ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ಉತ್ತರ ಸಿಗದ ಪ್ರಶ್ನೆ

ಯಾವುದೇ ಒಂದು ಕುಟುಂಬದ ನಾಯಕತ್ವವನ್ನೇ ಅವಲಂಬಿಸುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ತರವಲ್ಲ
Last Updated 28 ಆಗಸ್ಟ್ 2020, 21:59 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ದಿನೇಶ್ ಗುಂಡೂರಾವ್ ಅವರ ಲೇಖನ (ಸಂಗತ, ಆ. 28) ಓದಿ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಅನ್ನಿಸಿತು. ‘ಗಾಂಧಿ’ ಕುಟುಂಬದ ಅಧಿಕಾರದ ಸಂರಕ್ಷಕನಂತೆ ಅವರು ವಾದ ಹೂಡಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮನೋಸ್ಥೈರ್ಯ ಎನ್ನುವುದು ಯಾರದೋ ಮಾತಿನಿಂದ ಅಥವಾ ಕಾರ್ಯದಿಂದ ಕುಗ್ಗಿಹೋಗುವ ಅಂಶವಲ್ಲ. ಅದು ವ್ಯಕ್ತಿಯ ಜ್ಞಾನದಿಂದ, ನಿರಂತರ ಶ್ರಮ– ಹೋರಾಟದಿಂದ ರೂಪುಗೊಳ್ಳುವಂತಹುದು. ಬಿಜೆಪಿಯ ನಾಯಕರು ರಾಹುಲ್ ಅವರ ಟೀಕೆಯನ್ನು ನಗೆಚಟಾಕಿಯಂತೆ ಪರಿಗಣಿಸಿ, ಸಿದ್ದರಾಮಯ್ಯ ಅವರಂತಹ ನಾಯಕರ ಟೀಕೆಗಳಿಗೆ ಸ್ವತಃ ಮನೋಸ್ಥೈರ್ಯ ಕಳೆದುಕೊಂಡವರಂತೆ ವರ್ತಿಸುತ್ತಾರೆ ಎಂಬುದನ್ನು ಅವರು ಗಮನಿಸಬೇಕು.

ನೆಹರೂ ಕುಟುಂಬವು ಕಾಂಗ್ರೆಸ್‌ ಪಕ್ಷಕ್ಕೆ ನೀಡಿದ ಕೊಡುಗೆ ಮತ್ತು ಈ ದೇಶಕ್ಕೆ ಮಾಡಿದ ಸೇವೆ ಅವಿಸ್ಮರಣೀಯ. ಇದರಲ್ಲಿ ಎರಡು ಮಾತೇ ಇಲ್ಲ. ಆದರೆ, ಬಿಜೆಪಿಯಲ್ಲಿ ದೈತ್ಯ ಶಕ್ತಿಯಾಗಿ ಬೆಳೆದಿರುವ ನರೇಂದ್ರ ಮೋದಿಯವರ ಮುಂದೆ ಈಗ ನೆಹರೂ–ಗಾಂಧಿ ಕುಟುಂಬದ ಯಾವೊಬ್ಬ ನಾಯಕರೂ ಸರಿಸಮಾನರಲ್ಲ ಎಂಬುದನ್ನು ಕೂಡ ಒಪ್ಪಿಕೊಳ್ಳಲೇ ಬೇಕು. ಅದಕ್ಕಾಗಿಯೇ ಗಾಂಧಿ ಕುಟುಂಬಕ್ಕೆ ಹೊರತಾದ ಸಮರ್ಥ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾದ ಜವಾಬ್ದಾರಿಯು ಗಾಂಧಿ ಕುಟುಂಬದ ನೈತಿಕ ಹೊಣೆಯಾಗಿದೆ.

-ರಂಗಸ್ವಾಮಿ ಮಾರ್ಲಬಂಡಿ, ಸಿಂಧನೂರು

***

ಅವಲಂಬನೆ ತರವಲ್ಲ

ದಿನೇಶ್ ಅವರ ಲೇಖನ ಓದಿದ ಮೇಲೆ, ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ಹಾಗೇ ಉಳಿದವು. ಪ್ರಧಾನಿ ಹುದ್ದೆಗೆ ಅಥವಾ ಕಾಂಗ್ರೆಸ್ ಅಧ್ಯಕ್ಷ ‌ಸ್ಥಾನಕ್ಕೆ ಸೋನಿಯಾ ಗಾಂಧಿ ಎಂದೂ ಆಸೆಪಟ್ಟವರಲ್ಲ ಎಂಬ ಅವರ ಮಾತನ್ನು ಒಪ್ಪೋಣ. 2004 ಮತ್ತು 2009ರಲ್ಲಿ ಮನಮೋಹನ್‌ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ದೊರಕಿಸಿಕೊಡುವಲ್ಲಿ ಅವರ ಪಾತ್ರವೇ ಹೆಚ್ಚು. ಆದರೆ, ಸಿಂಗ್ ಅವರಿಗೆ ಪೂರ್ಣ ಅಧಿಕಾರ ನೀಡಿದ್ದರೇ? ಅವರ ಬೆನ್ನ ಹಿಂದೆಯೇ ನಿಂತು ಸೋನಿಯಾ ಅಧಿಕಾರ ಚಲಾಯಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೋನಿಯಾ ಅವರ ಕೈಗೊಂಬೆ, ಮೌನ ಪ್ರಧಾನಿ ಎಂಬೆಲ್ಲ ಟೀಕೆಗಳಿಗೆ ಸಿಂಗ್‌ ಅವರು ಗುರಿಯಾಗಿದ್ದೂ ಉಂಟಲ್ಲವೇ?

ಈ ಎರಡೂ ಅವಧಿಗಳಲ್ಲಿ, ಅನುಭವಿ ಪ್ರಣವ್‌ ಮುಖರ್ಜಿ ಅವರನ್ನು ಒಂದು ಅವಧಿಗೆ ಪ್ರಧಾನಿ ಹುದ್ದೆಗೆ ನೇಮಿಸಬಹುದಿತ್ತಲ್ಲವೇ? ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡದಿದ್ದುದಕ್ಕೆ ಅನೇಕ ವಿಶ್ಲೇಷಣೆಗಳು ಈಗಾಗಲೇ ಬಂದಿವೆ. ಅವುಗಳಲ್ಲಿ ಸತ್ಯಾಂಶ ಇದ್ದಿರಲೂಬಹುದು.

ಕಾಂಗ್ರೆಸ್ ಪಕ್ಷವನ್ನು ಕುಟುಂಬ ರಾಜಕಾರಣ, ಅಧಿಕಾರದಾಹದ ಜೊತೆ ಸಮೀಕರಿಸಿ ಜನ ಈಗ ಮಾತನಾಡುವುದಿದೆ. ಆ ಭಾವನೆ ಹೋಗಲಾಡಿಸುವ ದಿಸೆಯಲ್ಲಿ ಪಕ್ಷವನ್ನು ಮುನ್ನಡೆಸುವ ಉತ್ತಮ ಸಾರಥಿಗಾಗಿ ಹುಡುಕಾಟ ನಡೆಯಬೇಕಿದೆ. ಒಳಜಗಳ, ಗುಂಪುಗಾರಿಕೆ, ವೈಮನಸ್ಸು, ಕಿತ್ತಾಟವೇ ತುಂಬಿಹೋಗಿದ್ದರೆ ಪಕ್ಷ ಪುಟಿದೇಳುವುದು ಕಷ್ಟ. ಸೋನಿಯಾ ಗಾಂಧಿ,ರಾಹುಲ್ ಗಾಂಧಿಯವರನ್ನೇ ಹೆಚ್ಚು ಕಾಲ ಅವಲಂಬಿಸುವುದು ತರವಲ್ಲ.

-ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

***

ವಾಕ್‌ಸ್ವಾತಂತ್ರ್ಯ ಉಂಟೇ?

ಪ್ರತೀ ಪಕ್ಷದಲ್ಲೂ ದಿಗ್ಗಜ ನಾಯಕರಿರುವಂತೆ ಕುಬ್ಜ ವ್ಯಕ್ತಿತ್ವದ ಮುಖಂಡರೂ ಇರುತ್ತಾರೆ. ಬದ್ಧತೆ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯಕ್ಕೆ ಎಷ್ಟರಮಟ್ಟಿಗೆ ಅವಕಾಶ ಇದೆ ಎಂಬುದರ ಆಧಾರದಲ್ಲಿ ಯಾವುದೇ ಒಂದು ಪಕ್ಷವನ್ನು ಅಳೆಯಬೇಕಾಗುತ್ತದೆ. ಪಂಡಿತ್ ನೆಹರೂ, ಮಹಾತ್ಮ ಗಾಂಧಿ, ವಲ್ಲಭಭಾಯ್‌ ಪಟೇಲ್, ರಾಜಾಜಿ, ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್ ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ನೀಡುತ್ತಿದ್ದರು. ಒಬ್ಬರಿಗೊಬ್ಬರು ಹೆದರುತ್ತಿರಲಿಲ್ಲ, ದ್ವೇಷ ಭಾವನೆ ಹೊಂದಿರಲಿಲ್ಲ.

ಕಾಂಗ್ರೆಸ್‌ ಪಕ್ಷವನ್ನು ಇನ್ನಿಲ್ಲದಂತೆ ಟೀಕಿಸುವ ಬಿಜೆಪಿಯಲ್ಲಿ ಒಳ ಬಂಡಾಯವನ್ನು ಹತ್ತಿಕ್ಕುವುದಿಲ್ಲವೇ? ಪಕ್ಷದಲ್ಲಿ ವಾಕ್ ಸ್ವಾತಂತ್ರ್ಯ ಇದೆಯೇ? ಈಗ ಸುಬ್ರಮಣಿಯನ್‌ ಸ್ವಾಮಿ ಅವರನ್ನು ಬಿಟ್ಟರೆ, ಪಕ್ಷದಲ್ಲಿದ್ದೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಧೈರ್ಯ ಯಾರಿಗಾದರೂ ಇದೆಯೇ? ಬೇರೆ ಬೇರೆ ಪಕ್ಷಗಳನ್ನು ಗಣನೆಗೆ ತೆಗೆದುಕೊಂಡರೆ, ನರೇಂದ್ರ ಮೋದಿ, ಅಮಿತ್ ಶಾ, ಎಚ್‌.ಡಿ.ದೇವೇಗೌಡ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಮಾಯಾವತಿ ಇಂತಹ ನಾಯಕರ ವಿರುದ್ಧ ಆಯಾ ಪಕ್ಷದಲ್ಲಿ ಮಾತನಾಡುವವರು ಇದ್ದಾರೆಯೇ? ಕೆಲವು ನಾಯಕರ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದ್ದರೂ ಕಾಂಗ್ರೆಸ್‌ನಲ್ಲಿ ಇರುವಂತೆ ಸಾರ್ವಜನಿಕವಾಗಿ ಮಾತನಾಡುವ ಧೈರ್ಯ ಇತರ ಪಕ್ಷಗಳಲ್ಲಿ ಯಾರಿಗಿದೆ?

ಆಡಳಿತಾರೂಢ ಪಕ್ಷದತ್ತ ಎಲ್ಲ ವರ್ಗದವರೂ ಆಕರ್ಷಿತರಾಗುವುದು ಸ್ವಾಭಾವಿಕ. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದ್ದರೂ ಅಧಿಕಾರ ಮೋಹದಿಂದಾಗಿ ಜಿಹ್ವಾ ಚಾಪಲ್ಯವನ್ನು ಅದುಮಿಟ್ಟು, ಜೈಕಾರ ಹಾಕುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್‌ನಲ್ಲಿರುವ ವಂಶಾಡಳಿತ, ಒಳಬಂಡಾಯ, ಭೋರ್ಗರೆಯುವ ಭಿನ್ನಾಭಿಪ್ರಾಯ ಸಹನೀಯ. ವಾಕ್ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸಾವಿರ ಪಾಲು ಉತ್ತಮ.

-ಕೆ.ಎನ್. ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT