರಣಿಯೋಪಾದಿಯಲ್ಲಿ ಇಂತಹ ಕೆಲವು ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿವೆ. ಇವುಗಳನ್ನು ಓದಿದಾಗ ಮೊದಲು ಮೂಡುವ ಪ್ರಶ್ನೆ– ‘ನಾವು ಯಾವ ಕಾಲದಲ್ಲಿ ಇದ್ದೇವೆ?’ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ್ದೇವೆ. ಕೈಬೆರಳ ತುದಿಯಲ್ಲಿ ವಿಶ್ವದ ಸಂಪರ್ಕವೇ ಸಾಧ್ಯ ವಾಗಿದೆ. ಈ ಕಾಲಘಟ್ಟದಲ್ಲಿಯೂ ಇಂತಹ ಅವಿವೇಕದ ವರ್ತನೆಗಳು ತರವೇ?

ಹೋಟೆಲ್‍ಗಳಲ್ಲಿ ಯಾರೋ ತಿಂದು, ಕುಡಿದು ಹೋದ ತಟ್ಟೆ, ಲೋಟಗಳನ್ನು ಬಳಸುವಾಗ, ವಾಹನಗಳಲ್ಲಿ ಅಕ್ಕಪಕ್ಕ ಕುಳಿತು ಪ್ರಯಾಣಿಸುವಾಗ, ಚಲನಚಿತ್ರ ಮಂದಿರಗಳಲ್ಲಿ ಒಂದೇ ಸಾಲಿನಲ್ಲಿ ಕುಳಿತು ಸಿನಿಮಾ ನೋಡುವಾಗ, ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಖರೀದಿಸುವಾಗ, ದಲಿತರೇ ಸಿದ್ಧಪಡಿಸಿರಬಹುದಾದ ಹೂಮಾಲೆಗಳನ್ನು ನಾವು ನಂಬಿದ ದೇವರಿಗೆ ಶ್ರದ್ಧೆಯಿಂದ ಅರ್ಪಿಸುವಾಗ ನಮ್ಮನ್ನು ಕಾಡದ ಜಾತಿಪ್ರಜ್ಞೆಯು ಒಬ್ಬ ಮುಗ್ಧ ಬಾಲಕ ದೇವರ ಗುಜ್ಜುಕೋಲನ್ನು ಮುಟ್ಟಿದ ಮಾತ್ರಕ್ಕೆ ಅಸಹನೀಯ ಕೋಪವನ್ನು ಹುಟ್ಟಿಸುತ್ತದೆಂದರೆ, ಇದಕ್ಕೆ ಕಾರಣ ಬಹುಶಃ ಜಾತಿಯೊಂದೇ ಆಗಿರಲಾರದು; ಅದಕ್ಕಿಂತ ಹೆಚ್ಚಿನದು ಏನೋ ಇದ್ದಿರಬಹುದು. ಅದನ್ನು ಪತ್ತೆಹಚ್ಚಿ, ಅದಕ್ಕೆ ಮದ್ದು ಹುಡುಕಬೇಕಿರುವುದು ಇವತ್ತಿನ ತುರ್ತು. ಬಹಳಷ್ಟು ಕಡೆ ದೇಗುಲಗಳು, ದೇವರಿಗೆ ಸಂಬಂಧಪಟ್ಟಂತೆ ಗ್ರಾಮದ ಪ್ರಬಲ ಜಾತಿಯವರು ಮತ್ತು ಪರಿಶಿಷ್ಟರ ನಡುವೆ ಸಂಘರ್ಷಗಳು ಉಂಟಾಗುತ್ತಿವೆ.

ಹಲವು ಮಠಾಧೀಶರು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿ, ಪಾದಪೂಜೆ ಮಾಡಿಸಿ ಕೊಂಡರು, ಭೋಜನ ಮಾಡಿದರು, ರಾಜಕೀಯ ಪಕ್ಷಗಳ ಮುಖಂಡರು ಜಾತಿಸಾಮರಸ್ಯ ಸಾರಲು ಸ್ಪರ್ಧೆಗೆ ಬಿದ್ದವರಂತೆ ದಲಿತರ ಮನೆಗಳಲ್ಲಿ ಊಟ, ಉಪಾಹಾರ ಸೇವಿಸಿದರು. ಇಂತಹ ಏನೆಲ್ಲ ಪ್ರಯೋಗ ಮಾಡಿದರೂ ಪರಿಶಿಷ್ಟರ ಮೇಲಿನ ದೌರ್ಜನ್ಯಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದುವರೆಗೂ ಎಲ್ಲ ರಾಜಕೀಯ ಪಕ್ಷಗಳೂ ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿವೆ.ದಲಿತ ಸಮುದಾಯದಲ್ಲಿ ಪ್ರಭಾವಿಗಳಾಗಿರುವವರು, ವಿದ್ಯೆ- ಬುದ್ಧಿ- ಸಂಪತ್ತನ್ನು ಸಮೃದ್ಧವಾಗಿ ಸಂಪಾದಿಸಿರುವವರು ತುಳಿತಕ್ಕೊಳಗಾದ ದಲಿತರನ್ನು ಮೇಲೆತ್ತಲು ಪ್ರಯತ್ನಿಸದಿರುವುದು ಸಹ ಗಮನಾರ್ಹ ಸಂಗತಿ. ಜಾತಿ ತಾರತಮ್ಯವು ಸಮಾಜದ ವಿವಿಧ ಸಮುದಾಯಗಳ ನಡುವಣ ಸಾಮರಸ್ಯವನ್ನು ಹಾಳುಗೆಡವುತ್ತಿರುವುದು ಕಳವಳದ ವಿದ್ಯಮಾನ.

ದೇಗುಲಗಳ ಹುಂಡಿಗಳಿಗೆ ಹಾಕಿದ, ಗುರುಗಳು ಎಂದು ಭಕ್ತಿಯಿಂದ ಸಮರ್ಪಿಸಿದ ಕಾಣಿಕೆಯ ಹಣಕ್ಕೆ ಜಾತಿ ಇಲ್ಲದಿರುವಾಗ, ದೇವರ ವಿವಿಧ ಸಂಕೇತ- ಸಾಧನ ಸಾಮಗ್ರಿಗಳನ್ನು ಮುಟ್ಟಿದರೆ ಅದು ಹೇಗೆ ದೇವರಿಗೆ ಕೋಪ ತರಿಸುತ್ತದೆ? ಕನಕದಾಸರ ಭಕ್ತಿಗೆ ಉಡುಪಿಯ ಶ್ರೀಕೃಷ್ಣ ಒಲಿಯುತ್ತಾನೆ ಎಂದಾದರೆ ಭಕ್ತಿ ಹೆಚ್ಚೋ ಜಾತಿ ಹೆಚ್ಚೋ? ಆಧುನಿಕತೆ ಮೈಗೂಡಿದಂತೆ ಮಣ್ಣಾಗಬೇಕಿದ್ದ ಜಾತೀಯತೆಯು ಇಂದು ಕೆಲವು ಅವಿವೇಕಿಗಳಿಂದ ಇನ್ನೂ ಗಟ್ಟಿಗೊಳ್ಳುತ್ತಿದೆ. ಜಾತಿ ಯನ್ನು ಅವಲಂಬಿಸಿರುವ ನಮ್ಮ ರಾಜಕಾರಣವು ಪರೋಕ್ಷವಾಗಿ ಅದನ್ನು ಪೋಷಿಸುತ್ತಿರಬಹುದು ಎಂಬ ಗುಮಾನಿಯೂ ಇದೆ.

ಯಾವ ದೇವರೂ ಒಂದು ಜಾತಿಯ ಭಕ್ತನಿ ಗೊಂದು, ಇನ್ನೊಂದು ಜಾತಿಯ ಭಕ್ತನಿಗೊಂದು ರೀತಿ ಹರಸಿದ ಉದಾಹರಣೆಗಳು ಪುರಾಣಗಳಲ್ಲಿ ಅಥವಾ ಇತಿಹಾಸದಲ್ಲಿ ಇರುವುದನ್ನು ಕಾಣೆ. ಪ್ರಾಕೃತಿಕವಾಗಿ, ಆಧ್ಯಾತ್ಮಿಕವಾಗಿ ತರತಮಭಾವ ಇರದ ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಮಾತ್ರ ಏಕೆ ಇದೊಂದು ಕಾಯಿಲೆಯ ರೂಪದಲ್ಲಿ ಕಾಡುತ್ತಿದೆ ಎನ್ನುವುದು ಅರ್ಥವಾಗದ ವಿಷಯ. ಕಟ್ಟಡ ಕಾರ್ಮಿಕರಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರ ಸಂಖ್ಯೆ ಗಣನೀಯವಾಗಿದೆ. ಆ ಕಾರ್ಮಿಕರು ನಮ್ಮ ಮನೆಗಳ ಪೂಜಾ ಕೊಠಡಿಗಳನ್ನು, ಮಠ-ಮಂದಿರಗಳನ್ನು ನಿರ್ಮಿಸಿರುತ್ತಾರೆ. ಅದೇ ಪೂಜಾ ಕೊಠಡಿಗಳಲ್ಲಿ, ಮಠ-ಮಂದಿರಗಳಲ್ಲಿ ನಾವು ನಮ್ಮ ದೇವರನ್ನು ನಿತ್ಯವೂ ಆರಾಧಿಸುತ್ತೇವೆ. ಇಂಥವೆಲ್ಲ ಸಂದರ್ಭಗಳನ್ನು ಸಮರ್ಥಿಸಿಕೊಳ್ಳುವ ನಾವು ದೇಗುಲಗಳಲ್ಲಿ ಮಾತ್ರ ದಲಿತರನ್ನು ದೂರವಿಡಲು ಪ್ರಯತ್ನಿಸುವುದೇಕೆ?

ವಿಪರ್ಯಾಸವೆಂದರೆ, ಪರಿಶಿಷ್ಟರಲ್ಲಿ ಅಧಿಕಾರ ಬಲವುಳ್ಳ ಕೆಲವರು ಹಳ್ಳಿಗಳಲ್ಲಿ ಪ್ರಬಲ ಜಾತಿಯವರ ಮನೆಗಳ ಒಳಗೆ ಹೋಗಲು, ದೇವಸ್ಥಾನ ಪ್ರವೇಶಿಸಲು ಹಿಂದೇಟು ಹಾಕುತ್ತಾರೆ. ಅದು ಅವರವರ ಭಕ್ತಿ, ಭಾವಕ್ಕೆ ಸಂಬಂಧಿಸಿದ್ದು ಎಂದು ಅರ್ಥೈಸಿ, ಅನೇಕರು ಸಮರ್ಥನೆ ನೀಡುವುದುಂಟು. ಆದರೆ, ಸಮಾನತೆ ಸಾಧಿಸಲು ಅಧಿಕಾರವನ್ನು ಒಂದು ಅಸ್ತ್ರವಾಗಿ ಬಳಸಲು ಅವರು ಹಿಂದೇಟು ಹಾಕುವುದು ಎಷ್ಟರಮಟ್ಟಿಗೆ ಸರಿ ಎಂಬುದರ ಕುರಿತು ಚರ್ಚೆ ಆಗಬೇಕು.ದೇವಸ್ಥಾನದ ಧಾರ್ಮಿಕ ಕೈಂಕರ್ಯಗಳಲ್ಲಿ ಸೇವೆ ಸಲ್ಲಿಸಬಯಸುವ ಭಕ್ತರನ್ನು ನಿರ್ದಿಷ್ಟ ಜಾತಿಗೆ ಸೇರಿದವರೆಂಬ ಕಾರಣಕ್ಕೆ ತಡೆಯುವುದು ಅಕ್ಷಮ್ಯ.

ಇಂತಹ ದುಷ್ಟ ಪ್ರವೃತ್ತಿಗಳನ್ನು ತಡೆಯಲು ಗಂಭೀರ ಪ್ರಯತ್ನಗಳು ಆಗಬೇಕು. ಸಾಮಾಜಿಕ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಕಾನೂನಿನ ಅಡಿ ಕ್ರಮ ಜರುಗಿಸುವುದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಜಾತಿಯನ್ನು ಮೀರಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ದಿಸೆಯಲ್ಲಿ ಪ್ರಯತ್ನಗಳಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT