ಶುಕ್ರವಾರ, ಡಿಸೆಂಬರ್ 6, 2019
18 °C
ಜನರು ದೇವರೆಂದು ಭಾವಿಸುವ ಕೆಲವು ಐಕಾನ್‌ಗಳನ್ನು ಲೇವಡಿ ಮಾಡುವುದು ಕೂಡ ಸೆಕ್ಯುಲರಿಸಂ ಎಂದು ಬಿಂಬಿಸಲ್ಪಡುವುದು ಸಹ್ಯವಾಗಲು ಕಾರಣಗಳೇ ಇಲ್ಲ

ಸೆಕ್ಯುಲರಿಸಂ: ಇನ್ನಷ್ಟು ವಿಚಾರಗಳು

Published:
Updated:

‘ಸೆಕ್ಯುಲರ್‌ವಾದವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸುತ್ತ ಹಿಂದುತ್ವ, ಮೃದು ಹಿಂದುತ್ವ, ಹಿಂದೂಧರ್ಮಗಳ ಕುರಿತಾದ ತಮ್ಮ ವಿಚಾರಗಳನ್ನು ಮುಂದಿಟ್ಟಿರುವ ಲೇಖಕರಿಬ್ಬರು (ಪ್ರ.ವಾ., ಆ. 25) ಹೊರಟಿರುವ ದಾರಿ ಸರಿಯಾಗಿಯೇ ಇದೆ. ಆದರೆ ಅದು ಸಮಗ್ರವಾಗಿರದೆ ಅರ್ಧಕ್ಕೇ ನಿಂತಂತಿದೆ. ಹಾಗೆ ನೊಡಿದರೆ ನಮ್ಮ ಸಂವಿಧಾನ ಅಂಗೀಕರಿಸಿರುವ ಸೆಕ್ಯುಲರ್‌ವಾದದಲ್ಲಿ ಅಂಥ ಅತಿಗಳೇನೂ ಇಲ್ಲದೆ ಸರಿಯಾಗಿಯೇ ಇದೆಯೆನಿಸುತ್ತದೆ. ಅದನ್ನು ವ್ಯಾಖ್ಯಾನಿಸುವಲ್ಲಿ, ಆಚರಣೆಗೆ ತರುವಲ್ಲಿ ನಮ್ಮ ರಾಜಕಾರಣಿಗಳು ಮತ್ತು ತಥಾಕಥಿತ ಸೆಕ್ಯುಲರ್‌ವಾದಿಗಳು ಅದನ್ನು ಅತಿಗಳಿಗೆ ಎಳೆದೊಯ್ದಿದ್ದಾರೆನಿಸುತ್ತದೆ.

ಘಜನಿ ಮಹಮ್ಮದನ ದಾಳಿಗೆ ತುತ್ತಾಗಿ ಹಾಳಾಗಿದ್ದ ಸೋಮನಾಥ ದೇವಾಲಯವನ್ನು ಪುನರ್‌ನಿರ್ಮಿಸಿದ ಸಂದರ್ಭದಲ್ಲಿ ‘ಸೆಕ್ಯುಲರ್ ದೇಶದ ಪ್ರಧಾನಿಯಾಗಿ ಅದರ ಉದ್ಘಾಟನೆಗೆ ಹೋಗುವುದು ಉಚಿತವಲ್ಲ’ ಎಂದು ಭಾವಿಸಿ ದೂರ ಉಳಿದಿದ್ದ ಅಂದಿನ ಪ್ರಧಾನಿ ಜವಾಹರಲಾಲರದು ಒಂದು ಅತಿಯಾಗಿದ್ದರೆ, ಇಫ್ತಾರ್ ಭೋಜನ ಕೂಟ ಏರ್ಪಡಿಸುವ ಮೂಲಕ ಹಾಗೂ ದೇವಸ್ಥಾನ, ಮಸೀದಿ ಚರ್ಚುಗಳೆಲ್ಲವನ್ನೂ ಸುತ್ತುಹೊಡೆಯುವ ಮೂಲಕ ಈಗಿನ ರಾಜಕಾರಣಿಗಳು ತಾವು ಸೆಕ್ಯುಲರಿಸಂ ಅನ್ನು ಎತ್ತಿಹಿಡಿಯುತ್ತಿದ್ದೇವೆಂದು ಭ್ರಮಿಸುವುದು ಇನ್ನೊಂದು ಅತಿಯಾಗಿದೆ. ರಾಜಕಾರಣಿಗಳ ಈ ನಡೆ ಇಂದು ‘ಅಲ್ಪಸಂಖ್ಯಾತರ ತುಷ್ಟೀಕರಣ’ ಎಂಬ ಹೊಸದೊಂದು ಪರಿಭಾಷೆ ಸೃಷ್ಟಿಯಾಗಲು ಕಾರಣವಾಗಿದೆ. ರಾಜಕಾರಣಿಗಳಿಗೆ ಅರ್ಥವಾಗುವುದು ವೋಟಿನ ಭಾಷೆ ಮಾತ್ರ. ಹಾಗಾಗಿ ಇಂಥ ಟೀಕೆಗಳಿಗೆ ಜಗ್ಗದೆ– ಕುಗ್ಗದೆ ಒಂದಲ್ಲ ಒಂದು ರೀತಿಯಲ್ಲಿ ಇಂಥ ಇನ್ನೂ ಹತ್ತು ಹಲವನ್ನು ಮುಂದುವರಿಸಿಕೊಂಡು ಬಂದಿರುವುದೇ ಸ್ವಾತಂತ್ರ್ಯೋತ್ತರ ಭಾರತದ ಸೆಕ್ಯುಲರಿಸಂನ ಇತಿಹಾಸ ಎನ್ನುವಂತಾಗಿರುವುದು ದುರಂತವೇ ಸರಿ.

ಈ ಎರಡು ಅತಿಗಳ ನಡುವೆ ಸೆಕ್ಯುಲರಿಸಂ ಉಳಿದು ಬರಬೇಕಿದೆ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಬರುವುದಕ್ಕೂ ಮುಂಚೆ ಈ ದೇಶದ, ನೆಲದ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು ಜನರು ದಿನನಿತ್ಯದಲ್ಲಿ ಆಚರಿಸುವ
ಧರ್ಮಗಳಾಗಿಯಷ್ಟೇ ಉಳಿಯದೆ, ದೇಶದ ಸಾಂಸ್ಕೃತಿಕ ಅಸ್ಮಿತೆಯ ಆಧಾರಸ್ತಂಭಗಳೂ ಜೀವಧಾತುಗಳೂ ಆಗಿದ್ದವು. ಈ ದೇಶದ ಚಿಂತನೆ, ದರ್ಶನ, ಕಲೆ, ಸಾಹಿತ್ಯ, ಶಿಲ್ಪ, ಸಂಗೀತಗಳೆಲ್ಲಕ್ಕೂ ಆ ಧರ್ಮಗಳೇ ಆಹಾರ ನೀರು ಗೊಬ್ಬರಗಳಾಗಿದ್ದುವು. ಜನರ ನೈತಿಕ ಮಟ್ಟವು ಸಹ ಆ ಧರ್ಮಗಳು ಬೋಧಿಸಿದ ತತ್ವಗಳಂತೆಯೇ ಇತ್ತೇ ಎಂಬ ಪ್ರಶ್ನೆ ಇದ್ದೇ ಇದೆ. ಹೇಗೇ ಆದರೂ ಅವು ಜನ ಜೀವನದ ಅವಿಭಾಜ್ಯ ಅಂಗಗಳಂತೂ ಆಗಿದ್ದವು. ಕಾಲದಿಂದ ಕಾಲಕ್ಕೆ ಬಂದ, ದೇಶದ ನಾನಾ ಭಾಗಗಳನ್ನಾಳುತ್ತಿದ್ದ ರಾಜ ಮಹಾರಾಜರುಗಳು ಆ ಎಲ್ಲ ಧರ್ಮಗಳ ಪ್ರೋತ್ಸಾಹಕರೂ ಪೋಷಕರೂ ಆಗಿಯೇ ಇದ್ದರು. ಜನಸಮುದಾಯದಲ್ಲಿ ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳಿದ್ದರೂ ‘ಈ ಎಲ್ಲ ಧರ್ಮಗಳು ತಮ್ಮವು’ ಎಂದೇ ಜನರು ಭಾವಿಸಿದ್ದರು. ಆನಂತರ ಈ ದೇಶಕ್ಕೆ ಬಂದ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳಿಗೆ ಸೇರಿದ ಜನರೂ ಇಲ್ಲಿಯವರೇ ಆಗಿದ್ದರಿಂದ, ಒಟ್ಟಾರೆ ಈ ದೇಶದ ಜನರಿಗೆ ಈ ನೆಲದ, ದೇಶದ ಸಾಂಸ್ಕೃತಿಕ ಸ್ವರೂಪ ಮತ್ತು ಅಸ್ತಿತ್ವ ಚೆನ್ನಾಗಿ ಮನವರಿಕೆಯಾಗಿತ್ತು. ಆದರೆ ‘ಸೆಕ್ಯುಲರಿಸಂ’ ಎಂಬ ಪದದ ಮೂಲಕ ಈ ದೇಶಕ್ಕಿರುವ ಸಾಂಸ್ಕೃತಿಕ ಅಸ್ತಿತ್ವವನ್ನೇ, ಸ್ವರೂಪವನ್ನೇ ನಗಣ್ಯಗೊಳಿಸುತ್ತ, ಅದನ್ನು ಅಸ್ಪೃಶ್ಯವೆಂಬಂತೆ ಕಾಣುತ್ತ ಬಂದಿರುವುದು ನಡೆದೇ ಇದೆ.

‘ಭಾರತದ ಸೆಕ್ಯುಲರ್‌ವಾದವನ್ನು ಧಾರ್ಮಿಕವಾಗಿ ಸಂವೇದನಾಶೀಲಗೊಳಿಸುವ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಅಗತ್ಯವಿದೆ’ ಎಂಬ ಲೇಖಕದ್ವಯರ ಮಾತು, ಈ ಸಾಂಸ್ಕೃತಿಕ ಅಸ್ತಿತ್ವವನ್ನು ನಗಣ್ಯಗೊಳಿಸುತ್ತ ಸಾಗಿರುವುದರತ್ತಲೇ ಬೊಟ್ಟುಮಾಡಿ ತೋರಿಸುವಂತಿದೆ. ಒಂದು ಕಡೆ ರಾಜಕಾರಣಿಗಳ ಮಟ್ಟದಲ್ಲಿ ಈ ರೀತಿಯ ನಗಣ್ಯೀಕರಣವು ‘ಅಲ್ಪಸಂಖ್ಯಾತರ ತುಷ್ಟೀಕರಣ’ದ ರೂಪವನ್ನು ತಾಳಿದ್ದರೆ, ಇನ್ನೊಂದು ಕಡೆ ತಥಾಕಥಿತ ಸೆಕ್ಯುಲರ್‌ವಾದಿಗಳು ಹಿಂದೂಗಳ ಶ್ರದ್ಧಾಬಿಂದುಗಳು, ನಂಬಿಕೆ, ಆಚರಣೆಗಳನ್ನು ಹೆಕ್ಕಿಹೆಕ್ಕಿ ಟೀಕಿಸುವುದನ್ನೇ ಧರ್ಮವನ್ನಾಗಿ ಮಾಡಿಕೊಂಡಿರುವ ರೂಪದಲ್ಲಿ ವಿಜೃಂಭಿಸುತ್ತಿದ್ದಾರೆ.

ಹಿಂದೂಗಳ ಮೌಢ್ಯಾಚರಣೆಗಳನ್ನು ಟೀಕಿಸುವುದು ಯಾರಿಗಾದರೂ ಅರ್ಥವಾಗುವಂಥದ್ದೇ. ಆದರೆ ಅದು ಅಷ್ಟಕ್ಕೇ ಸೀಮಿತಗೊಳ್ಳದೆ ಹಿಂದೂ ದೇವ, ದೇವತೆಗಳು, ಪೌರಾಣಿಕ ವ್ಯಕ್ತಿಗಳು, ಆಚರಣೆ, ನಂಬಿಕೆಗಳತ್ತಲೂ ತನ್ನ ಕಬಂಧಬಾಹುಗಳನ್ನು ಚಾಚುತ್ತ ನಡೆದಿದೆ. ಹೀಗೆ ಟೀಕಿಸುವವರು ಹಿಂದೂಗಳೇ ಆಗಿದ್ದರೂ ಹೊರಗಿನವರಿಗಿಂತ ಅತಿಶಯವಾಗಿ ಟೀಕಾಸ್ತ್ರಗಳನ್ನು ಝಳಪಿಸುತ್ತ ತಾವು ವೈಚಾರಿಕರೆಂದು ಬಿಂಬಿಸುವುದು ಕೂಡ ನಡೆದಿದೆ.

ರಾಮಾಯಣ, ಮಹಾಭಾರತಗಳು ಸಾಹಿತ್ಯ ಕೃತಿಗಳಷ್ಟೇ ಆಗಿರದೆ, ಪೂಜ್ಯ ಗ್ರಂಥಗಳೆಂದೂ ಪರಿಗಣಿತವಾಗಿ ಈ ದೇಶದ ಬಹು ದೊಡ್ಡಭಾಗ ಅಲ್ಲಿಯ ಕೆಲವು ವ್ಯಕ್ತಿಗಳನ್ನು ಪೂಜ್ಯಭಾವದಿಂದ ಕಾಣುತ್ತ ಬಂದಿದೆ. ರಾಮಾಯಣ, ಮಹಾಭಾರತಗಳನ್ನು ಪ್ರತಿಮಾತ್ಮಕವಾಗಿ, ಅಲ್ಲಿಯ ಸಂಗತಿಗಳನ್ನು ರೂಪಕಗಳಾಗಿ ನೋಡುವ, ಹಾಗೂ ಸಾಮಾಜಿಕ ಮಾನವ ಶಾಸ್ತ್ರದ ದೃಷ್ಟಿಯಿಂದ ಅವುಗಳನ್ನು ವಿಶ್ಲೇಷಿಸುವ, ಅರ್ಥೈಸುವ, ವಿಮರ್ಶಿಸುವ ಪ್ರಯತ್ನಗಳನ್ನು ಎಲ್ಲ ಕಾಲಕ್ಕೂ ಈ ದೇಶದ ಜನ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಆದರೆ ಜನರು ದೇವರೆಂದು ಭಾವಿಸುವಂಥ ಕೆಲವು ಐಕಾನ್‌ಗಳನ್ನು ವೀರಾವೇಶದಿಂದ, ಬೇಕಾಬಿಟ್ಟಿಯಾಗಿ ಲೇವಡಿ ಮಾಡುವುದು ಕೂಡ ಸೆಕ್ಯುಲರಿಸಂನ ಒಂದು ಪರಿಯೆಂಬಂತೆ ಬಿಂಬಿಸಲ್ಪಡುವುದು ಸಹ್ಯವಾಗಲು ಕಾರಣಗಳೇ ಇಲ್ಲ. ತಮ್ಮನ್ನು ತಾವು ಅತಿ ಪ್ರಗತಿಪರರೆಂದು ತೋರಿಸಿಕೊಳ್ಳುವ ಉಮೇದು ಇರುವ ಕಾರಣದಿಂದಲೋ ಏನೋ ಹೀಗೆ ಮಾಡುವ ಕೆಲವರು ಈ ದೇಶದಲ್ಲೇ ಇರುವ ಅಲ್ಪಸಂಖ್ಯಾತ ಧರ್ಮಗಳವರ ಆಚರಣೆ, ನಂಬಿಕೆ, ಪುರಾಣಗಳ ಮತ್ತು ಅಲ್ಲಿಯ ವ್ಯಕ್ತಿಗಳ ತಂಟೆಗೆ ಮಾತ್ರ ಎಂದಿಗೂ ಹೋಗುವುದಿಲ್ಲ.

ಸೆಕ್ಯುಲರಿಸಂ ಕುರಿತಾದ ಚರ್ಚೆಯ ಸಂದರ್ಭದಲ್ಲೇ ಯಾವುದು ಸೆಕ್ಯುಲರಿಸಂ ಅಲ್ಲ; ಅಥವಾ ಯಾವುದು ಹುಸಿ ಜಾತ್ಯತೀತತೆ (ಸ್ಯೂಡೋ ಸೆಕ್ಯುಲರಿಸಂ) ಎಂಬ ಈ ಎಲ್ಲ ವಿಚಾರಗಳನ್ನೂ ಕುರಿತು ಚಿಂತಿಸುವ ಅಗತ್ಯವಿದೆಯೆನಿಸುತ್ತದೆ.

ಪ್ರತಿಕ್ರಿಯಿಸಿ (+)