ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಬಾಗಿಲು ತೆರೆದರೂ...

ರೀತಿ ರಿವಾಜುಗಳು ಇಷ್ಟವಾಗದಿದ್ದಲ್ಲಿ, ಬಿಡಿ. ಬೇರೆ ದೇವಸ್ಥಾನ ನೋಡಿಕೊಳ್ಳಿ
Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಇಸ್ಲಾಮಿನಲ್ಲಿ ಹುಡುಗಿಯ ವ್ಯಕ್ತ ಸಮ್ಮತಿಯಿಲ್ಲದೇ ವಿವಾಹದ ಒಪ್ಪಂದ ಸಿಂಧುವಾಗುವುದಿಲ್ಲ. ಒಮ್ಮೆ ಹೀಗೆ ನಡೆಯಿತು. ಒಬ್ಬ ಹುಡುಗಿ ಪ್ರವಾದಿಯ ಮುಹಮ್ಮದ(ಸ)ರ ಬಳಿ ಬಂದು, ‘ನನ್ನ ತಂದೆ ನನ್ನ ಸಮ್ಮತಿಯಿಲ್ಲದೇ ನನ್ನ ಮದುವೆಯನ್ನು ಮಾಡಿದ್ದಾರೆ’ ಎಂದು ದೂರುತ್ತಾಳೆ. ಅಹವಾಲನ್ನು ಆಲಿಸಿದ ಪ್ರವಾದಿಯವರು ಆಕೆಗೆ ಆಯ್ಕೆಯನ್ನು ಕೊಟ್ಟರು, ‘ನೀನು ಈಗಲೂ ಬೇಕಾದರೆ ಈ ಮದುವೆಯನ್ನು ಒಪ್ಪಿಕೊಳ್ಳಬಹುದು ಅಥವಾ ಅದನ್ನು ಅಸಿಂಧುಗೊಳಿಸಬಹುದು’ ಎಂದು. ಕೊನೆಯಲ್ಲಿ ಆ ಹುಡುಗಿ ಹೇಳುತ್ತಾಳೆ, ‘ಆಯಿತು, ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಹುಡುಗಿಯರ ಮೇಲೆ ಗಂಡಂದಿರನ್ನು ಹೇರುವ ಅಧಿಕಾರ ಪೋಷಕರಿಗೆ ಇಲ್ಲ ಎಂಬುದನ್ನು ಉಳಿದ ಸ್ತ್ರೀಯರು ತಿಳಿದುಕೊಳ್ಳಲಿ ಎಂದು ನಾನು ಹೀಗೆ ಮಾಡಿದೆ’ ಎಂದಳು.

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಪ್ರವೇಶಿಸುವ ಹಕ್ಕಿನ ಕುರಿತು ನಮ್ಮ ಸೋದರಿಯರು ಹೀಗೆ ಮಾಡಿದ್ದರೆ ಚೆನ್ನಾಗಿತ್ತೇನೋ! ದೇವಸ್ಥಾನದ ಪ್ರವೇಶದ ಮಟ್ಟಿಗೆ ಗಂಡು– ಹೆಣ್ಣು ತಾರತಮ್ಯವಿರಬಾರದು ಎಂದು ಸುಪ್ರೀಂ ಕೋರ್ಟು ತೀರ್ಪನ್ನು ನೀಡಿದ್ದಾಯಿತು. ಇದು, ಸಂಪ್ರದಾಯವಾದಿಗಳನ್ನು ಕೆರಳಿಸಿತು. ಇದೇ ನೆಪದಲ್ಲಿ ಕೇರಳದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಇದರ ನಾಯಕತ್ವವನ್ನು ವಹಿಸಿದರಾಜಕೀಯ ಬಣ ಎಲ್ಲ ರಾಜ್ಯಗಳಿಗೂ ಇದನ್ನು ಹಬ್ಬಿಸಿದರೆ ಆಶ್ಚರ್ಯವಿಲ್ಲ. ಇದರ ಬದಲಿಗೆ ಮಹಿಳೆಯರು ಮೇಲಿನ ಉದಾಹರಣೆಯಲ್ಲಿ ಆ ಹುಡುಗಿ ಹೇಳಿದ ಹಾಗೆ, ‘ಆಯಿತು, ಈ ದೇವಸ್ಥಾನಕ್ಕೆ ಹೋಗಲೇಬೇಕು ಎಂಬ ಹಪಹಪಿ ನಮಗೇನಿಲ್ಲ, ನಾವು ದೇವರನ್ನು ಎಲ್ಲಿಯಾದರೂ ಕಾಣಬಲ್ಲೆವು. ಆದರೆ, ದೇವರ ಮೂರ್ತಿಯ ದರ್ಶನದ ಮಟ್ಟಿಗೆ ತಾರತಮ್ಯ ತಪ್ಪು ಎಂಬುದನ್ನು ಸಾಬೀತುಪಡಿಸಬೇಕಾಗಿತ್ತು, ಅದನ್ನು ನಾವು ಮಾಡಿದ್ದೇವೆ’ ಎಂದಿದ್ದರೆ ಏನಾಗುತ್ತಿತ್ತು?

ನಿಜವೆಂದರೆ, ಇಂಥ ಆಂದೋಲನಗಳಿಗೆ ಹೆಚ್ಚಿನ ಅರ್ಥವಿಲ್ಲ. ಇದಕ್ಕಿಂತಲೂ ಹೆಚ್ಚು ಗಂಭೀರವಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಕೆಲವರು ಮಾಡುವ ಪಿತೂರಿಯ ಆಟದಲ್ಲಿ ನಾವೆಲ್ಲಿ ದಾಳಗಳಾಗಿಬಿಡುತ್ತೇವೋ ಎಂಬ ಆತಂಕ ಮೂಡುತ್ತದೆ. ನಮ್ಮಲ್ಲಿ ಪ್ರತಿಯೊಂದು ಗುಡಿಯಲ್ಲಿರುವ ದೇವತೆಯ ಕತೆ ಬೇರೆ ಬೇರೆ. ಅದರಿಂದಾಗಿಯೇ ಆ ದೇವಸ್ಥಾನ ಭಕ್ತರಲ್ಲಿ ಪ್ರಸಿದ್ಧವಾಗಿರುತ್ತದೆ. ಅದಕ್ಕಾಗಿಯೇ ಅವರು ದೂರದಿಂದ ಅದೇ ದೇವಸ್ಥಾನಕ್ಕೆ ಬರುತ್ತಾರೆ. ಇದನ್ನು ಒಪ್ಪಿಕೊಳ್ಳುವುದಾದರೆ ಆ ದೇವಸ್ಥಾನದ ಕೆಲವು ರೀತಿ ರಿವಾಜುಗಳನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ನಿಮಗೆ ಇಷ್ಟವಾಗದಿದ್ದಲ್ಲಿ, ಬಿಡಿ. ಬೇರೆ ದೇವಸ್ಥಾನಗಳನ್ನು ನೋಡಿಕೊಳ್ಳಿ. ಇದು ಸ್ತ್ರೀಯರಿಗಷ್ಟೇ ಅಲ್ಲ, ಪುರುಷರಿಗೂ ಹೇಳುವ ಮಾತು.

ನ್ಯಾಯಾಲಯವು ಸಾಂವಿಧಾನಿಕ ಹಕ್ಕಿನ ಆಧಾರದ ಮೇಲೆ, ಸಮಾನತೆಯ ಆಧಾರದ ಮೇಲೆ ತೀರ್ಪು ಕೊಡಬೇಕಾಗುತ್ತದೆ. ಆದರೆ, ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ ಸ್ತ್ರೀಯರ ಪ್ರವೇಶಕ್ಕೆ ಅನುಮತಿ ನೀಡಿದ ‘ಸುಪ್ರೀಂ’ ಆದೇಶವನ್ನು ಒಪ್ಪಿಕೊಳ್ಳದ ಕೆಲವರು, ‘ಮಸೀದಿಗಳಿಗೆ ಸ್ತ್ರೀಯರ ಪ್ರವೇಶವಿಲ್ಲವಲ್ಲಾ, ಅದನ್ನೇಕೆ ಪ್ರಶ್ನಿಸುವುದಿಲ್ಲ’ ಎಂದು ಮೊಂಡುವಾದವನ್ನು ಹೂಡುತ್ತಾರೆ. ಎಂದರೆ ಅವರು ತೀರ್ಪನ್ನು ಒಪ್ಪಿಕೊಂಡು ಇದೇ ಹಕ್ಕು ಮುಸ್ಲಿಂ ಮಹಿಳೆಯರಿಗೂ ಸಿಗಲಿ ಎಂಬ ಸದ್ಭಾವನೆಯಿಂದ ಹೇಳುತ್ತಾರೆಯೇ? ಇಲ್ಲ. ಬರೀ ವಿತಂಡವಾದ.

ಮಸೀದಿಯೆನ್ನುವುದು ಯಾವುದೇ ದೇವತೆಯ ಗುಡಿಯಲ್ಲ. ಅಲ್ಲಿ ಯಾವುದೇ ಮೂರ್ತಿ ಇರುವುದಿಲ್ಲ. ಒಂದೊಂದು ಮಸೀದಿಗೆ ಮಹಿಮೆಯ ಒಂದೊಂದು ಕಥೆ ಇರುವುದಿಲ್ಲ. ಅದು ಪವಿತ್ರವಲ್ಲ. ಅದೇ ನೀವು ದರ್ಗಾಗಳನ್ನು ನೋಡಿ. ಅವು ಇಂಥ ಮಹಿಮೆಗಳ, ಪವಾಡಗಳ ಕಥೆಗಳನ್ನು ಹೊಂದಿರುತ್ತವೆ. ಸರಿ. ಅಲ್ಲಿಗೆ ಗಂಡು– ಹೆಣ್ಣು ಅಷ್ಟೇ ಅಲ್ಲ, ಹಲವಾರು ಜಾತಿ, ಧರ್ಮಗಳವರೂ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು, ಸಮಸ್ಯೆಗೆ ತಕ್ಕ ದರ್ಗಾಗಳನ್ನು ಹುಡುಕಿಕೊಂಡು ಹೋಗುತ್ತಾರಲ್ಲ. ಅಲ್ಲಿ ಖಂಡಿತ ತಾರತಮ್ಯ ಇರಬಾರದು. ಉದಾಹರಣೆಗೆ, ಮುಂಬೈಯ ಹಾಜಿ ಅಲಿ ದರ್ಗಾಕ್ಕೆ 2013ರ ಜೂನ್‌ವರೆಗೆ ಮಹಿಳೆಯರಿಗೂ ಪ್ರವೇಶವಿತ್ತು. ಆದರೆ ದರ್ಗಾದ ಟ್ರಸ್ಟ್ ಇದ್ದಕ್ಕಿದ್ದಂತೆ ಅದನ್ನು ನಿಷೇಧಿಸಿತು. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸದಸ್ಯೆಯರು ಹೂಡಿದ ವ್ಯಾಜ್ಯವನ್ನು ಇತ್ಯರ್ಥಗೊಳಿಸಿದ ಸುಪ್ರೀಂ ಕೋರ್ಟ್ 2016ರ ಅ. 24 ರಂದು ದರ್ಗಾ ಪ್ರವೇಶಕ್ಕೆ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕಿದೆ ಎಂದು ಘೋಷಿಸಿತು. ಇದನ್ನು ದರ್ಗಾದ ಮಂಡಲಿ ಒಪ್ಪಿಕೊಂಡಿತು. ಆದರೆ ಮಸೀದಿ ವಿಚಾರ ಬೇರೆ, ಅದೊಂದು ಖಾಲಿ ಕಟ್ಟಡ. ಶಾಂತವಾಗಿ, ದೇವರ ನೆನಪಿನಲ್ಲಿ ತಲ್ಲೀನರಾಗಿ ಮಾಡುವ ಆರಾಧನೆಗಾಗಿ ಇರುವ ಒಂದು ಸೌಕರ್ಯ.

ಇನ್ನು ಮಹಿಳೆಯರು ಮಸೀದಿಗೆ ಹೋಗಬಹುದೇ ಎಂದರೆ, ಹೋಗಬಹುದು. ಸೌದಿ ಅರೇಬಿಯಾ, ಈಜಿಪ್ಟ್‌, ಅಮೆರಿಕ, ಬ್ರಿಟನ್‌ ಮತ್ತು ಸಿಂಗಪುರಗಳಲ್ಲಿ ಮಹಿಳೆಯರಿಗೆ ಮಸೀದಿಗಳಿಗೆ ಪ್ರವೇಶವುಂಟು. ಭಾರತದಲ್ಲಿಯೂ ಕೆಲವು ಮಸೀದಿಗಳಲ್ಲಿ ವಿಶೇಷ ನಮಾಜುಗಳ ಸಂದರ್ಭದಲ್ಲಿ ಪ್ರವೇಶವಿದೆ. ಆದರೆ ಅವರದೇ ಆದ ಪ್ರತ್ಯೇಕ ವಿಭಾಗವಿರುತ್ತದೆ. ಕೆಲವೊಮ್ಮೆ ಅದು ಪುರುಷರ ಹಿಂಭಾಗದಲ್ಲಿದ್ದರೆ, ಕೆಲವೊಮ್ಮೆ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಪಕ್ಕದ ವಿಭಾಗದಲ್ಲಿರುತ್ತದೆ. ಹಲವಾರು ಕಡೆ ಮಹಿಳೆಯರು ತಮ್ಮದೇ ಆದ ಪ್ರತ್ಯೇಕ ಮಸೀದಿಗಳನ್ನು ಕಟ್ಟಿಕೊಂಡಿದ್ದಾರೆ. ಒಂದೇ ಮಸೀದಿಯಲ್ಲಿ ಇಬ್ಬರಿಗೂ ಪ್ರವೇಶ ಇರುವ ಕಡೆ ಪ್ರತ್ಯೇಕ ವಿಭಾಗ ಇರುವುದಕ್ಕೆ ಕಾರಣ, ನಮಾಜು ಮಾಡುವ ವಿಧಾನ. ನಮಾಜಿಗಳು ಹೆಗಲಿಗೆ ಹೆಗಲು ಹಚ್ಚಿ ನಮಾಜು ಮಾಡಬೇಕು. ಬಗ್ಗಿ ಎದ್ದು ನಮಾಜನ್ನು ಸಲ್ಲಿಸಬೇಕು. ಕಣ್ಣು ಮುಚ್ಚಿಕೊಳ್ಳುವಂತಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಗಂಡು–ಹೆಣ್ಣು ಒಂದೇ ಸ್ಥಾನದಲ್ಲಿ ಸೇರಿ ನಮಾಜು ಮಾಡುವುದು ಸಭ್ಯತೆ, ತಲ್ಲೀನತೆಯ ಆರಾಧನೆಯ ದೃಷ್ಟಿಯಿಂದ ಸಮಂಜಸವಲ್ಲ. ಇಲ್ಲವಾದರೆ ಅಲ್ಲಾಹುವಿನ ದೃಷ್ಟಿಯಲ್ಲಿ, ದೈವಿಕವಾಗಿ, ಆಧ್ಯಾತ್ಮಿಕವಾಗಿ ಗಂಡು– ಹೆಣ್ಣುಗಳಲ್ಲಿ ಯಾವುದೇ ಭೇದವಿಲ್ಲ.

ಜಾತ್ಯತೀತ ಜನತಂತ್ರವಾದ ಭಾರತದಲ್ಲಿ ಧರ್ಮ, ದೇವರು, ಮತಾಚರಣೆ ಇವೆಲ್ಲವನ್ನೂ ಆದಷ್ಟು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಿ ಕೊಂಡರೆ ಕ್ಷೇಮ. ಇಲ್ಲವಾದರೆ ಭಕ್ತಿಗಿಂತ ರಾಜಕಾರಣ ಹೆಚ್ಚಾಗಿ, ಮುಂದಿನ ಬಾಗಿಲಿನಿಂದಲೇ ಪ್ರವೇಶಿಸುವ ಪ್ರವಾಸೋದ್ಯಮ ನಮ್ಮ ನಂಬಿಕೆಗಳನ್ನು ಆಳಲು ಶುರು ಮಾಡುತ್ತದೆ. ಮೌಢ್ಯವೇ ಭಕ್ತಿಯಾಗುತ್ತದೆ, ಭಾವನಾತ್ಮಕವಾದ ಹುಸಿ ವಿಚಾರಗಳೇ ಬಹುದೊಡ್ಡ ಸಮಸ್ಯೆ ಗಳಾಗಿ, ನಿಜವಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳು ಮರೆಯಾಗುತ್ತವೆ. ಇಂಥ ಪ್ರತಿಭಟನೆಗಳನ್ನು ಮಾಡುವವರ ಉದ್ದೇಶ ಅದೇ ಆಗಿರುವುದರಿಂದ ಅವರು ಸಫಲರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT