ಸೋಮವಾರ, ನವೆಂಬರ್ 18, 2019
20 °C

‘ಎರಡೂ ಧರ್ಮಗಳಿಗೆ ಸಮಾನ ನ್ಯಾಯ’

Published:
Updated:
Prajavani

ಅಯೋಧ್ಯೆಯ ರಾಮಜನ್ಮಭೂಮಿ– ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ  ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಎರಡೂ ಸಮುದಾಯಗಳಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗಿದೆ. ಇದರಿಂದ ಶತಮಾನಗಳ ಸಮಸ್ಯೆಗೆ ನ್ಯಾಯ ಸಿಕ್ಕಿದೆ. ಯಾರಿಗೂ ಗೆಲುವೂ ಆಗಿಲ್ಲ, ಸೋಲೂ ಆಗಿಲ್ಲ. ಇಡೀ ದೇಶದ ಜನತೆ ಈ ತೀರ್ಪನ್ನು ಸ್ವಾಗತಿಸಿದ್ದಾರೆ. 

ಕೆಲವರು ತೀರ್ಪು ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಅಂತಹವರ ಸಂಖ್ಯೆ ತೀರಾ ಕಡಿಮೆ. ವೈಯಕ್ತಿಕ ಸ್ವಾರ್ಥಕ್ಕಾಗಿ ದೇಶದ ಜನತೆಯ ಒಳಿತನ್ನು ಕಡೆಗಣಿಸಿ ಇವರು ಮಾತನಾಡುತ್ತಿದ್ದಾರೆ. ಇಂತಹ ವಿರೋಧಕ್ಕೆ ಅರ್ಥವೇ ಇಲ್ಲ.

ಮಧ್ಯಸ್ಥಿಕೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಲವು ಮುಖಂಡರನ್ನು ಭೇಟಿ ಮಾಡಿದ್ದೆ. ಅವರೆಲ್ಲರೂ ಸೌಹಾರ್ದದಿಂದ ವಿವಾದ ಬಗೆಹರಿಸುವ ಬಗ್ಗೆ ಒಲವು ಹೊಂದಿರುವುದನ್ನು ಹೇಳಿಕೊಂಡಿದ್ದರು. ತಮ್ಮ ಸಮುದಾಯದಲ್ಲೂ  ಜನರನ್ನು ತಪ್ಪು ದಾರಿಗೆ ಎಳೆಯಲು ನಿರಂತರವಾಗಿ ಪ್ರಚೋದಿಸುವವರೂ ಇದ್ದಾರೆ. ಅವರ ಸಂಖ್ಯೆ ಸಣ್ಣದು ಎಂದು ಅವರು ಹೇಳಿಕೊಂಡಿದ್ದರು.

ವಿವಾದಿತ ಬಾಬರಿ ಮಸೀದಿ ಕೆಳಗೆ ದೇವಸ್ಥಾನದ ಕಟ್ಟಡ ಇತ್ತು ಎಂಬುದನ್ನು ಭಾರತೀಯ ಪುರಾತತ್ವ ಇಲಾಖೆಯ ವರದಿಯನ್ನೂ ಸುಪ್ರೀಂಕೋರ್ಟ್‌ ಉಲ್ಲೇಖಿಸಿದೆ. ಇದೀಗ ಮುಸ್ಲಿಂ ಸಮುದಾಯಕ್ಕೂ ಅಯೋಧ್ಯೆಯಲ್ಲೇ ಮಸೀದಿ ಕಟ್ಟಲು 5 ಎಕರೆ ಜಮೀನು ನೀಡಲು ಸೂಚಿಸಿದೆ. ಒಟ್ಟಿನಲ್ಲಿ ಎರಡೂ ಸಮುದಾಯಗಳ ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯೋಚಿತ ತೀರ್ಮಾನ ನೀಡಿದೆ.

ಈ ಸಮಸ್ಯೆ ಬಗೆಹರಿಸಲು 2003 ರಿಂದ ಯಾವ ವಿಚಾರವನ್ನು ಪ್ರತಿಪಾದಿಸುತ್ತಾ ಬಂದಿದ್ದೇವೆಯೊ ತೀರ್ಪು ಕೂಡ ಅದೇ ಧಾಟಿಯಲ್ಲಿದೆ. ಇನ್ನು ಮುಂದೆ ಪ್ರಗತಿಯ ಹಾದಿಯಲ್ಲಿ ಸಾಗಬೇಕು. ಕೋಮು ಸಾಮರಸ್ಯವನ್ನು ಕಾಪಾಡುವ ಮೂಲಕ ವಿಶ್ವಕ್ಕೆ ನಾವು ಮಾದರಿಯಾಗಬೇಕು.

ಸುಪ್ರೀಂಕೋರ್ಟ್‌ 2019 ಮಾರ್ಚ್‌ನಲ್ಲಿ ಮಧ್ಯಸ್ಥಿಕೆಗಾಗಿ ಮೂವರ ತಂಡವನ್ನು ರಚಿಸಿತು. ಇದರಲ್ಲಿ ನ್ಯಾಯಮೂರ್ತಿ ಎಸ್‌.ಎಂ.ಖೈಫುಲ್ಲಾ, ಹಿರಿಯ ವಕೀಲ ರಾಮ್‌ ಪಂಚು ಅವರೊಂದಿಗೆ ನಾನೂ ಇದ್ದೆ.  ಇದಕ್ಕೂ ಮೊದಲೇ ನ್ಯಾಯಾಲಯದ ಹೊರಗೆ ವಿವಾದವನ್ನು ಸೌಹಾರ್ದವಾಗಿ ಇತ್ಯರ್ಥಗೊಳಿಸಲು ಪ್ರಯತ್ನವನ್ನು ಆರಂಭಿಸಿದ್ದೆವು. ನಮ್ಮ ಪ್ರಯತ್ನಕ್ಕೆ ಸುಪ್ರೀಂಕೋರ್ಟ್‌ ಮಾನ್ಯತೆ ನೀಡಿತು.

ಮುಸ್ಲಿಂ ಸಮುದಾಯದ ಸಾಕಷ್ಟು ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ, ಅವರೆಲ್ಲ ಸೌಹಾರ್ದ ಇತ್ಯರ್ಥಕ್ಕೆ ಒಲವು ವ್ಯಕ್ತಪಡಿಸಿದ್ದರು. 2003 ರಲ್ಲಿ ಎರಡೂ ಸಮುದಾಯಗಳ ಮಧ್ಯೆ ಪರಸ್ಪರ ವಿಶ್ವಾಸ ಮತ್ತು ಕರುಣೆಯಾಧಾರಿತ ಶಾಂತಿ ಸೂತ್ರವನ್ನು ಮುಂದಿಡಲಾಗಿತ್ತು. ಅದಕ್ಕೆ ಈಗ ಮಾನ್ಯತೆ ಸಿಕ್ಕಿದೆ.

(ಲೇಖಕರು ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕರು)

ಪ್ರತಿಕ್ರಿಯಿಸಿ (+)