ಸಣ್ಣ ಉತ್ತೇಜನಗಳಿಂದ ಬದಲಾವಣೆ

7
ಸಣ್ಣ ಸಂಗತಿಯೂ ಶಾಲೆಗಳಲ್ಲಿ ಬದಲಾವಣೆಯ ಸೂಕ್ಷ್ಮ ಕಂಪನ ತರಬಲ್ಲದು

ಸಣ್ಣ ಉತ್ತೇಜನಗಳಿಂದ ಬದಲಾವಣೆ

Published:
Updated:

ದೇಶದ ನಾಲ್ಕು ಜಿಲ್ಲೆಗಳಲ್ಲಿ ನಾನು ನಡೆಸಿದ ಅಧ್ಯಯನ ಆಧರಿಸಿ, ಉತ್ತಮ ಸರ್ಕಾರಿ ಶಾಲೆಗಳ ಗುಣಲಕ್ಷಣ ಕುರಿತು ಕಳೆದ ಎಂಟು ತಿಂಗಳಲ್ಲಿ ಸರಣಿ ಲೇಖನಗಳನ್ನು ಬರೆದಿರುವೆ. ಈ ಲೇಖನಮಾಲೆಯ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಮೂಡಿಬಂದ ಪ್ರಶ್ನೆ: ‘ಕೆಲವು ಸರ್ಕಾರಿ ಶಾಲೆಗಳು ಪ್ರೇರಣದಾಯಕವಾಗಿಯೇನೋ ಇವೆ. ಆದರೆ ವ್ಯವಸ್ಥಿತ ಬದಲಾವಣೆಯನ್ನು ತರುವುದಕ್ಕೆ ಅಗತ್ಯವಾದ ಹೊಳಹುಗಳು ಅಧ್ಯಯನದಲ್ಲಿ ಇವೆಯೇ’ ಎಂಬುದು.

ನಾಯಕತ್ವ, ಬೋಧನೆ ಮತ್ತು ಕಲಿಕೆಯ ಗುಣಮಟ್ಟ ಸೇರಿದಂತೆ ಉತ್ತಮ ಶಾಲೆಗಳಿಗೆ ಅಗತ್ಯವಾದ ಹಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವುದು ನನ್ನ ಅಧ್ಯಯನದ ಉದ್ದೇಶವಾಗಿತ್ತು. ಸರ್ಕಾರಿ ಶಾಲೆಗಳೊಂದಿಗೆ ನಿಕಟವಾಗಿ ಒಡನಾಟ ಇಟ್ಟುಕೊಂಡಿರುವ ಜನರು ತಮ್ಮ ವ್ಯಾಪ್ತಿಯ ಶೇ 15 ರಿಂದ 20 ಶಾಲೆಗಳನ್ನು ‘ಉತ್ತಮ ಶಾಲೆಗಳು’ ಎಂದು ಗುರುತಿಸಿದರು.

ಈ ಶಾಲೆಗಳಿಗೆ ಭೇಟಿ ಕೊಟ್ಟಾಗ ಕಂಡುಬಂದ ಸಾಮಾನ್ಯ ಅಂಶಗಳಲ್ಲೊಂದು- ಅಲ್ಲಿನ ಶಿಕ್ಷಕರ ಬದ್ಧತೆ ಹಾಗೂ ತ್ಯಾಗದಿಂದ ಕೂಡಿದ ಕಾರ್ಯವೈಖರಿ. ಕಳೆದ ಹತ್ತು ವರ್ಷಗಳಲ್ಲಿ ಖಾಸಗಿ ಶಾಲೆಗಳತ್ತ ನಡೆದಿರುವ ವಿದ್ಯಾರ್ಥಿಗಳ ವಲಸೆಯಿಂದಾಗಿ, ಪ್ರಸ್ತುತ ಬಡ ಹಾಗೂ ಸೌಲಭ್ಯವಂಚಿತ ಸಮುದಾಯಗಳ ಮಕ್ಕಳಷ್ಟೇ ಸರ್ಕಾರಿ ಶಾಲೆಗಳಲ್ಲಿ ಉಳಿದಿದ್ದಾರೆ. ಅನೇಕ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಶಾಲೆಗಳಿಗೆ ಬಂದು, ಯಾವುದೇ ಕಲಿಕಾ ಸಾಮಗ್ರಿ ಹಾಗೂ ಓದಲು ಅಗತ್ಯವಾದ ವಾತಾವರಣವಿಲ್ಲದ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಇಂಥ ಸಂಕೀರ್ಣ ಹಾಗೂ ಪ್ರತಿಕೂಲ ಸಂದರ್ಭದಲ್ಲೂ ಶಿಕ್ಷಕರ ನಿರ್ವಹಣೆ ಅತ್ಯದ್ಭುತವಾಗಿರುತ್ತದೆ. ಬದ್ಧತೆಯುಳ್ಳ ಶಿಕ್ಷಕರಿಂದಾಗಿ ಅವರ ಶಾಲೆಗಳು ಅತ್ಯುತ್ತಮ ಶಾಲೆಗಳಾಗಿ ಗುರ್ತಿಸಿಕೊಂಡಿವೆ.

ಅಧ್ಯಯನದಲ್ಲಿ ನಾನು ಕಂಡುಕೊಂಡ ಅಂಶಗಳ ಹಿನ್ನೆಲೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒಗಳು) ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ನೀಡಬಹುದಾದ ಉತ್ತೇಜನದ ಕುರಿತು ಕೆಲವು ಸಂಗತಿಗಳನ್ನು ಚರ್ಚಿಸಲು ಬಯಸುವೆ. ಬಿಇಒಗಳು ಯಾವ ರೀತಿಯಲ್ಲಿ ಶಿಕ್ಷಕರನ್ನು ಉತ್ತೇಜಿಸುತ್ತಾರೆ ಎನ್ನುವುದೇ ಬದಲಾವಣೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲೊಂದಾಗಿದೆ.

ಜಿಲ್ಲೆಯಲ್ಲಿನ ಕ್ಷೇತ್ರವೊಂದರಲ್ಲಿ ಸುಮಾರು 250 ಪ್ರಾಥಮಿಕ ಶಾಲೆಗಳೂ 1000 ಶಿಕ್ಷಕರೂ ಇರುತ್ತಾರೆ. ಈ ಶಾಲೆಗಳ ಉಸ್ತುವಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನೋಡಿಕೊಂಡರೆ, ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ವ್ಯಾಪ್ತಿಯಲ್ಲಿ ಸುಮಾರು 2000 ಶಾಲೆಗಳು ಬರುತ್ತವೆ. ಮಾದರಿ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರ ದಿನಚರಿ, ಕೆಲಸದ ಪರಿ ಹಾಗೂ ಕಚೇರಿಯಲ್ಲಿನ ಒತ್ತಡಗಳನ್ನು ಅರ್ಥಮಾಡಿಕೊಳ್ಳಲು ನಾನೊಮ್ಮೆ, ಮೂರು ದಿನಗಳ ಕಾಲ ಅವರನ್ನು ಸನಿಹದಿಂದ ಗಮನಿಸಿದ್ದೆ.

ಅವರು ಒಂದು ನಿಮಿಷವನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಓಡುನಡಿಗೆಯಲ್ಲಿ ಜೀಪೇರುತ್ತಿದ್ದ ಅವರು ಶಾಲೆಗಳಿಗೆ ಭೇಟಿ ಕೊಡುವುದು, ಸಭೆಗಳನ್ನು ನಡೆಸುವಂತಹ ಕೆಲಸಗಳ ಧಾವಂತದಲ್ಲಿ ಸದಾ ಇರುತ್ತಿದ್ದರು. ಮೊಬೈಲ್ ಫೋನ್ ಮೂಲಕ ತಮ್ಮ ಸಿಬ್ಬಂದಿಗೆ ಸೂಚನೆಗಳನ್ನು ನೀಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ಅವರ ಬಿಳಿ ಅಂಗಿಹೊಳಪು ಕಳೆದುಕೊಳ್ಳುತ್ತಿತ್ತು. ಪ್ರಾಮಾಣಿಕ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ರಾಜಕಾರಣದ ಒತ್ತಡ ಅವರನ್ನು ಉಸಿರುಗಟ್ಟಿಸಿದೆ. ನನ್ನ ದೃಷ್ಟಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳನ್ನು ನಿರಂತರವಾಗಿ ಬೆಂಬಲಿಸುವುದು ಉದ್ದೇಶಿತ ಬದಲಾವಣೆಗಳಿಗೆ ಅತ್ಯಗತ್ಯ.

ಬಿಇಒಗಳು ಮಾಡಬಹುದಾದ ಕೆಲಸಗಳಲ್ಲೊಂದು-ಸಮುದಾಯದ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗುವಂತೆ ಶಾಲೆಗಳನ್ನು ಸಜ್ಜುಗೊಳಿಸುವುದು. ಈಗಾಗಲೇ ಉತ್ತಮ ಸಾಧನೆಯನ್ನು ತೋರಿರುವ ಶೇ 15ರಿಂದ 20ರಷ್ಟು ಶಾಲೆಗಳನ್ನು ಗುರುತಿಸಿ, ಅವುಗಳ ನೈತಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗಬಹುದು. ಇಂಥ ಶಾಲೆಗಳನ್ನು ಬೆಂಬಲಿಸಲಿಕ್ಕಾಗಿ ‘ಸಂವಹನ ಆಂದೋಲನ’ವೊಂದನ್ನು ಬಿಇಒ ರೂಪಿಸಿಕೊಳ್ಳಬಹುದು. ಉದ್ದೇಶಿತ ಆಂದೋಲನದ ನಿಟ್ಟಿನಲ್ಲಿ ಗಮನಿಸಬೇಕಾದ ಕೆಲವು ಅಂಶಗಳು:

* ಶಾಲೆಯಿಂದ ತೇರ್ಗಡೆಯಾಗಿ ಹೊರಬರುವ ಯಶಸ್ವಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಮುಖವಾಗಿ ಬಿಂಬಿಸುವುದು. ಕರ್ನಾಟಕ ಶಿಕ್ಷಣ ಇಲಾಖೆಯು ಶಾಲೆಗಳ ಯಶೋಗಾಥೆಯನ್ನು ಕುರಿತ ಪೋಸ್ಟರ್‍ ಪ್ರಕಟಿಸುವುದು.

* ರಾಷ್ಟ್ರೀಯ ಅಥವಾ ರಾಜ್ಯಮಟ್ಟದಲ್ಲಿ ನಡೆಯುವ ಶಾಲಾ ಗುಣಮಟ್ಟ ಪರೀಕ್ಷೆಗಳಲ್ಲಿ ಶಾಲೆಯ ಸಾಧನೆಯನ್ನು ಬಿಂಬಿಸುವುದು. ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ತಂತಮ್ಮ ಶಾಲೆಯ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರದರ್ಶಿಸುವ ಮೂಲಕ ‘ಈ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ’ ಎನ್ನುವ ಭರವಸೆ ಮೂಡಿಸುವುದು.

* ಬ್ಲಾಕ್ ಮತ್ತು ಜಿಲ್ಲಾ ಹಂತದ ಕ್ರೀಡೆ, ಸಂಗೀತ, ಕಲೆ ಮುಂತಾದ ಸ್ಪರ್ಧೆಗಳಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗಳನ್ನು ಪ್ರಮುಖವಾಗಿ ಪ್ರದರ್ಶಿಸುವುದು. ಬೆಳಗಿನ ಪ್ರಾರ್ಥನಾ ಸಭೆಗೆ ಪೋಷಕರನ್ನು ಆಹ್ವಾನಿಸಿ, ಅವರಿಗೂ ಶಾಲೆಯ ಚಟುವಟಿಕೆಗಳನ್ನು ಗಮನಿಸಲು ಅವಕಾಶ ಮಾಡಿಕೊಡುವುದು.

ಬದಲಾವಣೆಗೆ ಸಂಬಂಧಿಸಿದಂತೆ ನಾನು ನೀಡುವ ಮತ್ತೊಂದು ಸಲಹೆ ಎಂದರೆ ‘ಶಿಕ್ಷಕರ ಸಂವಹನ ವೇದಿಕೆಗಳ ರಚನೆ’. ಉತ್ತಮ ಶಿಕ್ಷಕರು ಒಂದೆಡೆ ಸೇರಿ ಪಠ್ಯದ ವಿಷಯಗಳನ್ನು ಚರ್ಚಿಸಲು ಹಾಗೂ ಬೋಧಕ ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಲು ಅನುಕೂಲವಾಗುವಂತಹ ವೇದಿಕೆಗಳನ್ನು ರೂಪಿಸಿಕೊಳ್ಳಬಹುದು. ಇಂಥ ವೇದಿಕೆಗಳಲ್ಲಿ ಬಿಇಒಗಳು ಪಾಲ್ಗೊಂಡು ಶಿಕ್ಷಕ ವೃಂದಕ್ಕೆ ಮಾರ್ಗದರ್ಶನ ನೀಡಬಹುದು. ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ಕಳೆದ ಎರಡು ವರ್ಷಗಳಲ್ಲಿ ಶಿಕ್ಷಕರು ರೂಪಿಸಿಕೊಂಡಿರುವ ವಾಟ್ಸ್‌ಆ್ಯಪ್ ಗುಂಪುಗಳಲ್ಲೂ ಬಿಇಒಗಳು ಸೇರಿಕೊಳ್ಳಬಹುದು. ವಾಟ್ಸ್‌ಆ್ಯಪ್ ಚರ್ಚೆಗಳು ಅದ್ಭುತಗಳನ್ನು ಸೃಷ್ಟಿಸಬಲ್ಲವು. ‘ನನ್ನ ಮೇಲಧಿಕಾರಿಯ ಒಂದೇ ಒಂದು ಮೆಚ್ಚುಗೆಯ ಸಂದೇಶ ನನ್ನ ಸಾಮರ್ಥ್ಯವನ್ನು ವರ್ಷಗಳ ಕಾಲ ದುಪ್ಪಟ್ಟುಗೊಳಿಸಬಲ್ಲದು’ ಎಂದು ಶಿಕ್ಷಕರೊಬ್ಬರು ಹೇಳಿದ್ದನ್ನು ನಾನು ಹೇಗೆ ತಾನೆ ಮರೆಯಲಿ?

ಸಣ್ಣ ಸಣ್ಣ ಸಂಗತಿಗಳು ಉತ್ತಮ ಶಾಲೆಗಳಿಗೆ ಶಕ್ತಿ ತುಂಬಬಲ್ಲವು ಹಾಗೂ ನೆರೆಹೊರೆಯ ಶಾಲೆಗಳಲ್ಲೂ ಬದಲಾವಣೆಗೆ ಪೂರಕವಾದ ಸೂಕ್ಷ್ಮ ಕಂಪನಗಳನ್ನು ಉಂಟುಮಾಡಬಲ್ಲವು. ವೈಯಕ್ತಿಕ ಸಾಧನೆಗಳನ್ನು ಸಾರ್ವತ್ರಿಕವಾಗಿ ಬಿಂಬಿಸುವ ಮೂಲಕ ಹೆಚ್ಚಿನ ಫಲಿತಾಂಶ ಕಾಣಬಹುದು. ತಳಮಟ್ಟದಲ್ಲಿ ಉಂಟಾಗಬಹುದಾದ ಪ್ರತಿಯೊಂದು ಸಣ್ಣ ಬದಲಾವಣೆಯೂ ಬಹುದೊಡ್ಡ ವ್ಯವಸ್ಥಿತ ಬದಲಾವಣೆಗೆ ಪೂರಕವಾಗಬಲ್ಲದು.

(ಲೇಖಕ: ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಮುಖ್ಯ ಕಾರ್ಯಕಾರಿ ಅಧಿಕಾರಿ)

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !