ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗದ ರಹಸ್ಯ

Last Updated 22 ಫೆಬ್ರುವರಿ 2019, 20:09 IST
ಅಕ್ಷರ ಗಾತ್ರ

ಸರ‍್ವತ್ನ್ಯಾಗ್‌ ಮೊಬೈಲ್‌ನಿಂದ ಹಲೋ ಧ್ವನಿ ಕೇಳಿ ಬಂದಾಗ ಯಾರಪಾ ಎಂದು ನಿದ್ದೆಗಣ್ಣಲ್ಲಿ ಆಕಳಿಸುತ್ತಲೇ ಕೇಳಿದೆ.

‘ಎಷ್ಟಪಾ ನಿನ್ನ ರೇಟು’ ಅಂತ ಗೊಗ್ಗರು ದನಿಯೊಳಗ್ ಅಪರಿಚಿತ ದನಿ ಕೇಳಿಬಂತ್‌.

ನನ್ನ ನಿದ್ದಿನs ಹಾರಿಹೋಯ್ತು. ‘ಯಾವನ್ಲೆ ನೀನು. ಏನ್ ಬೇಕ್ ನಿ‌ಂಗ್. ನಾ ಏನ್ ಸಂತ್ಯಾಗಿನ ಉಳ್ಳಾಗಡ್ಡಿ, ಬದನಿಕಾಯಿ ಅಂತ ತಿಳ್ಕೊಂಡಿ ಏನ್, ಬೇವರ್ಸಿ ಮಗನ’ ಎಂದು ದಬಾಯಿಸಿದೆ.

‘ಇರ‍್ಲಿ, ಇರ‍್ಲಿ ಮೊದ್ಲ ಮೊದ್ಲ ಎಲ್ಲಾರೂ ಹೀಂಗ್ ಹೇಳ್ತಾರ್. ರೇಟ್ ಹೆಚ್ ಆಗತ್ತಿದ್ಹಂಗ್‌ ಚೌಕಾಸಿ ಮಾಡಾಕ್‌ ಇಳಿತಾರ್‌. ಬಾಂಬೆಕ್ ಬರಬೇಕೆನ್ ಅಂತಾನೂ ಕೇಳ್ತಾರ್’ ಎಂದ.

ಓಹೊ, ಇದು ರಾಂಗ್ ಕನೆಕ್ಷನ್ ಕೇಸ್ ಇದ್ಹಂಗ್ ಐತಿ ಅಂತ ಫೋನ್ ಕಟ್ ಮಾಡಾಕ್ ಹೊಂಟಾಂವಾ ಈ ದನಿ ಎಲ್ಲೋ ಕೇಳ್ದಂಗ್ ಐತಲ್ಲ ಅಂತ ಅನಿಸ್ತು. ಅಷ್ಟರಾಗ್ ಆ ಕಡೆಯಿಂದ, ‘ಬಕರಾ ಆದಿ ಹೌದಲ್ಲ ಮಗ್ನ’ ಅಂತ ಮಾಮೂಲಿ ದನಿ ಕೇಳಿಸ್ತು.

‘ನನಗ್ ಅಷ್ಟ ಸಲೀಸಾಗಿ ಹುಚಪ್ಯಾಲಿ ಮಾಡಾಕ್ ಆಗುದಿಲ್ಲಲೇ. ದನಿ ಗುರ್ತ ಹತ್ತಲಾರದ್ಹಂಗ್ ಎಂಎಲ್ಎಗಳನ್ನ ಬ್ಯಾಟಿ ಆಡಾಕ್ ಹೊಂಟಿ ಹೌದಲ್ಲ’ ಎಂದೆ.

ನಿಟ್ಟುಸಿರುಬಿಡುತ್ತ, ‘ಹ್ಞೂಂನಪಾ. ಏನ್‌ ಮಾಡೋದು. ‘ನಮೋ’ ದಿನಾಲೂ ರೇಡಿಯೊದಾಗ್‌ ...ಏ ಹಮಾರಾ ಸಪ್ನಾ ಭೀ ಹೈ, ಔರ್‌ ಸಂಕಲ್ಪ ಭೀ ಹೈ ಅಂತ ಹೇಳೂ ಹಂಗ, ನಮ್ಮ ಅಡ್ನಾಡಿ ಸಾಹೇಬ್ರ ಕನ್ಸನ್ನ ನನ್ಸು ಮಾಡಾಕ್ ಇಷ್ಟೆಲ್ಲ ತಿಪ್ಪರಲಾಗ್ ಹಾಕುವ ಹಲ್ಕಾ ಕೆಲ್ಸ ಮಾಡಬೇಕಾಗೈತಿ. ಫೋನ್‌ನ್ಯಾಗಿನ ದನಿ ನಂದs ಅಂತ ಸ್ವತಃ ನಾನs ಬಾಯಿ ಬಡ್ಕೊಂಡ್ರೂ ಅದ್ನ ಸಾಬೀತುಪಡ್ಸಾಕ್ ಆಗಲಾರದಂಗ್ ಮಾಡೂದು ಸಾಧ್ಯ ಅದ ಏನ್ ಅಂತ ಪರೀಕ್ಷೆ ಮಾಡಾಕ್ ನಿಂಗ್ ಫೋನ್ ಮಾಡಿದ್ದೆ’ ಅಂದ.

‘ಭಾರಿ ಚಾಲೂ ಅದಿ ಬಿಡು ನೀನು. ಈ ಆಡಿಯೊ ಬಾಂಬ್‌ ಪ್ರಸಂಗವನ್ನ ಸಿನಿಮಾ ಮಾಡಿದ್ರ ಸಖತ್ತಾಗಿ ಓಡ್ತದ’ ಎಂದೆ.

‘ಛಲೋ ಸಲಹಾ ಕೊಟ್ಟಿ ನೋಡಪಾ. ನಾನs ಈ ಸಿನಿಮಾ ಮಾಡ್ತೀನಿ. ರೊಕ್ಕದ ಚಿಂತಿ ಬಿಡು ಅಂತ ಮನಿರತ್ನ ಖಂಡಿತವಾಗಿ ಹೇಳ್ತಾನ್’ ಎಂದು ನನ್ನ ಸಲಹೆಯನ್ನ ಗಟ್ಟಿಯಾಗಿ ಹಿಡ್ಕೊಂಡ.

‘ಏನ್‌ ಮಳ್ಳ ಅದಿಲೇ ನೀನು. ಸಿನಿಮಾ ಮಾಡೋದು ಅಂದ್ರ ಎಂಎಲ್‌ಎಗಳನ್ನ, ಕತ್ತಿ– ಕುದುರಿ ಖರೀದಿಸಿದಷ್ಟು ಸಲೀಸು ಅಂತ ತಿಳ್ಕೊಂಡಿ ಏನ್‌. ನಟ, ನಟಿಯರ ಅಮೋಘ ನಟನೆ, ಕ್ಯಾಬರೆ ಡಾನ್ಸ್‌ ಮಸಾಲೆ, ಸೀಟಿ – ಚಪ್ಪಾಳೆ ಸದ್ದು ಕೇಳುವ ಡೈಲಾಗ್‌, ಸ್ಕ್ರೀನ್‌ಗೆ ಚಿಲ್ರೆ ಎಸೆಯುವಂತಹ ಹಾಡು, ಕರವಸ್ತ್ರ ಹಸಿ ಮಾಡುವ ನವರಸ ಭಾವಗಳ ಮಸಾಲಾ ಬೇಕಾಗ್ತಾವ್‌. ಇವು ಇಲ್ಲಂದ್ರ ಸಿನಿಮಾ ತೋಪೆದ್ದು ಹೋಗ್ತದ’ ಎಂದು ಎಚ್ಚರಿಸಿದೆ.

‘ಓಂ, ಸಿನಿಮಾದಾಗ್‌ ಖರೆ ಖರೆ ರೌಡಿಗಳು ನಟಿಸಿದ್ರಲ್ಲ. ಹಂಗs ಚಾಲ್ತಿಯಲ್ಲಿರೋ ಪುಢಾರಿಗಳನ್ನ ಹಾಕ್ಕೊಂಡ್‌ ಸಿನಿಮಾ ಮಾಡ್ತೀನಿ. ಹೊಸ ಹೆಸರ್‌ ತಗುಲಿಸಿಕೊಂಡಿರುವ ನಟ ಭಯಂಕರರಾದ ಆಡಿಯೊರಪ್ಪ, ಕಾಂಗ್ರೆಸ್‌ ಕ್ಲರ್ಕ್, ಸೂಪರ್‌ ಸಿಎಂ ನಟಿಸಿದ ಸಿನಿಮಾ ಮಾಡಿದ್ರ 100ಕ್ಕೂ ಹೆಚ್‌ ದಿನ ಓಡುದು ಗ್ಯಾರಂಟಿ ಗುರು’ ಎಂದ ಗಾಂಧಿನಗರದವರ ಧಾಟಿಯೊಳ್ಗ.

‘ಸಿನಿಮಾ ಪೋಸ್ಟರ್‌ದಾಗ್‌– ತಪ್ಪಾಯಿತು ಕ್ಷಮ್ಸಿ, ಮತ್ತೊಮ್ಮೆ ಇಂಥಾ ಹಲ್ಕಾ ಕೆಲ್ಸಾ ಮಾಡಲ್ಲ’ ಅಂತ ಪ್ರಿಂಟ್‌ ಹಾಕಾಕ್‌ ಮರೀಬ್ಯಾಡ್‌’ ಅಂತ ಕಿಚಾಯಿಸಿದೆ.

‘ಸಿನಿಮಾಕ್ಕ ಏನ್‌ ಹೆಸರ್‌ ಇಡಬೇಕಂತ್‌ ಗೊಂದ್ಲಾ ಕಾಡಾಕತ್ತೈತಿ. ಸೆಗಣಿ ತುಂಬಿರೊ ನಿನ್ನ ತೆಲಿಗೆ ಏನರ್‌ ಹೊಳದ್ರ ಹೇಳ್‌’ ಅಂತ ತಿರುಗೇಟ್‌ ಕೊಟ್ಟ.

‘ದೇವದುರ್ಗ ರಹಸ್ಯ’ ಅಂತ ಇಟ್ಟ ನೋಡ್‌. ಸಿನಿಮಾ ಓಡ್ಲಿ ಕಂದ್ರ ನಾ ಅರ್ಧ ಮೀಸೆ ಬೋಳುಸ್ತೀನಿ’ ಎಂದು ಸವಾಲು ಎಸೆದೆ. ‘ಸರ್ಕಾರ ಉರುಳ್ಸಾಕ್‌ ಹೋಗಿ ತಾವ ಖೆಡ್ಡಾಕ್‌ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತ ಹೇಳ್ಕೊಂಡ್‌ ಮತ್ತ ಯಾವ್‌ ಆಪರೇಷನ್‌ ಮಾಡಬೇಕಂತ ತಲೆಕೆಡಿಸಿಕೊಂಡಾರ್‌. ಇನ್ನೂ ಏನೇನ್‌ ಆಪರೇಷನ್‌ ನೋಡ್ಬೆಕೊ’ ಎಂದೂ ಸೇರಿಸಿದೆ.

‘ಭಾಳ್‌ ಹಿಂದ್‌ ರಂಗಮಹಲ್ ರಹಸ್ಯ ಸಿನಿಮಾ ಬಂದಿತ್ತಲ್ಲ. ಅದ್ರಾಗ್‌ ಈ ಚಿತ್ರದ ಕತೆ – ಪಾತ್ರಗಳೆಲ್ಲ ಕಪೋಲ ಕಲ್ಪಿತ ಅಂತ ಹೇಳ್ಕೊಂಡಿದ್ರು. ನೀನೂ ಈಸ್ಟಮನ್‌ ಕಲರ್ಸ್‌ನ ‘ದೇವದುರ್ಗ ರಹಸ್ಯ’ ಚಿತ್ರಕತೆಯೊಳಗ್‌ ಸ್ವಲ್ಪ ಬದಲಾವಣೆ ಮಾಡು. ಈ ಚಿತ್ರದ ಕತೆ – ಪಾತ್ರಗಳೆಲ್ಲ ನೈಜ. ಹಾಲಿ ಪುಢಾರಿಗಳು ಅಭಿನಯಿಸಿದ ಅತ್ಯಮೋಘ ಚಿತ್ರ ಅಂತ ಪ್ರಚಾರ ಮಾಡ್ತಾ ಸಿನಿಮಾ ಮಾಡ್‌. ಚಿತ್ರಕತೆಗೆ ಕಲಾತ್ಮಕ ಕಂ ಕಮರ್ಷಿಯಲ್‌ನ ಬಣ್ಣಾ ಕೊಡು. ನೋಡ್‌ ಆಗ್‌ ಗಮ್ಮತ್‌. ಸಮ್ಮಿಶ್ರ ಸರ್ಕಾರ ಖಂಡಿತವಾಗಿಯೂ ಸಬ್ಸಿಡಿ ನೀಡ್ತದ. ನಾಡಿನ ಜನರೆಲ್ಲ ತಪ್ಪದೇ ನೋಡಬೇಕು ಅಂತ ಫರ್ಮಾನೂ ಹೊರಡಸ್ತದ. ನಾಲ್ಕೈದು ಭಾಷೆದಾಗ್‌ ಸಿನಿಮಾ ತಗದ್ರ, ಅಲ್ಲೂ ಭರ್ಜರಿ ಓಡ್ತದ. ಸಾಮಾನ್ಯರು ವಾಹ್‌ ಅಂದ್ರ, ವಿಮರ್ಶಕರೂ ಹೊಗಳಿ ಬರೀತಾರ್‌. ಕ್ಲಾಸ್‌ ಮತ್ತ ಮಾಸ್‌ಗೂ ಇಷ್ಟಾ ಆಗ್ತದ. ಲೋಕಸಭೆ ಚುನಾವಣಾ ಹೊತ್ತಿನ್ಯಾಗ್‌ ಸಿನಿಮಾ ಬಿಡುಗಡೆ ಮಾಡಿದ್ರ ಗಲ್ಲಾ ಪೆಟ್ಟಿಗೆ ಭರ್ತಿ ಗ್ಯಾರಂಟಿ’ ಎಂದು ಪುಸಲಾಯಿಸಿದೆ.

‘ಹಂಗ್‌ ಅಂತೀಯಾ’ ಅಂತ ಹೇಳುತ್ತಲೇ ‘ಫೋನ್‌ ಇಡ್ತೀನಿ’ ಅಂತ ಅವ್ಸರಾ ಮಾಡಿದ.

‘ಯಾಕ್‌ ನನ್ನ ಮಾತ್ ಕೇಳಿ ಬೇಜಾರಾಯ್ತೇನ್‌’ ಎಂದೆ. ‘ರೊಟ್ಟಿ ಜಾರಿ ತುಪ್ಪದಾಗ್ ಬಿದ್ದದಲೇ. ಟೂರಿಂಗ್‌ ಟಾಕೀಸ್‌ನಿಂದ ಹಿಡ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಇರೋ ಸ್ಕ್ರೀನ್‌ಗಳನ್ನು ಬುಕ್‌ ಮಾಡುದದ’ ಅಂತ ಹೇಳಿ ಫೋನ್‌ ಕಟ್‌ ಮಾಡೇಬಿಟ್ಟ.

‘ಏ ಹಮಾರಾ ಸಪ್ನಾ ಭೀ ಹೈ, ಔರ್‌ ಸಂಕಲ್ಪ ಭೀ ಹೈ...’ ನೆನಪ್‌ನ್ಯಾಗ್‌ ನಾ ನಿದ್ದೆಗೆ ಜಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT