ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನ ತ್ಯಾಜ್ಯ ಸಂಸ್ಕರಣೆ: ಹಿಂದುಳಿದ ರಾಜ್ಯ

ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ವರದಿ
Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ತಾವು ಸಂಗ್ರಹಿಸುವ ಕಸದಿಂದ ರಸ ತೆಗೆಯುವ ನಿಟ್ಟಿನಲ್ಲಿ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಹಿಂದುಳಿದಿವೆ’ ಎಂಬ ಅಂಶವನ್ನು ಸಂಸದೀಯ
ಸ್ಥಾಯಿ ಸಮಿತಿಯ ವರದಿ ಬಹಿರಂಗಪಡಿಸಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಉತ್ಪಾದನೆ ಆಗುತ್ತಿರುವ ಅಂದಾಜು 36.50 ಲಕ್ಷ ಟನ್‌ ಘನ ತ್ಯಾಜ್ಯದ ಪೈಕಿ, ಶೇ 22ರಷ್ಟು ತ್ಯಾಜ್ಯವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿ ಬಹಿರಂಗಪಡಿಸಿದೆ.

ಸಮಿತಿಯು ಕಲೆಹಾಕಿರುವ ಅಂಕಿ– ಅಂಶದ ಪ್ರಕಾರ, ಘನ ತ್ಯಾಜ್ಯದ ಸಂಸ್ಕರಣೆಯ ರಾಷ್ಟ್ರೀಯ ಸರಾಸರಿ (ಶೇ 23.70) ಪ್ರಮಾಣಕ್ಕಿಂತಲೂ ಕರ್ನಾಟಕದಲ್ಲಿ ಸಂಸ್ಕರಿಸಲಾಗುತ್ತಿರುವ ಪ್ರಮಾಣ ಕಡಿಮೆ ಎಂಬುದು ತಿಳಿದುಬಂದಿದೆ.

ಘನ ತ್ಯಾಜ್ಯವನ್ನು ಆದ್ಯತೆಯ ಮೇರೆಗೆ ಸಂಸ್ಕರಿಸುವ ಪಟ್ಟಿಯಲ್ಲಿ ದೇಶದಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ ಘನ ತ್ಯಾಜ್ಯದ ಸಂಸ್ಕರಣೆಯ ಪ್ರಮಾಣ ಶೇ 67ರಷ್ಟು.

ಶೇ 45ರ ಪ್ರಮಾಣದೊಂದಿಗೆ ರಾಜ್ಯದ ನೆರೆಯಲ್ಲಿರುವ ಕೇರಳವು ನಂತರದ ಸ್ಥಾನ ಪಡೆದಿದೆ. ಅತ್ಯಂತ ಕನಿಷ್ಠ ಪ್ರಮಾಣದೊಂದಿಗೆ ತಮಿಳುನಾಡು (ಶೇ 8) ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದೆ.

ರಾಜ್ಯದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಒಟ್ಟು 6,464 ವಾರ್ಡ್‌ಗಳ ಪೈಕಿ 3,962 ವಾರ್ಡ್‌ಗಳಲ್ಲಿ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಸ್ಥಳದಲ್ಲೇ ಶೇ100ರಷ್ಟು ತ್ಯಾಜ್ಯವನ್ನು ಬೇರ್ಪಡಿಸುವ ಪ್ರಕ್ರಿಯೆಯು 1,311 ವಾರ್ಡ್‌ಗಳಲ್ಲಿ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು ಈ ಅಂಶದ ಕುರಿತು ಗಮನ ಹರಿಸುವ ಮೂಲಕ, ಘನ ತ್ಯಾಜ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪಷ್ಟ ಕಾರ್ಯಕ್ರಮ ರೂಪಿಸುವಂತೆ ಆಯಾ ರಾಜ್ಯಗಳಿಗೆ ಸೂಚಿಸಬೇಕಿದೆ ಎಂದು ಸಂಸದ ಪಿನಾಕಿ ಮಿಶ್ರಾ ನೇತೃತ್ವದ ಸಮಿತಿಯ ಸಲಹೆ ನೀಡಿದೆ.

ಘನ ತ್ಯಾಜ್ಯದ ಶೇ 100ರಷ್ಟು ಸದ್ಬಳಕೆಗೆ ಮುಂದಾಗುವ ನಿಟ್ಟಿನಲ್ಲಿ ಸಂಗ್ರಹ, ಬೇರ್ಪಡಿಸುವಿಕೆ, ಸಾಗಣೆ, ಸಂಪನ್ಮೂಲ ಚೇತರಿಕೆ, ಸಂಸ್ಕರಣೆ ಹಾಗೂ ಘನ ತ್ಯಾಜ್ಯದ ಅಂತಿಮ ವಿಲೇವಾರಿಗೆ ಒತ್ತು ನೀಡಬೇಕು. ಅಲ್ಲದೆ, ಸರ್ಕಾರಿ ಕಟ್ಟಡ ಅಥವಾ ಮೇಲ್ಸೇತುವೆ ನಿರ್ಮಾಣದ ಸಂದರ್ಭ ಉತ್ಪತ್ತಿಯಾಗುವ ತ್ಯಾಜ್ಯದ ಮರುಬಳಕೆಗೂ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದೆ.

ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕಗಳನ್ನು ಬಲಪಡಿಸಬೇಕು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಮಿಶ್ರ ಗೊಬ್ಬರ ತಯಾರಿಕೆ ಘಟಕಗಳನ್ನು ಬಲಪಡಿಸಬೇಕು, ಕಾಂಪೋಸ್ಟ್‌ ಗೊಬ್ಬರ ಬಳಕೆ ಹಾಗೂ ಖರೀದಿ ಬಗ್ಗೆ ಅರಿವು ಮೂಡಿವುದಲ್ಲದೆ, ರೈತರನ್ನು ಪ್ರೋತ್ಸಾಹಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT