ಗುರುವಾರ , ಡಿಸೆಂಬರ್ 3, 2020
21 °C
ಪರಿಸರ ಕಾಳಜಿ ಇರುವವರೆಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ

ಸಂಗತ: ಹಾಕೋಣ ಬನ್ನಿ ಹಕ್ಕಿಗಳ ಲೆಕ್ಕ

ಶ್ರೀಗುರು Updated:

ಅಕ್ಷರ ಗಾತ್ರ : | |

ಹಕ್ಕಿಗಳು

‘ಬರ್ಡ್ ಮ್ಯಾನ್ ಆಫ್ ಇಂಡಿಯಾ’ ಖ್ಯಾತಿಯ ಪಕ್ಷಿತಜ್ಞ ಸಲೀಂ ಅಲಿ ಅವರ ನೂರ ಇಪ್ಪತ್ತೈದನೇ ಜನ್ಮದಿನಾಚರಣೆಯ ಅಂಗವಾಗಿ ಇದೇ 5ರಿಂದ 12ರವರೆಗೆ, ಹಕ್ಕಿಗಳನ್ನು ಗುರುತಿಸಿ ಎಣಿಕೆ ಮಾಡುವ ‘ಸಲೀಂ ಅಲಿ ಹಕ್ಕಿ ಲೆಕ್ಕ’ದ ಸಪ್ತಾಹ ದೇಶದಾದ್ಯಂತ ನಡೆಯುತ್ತಿದೆ. ಸಪ್ತಾಹದಲ್ಲಿ 35,000ಕ್ಕೂ ಹೆಚ್ಚು ಪಕ್ಷಿಪ್ರಿಯರು, ಬರ್ಡ್‌ವಾಚರ್‌ಗಳು ಹಾಗೂ ಪಕ್ಷಿತಜ್ಞ ಛಾಯಾಗ್ರಾಹಕರು ಭಾರತ ಮತ್ತು ಉಪಖಂಡದಲ್ಲಿ ಕಾಣಸಿಗುವ ಸಾವಿರಾರು ಪ್ರಭೇದದ ಪಕ್ಷಿಗಳ ಗಣತಿ ಶುರು ಮಾಡಿದ್ದಾರೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‍ಎಚ್‍ಎಸ್) ನೇತೃತ್ವದಲ್ಲಿ ನಡೆಯುತ್ತಿರುವ ಚಟುವಟಿಕೆಗೆ ಇಂಡಿಯನ್ ಬರ್ಡ್ ಕನ್ಸರ್ವೇಶನ್ ನೆಟ್‍ವರ್ಕ್ (ಐಬಿಸಿಎನ್), ಮಹಾರಾಷ್ಟ್ರ ಪಕ್ಷಿಮಿತ್ರ ಸಂಘಟನ ಮತ್ತು ಬರ್ಡ್ ಕೌಂಟ್ ಇಂಡಿಯಾಗಳು (ಬಿಸಿಐ) ಸಾಥ್ ನೀಡಿವೆ. ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿಗಳ ಭಾರಿ ಪ್ರಶಂಸೆ ಮತ್ತು ಬೆಂಬಲ ವ್ಯಕ್ತವಾಗಿದೆ.

ಗುಜರಾತ್‍ನ ಗಾಂಧಿನಗರದಲ್ಲಿ ಫೆಬ್ರುವರಿಯಲ್ಲಿ ಬಿಡುಗಡೆಯಾದ ‘ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್‌ ರಿಪೋರ್ಟ್’– 2020ರ ಪ್ರಕಾರ, ನಮ್ಮಲ್ಲಿರುವ 1,300ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳ ಪೈಕಿ ಅರ್ಧದಷ್ಟು ಕಳೆದ ನಾಲ್ಕೈದು ದಶಕಗಳಲ್ಲಿ ಗಣನೀಯವಾಗಿ ಕಡಿಮೆಯಾಗಿವೆ. ಶೇ 48ರಷ್ಟು ಪ್ರಭೇದಗಳು ಮಾತ್ರ ತಮ್ಮ ಸಂಖ್ಯೆಯ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ಉಳಿದವು ಶಾಶ್ವತವಾಗಿ ಕಣ್ಮರೆಯಾಗುವ ಅಪಾಯದ ಸಂಕೇತ ರವಾನಿಸಿವೆ. ನಮ್ಮ ರಣಹದ್ದು, ಗಿಡುಗ, ಉದ್ದ ಕೊಕ್ಕಿನ ಎಲೆಉಲಿಯಕ್ಕಿ, ಬಿಳಿ ಪೃಷ್ಠದ ಹದ್ದು, ರಿಚರ್ಡ್ಸ್‌ ಪಿಪಿಲಕ, ಉಲ್ಲಂಗಿ, ಹೊನ್ನಗೊರವ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಸೇರಿದಂತೆ ನಾಲ್ಕು ಬಗೆಯ ಬಸ್ಟರ್ಡ್ ಪಕ್ಷಿಗಳು, ವಲಸೆ ಬರುವ ಕಡಲ ಕಿನಾರೆಯ ಪಕ್ಷಿಗಳು, ಬೇಟೆಪಕ್ಷಿಗಳು ಶಾಶ್ವತ ನಾಶ ಹೊಂದುವ ಭೀತಿಯಲ್ಲಿವೆ.

101 ಬಗೆಯ ಪಕ್ಷಿಗಳು ತೀವ್ರ ಅಪಾಯದಲ್ಲಿದ್ದರೆ, 319 ಬಗೆಯ ಪಕ್ಷಿಗಳು ಸಾಧಾರಣ ಅಪಾಯ ಮತ್ತು 442 ಹಕ್ಕಿಗಳು ಕಡಿಮೆ ಅಪಾಯದಲ್ಲಿವೆ ಎನ್ನಲಾಗುತ್ತಿದೆ. ಆವಾಸ ನಾಶ ಮತ್ತು ಕೀಟಾಹಾರದ ಕೊರತೆಯಿಂದ ಹಕ್ಕಿಗಳು ಕಣ್ಮರೆಯಾಗುತ್ತಿವೆ. ಅಚ್ಚರಿಯ ಸಂಗತಿಯೆಂದರೆ, ರಾಷ್ಟ್ರಪಕ್ಷಿ ನವಿಲಿನ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸಂಖ್ಯೆ ಮಿತಿಮೀರಿ ಹೆಚ್ಚಾಗಿದ್ದರಿಂದ 2016ರಲ್ಲಿ ಗೋವಾ ರಾಜ್ಯ ‘ವರ್ಮಿನ್’ (ಕ್ರಿಮಿ) ಎಂದು ಘೋಷಿಸಿ ಸಾಮೂಹಿಕ ವಧೆಗೆ ಕೇಂದ್ರದ ಅನುಮತಿ ಕೇಳಿತ್ತು. ಮಹಾನಗರಗಳಲ್ಲಿ ಮಾತ್ರ ಗುಬ್ಬಚ್ಚಿಗಳು ಕಣ್ಮರೆಯಾಗಿವೆ, ಹಳ್ಳಿ ಮತ್ತು ಸಣ್ಣಪಟ್ಟಣ ಪ್ರದೇಶಗಳಲ್ಲಿ ಇನ್ನೂ ದೊಡ್ಡ ಸಂಖ್ಯೆಯಲ್ಲಿವೆ ಎಂಬುದು ವರದಿಯಲ್ಲಿದೆ.

ಕಳೆದ ಶತಮಾನದ ಕೊನೆಯ ವೇಳೆಗೆ ಕೇವಲ 15 ಸಾವಿರದಷ್ಟಿದ್ದ ಪಕ್ಷಿ ವೀಕ್ಷಕರ ಸಂಖ್ಯೆ ಈಗ ಲಕ್ಷ ದಾಟಿದೆ. ಪ್ರತೀ ನವೆಂಬರ್ 12ರಂದು ನಡೆಯುವ ಒಂದು ದಿನದ ಗಣತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸ್ವತಂತ್ರ ತಜ್ಞರು, ಇಕೊ ಕ್ಲಬ್‍ಗಳು, ಐ.ಟಿ ಉದ್ಯಮದ ನೌಕರರು, ಹವ್ಯಾಸಿ ಬರಹಗಾರರು, ಎನ್‍ಜಿಒಗಳ ಸದಸ್ಯರೆಲ್ಲಾ ಸುಮಾರು ಎರಡು ಲಕ್ಷ ವಿವಿಧ ಜಾಗಗಳಲ್ಲಿ ಬೈನಾಕ್ಯುಲರ್, ಕ್ಯಾಮೆರಾ ಹಿಡಿದು ನೂರಾರು ಕಿಲೊ ಮೀಟರ್ ನಡೆದು, ಚಿತ್ರ ತೆಗೆದು, ಸಾಮಾನ್ಯವಾಗಿ ಹಾಗೂ ಅಪರೂಪಕ್ಕೆ ಕಾಣಿಸಿಕೊಳ್ಳುವ ಹಕ್ಕಿಗಳನ್ನು ಗುರುತಿಸಿ ಸಂಖ್ಯೆಗಳನ್ನು ದಾಖಲಿಸಿಕೊಂಡು, ಬರೋಬ್ಬರಿ ಹತ್ತು ಲಕ್ಷ ವರದಿಗಳನ್ನು ಸಿದ್ಧಪಡಿಸಿ ಸಂಘಟಕರ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.

ಇರುವ 1,300 ಪ್ರಭೇದಗಳಲ್ಲಿ ಹತ್ತತ್ತಿರ 1,100 ಪ್ರಭೇದಗಳನ್ನು ಗುರುತಿಸಿರುವ ದೆಹಲಿಯ ಹವ್ಯಾಸಿ ಪಕ್ಷಿ ವೀಕ್ಷಕ ಅತುಲ್ ಜೈನ್, ಅತ್ಯಪರೂಪದ ಪಕ್ಷಿ ‘ಹಾಡ್‍ಸನ್ಸ್ ಫ್ರಾಗ್‍ಮೌತ್’ ಅನ್ನು ಹುಡುಕಿಕೊಂಡು ಅರುಣಾಚಲ ಪ್ರದೇಶದವರೆಗೂ ಹೋಗಿದ್ದರು. ನಾರ್ಕೋಡಿಯನ್ ಮುಂಗಟ್ಟೆ ಹಕ್ಕಿಯನ್ನು ಗುರುತಿಸಲು ಮೂರು ದಿನಗಳ ಪ್ರಯಾಣ ಮಾಡಿ ದೂರದ ಅಂಡಮಾನ್ ದ್ವೀಪಕ್ಕೂ ಹೋದದ್ದಿದೆ.

ಪರಿಸರ ಕಾಳಜಿ ಇದ್ದು ಹಕ್ಕಿಗಳನ್ನು ಸುತ್ತಮುತ್ತ ಕಾಣಬೇಕೆನ್ನುವ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬಹುದಾಗಿದೆ. ನಿಮ್ಮ ಹತ್ತಿರದಲ್ಲೇ ಇರುವ ಕುರುಚಲು ಕಾಡು, ನೀರಿನ ತಾಣ, ಕಾಡು, ಪಕ್ಷಿಧಾಮ, ಹುಲ್ಲುಗಾವಲು, ಬೆಟ್ಟ ಪ್ರದೇಶಗಳಿಗೆ ಮುಂಜಾನೆಯ ವೇಳೆಯಲ್ಲಿ ಭೇಟಿ ನೀಡಿ, ಕನಿಷ್ಠ ಒಂದು ಗಂಟೆ ಕಾಲ ಪಕ್ಷಿಗಳನ್ನು ಗುರುತಿಸಿ ಕಲೆಹಾಕಿದ ಮಾಹಿತಿಯನ್ನು, ಡೌನ್‍ಲೋಡ್ ಮಾಡಿಕೊಂಡ ಇ-ಬರ್ಡ್ ಮತ್ತು ಐಒಬಿ (ಇಂಟರ್ನೆಟ್ ಆಫ್ ಬರ್ಡ್ಸ್‌) ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ತುಂಬಿ ನೇರವಾಗಿ ಬಿಎನ್‍ಎಚ್‍ಎಸ್‌ನ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬಹುದು.

ಜನರ ಹಾಗೂ ಸಂಘಟನೆಗಳ ಸ್ವಯಂ ಆಸಕ್ತಿಯನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯು ಹಕ್ಕಿ ಸಂತತಿಯನ್ನು ಉಳಿಸಲು ಹತ್ತು ವರ್ಷಗಳ ಯೋಜನೆಯೊಂದನ್ನು ರೂಪಿಸಿ ಕರಡು ರೂಪುರೇಷೆಯನ್ನು ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿದ್ದು, ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ. ಆಸಕ್ತಿಯಿದ್ದರೆ ಸಲಹೆ ಕೊಡಿ ಮತ್ತು ನೋಟ್‌ ಬುಕ್‌, ಪೆನ್‌ ಹಿಡಿದು ಕೂಡಲೇ ಸಪ್ತಾಹದಲ್ಲಿ ಭಾಗಿಯಾಗಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು