ಬುಧವಾರ, ಜುಲೈ 28, 2021
29 °C

ಸಂಗತ | ಮನದ ಬೆಸುಗೆಗೇಕೆ ಪ್ರತಿಷ್ಠೆಯ ಗೊಡವೆ?

ರಾಜಕುಮಾರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ, ಸಾರ್ವಜನಿಕ ಸ್ಥಳಗಳಲ್ಲಿ ಮದುವೆ, ಸೀಮಂತದಂಥ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಬಾಗಲಕೋಟೆ ಜಿಲ್ಲಾಡಳಿತವು, ನೋಂದಣಿ ಮೂಲಕ ಮದುವೆಗೆ ಅನುಮತಿ ನೀಡಿದೆ. ಈ ಮೊದಲು ಇಂಥ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ ಎನ್ನುವ ಆದೇಶ ಜಾರಿಯಲ್ಲಿದ್ದಾಗಲೂ ಹೆಚ್ಚಿನ ಜನ ಭಾಗವಹಿಸಿ ಕೋವಿಡ್ ರೋಗದ ವ್ಯಾಪಕ ಹರಡುವಿಕೆಗೆ ಕಾರಣರಾಗಿದ್ದರು. ಹೀಗಾಗಿ ಜಿಲ್ಲಾಡಳಿತದ ಈ ಕ್ರಮ ಸ್ವಾಗತಾರ್ಹ ಎಂಬ ಮೆಚ್ಚುಗೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಕೆಲವರಿಂದ ಟೀಕೆಗಳೂ ಕೇಳಿಬರುತ್ತಿವೆ.

ಮದುವೆ ಎನ್ನುವುದು ಎರಡು ಮನಸ್ಸುಗಳ ಬೆಸುಗೆ ಮತ್ತು ಎರಡು ಕುಟುಂಬಗಳ ನಡುವಣ ಹೊಸ ಸಂಬಂಧವೊಂದರ ಚಿಗುರೊಡೆಯುವಿಕೆ. ಅದೊಂದು ಖಾಸಗಿ ಕಾರ್ಯಕ್ರಮವೇ ವಿನಾ ಸಾರ್ವಜನಿಕ ಕಾರ್ಯಕ್ರಮವಲ್ಲ. ಕುವೆಂಪು ಅವರು ಮದುವೆಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಮ್ಮ ಮದುವೆಯಲ್ಲಿ ‘ಮಂತ್ರಮಾಂಗಲ್ಯ’ ಪದ್ಧತಿಗೆ ನಾಂದಿ ಹಾಡಿದರು ಮತ್ತು ತಮ್ಮ ಮಕ್ಕಳ ವಿವಾಹಗಳಲ್ಲೂ ಅದೇ ವಿಧಾನವನ್ನು ಅನುಸರಿಸಿದರು. ಕುವೆಂಪು ಅವರ ಅನೇಕ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಇಂಥ ಸರಳ ವಿಧಾನವನ್ನು ಅನುಸರಿಸಿದ್ದು ಬಹುಮುಖ್ಯವಾದ ಚಾರಿತ್ರಿಕ ಸಂದರ್ಭ.

ಉತ್ತರ ಕರ್ನಾಟಕದ ಹಲವು ಮಠಗಳಲ್ಲಿ ಮದುವೆಯ ಸಂದರ್ಭದಲ್ಲಿ ಅಕ್ಕಿಕಾಳಿನ ಬದಲಿಗೆ ಹೂವಿನ ಎಸಳುಗಳನ್ನು ಅಕ್ಷತೆಯ ರೂಪದಲ್ಲಿ ವಧು– ವರರ ಮೇಲೆ ಪ್ರೋಕ್ಷಿಸಲಾಗುತ್ತಿದೆ. ಇದು, ಒಂದರ್ಥದಲ್ಲಿ ಆಹಾರ ಪದಾರ್ಥವೊಂದು ಅನವಶ್ಯಕವಾಗಿ ವ್ಯಯವಾಗುವುದನ್ನು ತಡೆಗಟ್ಟುವ ಒಂದು ಉತ್ತಮ ಬೆಳವಣಿಗೆ.

ಸಮಾಜದಲ್ಲಿ ಮದುವೆ ಎನ್ನುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಭವ್ಯ ಕಲ್ಯಾಣ ಮಂಟಪ, ವಿದ್ಯುದ್ದೀಪಗಳ ಅಲಂಕಾರ, ವಾದ್ಯಮೇಳ, ಹಲವು ಬಗೆಯ ಖಾದ್ಯಗಳು... ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದಾಗಲೇ ಅದೊಂದು ಮದುವೆ ಎನ್ನುವ ಭಾವನೆ ಅನೇಕರಲ್ಲಿದೆ. ನಿಶ್ಚಿತಾರ್ಥ, ನಾಮಕರಣ, ಸೀಮಂತದಂಥ ಸಮಾರಂಭಗಳನ್ನೂ ಬೃಹತ್‌ ಕಲ್ಯಾಣ ಮಂಟಪಗಳಲ್ಲಿ ಆಯೋಜಿಸಲಾಗುತ್ತಿವೆ. ವೈಕುಂಠ ಸಮಾರಾಧನೆಯಂಥ ಶೋಕಕ್ಕೂ ಕಲ್ಯಾಣ ಮಂಟಪಗಳು ವೇದಿಕೆಯಾಗುತ್ತಿವೆ.

ಈ ವರ್ಷಾರಂಭದ ತಿಂಗಳಲ್ಲಿ ನನ್ನ ಪರಿಚಿತರ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಇತ್ತು. ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ ಆ ಸಮಾರಂಭಕ್ಕೆ ಸುಮಾರು 500 ಜನರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಪ್ರತೀ ಊಟಕ್ಕೆ ಸುಮಾರು 300 ರೂಪಾಯಿ ಬೆಲೆಯಿದ್ದು, ಒಟ್ಟಾರೆ ಆ ಔತಣಕೂಟಕ್ಕೆ ಏನಿಲ್ಲವೆಂದರೂ ₹ 2 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿತ್ತು. ಸಣ್ಣ ನಗರವಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಪಾಲಕರದ್ದಾಗಿತ್ತು. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಆಹ್ವಾನ ಪತ್ರದ ಹೊರತಾಗಿಯೂ ದಿನಪತ್ರಿಕೆಗಳು, ಟಿ.ವಿ ಚಾನೆಲ್‍ಗಳಲ್ಲಿ ಆಹ್ವಾನಪತ್ರ ಪ್ರಕಟವಾಗುವುದರ ಜೊತೆಗೆ, ನಗರದ ಪ್ರಮುಖ ಸ್ಥಳಗಳಲ್ಲಿ ಮಗುವಿನ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನೂ ತೂಗುಹಾಕಿದ್ದರು.

ಇಂಥ ಸಮಾರಂಭಗಳಲ್ಲಿ ನೀರು, ವಿದ್ಯುತ್, ಆಹಾರ ಹೆಚ್ಚು ವ್ಯಯವಾಗುವುದು ಸರ್ವೇಸಾಮಾನ್ಯ. ಹಾಗೆಂದು ಇಂತಹ ಕುಟುಂಬ ವರ್ಗದವರು, ನಾವು ಪರ್ಯಾಯವಾಗಿ ಹಣ ಸಂದಾಯ ಮಾಡುತ್ತಿದ್ದೇವೆ ಎಂದು ವಾದಿಸಬಹುದು. ನೆನಪಿರಲಿ, ನೀರು, ವಿದ್ಯುತ್, ಆಹಾರ ಇವೆಲ್ಲ ರಾಷ್ಟ್ರದ ಸಂಪತ್ತು. ಹಣವಿದೆ ಎಂದ ಮಾತ್ರಕ್ಕೆ ಇವನ್ನೆಲ್ಲ ಅತಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಅಧಿಕಾರ ನಮಗಿಲ್ಲ. ರಾಷ್ಟ್ರದ ಈ ನೈಸರ್ಗಿಕ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನವಾದ ಅಧಿಕಾರ ಇದೆ ಮತ್ತು ಅದು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು.

ಹೀಗೆ ದುಂದುವೆಚ್ಚ ಮಾಡಿ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವ ನಾವು, ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನೇಕೆ ನಿರ್ಲಕ್ಷಿಸುತ್ತಿದ್ದೇವೆ? ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನದಂಥ ಯಾವ ಆಚರಣೆಗಳಲ್ಲಿ ನಾವೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ? ಅಕ್ಟೋಬರ್ 2 ದೇಶ ಕಂಡ ಪ್ರಾಮಾಣಿಕ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ? ಚಿತ್ರನಟನ ಹುಟ್ಟುಹಬ್ಬದಂದು ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡುತ್ತೇವೆ. ಆದರೆ, ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಕನಿಷ್ಠ ಪ್ರಜ್ಞೆಯೂ ಅನೇಕರಿಗೆ ಇರುವುದಿಲ್ಲ.

ಕೊರೊನಾ ಸೋಂಕಿನ ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಕುಟುಂಬಗಳ ಖಾಸಗಿ ಕಾರ್ಯಕ್ರಮಗಳನ್ನು ಕುಟುಂಬ ವರ್ಗಕ್ಕಷ್ಟೇ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಸಿನಿಮಾ ಕಲಾವಿದರು ಮತ್ತು ರಾಜಕಾರಣಿಗಳ ಹುಟ್ಟುಹಬ್ಬಗಳನ್ನು ಅವರ ಅಭಿಮಾನಿಗಳು ಸಾರ್ವಜನಿಕವಾಗಿ ಆಚರಿಸಲಿಲ್ಲ ಮತ್ತು ಕಟೌಟ್‍ಗಳ ಮೇಲೆ ಸುರಿಯಬೇಕಿದ್ದ ಲಕ್ಷಾಂತರ ಲೀಟರ್‌ಗಳಷ್ಟು ಹಾಲು ವ್ಯರ್ಥವಾಗುವುದು ತಪ್ಪಿತು. ಕೊರೊನಾ ಸೃಷ್ಟಿಸಿದ ಆತಂಕದ ಪರಿಣಾಮದಿಂದಲಾದರೂ ಖಾಸಗಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಅರಿವು ಸಾರ್ವಜನಿಕರಲ್ಲಿ ಮೂಡಿದೆ. ಆದರೆ ಈ ಅರಿವು ಲಾಕ್‍ಡೌನ್ ಅವಧಿಗಷ್ಟೇ ಸೀಮಿತವಾಗದೆ, ಭವಿಷ್ಯದಲ್ಲೂ ಸದಾಕಾಲ ನಮ್ಮೊಳಗೆ ಇರುವಂತೆ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು