ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೃದು ಮಾತು, ಪ್ರೀತಿಯೆಂಬ ಮಂತ್ರ– HB ಚಂದ್ರಶೇಖರ್ ಲೇಖನ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಕರಣಗಳು ಜನಸಮುದಾಯದಲ್ಲಿ ಮಾನವೀಯತೆಯ ಸೆಲೆ ಬತ್ತಿ ಹೋಗುತ್ತಿರುವು
Last Updated 6 ಫೆಬ್ರುವರಿ 2023, 0:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಕರಣಗಳು ಜನಸಮುದಾಯದಲ್ಲಿ ಮಾನವೀಯತೆಯ ಸೆಲೆ ಬತ್ತಿ ಹೋಗುತ್ತಿರುವುದರ ಸಂಕೇತವಾಗಿ ನಮಗೆ ಕಾಣುತ್ತಿವೆಯೇ?

ಸ್ಕೂಟರ್‌ನ ಹಿಂಬದಿಯನ್ನು ಹಿರಿಯರೊಬ್ಬರು ಹಿಡಿದುಕೊಂಡಿದ್ದರೂ ವಾಹನವನ್ನು ನಿಲ್ಲಿಸದೆ ದಾರಿಯುದ್ದಕ್ಕೂ ಎಳೆದೊಯ್ದ ಯುವಕ ಹಾಗೂ ತನ್ನ ಕಾರಿನ ಬಾನೆಟ್ ಮೇಲೆ ಬಿದ್ದ ಯುವಕನನ್ನು ಲೆಕ್ಕಿಸದೆ ಎರಡು ಕಿಲೊಮೀಟರ್‌ಗೂ ಹೆಚ್ಚು ದೂರ ಕಾರನ್ನು ಚಲಾಯಿಸಿಕೊಂಡೇ ಹೋದ ಮಹಿಳೆ- ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈ ಎರಡು ಪ್ರಕರಣಗಳು ಜನಸಮುದಾಯದಲ್ಲಿ ದಯೆ, ಕರುಣೆ ಹಾಗೂ ಮಾನವೀಯತೆಯ ಸೆಲೆಗಳು ಬತ್ತಿ ಹೋಗುತ್ತಿರುವುದರ ಸಂಕೇತವಾಗಿ ನಮಗೆ ಕಾಣುತ್ತಿವೆಯೇ ಎಂಬ ಅನುಮಾನ ಕಾಡುತ್ತದೆ.

ಪ್ರಾಣಿಗಳು ಆಹಾರದ ಕಾರಣವನ್ನು ಹೊರತು ಪಡಿಸಿ ಸಾಮಾನ್ಯವಾಗಿ ಇತರ ಪ್ರಾಣಿಗಳ ಮೇಲೆ ಆಕ್ರಮಣ ಮಾಡುವುದಿಲ್ಲ. ಆದರೆ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೆಲವೊಮ್ಮೆ ಪ್ರಾಣಿಗಳಿಗಿಂತಲೂ ಹೆಚ್ಚು ಕ್ರೂರವಾಗಿ ನಡೆಸಿಕೊಳ್ಳುತ್ತಾನೆ. ಆಲೋಚನೆ, ಚಿಂತನೆ, ವಿಮರ್ಶಾತ್ಮಕ ಆಲೋಚನೆಯ ಸಾಮರ್ಥ್ಯಗಳನ್ನು ಹೊಂದಿದ ಮನುಷ್ಯನನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡಲು ಧರ್ಮವು ಹುಟ್ಟಿಕೊಂಡಿತು. ಎಲ್ಲ ಧರ್ಮಗಳು ಮಾನವೀಯತೆಯನ್ನೇ ಮೂಲಮಂತ್ರವನ್ನಾಗಿ ಪ್ರತಿಪಾದಿಸಿವೆ. ದಯೆ, ಕರುಣೆ, ಮೃದುಮಾತು, ಉತ್ತಮ ನಡವಳಿಕೆಗಳು ಮಾನವೀಯತೆಯ ಸಂಕೇತಗಳಾಗಿವೆ. ಆದರೆ ಮನುಷ್ಯ ಕೆಲವೊಮ್ಮೆ ಕ್ರೂರತನ, ಹಿಂಸೆ, ಕಟುಮಾತು, ಕೆಟ್ಟ ನಡವಳಿಕೆಗಳ ಮೂಲಕ ಸಹ ಮಾನವರನ್ನು ನೋವು, ಹಿಂಸೆಯಲ್ಲಿ ಕೆಡವುತ್ತಾನೆ.

ಕುಟುಂಬ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಕಟುಮಾತು, ಸಲ್ಲದ ನಡವಳಿಕೆ, ನಿರ್ದಯಿ ವರ್ತನೆ, ಹಿಂಸಾತ್ಮಕ ಮನೋಭಾವದಂತಹ ವರ್ತನೆಗಳು ಹೆಚ್ಚುತ್ತಿರುವುದನ್ನು ಗಮನಿಸುತ್ತೇವೆ.

ಯಾವ ವ್ಯಕ್ತಿ ತನ್ನೊಳಗೆ ತಾನು ಸಂತಸ, ತಾಳ್ಮೆಯಿಂದ ಇರಲು ಸಾಧ್ಯವಿಲ್ಲವೋ ಅಂತಹ ವ್ಯಕ್ತಿ ಇತರರ ಜೊತೆಗೂ ತಾಳ್ಮೆ, ಸಹನೆಯಿಂದ ಇರಲಾರ. ಆಧುನಿಕ ಜಗತ್ತಿನ ಯಾಂತ್ರಿಕತೆ, ತಂತ್ರಜ್ಞಾನದ ಅತಿ ಬಳಕೆ, ವ್ಯಕ್ತಿ ಅನುಭವಿಸುವ ಒತ್ತಡ, ಆತಂಕ, ಖಿನ್ನತೆ, ಅನಾರೋಗ್ಯವು ಮನಸ್ಸಿನಲ್ಲಿ ಅಶಾಂತಿ, ಅತೃಪ್ತಿಯನ್ನು ಹುಟ್ಟುಹಾಕುತ್ತವೆ. ಇವು ಕಟುಮಾತು, ನಿರ್ದಯ ನಡವಳಿಕೆಯ ಮೂಲಕ ಪ್ರಕಟವಾಗುತ್ತವೆ.

ನಮ್ಮಲ್ಲಿ ಅನೇಕರು ಹೆಚ್ಚಿನ ವೇಳೆ ಪರಿಪೂರ್ಣತೆಗಾಗಿ ತುಡಿಯುತ್ತಾರೆ. ಎಲ್ಲವೂ ಪರಿಪೂರ್ಣವಾಗಿ ಇರಬೇಕು ಎಂದು ಬಯಸುತ್ತಾರೆ. ತನ್ನ ಸುತ್ತಲಿನ ವ್ಯಕ್ತಿಯಲ್ಲಿ ಅಥವಾ ವಾತಾವರಣದಲ್ಲಿ ಅರೆಕೊರೆ, ನ್ಯೂನತೆಗಳು ಕಂಡುಬಂದಲ್ಲಿ, ಇಂತಹ ವ್ಯಕ್ತಿಗಳು ವಿಪರೀತದ ವರ್ತನೆ ತೋರುತ್ತಾರೆ. ಇತರರ ಮೇಲೆ ಸಿಡಿಮಿಡಿ ಮಾಡುತ್ತಾ, ತಮ್ಮೊಳಗಿನ ಶಾಂತಿಯ ಕಡಲನ್ನು ಕದಡುವುದರ ಜೊತೆಗೆ ತಮ್ಮ ಸುತ್ತಲಿನ ವಾತಾವರಣದಲ್ಲಿನ ನೆಮ್ಮದಿಯನ್ನೂ ಹಾಳುಮಾಡಿ, ಕ್ಷೋಭೆಯನ್ನು ಹುಟ್ಟುಹಾಕುತ್ತಾರೆ. ತಮ್ಮ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ತಮ್ಮನ್ನು ತಾವೇ ಉದಾರವಾಗಿ ಕ್ಷಮಿಸಿಕೊಳ್ಳುತ್ತಾರೆ ಅಥವಾ ಅವರಲ್ಲಿನ ಕುಂದುಕೊರತೆಗಳು ಅವರ ಅರಿವಿಗೆ ಬರುವುದೇ ಇಲ್ಲ ಎನ್ನಬಹುದು.

ಒಬ್ಬ ವ್ಯಕ್ತಿ ಕೆಲಸಗಳಲ್ಲಿ ಅಚ್ಚುಕಟ್ಟುತನ ನಿರೀಕ್ಷಿಸುವುದು ತಪ್ಪಲ್ಲ. ಆದರೆ ಇತರರಲ್ಲಿ ಕಂಡು ಬರುವ ನ್ಯೂನತೆ ಹಾಗೂ ಕುಂದುಕೊರತೆಗಳನ್ನು ಸರಿಪಡಿಸಲು ಹಿಂಸಾತ್ಮಕವಾದ ಮಾತು, ನಡವಳಿಕೆ ಗಳು ಎಂದಿಗೂ ಸಮರ್ಥನೀಯವಲ್ಲ.

ಬಸವಣ್ಣನವರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂದಿದ್ದಾರೆ. ಪ್ರತಿಯೊಬ್ಬರೂ ತಮ್ಮಷ್ಟಕ್ಕೇ ತಾವು ಉತ್ತಮ ಮಾತು, ನಡವಳಿಕೆ ತೋರುವುದರ ಮಹತ್ವವನ್ನು ವಚನದ ಈ ಸಾಲುಗಳು ನೆನಪಿಸುತ್ತವೆ. ಮನದೊಳಗಿನ ಅತೃಪ್ತಿ, ಅಸಮಾಧಾನವನ್ನು ವ್ಯಕ್ತಪಡಿಸುವಂತಹ ಅನಿವಾರ್ಯ ಸಂದರ್ಭಗಳು ಕೆಲವೊಮ್ಮೆ ಬರಬಹುದು. ಅಂತಹ ಸಂದರ್ಭಗಳಲ್ಲಿ ಸೌಜನ್ಯದ ಎಲ್ಲೆ ಮೀರದೆ ಅತೃಪ್ತಿ, ಅಸಮಾಧಾನವನ್ನು ಹೊರಹಾಕಬಹುದು.

ಬಸವಣ್ಣನವರ ವಚನದ ‘ಮೃದು ವಚನವೆ ಸಕಲ ಜಪಂಗಳಯ್ಯಾ, ಮೃದು ವಚನವೆ ಸಕಲ ತಪಂಗಳಯ್ಯಾ, ಸದುವಿನಯವೆ ಸದಾಶಿವನ ಒಲುಮೆಯಯ್ಯಾ’ ಎಂಬ ಸಾಲುಗಳು ನಮ್ಮೊಳಗನ್ನು ಸದಾ ಮೃದುಮಾತು, ವಿನಯಪೂರ್ವಕ ವರ್ತನೆಗಳಿಗೆ ಪ್ರೇರೇಪಿಸಬೇಕು.

ಸ್ವತಃ ತನ್ನಲ್ಲಿನ ಮತ್ತು ಇತರರಲ್ಲಿನ ಓರೆಕೋರೆ, ದೋಷ, ಮಿತಿಗಳನ್ನು ಒಂದಷ್ಟು ಉದಾರ ಗುಣ ತೋರಿ ಕ್ಷಮಿಸುವ ಮತ್ತು ಅವುಗಳನ್ನು ಪ್ರೀತಿ ಯಿಂದಲೇ ಒಪ್ಪಿಕೊಳ್ಳುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಪರಿಚಿತರು ಹಾಗೂ ಅಪರಿಚಿತ ರನ್ನು ನೋಡಿ ಮುಗುಳ್ನಗುವುದು, ಹಿರಿಯರು, ರೋಗಪೀಡಿತರು, ಕುಟುಂಬದವರಿಗಾಗಿ ಸಮಯ ವಿನಿಯೋಗಿಸಿ, ಆತ್ಮೀಯ ಮಾತುಕತೆಯಾಡುವುದು, ಆಹಾರ, ವಸ್ತುಗಳನ್ನು ಹಂಚಿಕೊಳ್ಳುವುದು ಅಥವಾ ಅಗತ್ಯವಾದ ಸಹಾಯ ಮಾಡುವಂತಹ ಚಟುವಟಿಕೆ ಗಳು ಎಂತಹ ಕಠಿಣ ಮನಸ್ಸನ್ನಾದರೂ ಮೃದು ಮಾಡ ಬಲ್ಲವು.

ಮೊಬೈಲ್, ಟಿ.ವಿ, ಯಂತ್ರಗಳ ಒಡನಾಟವನ್ನು ಕಡಿಮೆ ಮಾಡಿ ಒಂದಷ್ಟು ಏಕಾಂತ ಸೃಷ್ಟಿಸಿ
ಕೊಳ್ಳುವುದು, ಪ್ರಕೃತಿಯೊಂದಿಗಿನ ಒಡನಾಟ ಹೆಚ್ಚಿಸಿಕೊಳ್ಳುವುದು, ನಮ್ಮಲ್ಲಿರುವ ಎಲ್ಲ ಒಳ್ಳೆಯ ಅಂಶಗಳ ಬಗ್ಗೆ ಕೃತಜ್ಞತೆ ಹೊಂದುವುದು, ಇತರರಲ್ಲಿನ ಒಳ್ಳೆಯ ಗುಣಗಳನ್ನು ಮೆಚ್ಚುವುದು, ಮಾತು, ನಡಿಗೆ, ವಾಹನ ಚಾಲನೆಯನ್ನು ನಿಧಾನಗೊಳಿಸುವಂತಹ ಕೃತ್ಯಗಳು ನಮ್ಮೊಳಗಲ್ಲಿ ಶಾಂತಿ, ಸಹನೆಯನ್ನು ಸೃಷ್ಟಿಸಿ ಬಾಳನ್ನು ಬೆಳಗುತ್ತವೆ. ಈ ದಿಸೆಯಲ್ಲಿ ಮೃದುಮಾತು, ದಯೆ, ಕರುಣೆ, ಪ್ರೀತಿಯೇ ನಮ್ಮ ಜೀವನದ ಮಂತ್ರಗಳಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT