ಸಮಾಜ ಸುಧಾರಣೆಯ ಧಾರ್ಮಿಕ ಆಯಾಮ

7
ಮನುಷ್ಯರನ್ನು ಸಮಗ್ರವಾಗಿ ಗ್ರಹಿಸಿ, ಬಹುತ್ವದ ಮಾರ್ಗದರ್ಶನ ನೀಡುವ ಸಶಕ್ತ ಧಾರ್ಮಿಕ ಸುಧಾರಣೆಯೊಂದೇ ಬೌದ್ಧಿಕ ಮಾಲಿನ್ಯವನ್ನು ನಿವಾರಿಸಬಲ್ಲುದು

ಸಮಾಜ ಸುಧಾರಣೆಯ ಧಾರ್ಮಿಕ ಆಯಾಮ

Published:
Updated:

ಭಾರತದಲ್ಲಿ ಸಮಾಜ ಸುಧಾರಣೆಗೆ ಒಂದು ಸ್ವರೂಪವಿದೆ. ಪಾಶ್ಚಿಮಾತ್ಯ ಸಮಾಜದಲ್ಲಿ ಶುದ್ಧ ಲೌಕಿಕ ರೂಪದ ಸುಧಾರಣೆಗಳನ್ನು ಅಲ್ಲಿನ ಬೌದ್ಧಿಕ ವರ್ಗ ತಂದದ್ದಿದೆ. ಆದರೆ ಭಾರತದ ಬೌದ್ಧಿಕ ವರ್ಗ ಆ ರೀತಿಯಲ್ಲಿ ಸುಧಾರಣೆಯನ್ನು ತಂದಿಲ್ಲ. ಲೌಕಿಕ ರೂಪದ ಸುಧಾರಕರಲ್ಲಿ ಅಗ್ರಮಾನ್ಯರಾದ ಡಾ.ಬಿ.ಆರ್. ಅಂಬೇಡ್ಕರ್ ಅವರೂ ಕೊನೆಯ ಹಂತದಲ್ಲಿ ಬೌದ್ಧ ಧರ್ಮದ ಮುಖಾಂತರ ಸುಧಾರಣೆಯ ಸಂಯೋಜನೆಯನ್ನು ಮಾಡಿದರು. ಈಗ ಅಂಬೇಡ್ಕರ್ ವಿಚಾರಗಳು ಬೌದ್ಧದ ಮೂಲಕ ವಿಕಾಸಗೊಳ್ಳುತ್ತಿವೆ.

ಭಾರತದಲ್ಲಿ ಧಾರ್ಮಿಕ ರೂಪದಲ್ಲಿ ಬಂದ ಸಮಾಜ ಸುಧಾರಣೆಗಳೇ ಯಶಸ್ವಿಯಾದದ್ದು. ರಾಜಾರಾಮ ಮೋಹನ್ ರಾಯ್, ದಯಾನಂದ ಸರಸ್ವತಿ, ನಾರಾಯಣಗುರು ಎಲ್ಲರೂ ಈ ವಿನ್ಯಾಸದಲ್ಲೇ ಯಶಸ್ಸು ಕಂಡವರು. ಮಧ್ಯಕಾಲೀನ ಭಾರತದಲ್ಲಿ ಬಸವಣ್ಣ, ಭಕ್ತಿಪಂಥದವರು ಎಲ್ಲರೂ ಈ ಮಾರ್ಗವನ್ನೇ ಅನುಸರಿಸಿದರು. ಪುರಾತನ ಭಾರತದಲ್ಲಿ ಬುದ್ಧ, ಮಹಾವೀರರೂ ಈ ಮಾರ್ಗ ಅನುಸರಿಸಿಯೇ ಯಶಸ್ವಿಯಾದರು.

ಭಾರತದ ಸಮಾಜ ಧಾರ್ಮಿಕ ವಿನ್ಯಾಸದಲ್ಲಿ ಸುಧಾರಣೆ ಹೇಳಿದರೆ ಸ್ವೀಕರಿಸುತ್ತದೆ. ಬ್ರಿಟಿಷರು ಆಡಳಿತಾತ್ಮಕ ವಿನ್ಯಾಸದಲ್ಲಿ ಹೇಳಿದ್ದನ್ನು ಸ್ವೀಕರಿಸದೆ ಬಂಡಾಯಕ್ಕಿಳಿದ ಇದೇ ಭಾರತೀಯ ಸಮಾಜ, ಸ್ವಾಮಿ ವಿವೇಕಾನಂದರು ಧಾರ್ಮಿಕ ವಿನ್ಯಾಸದಲ್ಲಿ ಹೇಳಿದಾಗ ನಿಧಾನವಾಗಿ ಸ್ವೀಕರಿಸಿತು. ಬಹುಶಃ ಇದಕ್ಕೆ ಒಂದು ಕಾರಣ ಉಪನಿಷತ್ ಪರಂಪರೆಯ ಮೂಲ ಎನಿಸುತ್ತದೆ. ಬ್ಲೂಮ್ ಫೀಲ್ಡ್ ಅವರು ‘ಉಪನಿಷತ್ತುಗಳಲ್ಲಿ ತನ್ನ ಬೇರನ್ನು ಹೊಂದಿಲ್ಲದ ಯಾವುದೇ ಭಾರತೀಯ ತತ್ವಶಾಖೆಯೂ- ಅವೈದಿಕವಾದ ಬೌದ್ಧ ಧರ್ಮವೂ ಸೇರಿ- ಇಲ್ಲವೇ ಇಲ್ಲ’ (ದಿ ರಿಲಿಜನ್ ಆಫ್ ದಿ ವೇದ, ಪುಟ ಸಂಖ್ಯೆ 61) ಎನ್ನುತ್ತಾರೆ. ವೈದಿಕ ಆಕರಗಳ ಮೇಲಿನ ಯಾವ ಟೀಕೆಗಳೂ 108 ಉಪನಿಷತ್ತುಗಳ ಕುರಿತಾಗಿ ಇಲ್ಲ.

ಮನುಸ್ಮೃತಿಯನ್ನು ಖಂಡಿಸಿದ ಕುವೆಂಪು ‘ವಿಚಾರ ಕ್ರಾಂತಿಗೆ ಆಹ್ವಾನ’ದಲ್ಲಿ ಉಪನಿಷತ್ತುಗಳನ್ನು ಗೌರವಿಸಿ ಮಾತನಾಡುತ್ತಾರೆ. ಏಕೆಂದರೆ ಉಪನಿಷತ್ತುಗಳು ಒಂದು ಪ್ರಕ್ರಿಯೆಯಾಗಿ ಇರುವ ಜಂಗಮ ರೂಪಿ ಆಕರಗಳು. ಸತ್ಯದ ಅನುಸಂಧಾನದ ಪ್ರಕ್ರಿಯೆಯ ರೂಪದಲ್ಲಿರುವ ಉಪನಿಷತ್ತುಗಳೂ ನಿಯಮಗಳಿಂದ ನಿರ್ದೇಶಿಸಲ್ಪಟ್ಟಿರುವ ಶಾಸ್ತ್ರ, ಸ್ಮೃತಿಗಳೂ ಭಿನ್ನವಾದವು– ಕೆಲವೊಮ್ಮೆ ವಿರುದ್ಧವಾದವು. ಶಾಸ್ತ್ರಗಳು, ಸ್ಮೃತಿಗಳು ಮಠ ಪರಂಪರೆಯ ಸ್ಥಾವರ ರೂಪಕ್ಕೆ ಹತ್ತಿರವಾದವುಗಳು.

ಅವುಗಳ ಕಾಲಮಾನವನ್ನು ಮೀರಿದ ನಂತರ ಅವು ಸವಕಲಾಗುತ್ತವೆ. ಆದರೆ ಪ್ರಕ್ರಿಯಾ ರೂಪದಲ್ಲಿರುವ ಉಪನಿಷತ್ತುಗಳು ಕಾಲಮಾನದ ಎಲ್ಲೆಯನ್ನು ಮೀರಿ ವಿಕಾಸಗೊಳ್ಳಬಲ್ಲವು. ಪರಂಪರೆಯ ವಿಕಾಸದಲ್ಲಿ ಎಲ್ಲ ಜ್ಞಾನ ಶಾಖೆಗಳೊಂದಿಗೂ ಸಂವಾದ ನಡೆಸಿಕೊಂಡು ಬಂದಿರುವ ಅವು ಸಾಂವಿಧಾನಿಕ ಮೌಲ್ಯಗಳೊಂದಿಗೂ ಸಂವಾದಿಸಬಲ್ಲ ಅತೀ ಹಳೆಯ ಆಕರಗಳು. ಅವುಗಳ ವಿನ್ಯಾಸ ಇರುವುದು ಧಾರ್ಮಿಕ ರೂಪದಲ್ಲಿ. ಅದೇ ನಡವಳಿಕೆಯನ್ನು ಭಾರತದ ಸಮಾಜದ ಬಹುತ್ವದಲ್ಲಿ ಕಾಣಬಹುದು.

ಭಾರತದ ಪರಂಪರೆಗೆ ಬಹುತ್ವವೇ ಶಕ್ತಿ. ಆದರೆ ಆ ಬಹುತ್ವವೇ ಒಂದು ಏಕಾತ್ಮಕತೆಯನ್ನೂ ಪಾರಂಪರಿಕವಾಗಿಯೇ ಪಾಲಿಸಿಕೊಂಡು ಬಂದಿದೆ. ಆಧುನಿಕ ‘ನೇಷನ್ ಸ್ಟೇಟ್’ಗಳು ವೈವಿಧ್ಯದಲ್ಲಿ ಏಕತೆಯ ಪರಿಕಲ್ಪನೆಯನ್ನು ಹೇಳುವುದಕ್ಕೆ ಸುಮಾರು ಎರಡೂವರೆ ಸಹಸ್ರಮಾನದಷ್ಟು ಹಿಂದಿನ ವಿಷ್ಣುಪುರಾಣವು, ‘ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ ವರ್ಷಂ ತದ್ ಭಾರತಂ ನಾಮ, ಭಾರತೀ ಯತ್ರ ಸಂತತಿಃ’ ಎಂದು ಹಿಮಾಲಯದಿಂದ ದಕ್ಷಿಣಕ್ಕೆ ಸಮುದ್ರದವರೆಗಿರುವ (ಅಂದರೆ, ಹಿಂದೂ ಮಹಾಸಾಗರ) ಭಾರತದಲ್ಲಿರುವುದು ಭಾರತೀಯ ಸಂತತಿ ಎಂದು ಏಕಾತ್ಮಕತೆಯನ್ನೂ ಹೇಳುತ್ತದೆ.

ನಂತರ ಬಂದ ಸುಧಾರಣೆಗಳು ಶಾಸ್ತ್ರ ಮತ್ತು ಮಠ ಪರಂಪರೆಯ ವಿಧಿನಿಷೇಧಗಳ ವಿರುದ್ಧವಾಗಿ ಬಂದವು. ಆದರೆ ಅವು ಯಾವುವೂ ಉಪನಿಷತ್ತುಗಳ ತತ್ವಜ್ಞಾನದ ವಿರುದ್ಧವಲ್ಲ. ಹಾಗಿದ್ದುದರಿಂದಲೇ ಕಾಲಾನಂತರದಲ್ಲಿ ಕೊಡು-ಕೊಳ್ಳುವಿಕೆಗಳು ಸಾಧ್ಯವಾದವು. ಉಪನಿಷತ್ತುಗಳ ಒಂದು ತತ್ವಜ್ಞಾನದ ಧಾರೆ ನಂತರದ ಸಾಧ್ಯತೆಗಳೊಂದಿಗೆ ಸೇರಿಕೊಂಡು ಒಂದು ಧಾರ್ಮಿಕ ಪ್ರಭಾವಲಯವನ್ನು ನಿರ್ಮಿಸಿದೆ.

ಮತ್ತು ಅದು ಸುಮಾರು ನಾಲ್ಕೈದು ಸಾವಿರ ವರ್ಷಗಳ ಒಂದು ಮಹಾಯಾನದ ಪರಂಪರೆಯೂ ಆಗಿದೆ. ಆಂಡಾಳ್ ಕೃಷ್ಣಭಕ್ತಿಯ ಮೂಲಕವೇ ಜಾತಿ ಭೇದವನ್ನು ಪಾಪ ಎಂದು ಮನವರಿಕೆ ಮಾಡಿಕೊಟ್ಟಿದ್ದಳು. ನೈತಿಕ ಅರ್ಥಶಾಸ್ತ್ರದಲ್ಲಿ ಗಾಂಧಿಯವರಿಗೆ 1,900 ವರ್ಷಗಳ ಹಿರಿಯ ಮಾರ್ಗದರ್ಶಿಯಾದ ತಿರುವಳ್ವರ್ ತಿರುಕ್ಕುರಳ್‌ನ ನಾಲ್ಕನೆಯ ಭಾಗವಾದ ಪೊರುತ್ಪಾಳ್‌ನಲ್ಲಿ ಕೃಷಿಯೇ ರಾಜಾದಾಯದ ಮೂಲವಾಗಿದ್ದ ಕಾಲದಲ್ಲಿ, ‘ಕೃಷಿಗೆ ತೆರಿಗೆ ಹಾಕುವ ಹಕ್ಕು ರಾಜನಿಗಿಲ್ಲ. ಆದರೆ ರಾಜನಿಗೆ ಉತ್ಪಾದನೆಯ ಒಂದು ಭಾಗವನ್ನು ಕೊಡುವುದು ಕೃಷಿಕನ ನೈತಿಕ ಕರ್ತವ್ಯ’ ಎಂದಿದ್ದನು.

ಇವೆಲ್ಲ ಸುಧಾರಣಾ ದೃಷ್ಟಿಕೋನಗಳೇ. ಆದ್ದರಿಂದಲೇ ಗಾಂಧೀಜಿಗೊಬ್ಬ ರಾಮ, ಅಂಬೇಡ್ಕರ್‌ ಗೊಬ್ಬ ಬುದ್ಧ, ನಾರಾಯಣ ಗುರುಗಳಿಗೊಬ್ಬ ‘ಶೂದ್ರ ಶಿವ’ ಸುಧಾರಣೆಯ ಆಧಾರವಾದರು. ಲೋಹಿಯಾ ಈ ಪರಂಪರೆಯನ್ನೆ ಒಂದು ರೂಪಕವಾಗಿ ಕಾಣಿಸಿದರು. ‘ರಾಮನೇ ಬೇಡ’ ಎಂದರೆ ಈ ದೇಶ ಕೇಳುವುದಿಲ್ಲ. ಆದರೆ ‘ರಾಮ ಅಯೋಧ್ಯೆಯಲ್ಲಿ ಮಾತ್ರವೇ ಇಲ್ಲ; ಅವನು ಮಣ್ಣಿನ ಕಣ ಕಣದ ಉಸಿರಾಗಿ ಸೇರಿ ಹೋಗಿದ್ದಾನೆ’ ಎಂದರೆ ದೇಶ ಕೇಳಿಸಿಕೊಳ್ಳಲು ಸಿದ್ಧವಿದೆ.

ದೇಶ ಯಾವುದಕ್ಕೆ ಸಿದ್ಧವಿದೆಯೋ ಅದನ್ನು ಸಮರ್ಥವಾಗಿ ಹೇಳುವವರು ಬೇಕು. ಜಾತಿ ಮತ್ತು ಧರ್ಮಗಳು ದೇಶದ ಬಹುತ್ವದ ಸಂಕೇತಗಳಾಗಿ ಇರುವುದಕ್ಕೂ ಮನುಷ್ಯನ ಮಾನಸಿಕತೆಯ ಪ್ರತ್ಯೇಕ ದ್ವೀಪಗಳಾಗಿ ಇರುವುದಕ್ಕೂ ವ್ಯತ್ಯಾಸವಿದೆ. ಈಗ ಅವು ಮನುಷ್ಯರನ್ನು ದ್ವೀಪಗಳಾಗಿ ಮಾಡುತ್ತಾ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಮನುಷ್ಯರನ್ನು ಸಮಗ್ರವಾಗಿ ಗ್ರಹಿಸಿ ಬಹುತ್ವದ ಮಾರ್ಗದರ್ಶನವನ್ನು ನೀಡುವ ಸಶಕ್ತ ಧಾರ್ಮಿಕ ಸುಧಾರಣೆಯೊಂದೇ ಈಗ ಸೃಷ್ಟಿಯಾಗಿರುವ ಬೌದ್ಧಿಕ ಮಾಲಿನ್ಯವನ್ನು ನಿವಾರಿಸಬಲ್ಲುದು. ಅಂತಹ ನಾಯಕತ್ವ ಎಲ್ಲಿಂದ ಬರುತ್ತದೆ ಎನ್ನುವುದು ದೊಡ್ಡ ಪ್ರಶ್ನೆ. ಏಕೆಂದರೆ ವಿಧಿ-ನಿಷೇಧಗಳ ಕಟ್ಟುಪಾಡುಗಳಲ್ಲಿ ಬಂದಿಯಾಗಿರುವ ವೈದಿಕ ಮಠ ಪರಂಪರೆಯಿಂದ ಇದು ಸಾಧ್ಯವಾಗಲಾರದು.

ಲಿಂಗಾಯತ ಮಠ ಪರಂಪರೆಯಲ್ಲಿ ಒಂದು ವೈಚಾರಿಕ ಪ್ರಜ್ಞೆ ಇನ್ನೂ ಜೀವಂತವಿದೆ. ತನ್ನ ಸಮುದಾಯವನ್ನು ಮೀರಿ ನಿಂತು ಆ ಪರಂಪರೆ ಕಾರ್ಯಪ್ರವೃತ್ತವಾದರೆ ಸುಧಾರಣೆ ಸಾಧ್ಯವಾದೀತೇನೊ. ನಾರಾಯಣ ಗುರುಗಳು ಧಾರ್ಮಿಕ ಕೇಂದ್ರವನ್ನೇ ಶಿಕ್ಷಣ ಮತ್ತು ಆರ್ಥಿಕ ಉತ್ಪಾದನೆ, ನೈತಿಕತೆ- ಅಧ್ಯಾತ್ಮದ ಹಂಬಲ ಹಾಗೂ ವೈಚಾರಿಕ ಜಾಗೃತಿಯ ಕೇಂದ್ರವಾಗಿ ಮಾಡಿದಂಥ ರೀತಿಯ ಪ್ರಯತ್ನಗಳ ಅವಶ್ಯಕತೆ ಇದೆ. ಈ ಪ್ರಯತ್ನವನ್ನು ಯಾರು ಮಾಡಿದರೂ ಸ್ವಾಗತಾರ್ಹವೇ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !