ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವ್ಯ ಭವಿತವ್ಯಕ್ಕೆ ‘ಭವಿಷ್ಯ ವಿಜ್ಞಾನ’

ಭವಿಷ್ಯಕ್ಕಿಂತಲೂ ವರ್ತಮಾನಕ್ಕೆ ಹೆಚ್ಚಿನ ಒತ್ತು ನೀಡುವ ಈ ಜ್ಞಾನಶಾಖೆಯ ಬೆಳವಣಿಗೆಯಿಂದ ಮೂಢನಂಬಿಕೆಗಳಿಗೆ ಲಗಾಮು ಬೀಳುತ್ತದೆ
Last Updated 5 ಮಾರ್ಚ್ 2019, 20:15 IST
ಅಕ್ಷರ ಗಾತ್ರ

‘ವಿಜ್ಞಾನಕ್ಕೆ ಬೇಕು ವಿಜ್ಞಾನದ್ದೇ ಮೂಲಮಂತ್ರ!’ ಎಂಬ ಸುಮಂಗಲಾ ಮುಮ್ಮಿಗಟ್ಟಿಯವರ ಬರಹಕ್ಕೆ (ಸಂಗತ, ಫೆ.27) ಪೂರಕವಾಗಿ ಕೆಲ ಅಂಶಗಳನ್ನು ಹೇಳಬಯಸುತ್ತೇನೆ. ಇತ್ತೀಚೆಗಿನ ಒಂದು ಘಟನೆ. ಬೆಂಗಳೂರಿನ ಬನಶಂಕರಿ ಮೆಟ್ರೊ ಬಳಿ ಹೂಜಿಗಳನ್ನು ಪೇರಿಸಿಕೊಂಡು ಒಬ್ಬ ಮಾರಾಟದಲ್ಲಿ ಮಗ್ನನಾಗಿದ್ದ. ಮಗನೊಂದಿಗಿದ್ದ ಒಬ್ಬ ಗ್ರಾಹಕ ಕೊಳ್ಳಲು ಮುಂದಾಗಿದ್ದ. ಏನನ್ನೋ ಯೋಚಿಸಿದ ಆ ಪೋರ, ‘ಅಪ್ಪ, ಮನೇಲಿ ಬೇಕಾದಷ್ಟು ಕೊಡ, ಪಾತ್ರೆ ಇವೆ. ಮಣ್ಣಿನದೇಕೆ?’ ಎಂದು ಕೇಳಿದ. ಅದಕ್ಕೆ ಗ್ರಾಹಕ ‘ಮರಿ, ಸ್ಟೀಲ್‍ಗಿಂತ ನೀರು ಇದ್ರಲ್ಲೇ ತಂಪಾಗಿರೋದು’ ಎಂದಷ್ಟೇ ಉತ್ತರಿಸಿದ. ಮಗನಿಗೆ ಅಪ್ಪನ ವಿವರಣೆ ಸಮಾಧಾನ ತರಲಿಲ್ಲ. ಮಡಕೆಯ ಒಳ ಮೈ, ಮೇಲ್ಮೈನಲ್ಲಿ ಸೂಕ್ಷ್ಮ ರಂಧ್ರಗಳಿರುತ್ತವೆ.

ಮಡಕೆಯೊಳಗಿನ ಶಾಖ ಬಳಸಿಕೊಂಡು ನೀರು ಆವಿಯಾಗಿ, ಆವಿ ಒಳಗಿನಿಂದ ರಂಧ್ರಗಳ ಮೂಲಕ ಹೊರಬರುತ್ತದೆ. ಪರಿಣಾಮವಾಗಿ, ನೀರು ಕ್ರಮೇಣ ಕಾವು ಕಳೆದುಕೊಂಡು ತಂಪಾಗುವುದು. ಈ ವಾಸ್ತವವನ್ನು ಮಗನಿಗೆ ಅಪ್ಪ ಹೇಳಿದ್ದರೆ ಅದೆಷ್ಟು ಸೊಗಸಿರುತ್ತಿತ್ತು. ನಮ್ಮ ದಿನಮಾನಗಳಲ್ಲಿನ ಆಗುಹೋಗುಗಳನ್ನು ಮಕ್ಕಳಿಗೆ ತರ್ಕಬದ್ಧವಾಗಿ ತಲುಪಿಸುವುದೆಂದರೆ ಇದು.

ಹೆಪ್ಪು ಹಾಕುವುದರ, ಹಿಟ್ಟು ನಾದುವುದರ, ಸಾಬೂನು ಬಟ್ಟೆಯ ಕೊಳೆ ನಿವಾರಿಸುವುದರ, ಪೂರಿ ಉಬ್ಬುವುದರ, ಸಕ್ಕರೆ ಎಣ್ಣೆಯಲ್ಲಿ ಕರಗದರ ಹಿಂದಿನ ಕಾರಣವನ್ನು ತಿಳಿಯಪಡಿಸದಿದ್ದರೆ ಎಳೆಯರು ವೈಜ್ಞಾನಿಕ ಮನೋಭಾವವನ್ನು ಹೇಗೆ ರೂಢಿಸಿಕೊಳ್ಳಲು ಸಾಧ್ಯ?

ಮೂತ್ರಪಿಂಡ ಹೇಗೆ ರಕ್ತ ಶುದ್ಧೀಕರಿಸುತ್ತದೆಂದು ವೈದ್ಯರು ಮಾತ್ರ ಅರಿಯಬೇಕಿಲ್ಲ. ಸಿಮೆಂಟ್ ಕಾಂಕ್ರೀಟು ನೀರು ಸಿಂಪಡಿಸಿದಷ್ಟೂ ಭದ್ರವೇಕೆಂಬ ಜ್ಞಾನ ಎಂಜಿನಿಯರುಗಳಿಗೆ ಮಾತ್ರವೆಂಬ ಇರಾದೆ ಅರ್ಥಹೀನ. ಹೆಸರೇ ಸಾಮಾನ್ಯ ವಿಜ್ಞಾನ, ಜನಪ್ರಿಯ ವಿಜ್ಞಾನ- ಅಂದರೆ ಎಲ್ಲರಿಗೂ ವಿಜ್ಞಾನ.

ಸ್ವಭಾವತಃ ಮಗು ಏನು, ಎತ್ತ, ಏಕೆ ಎಂದೆಲ್ಲ ತಿಳಿಯಬಯಸುತ್ತದೆ. ನಾವೇ ‘ಅವೆಲ್ಲ ನಿನಗೇಕೆ, ಹೇಳಿದಷ್ಟೇ ಮಾಡು, ಕೇಳು’ ಎಂದು ಅದರ ಬಾಯಿ ಮುಚ್ಚಿಸುತ್ತೇವೆ. ಯಾವುದೇ ಒಂದು ವಿದ್ಯಮಾನ ಸಂಭವಿಸಲು ಕಾರಣವೇ ಬೇಕಿಲ್ಲ, ಅದರಷ್ಟಕ್ಕೇ ಆಗುತ್ತದೆ ಎಂಬ ಭಾವ ಅದರಲ್ಲಿ ಮೂಡುತ್ತದೆ. ಹಾಗಾಗಿ ಪ್ರಶ್ನೆಗಳ ಬದಲು ಮಕ್ಕಳು ಮೌಢ್ಯದೊಂದಿಗೇ ಬೆಳೆಯುವಂತಾಗುತ್ತದೆ. ಚಿಂತಿಸುವ, ಪರಾಮರ್ಶಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕಾದರೆ ಹಿರಿಯರು ಅಪಾರ ಸಂಯಮ ತೋರಬೇಕು. ತಮಗೆ ಗೊತ್ತಿಲ್ಲದಿದ್ದರೂ ಬಲ್ಲವರಿಂದ ತಿಳಿದು ವೈಜ್ಞಾನಿಕ ಅಂಶಗಳನ್ನು ಅವರಿಗೆ ವಿವರಿಸುವ ವ್ಯವಧಾನ ಕಲ್ಪಿಸಿಕೊಳ್ಳಬೇಕು.

ದ್ರವಗಳಿಗೆ ಮೇಲ್ಮುಖ ಒತ್ತಡ ಎನ್ನುವುದಿದೆ ಅಂತ ಖರೆ ತಿಳಿಯದಿದ್ದರ ಫಲ ಏನಾಯಿತು ಇನ್ನೂ ಮರೆಯಲಾಗಿಲ್ಲ. ಮೂರ್ತಿ ಹಾಲು ಕುಡಿಯಿತೆಂಬ ಹುಸಿ ಸುದ್ದಿ ಬೆಳ್ಳಂಬೆಳಿಗ್ಗೆ ಹರಡಿತು. ಒಂದು ಕಪ್ ಕಾಫಿ ತಯಾರಿಸಿಕೊಳ್ಳಲೂ ಹಾಲು ದೊರೆಯದಂಥ ದಯನೀಯ ಪರಿಸ್ಥಿತಿ ಒದಗಿತು. ಅಂದಹಾಗೆ, ವಿಗ್ರಹ ಒಂದು ಕಣ್ಣು ಬಿಟ್ಟಿತೆಂದು ಸುದ್ದಿ ಹರಿಯಬಿಟ್ಟು ಆ ಮನೆಯ ಮುಂದೆ ಜನ ಸಾಲುಗಟ್ಟಿ ನಿಂತರು. ನಿಜ ತೀರಾ ಭಿನ್ನವೇ ಆಗಿತ್ತು. ಪಾಪ, ಬಾಡಿಗೆಗಿದ್ದ ಮನೆಯ ನಿವಾಸಿಗೆ ಮನೆಯನ್ನು ಖಾಲಿ ಮಾಡಬೇಕಾಗಿ ಬಂದಾಗ ಅನ್ಯ ಉಪಾಯ ಹೊಳೆಯಲಿಲ್ಲ! ನಮಗೊದಗುವ ಒಳಿತು, ಕೆಡುಕುಗಳಿಗೆ ಆಕಾಶಕಾಯಗಳನ್ನು ಕಟಕಟೆಯಲ್ಲಿ ನಿಲ್ಲಿಸಬೇಕಿಲ್ಲ. ಒಂದು ಗ್ರಹವೋ ನಕ್ಷತ್ರವೋ ನಮ್ಮನ್ನು ಪ್ರಭಾವಿಸುವುದು ಎಷ್ಟರಮಟ್ಟಿಗೆ ಸಾಧ್ಯಎಂದು ಪರ್ಯಾಲೋಚಿಸಬೇಕು ತಾನೇ?

‘ಭವಿಷ್ಯ ವಿಜ್ಞಾನ’ವನ್ನು (ಫ್ಯೂಚರಾಲಜಿ) ನಮ್ಮ ಶಿಕ್ಷಣದ ಪಠ್ಯಕ್ರಮದಲ್ಲಿ ಅಳವಡಿಸಬೇಕು. ‘ಭವಿಷ್ಯ ವಿಜ್ಞಾನ’ದ ಗುರಿ ಭವಿಷ್ಯವನ್ನು ಮುನ್ನುಡಿಯುವುದಲ್ಲ. ನಾಳೆ ಏನೆಂದು ಪರಿಚಯಿಸಿಕೊಳ್ಳುವ ಅಗತ್ಯವೂ ಇಲ್ಲ, ಅದು ಸಾಧ್ಯವೂ ಇಲ್ಲ. ನಾಳೆಗಳು ನಿಗೂಢವಾಗಿದ್ದರೇನೇ ಚಂದ. ‘ಭವಿಷ್ಯ ವಿಜ್ಞಾನ’ ಭವಿತವ್ಯದ ಬಗ್ಗೆ ನಮ್ಮ ಕಾಳಜಿ, ಕಳಕಳಿಗಳನ್ನು ಆಲೋಚಿಸಿ, ಯೋಜಿಸುವುದು. ಒದಗುವ ಯಾವುದೇ ಪರಿಸ್ಥಿತಿಗೆ ಅಣಿಯಾಗುವುದು. ಭವಿಷ್ಯಕ್ಕಿಂತಲೂ ವರ್ತಮಾನಕ್ಕೆ ಹೆಚ್ಚಿನ ಒತ್ತು ನೀಡುವ ಈ ಜ್ಞಾನಶಾಖೆ ಬೆಳೆಯುತ್ತಿದೆ. ಭವಿತವ್ಯದ ವಿವೇಚನಾಪೂರ್ವ ಅವಲೋಕನದಿಂದ ಮೂಢನಂಬಿಕೆಗಳಿಗೆ ಲಗಾಮಂತೂ ಬೀಳುವುದು. ಭೂಕಂಪ, ಮಳೆ, ನೆರೆ, ಜ್ವಾಲಾಮುಖಿಯ ಸಿಡಿತ ಮುಂತಾದ ನೈಸರ್ಗಿಕ ಅವಘಡಗಳನ್ನು ಪೂರ್ಣವಾಗಿ ಅಲ್ಲವಾದರೂ ಕೊಂಚಮಟ್ಟಿಗೆ ಮುಂಗಾಣುವುದು ಸಾಧ್ಯವಾಗಿರುವುದು ವಿಜ್ಞಾನದ ಈ ಶಾಖೆಯಿಂದಲೇ.

ವಿಜ್ಞಾನಕ್ಕೆ ಜನಸಾಮಾನ್ಯರು ಏನನ್ನಾದರೂ ಕೊಡಲು ಅವರು ವಿಜ್ಞಾನಿಗಳೇ ಆಗಬೇಕಾದ್ದಿಲ್ಲ. ಸಂದರ್ಭೋಚಿತವಾಗಿ ಪರಿಕಲ್ಪನೆಗಳನ್ನು ಸಾದರಪಡಿಸಿ ಜನರ ಮನಸ್ಸುಗಳು ಮೌಢ್ಯದತ್ತ ವಾಲುವುದನ್ನು ತಪ್ಪಿಸಬಹುದು. ‘ನೋಡಿ, ಊರಿನ ಪಕ್ಕವೇ ನದಿ ಹರಿಯುವುದಲ್ಲ. ಎಂತಹ ವಿಸ್ಮಯ!’ ಎಂದು ಒಬ್ಬರು ಹುಬ್ಬೇರಿಸಿದರು ಅನ್ನಿ. ಅದು ಹಾಗಲ್ಲ, ನದಿಯ ಪಕ್ಕದಲ್ಲೇ ಊರು ಕಟ್ಟಿಕೊಂಡಿದ್ದಾರಲ್ಲ ಅದು ಜಾಣತನ ಎನ್ನುವ ವಾಸ್ತವದ ಸಂವಹನವೇ ವಿಜ್ಞಾನದ ಹೂರಣ. ವಿಜ್ಞಾನ ಪರಿಚಾರಿಕೆಗೆ ನಾವು ಸದಾ ತೆರೆದುಕೊಂಡಿರಬೇಕು. ಸಮಾಜದಲ್ಲಿ ವೈಜ್ಞಾನಿಕವಾಗಿ ಚಿಂತಿಸುವವರ ಸಂಖ್ಯೆ ವೃದ್ಧಿಸಿದಂತೆ ಸಂಕುಚಿತ ದೃಷ್ಟಿ, ಸ್ವಾರ್ಥ, ಅಸೂಯಾಪರತೆ, ಅಹಮಿಕೆ ತಂತಾನೇ ಕ್ಷೀಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT