ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಪಯಣ ಮತ್ತು ಸಿದ್ಧತೆ

ಬದುಕಿಗೆ ವಿದಾಯ ಹೇಳುವ ಮುನ್ನ ನಾವು ಮಾಡಬೇಕಾದುದೆಂದರೆ...
Last Updated 20 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಚೇರಿಗೆ, ಪ್ರವಾಸಕ್ಕೆ, ಸ್ನೇಹಿತರ ಭೇಟಿಗೆ ಹೊರಡುವ ಪೂರ್ವದಲ್ಲಿ ಬಹಳಷ್ಟು ಸಿದ್ಧತೆ ಮಾಡಿಕೊಳ್ಳುತ್ತೇವೆ.
ಮಕ್ಕಳ ಶಿಕ್ಷಣ, ಮದುವೆಗಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತೇವೆ. ಆದರೆ ಕಾಯಂ ಆಗಿ ಈ ವಿಶ್ವವನ್ನು ತೊರೆದು ಹೋಗುವುದಕ್ಕೆ ಮುನ್ನ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳುವುದಿಲ್ಲ. ಸಾವು ಶತಃಸಿದ್ಧವಾದರೂ ಬಹಳಷ್ಟು ಜನ ತಾವು ಚಿರಂಜೀವಿಗಳೆಂದು ಭಾವಿಸಿರುತ್ತಾರೆ. ಸಾವಿನ ಬಗ್ಗೆ ಮಾತು ಬಂದರೆ ಚರ್ಚೆ ಮುಂದುವರಿಸದೇ ಬೇರೆ ಕಡೆಗೆ ಗಮನ ಹೊರಳಿಸುತ್ತಾರೆ. ಆದರೆ ಕೊನೆಗೆ ಸಾವು ತನ್ನ ತಣ್ಣನೆಯ ಹಸ್ತ ಇಟ್ಟುಬಿಡುತ್ತದೆ. ಸಾವು ಭೂಮಿಯ ಮೇಲಿನ ಎಲ್ಲರನ್ನೂ ಒಳಗೊಳ್ಳುವ ಮತ್ತು ಧರ್ಮ
ನಿರಪೇಕ್ಷ ಸಂಗತಿಯಾಗಿದೆ.

ಈ ಲೋಕವನ್ನು ಶಾಶ್ವತವಾಗಿ ಬಿಟ್ಟು ಹೋಗುವ ಮೊದಲು ಪ್ರತಿಯೊಬ್ಬರೂ ಕನಿಷ್ಠ ಸಿದ್ಧತೆ ಮಾಡಿಟ್ಟು
ಕೊಳ್ಳುವುದು ಅವಶ್ಯ. ಬದುಕು ಎಂದಿಗೂ ಅಪೂರ್ಣವೇ. ಹಾಗಿರುವುದರಲ್ಲಿಯೇ ಅದರ ರಹಸ್ಯ ಅಡಗಿದೆ. ಬದುಕಿನ ಕ್ಷಣಿಕತೆ ಮತ್ತು ನಶ್ವರತೆಯ ಗಮ್ಯವನ್ನು ಅರಿತುಕೊಳ್ಳುವುದು ಅವಶ್ಯವಿದೆ.

ನೀವು ನೆಮ್ಮದಿಯಿಂದ ಸಾಯಬೇಕು ಎಂದು ಬಯಸಿದರೆ ಒಂದು ಉಯಿಲು ಬರೆಯಬೇಕು. ಮುಖ್ಯವಾಗಿ ನಾವು ಬಿಟ್ಟುಹೋಗಬೇಕಾದ ಆಸ್ತಿ ಹಂಚಿಕೆ ವಿವರಗಳು ಮೃತ್ಯುಪತ್ರದಲ್ಲಿ ಇರಬೇಕು. ಸತ್ತ ನಂತರ ಇದ್ದವರು ಆಸ್ತಿಗಾಗಿ ಕಾದಾಡುವುದು ಬಹಳ. ಅನೇಕ ಬಾರಿ ಹೆಣ ಇಟ್ಟುಕೊಂಡೇ ಜಗಳಕ್ಕೆ ನಿಲ್ಲುತ್ತಾರೆ. ಇದನ್ನು ತಪ್ಪಿಸುವ ಯೋಜನೆಯನ್ನು ಬದುಕಿದ್ದಾಗ ಮಾಡದಿದ್ದರೆ ಹೇಗೆ?

ಸಾವು ಅರ್ಥವಾದರೆ ಮಾತ್ರ ಬದುಕು ಅರ್ಥವಾಗುತ್ತದೆ. ಮರಣ ಸಾರ್ವಜನಿಕ ಸಂಗತಿಯಲ್ಲ. ಅಂತಿಮದರ್ಶನ ಇತ್ಯಾದಿ ಪ್ರಕ್ರಿಯೆಗಳು ತೊಂದರೆಯಾಗಬಾರದು ಎಂದು ಶಿವರಾಮ ಕಾರಂತರು ಪದೇ ಪದೇ ಹೇಳುತ್ತಿದ್ದರು.

ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿ– ಗೊಬ್ಬರದಿಂದ ತೆನೆಯೊಂದು ನೆಗೆದುಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ!

ಇದು ಸಂಸದರಾಗಿದ್ದ ದಿನಕರ ದೇಸಾಯಿ ಅವರ ಕವನ. ಈ ಕವನದ ಇಂಗ್ಲಿಷ್ ಅವತರಣಿಕೆ ಓದಿ ಪ್ರಭಾವಿತರಾದ ಪ್ರಧಾನಿ ನೆಹರೂ ತಮ್ಮ ಚಿತಾಭಸ್ಮವನ್ನು ಭಾರತದ ಎಲ್ಲ ನದಿಗಳಲ್ಲಿ ಹಾಕಬೇಕು ಎಂಬ ಕೊನೆಯಾಸೆ
ವ್ಯಕ್ತಪಡಿಸಿದ್ದರು.

ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಕೊರೊನಾ ಕಾಲಘಟ್ಟದಲ್ಲಿ ಬರೆದ ‘ಪ್ರಿಪೇರಿಂಗ್ ಫಾರ್ ಡೆತ್’ ಕೃತಿ ಗಮನ ಸೆಳೆಯುತ್ತದೆ. ಅದರಲ್ಲಿ ಅವರು ಬರೆದ ಉಯಿಲು ಅವರ ವೈಚಾರಿಕ ನಿಲುವಿಗೆ ಸಾಕ್ಷಿಯಾಗಿದೆ. ‘ನನ್ನ ದೇಹದಲ್ಲಿ ಉಪಯೋಗಕ್ಕೆ ಬರುವ ಅಂಗವಿದ್ದರೆ ಅದನ್ನು ದಾನ ಮಾಡಬೇಕು. ದೇಹವನ್ನು ಯಾವುದೇ ಧಾರ್ಮಿಕ ಆಚರಣೆಗಳಿಲ್ಲದೇ
ಸುಟ್ಟುಹಾಕಬೇಕು. ಗಂಧದ ಕಟ್ಟಿಗೆಯ ಆಡಂಬರ ಬೇಡ. ತೋಪು ಹಾರಿಸಿ ಗೌರವಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

ಶರಣರು ಸಾವನ್ನು ಒಂದು ಸಹಜ ಕ್ರಿಯೆಯಾಗಿ ಭಾವಿಸಿದ್ದರು. ಆದ್ದರಿಂದ ಮರಣವೇ ಮಹಾನವಮಿ ಎಂದರು. ಮಹಾನವಮಿ ಅತ್ಯಂತ ದೊಡ್ಡ ಹಬ್ಬ. ಅವರು ಸಾವನ್ನು ಕೂಡ ಹಬ್ಬವಾಗಿ ಪರಿಗಣಿಸಿದ್ದು ಗಮನಾರ್ಹ ಸಂಗತಿ. ಶರಣ ಲದ್ದೆಯ ಸೋಮಣ್ಣನ ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು:
ಆವ ಕಾಯಕವಾದಡೂ ಸ್ವ-ಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ? ಅಲ್ಲಮಪ್ರಭು ಸಾವನ್ನು ಬಯಲಲ್ಲಿ ಬಯಲಾಗುವುದು ಎಂದು ಬಣ್ಣಿಸಿದ್ದಾರೆ. ಸಾವು ಸಹಜವಾದರೂ ಅದು ಅಕಾಲಿಕವಾಗಬಾರದು. ಕಷ್ಟಪಟ್ಟು ಬಹಳಷ್ಟು ಸಂಪಾದನೆ ಮಾಡಿದ ನನ್ನ ಪರಿಚಿತರೊಬ್ಬರು ಈಚೆಗೆ ಏಕಾಏಕಿ ಹೋಗಿಬಿಟ್ಟರು. ಕೋಟಿಗಟ್ಟಲೆ ಸಂಪಾದನೆ ಮಾಡಿದ ಅವರ ಸಂಪತ್ತು ಮಕ್ಕಳಿಗೆ, ಕುಟುಂಬದವರಿಗೆ ದೊರೆಯಲಿಲ್ಲ. ತಾವು ಗಳಿಸಿದ್ದನೆಲ್ಲ ಅವರು ಎಲ್ಲಿ ಇಟ್ಟಿದ್ದಾರೊ ಯಾರಿಗೂ ತಿಳಿದಿಲ್ಲ. ಆ ಕುಟುಂಬ ಪರಿತಪಿಸುವುದನ್ನು ನೋಡಿ ತುಂಬ ನೋವಾಯಿತು.

ಸಾಹಿತಿ ಡಾ. ವಿ.ಎಸ್.ಮಾಳಿ ಅವರ ಈ ಕಥನ ಕವನ ತುಂಬ ಸ್ವಾರಸ್ಯಕರವಾಗಿದೆ. ರೈತ ಮಹಿಳೆಯನ್ನು ಕರೆದೊಯ್ಯಲು ಬಂದ ಯಮನಿಗೆ– ‘ಸ್ವಲ್ಪ ನಿಲ್ಲು, ಮಕ್ಕಳು ಹೊಲಕ್ಕೆ ಹೊರಟಿದ್ದಾರೆ. ಅವರಿಗೆ ಬಿತ್ತುವ ಕಲೆ, ಬೆಳೆದ ಬೆಳೆಯಲ್ಲಿ ದೇವರಿಗೆ ಎಷ್ಟು, ಆಯಗಾರರಿಗೆ ಎಷ್ಟು, ಬಡವರಿಗೆ ಎಷ್ಟು ಹಂಚಬೇಕು ಎಂಬುದನ್ನು ಹೇಳಿಕೊಟ್ಟು ಬರುತ್ತೇನೆ’ ಎಂದು ಹೇಳುತ್ತಾಳೆ. ಇದು ಬದುಕಿನ ಒಂದು ರೂಪಕದಂತಿದೆ.

‘ನಾನು ಹೊರಟು ಹೋದಮೇಲೆ ಓಡಿ ಬಂದು ಸಂತಾಪ ಸೂಚಿಸುವುದಕ್ಕಿಂತ ಬದುಕಿದ್ದಾಗಲೇ ಬಂದು ಭೇಟಿಯಾದರೆ ಸಂತೋಷ ಪಡುವೆ. ನಾನು ಹೊರಟು ಹೋದ ಮೇಲೆ ದುಃಖಸೂಚಕ ಸಭೆಯಲ್ಲಿ ಹೊಗಳುವುದರಿಂದ ಪ್ರಯೋಜನವಿಲ್ಲ. ಈಗಲೇ ಒಂದು ಒಳ್ಳೆಯ ಮಾತು ಹೇಳಿ ನನ್ನ ಹೃದಯ ಅರಳುತ್ತದೆ’ ಎಂಬ ರವಿಂದ್ರನಾಥ ಟ್ಯಾಗೋರ್‌ ಅವರ ಹೃದಯಸ್ಪರ್ಶಿ ಕವಿತೆ ಈಗ ಮತ್ತೆ ಮತ್ತೆ
ನೆನಪಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT