ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕಲಿಕೆ: ಇರಲಿ ಲಿಂಗ ಸಮಾನತೆ

Last Updated 12 ಫೆಬ್ರುವರಿ 2023, 21:00 IST
ಅಕ್ಷರ ಗಾತ್ರ

ಜನಪ್ರಿಯ ವಿಜ್ಞಾನ ಸಾಹಿತಿಯೊಬ್ಬರು, ಇತಿಹಾಸದಲ್ಲಿ ಸಂದ ಅತ್ಯಂತ ಬುದ್ಧಿಶಾಲಿ ವಿಜ್ಞಾನಿಗಳ ಹೆಸರು ಪ್ರಸ್ತಾಪದೊಂದಿಗೆ ಭಾಷಣ ಆರಂಭಿಸಿದ್ದರು. ಸಭಿಕರೊಬ್ಬರು ‘ಇದೇನು ಸರ್, ಈ ಪಟ್ಟಿಯಲ್ಲಿ ಒಬ್ಬ ಮಹಿಳೆಯೂ ಇಲ್ಲವಲ್ಲ?’ ಅಂದಾಗ ಸಾಹಿತಿ ತಳಮಳಿಸಿದರು. ಕಡೆಗೆ ‘ಆ ಮೇಧಾವಿಗಳಿಗೆ ಜನ್ಮ ಕೊಟ್ಟಿದ್ದು ಮಾತೆಯರು ತಾನೆ, ಬಿಡಿ’ ಅಂತ ಹೇಳಿ ಅವರು ಪಾರಾದ ಮಾತು ಬೇರೆ.

ವಿಜ್ಞಾನವೇಕೆ ಪುರುಷಪ್ರಧಾನವೆಂಬ ಪ್ರಶ್ನೆ ಕಾಡುತ್ತಲೇ ಇದೆ. ಪ್ರೌಢಶಾಲೆ ಮುಗಿಸಿ ಪಿ.ಯು. ಸೇರುವಾಗ ಹೆಣ್ಣುಮಕ್ಕಳಿಗೆ ‘ನೀನು ಸೈನ್ಸ್ ಓದಿ ಆಗಬೇಕಾದ್ದೇನು?’ ಎಂದು ಮೂಗು ಮುರಿದು ವಿಜ್ಞಾನೇತರ ಐಚ್ಛಿಕ ವಿಷಯಗಳನ್ನೇ ಕೊಡಿಸುವ ಪೋಷಕರು ಈಗಲೂ ಉಂಟು. ಗಣಿತ ತಲೆನೋವು, ಭೌತವಿಜ್ಞಾನ ಕಷ್ಟ, ರಸಾಯನ ವಿಜ್ಞಾನಕ್ಕೆ ನೆನಪಿನ ಶಕ್ತಿ ಬೇಕು... ಹೀಗೆಂದು ನಿರುತ್ತೇಜಿಸುವವರು ಪೋಷಕರು, ಬೋಧಕರೇ. ಬಹುಶಃ ವೈದ್ಯರಾಗುವ ಉದ್ದೇಶದಿಂದ ಪ್ರಾಣಿವಿಜ್ಞಾನವನ್ನೊ ಅಥವಾ ಮನೋವಿಜ್ಞಾನವನ್ನೊ ಆಯ್ಕೆ ಮಾಡಿಕೊಳ್ಳಲು ಆಸ್ಪದ ನೀಡಿದರೆ ಅದೇ ಅತಿಶಯ. ಇದಕ್ಕೆ ಅಪವಾದವಿದೆ ಎನ್ನೋಣ.

ವಿಜ್ಞಾನ ಸರ್ವವ್ಯಾಪಿ. ಅದು ಪ್ರಗತಿಯ ಎಲ್ಲ ಆಯಾಮಗಳಿಗೂ ಅಡಿಪಾಯ. ಹೆಣ್ಣುಮಕ್ಕಳನ್ನು ವಿಜ್ಞಾನ ವ್ಯಾಸಂಗಕ್ಕೆ ಪ್ರೋತ್ಸಾಹಿಸುವುದು ಅತ್ಯಗತ್ಯ. ತನ್ಮೂಲಕ ಪ್ರಾಪ್ತವಾಗುವ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಸಹಜವಾಗಿಯೇ ಮೌಢ್ಯವನ್ನು ಶಮನಗೊಳಿಸುವುದು. ಒಬ್ಬ ಹೆಣ್ಣುಮಗಳು ವಿದ್ಯಾವಂತಳಾದರೆ ಇಡೀ ಕುಟುಂಬಕ್ಕೆ ದಕ್ಷ ಶಿಕ್ಷಕಿ ದೊರೆತ ಹಾಗೆ. ಈ ನುಡಿ ವಿಜ್ಞಾನಕ್ಕಂತೂ ಹೇಳಿಮಾಡಿಸಿದಂತಿದೆ. ಅತ್ತೆ, ಮಾತೆ, ಅಜ್ಜಿಯರು ಬಾಣಂತನ ನಿರ್ವಹಣೆಯಲ್ಲಿ ಅನುಸರಿಸುವ ಸಾಂಪ್ರದಾಯಿಕ ವಿಧಾನಗಳಲ್ಲಿ ವಿಜ್ಞಾನ ತುಂಬಿತುಳುಕುತ್ತದೆ. ಅವರ ಪ್ರಾಯೋಗಿಕ ಜ್ಞಾನ ಅಷ್ಟು ದೊಡ್ಡದು.

ಗ್ರೀಕ್‍ನ ಅಲೆಗ್ಸಾಂಡ್ರಿಯಾದಲ್ಲಿ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಜೀವಿಸಿದ್ದ ಹೈಪಟಿಯಾ ಎಂಬ ಮಹಿಳೆ ಗಣಿತ ಮತ್ತು ಖಗೋಳ ವಿಜ್ಞಾನದಲ್ಲಿ ಅಪಾರ ಪರಿಣತಿ ಹೊಂದಿದ್ದಳು. ಆಕೆ ಸಾಧಿಸುವುದು ಬಹಳವಿತ್ತು. ಜಗತ್ತಿನ ಮೊದಲ ವಿಜ್ಞಾನಿ ಎನ್ನಲಾಗುವ ಈಕೆ ಪ್ರಭುತ್ವದ ಮುಂದೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಎದುರಿಸಲಾಗದೆ ಹತ್ಯೆಗೊಳಗಾದಳು. ಮೇರಿ ಕ್ಯೂರಿ ಅವರಿಗೆ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನಕ್ಕೆ ಒಟ್ಟು ಎರಡು ಬಾರಿ ನೊಬೆಲ್ ಪ್ರಶಸ್ತಿ ದೊರೆಯಿತು. ಇಬ್ಬರು ಹೆಣ್ಣುಮಕ್ಕಳ ಕುಟುಂಬದ ಹೊಣೆ ಮತ್ತು ವಿಜ್ಞಾನ ಸಂಶೋಧನೆ ಎರಡನ್ನೂ ಯಶಸ್ವಿಯಾಗಿ ಸರಿದೂಗಿಸಿದ ಗಟ್ಟಿಗಿತ್ತಿ ಆಕೆ. ರಷ್ಯಾದ ಮಹಿಳೆ ವ್ಯಾಲೆಂಟಿನಾ ಟೆರಿಶ್ಕೋವಾ ದಶಕಗಳ ಹಿಂದೆ ಮೊದಲ ಬಾರಿಗೆ ವಸ್ಟಾಕ್- 6 ನೌಕೆಯಲ್ಲಿ ಅಂತರಿಕ್ಷ ಯಾನ ಕೈಗೊಂಡರು. ಆಗ ಅವರ ವಯಸ್ಸು ಬರೀ 26 ವರ್ಷ.

ಮನೆಯೆಂಬ ಶಾಲೆಯಲ್ಲಿ ಅಡುಗೆಮನೆಯೇ ಮಹಿಳೆಯರ ಪಾಲಿಗೆ ಪ್ರಯೋಗಾಲಯ. ಪಾಕವಿಧಾನ, ಗಣಿತ ಎರಡನ್ನೂ ಉಪಾಸಿಸುವ ನೆಲೆಯದು. ಹವಾಮಾನ ಮುನ್ಸೂಚನೆ, ವಾತಾವರಣ ವ್ಯತ್ಯಯ, ಆಹಾರ ಕ್ರಮ, ಆಲಸ್ಯ, ಅಲರ್ಜಿ, ಸಾಗಾಣಿಕೆ ವಿಧಾನ, ಮನೆಬಳಕೆ ವಿದ್ಯುನ್ಮಾನ ಪರಿಕರಗಳ ಕಾರ್ಯತಂತ್ರ, ಅರ್ಥಶಾಸ್ತ್ರ ಹೀಗೆ ಈ ತಾಣ ಕಲಿಸದ ವಿಜ್ಞಾನದ ಶಾಖೋಪಶಾಖೆಗಳೇ ಇಲ್ಲ.

ಸ್ವಾರಸ್ಯವೆಂದರೆ, ಹೆಣ್ಣುಮಕ್ಕಳಿರಲಿ, ಗಂಡು ಮಕ್ಕಳಿರಲಿ ಪಠ್ಯವೆಂದು ಕಲಿಸಲೆತ್ನಿಸಿದರೆ ನಿರಾಸಕ್ತರಾಗುತ್ತಾರೆ. ಅವೇ ವಿಜ್ಞಾನ ತತ್ವಗಳನ್ನು ಪ್ರಾಯೋಗಿಕ ವಾಗಿ ಉದಾಹರಿಸಿ ತಿಳಿಸಿದರೆ ಸಮರ್ಥವಾಗಿ ಪರಿಚಯಿಸಿಕೊಳ್ಳುತ್ತಾರೆ. ಎಂದಮೇಲೆ ವಿಜ್ಞಾನವನ್ನು ಸಮಾಜವಿಜ್ಞಾನವಾಗಿ ಕಲಿಸಬೇಕಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಮಹಿಳೆಯರು ಮತ್ತು ಬಾಲಕಿಯರು ಅರ್ಧದಷ್ಟು ಇದ್ದಾರೆ. ವಿಜ್ಞಾನ ಪ್ರಸರಣದಲ್ಲಿ ಲಿಂಗ ಸಮಾನತೆ ಇದ್ದರೆ ಮಾತ್ರ ಮಾನವ ಹಕ್ಕಿಗೆ ಮತ್ತು ನೆಮ್ಮದಿಯ ಸಮಾಜಕ್ಕೆ ದಿಕ್ಸೂಚಿ.

ಸ್ತ್ರೀಯರು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ತೊಡಗಬೇಕು. ತರಗತಿಗಳಲ್ಲಿ, ಉನ್ನತ ಅಧ್ಯಯನದಲ್ಲಿ, ಸಂಶೋಧನಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಸಹಭಾಗಿತ್ವ ಇರಬೇಕು. ಯುನೆಸ್ಕೊ ವರದಿಯಂತೆ, ಪ್ರಸ್ತುತ ಜಾಗತಿಕವಾಗಿ ವಿಜ್ಞಾನದ ಉನ್ನತ ವ್ಯಾಸಂಗದಲ್ಲಿ ತೊಡಗುವ ಮಹಿಳೆಯರು ಶೇಕಡ 30ಕ್ಕಿಂತಲೂ ಕಡಿಮೆ. ಸಾಲದೆಂಬಂತೆ ವಿದ್ಯಾರ್ಜನೆಯ ನಡುವೆಯೇ ಬಿಟ್ಟುಹೋಗುವವರ ಸಂಖ್ಯೆ ಕಡಿಮೆಯೇನಿಲ್ಲ.

ಯುನೆಸ್ಕೊ ಇವೆಲ್ಲವನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು ಪ್ರತಿವರ್ಷ ಫೆಬ್ರುವರಿ 11, ‘ಅಂತರ ರಾಷ್ಟ್ರೀಯ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿಜ್ಞಾನ ದಿನ’ ಎಂದು ಘೋಷಿಸಿದೆ. ವಿಜ್ಞಾನ ವೃತ್ತಿಯೆಂದರೆ ಜ್ಞಾನವನ್ನು ಜೀವನಪರ್ಯಂತ ಅರಸುವ ಪಯಣ. ವಿಜ್ಞಾನವೆಂದರೆ ಏನಿದ್ದರೂ ಪುರುಷರ ಜಗತ್ತು ಎನ್ನುವ ಭಾವ ಹೋಗಬೇಕಿದೆ.

ಒಂದು ವಿಪರ್ಯಾಸ ಗಮನಾರ್ಹ. ಐನ್‍ಸ್ಟೀನ್‍ರ ಸಾಪೇಕ್ಷತಾ ವಾದ ಬೋಧಿಸುವ ಪ್ರೊಫೆಸರ್, ‘ಒಬ್ಬ’ ವೇಗವಾಗಿ ಓಡಿದಾಗ ಅವನ ಪಾಲಿಗೆ ಸಮಯ ಬೇಗ ಸರಿದಿರುತ್ತದೆ ಅಂತ ಹೇಳುತ್ತಾರೆ. ಬಾಲಕನ ಚಿತ್ರವನ್ನು ಬೋರ್ಡಿನ ಮೇಲೆ ಬರೆಯುತ್ತಾರೆ. ಆದರೆ ‘ಒಬ್ಬ’ ಬದಲಿಗೆ ‘ಒಬ್ಬಳು’ ಎಂದು ಉದಾಹರಿಸುವುದು, ಬಾಲಕಿಯ ಚಿತ್ರ ಬರೆಯುವುದು ತೀರಾ ವಿರಳ! ಇಲ್ಲಿಂದಲೇ ಲಿಂಗ ತಾರತಮ್ಯದ ಆರಂಭ ಎನ್ನೋಣವೆ?

ವಿಜ್ಞಾನೋಪಾಸನೆಗೆ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸದ ಸಮಾಜ ಸೊರಗುತ್ತದೆ. ಹೈಪಟಿಯಾ ಳಂತಹ ಮಹಿಳೆಯರ ವಿಜ್ಞಾನ ಕೈಂಕರ್ಯ ಅವಿರತವಾಗಿ ಸಾಗಲು ವಿಶೇಷವಾಗಿ ಪೋಷಕರು ಸಂಕಲ್ಪಿಸಿ ಹುರಿದುಂಬಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT