ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅಲುಗಾಡುತ್ತಿದೆ ಅಂಕಗಳ ಅಡಿಪಾಯ

ಪಠ್ಯದ ಓದು ಬಿಟ್ಟರೆ ವಿದ್ಯಾರ್ಥಿಗಳು ಬೇರೆ ಏನನ್ನೂ ಮಾಡಲು ಅವಕಾಶ ನೀಡದೆ ಪಡೆಯುವುದು ಉತ್ತಮ ಫಲಿತಾಂಶವೇ?
Last Updated 26 ಜುಲೈ 2020, 20:47 IST
ಅಕ್ಷರ ಗಾತ್ರ

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯು ಫಲಿತಾಂಶ ಹೊರಬಿದ್ದ ನಂತರ ನಡೆಯುವ ಚರ್ಚೆಗಳು, ಶೇಕಡಾವಾರು ಉತ್ತೀರ್ಣ ಪ್ರಮಾಣ ಹಾಗೂ ಅತ್ಯಧಿಕ ಅಂಕ ಗಳಿಸಿದವರ ಸುತ್ತಲೇ ಕೇಂದ್ರೀಕೃತವಾಗುತ್ತಿವೆ. ಅತಿಹೆಚ್ಚು ಉತ್ತೀರ್ಣ ಪ್ರಮಾಣ ದಾಖಲಿಸುವ ಜಿಲ್ಲೆಗಳ ಶೈಕ್ಷಣಿಕ ವಲಯದಲ್ಲಿ ಕಾಣುವ ಉತ್ಸಾಹ ಹಾಗೂ ಅತಿಹೆಚ್ಚು ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಗಳ ಶೈಕ್ಷಣಿಕ ವಲಯದಲ್ಲಿ ಕಂಡುಬರುವ ಕಸಿವಿಸಿಯನ್ನು ಗಮನಿಸಿದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಥವಾ ಹೆಚ್ಚು ಅಂಕ ಗಳಿಸುವ ಹಾಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಅಂತಿಮ ಗುರಿ ಎಂದು ಇಡೀ ವ್ಯವಸ್ಥೆಯೇ ಭಾವಿಸಿರುವಂತಿದೆ. ಶೈಕ್ಷಣಿಕ ವಲಯ ತನಗೆ ತಾನೇ ಹಾಕಿಕೊಂಡಿರುವ ಈ ‘ಗುರಿ’ಯ ಅಡ್ಡಪರಿಣಾಮಗಳನ್ನೂ ಗಮನಿಸಬೇಕಿದೆ.

ಕಲಿಕೆ ಎಂಬ ನಿರಂತರ ಪ್ರಕ್ರಿಯೆಯನ್ನು ಫಲಿತಾಂಶ ಕೇಂದ್ರಿತವಾಗಿಯಷ್ಟೇ ಪರಿಗಣಿಸಲು ಪ್ರಚೋದಿಸುವ ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಹಂತಗಳು, ವಿದ್ಯಾರ್ಥಿಗಳು ಹಾಗೂ ಬೋಧಕರ ಮೇಲೆ ಹೇರುವ ಒತ್ತಡವೂ ಅಸಹಜವಾದುದೇ. ‘ಉತ್ತಮ ಫಲಿತಾಂಶ’ ಎಂಬ ಏಕಮೇವ ಗುರಿ ಸಾಧಿಸಲು ಶಾಲಾ- ಕಾಲೇಜುಗಳು ನಡೆಸುವ ಕಸರತ್ತುಗಳು ವಿದ್ಯಾರ್ಥಿ
ಗಳನ್ನು ಯಾವ ಪರಿ ಹೈರಾಣಾಗಿಸುತ್ತವೆ ಎಂಬ ಕುರಿತು ಸಹ ಸಮಾಜ ಚಿಂತಿಸಬೇಕಿದೆ.

ಪಠ್ಯದ ಓದು ಬಿಟ್ಟರೆ ವಿದ್ಯಾರ್ಥಿಗಳು ಬೇರೆ ಏನನ್ನೂ ಮಾಡಲು ಅವಕಾಶ ನೀಡದೆ ಪಡೆಯುವ ‘ಉತ್ತಮ ಫಲಿತಾಂಶ’ ಎಂಬ ಕಲಿಕೆಯ ಮಾಪಕದ ಅಡಿಪಾಯವೇ ಸಮತಟ್ಟಾಗಿ ಇಲ್ಲದಿರುವುದು ಕಣ್ಣೆದುರಿನ ವಾಸ್ತವ.

ಇಲ್ಲಿ ಸಮಾಜ ತನಗೆ ತಾನು ಕೇಳಿಕೊಳ್ಳಬೇಕಿರುವ ಕೆಲ ಪ್ರಶ್ನೆಗಳಿವೆ. ವಿದ್ಯಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗುವುದಕ್ಕೂ ಹೆಚ್ಚೆಚ್ಚು ಅಂಕ ಗಳಿಸುವುದಕ್ಕೂ ಸುತ್ತಲಿನ ಸಮಾಜದ ಕುರಿತ ಅವರ ತಿಳಿವಳಿಕೆಗೂ ನೇರ ಸಂಬಂಧವಿದೆಯೇ? ವಿದ್ಯಾರ್ಥಿಗಳ ಸಾಮಾಜಿಕ ಅರಿವು ವೃದ್ಧಿಸಲು ಈ ಅಂಕಗಳು ನೆರವಾಗುತ್ತಿವೆಯೇ? ಫಲಿತಾಂಶ ಸುಧಾರಣೆಗೂ ಸಾಮಾಜಿಕ ಆರೋಗ್ಯ ವೃದ್ಧಿಗೂ ಸಂಬಂಧ ಏರ್ಪಡಿಸಲು ಸಾಧ್ಯವಾಗುತ್ತಿದೆಯೇ? ಫಲಿತಾಂಶ ಸುಧಾರಣೆಯ ಕಾರಣಕ್ಕಾಗಿಯೇ ನಮಗೆ ಉತ್ತಮ ಮಾನವ ಸಂಪನ್ಮೂಲ (ಸಮಾಜಮುಖಿ ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಎಂಜಿನಿಯರ್‌ಗಳು, ರಾಜಕಾರಣಿಗಳು ಇತ್ಯಾದಿ) ಲಭ್ಯವಾಗುತ್ತಿದೆಯೇ?

ಉತ್ತೀರ್ಣರಾಗುವುದು, ಹೆಚ್ಚು ಅಂಕ‌ ಗಳಿಸುವುದು ಆಯಾ ವಿದ್ಯಾರ್ಥಿಯ ಗೆಲುವೇ ವಿನಾ ಸಮಾಜದ, ಒಟ್ಟಾರೆ ವ್ಯವಸ್ಥೆಯ ಗೆಲುವೇನೂ ಅಲ್ಲ ಎಂದೆನಿಸುವುದಿಲ್ಲವೇ?

ಸಮಾಜದ ವಿಕಸನಕ್ಕೆ ಕೊಡುಗೆ ನೀಡಬಲ್ಲ ಆರೋಗ್ಯಕರ ಕಲಿಕೆಯ ವಾತಾವರಣ ನಿರ್ಮಾಣಕ್ಕೆ ತುಡಿಯಬೇಕಿದ್ದ ಸಮಾಜವೇ ಅಸಮಾನತೆಯನ್ನುಉಸಿರಾಡುತ್ತಿರುವ ಉತ್ತಮ ಫಲಿತಾಂಶವೆಂಬ ಭ್ರಮೆಯ ಸೌಧವನ್ನು ಎತ್ತರಿಸಲು ಇಟ್ಟಿಗೆಗಳನ್ನು ಜೋಡಿಸುತ್ತಿದೆ. ಇದು ವರ್ತಮಾನದ ವಿಪರ್ಯಾಸವೂ ಹೌದು.

ಎಲ್ಲಾ ಇಲ್ಲಗಳ ನಡುವೆಯೂ ಕಲಿಯುವ ವಿದ್ಯಾರ್ಥಿಗಳ ಗೆಲುವಿಗೆ ಸಮಾಜ ಸಂಭ್ರಮಿಸುವುದರಲ್ಲಿಅರ್ಥವಿದೆ. ಆದರೆ, ಫಲಿತಾಂಶವನ್ನು ಮಾರುಕಟ್ಟೆಯಲ್ಲಿನ ತಮ್ಮ ಮೌಲ್ಯ ವೃದ್ಧಿಸಿಕೊಳ್ಳಲು ಅಳತೆಗೋಲಾಗಿ ಬಳಸುವ ಶೈಕ್ಷಣಿಕ ವಲಯದ ಗೆಲುವಿಗೆ ಸಮಾಜ ಚಪ್ಪಾಳೆ ತಟ್ಟುವುದು ಹೊಣೆಗೇಡಿತನ ಎಂಬಂತೆ ತೋರಲಾರದೇ?

ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಬೋಧಿಸುವ ನಾನು, ಇತ್ತೀಚಿನ ವರ್ಷಗಳಲ್ಲಿ ಪಿಯುವಿನಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಎಷ್ಟೋ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಷಯಗಳಲ್ಲಿ ಕನಿಷ್ಠ ಉತ್ತೀರ್ಣರಾಗಲೂ ಪರದಾಡು
ವುದನ್ನು ಗಮನಿಸುತ್ತಿದ್ದೇನೆ. ಎಂಜಿನಿಯರಿಂಗ್‍ನಲ್ಲಿಫೇಲಾಗತೊಡಗಿರುವ ತಮ್ಮ ಮಕ್ಕಳ ಪರವಾಗಿ ವಕಾಲತ್ತು ವಹಿಸಲು ಬರುವ ಪೋಷಕರು ಕೂಡ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುವಿನಲ್ಲಿ ಒಳ್ಳೆ ಅಂಕ ಗಳಿಸಿರುವ ತಮ್ಮ ಮಕ್ಕಳು ಎಂಜಿನಿಯರಿಂಗ್‍ನಲ್ಲಿ ಫೇಲಾಗಲು ಏನು ಕಾರಣವೋ ತಿಳಿಯುತ್ತಿಲ್ಲವೆಂಬಅಳಲು ತೋಡಿಕೊಳ್ಳುತ್ತಾರೆ. ಇನ್ನು ಕೆಲವರು ಎಂಜಿನಿಯರಿಂಗ್ ಹಂತದಲ್ಲೂ ವಿದ್ಯಾರ್ಥಿಗಳನ್ನು ಪಿಯು ಕಾಲೇಜುಗಳಲ್ಲಿ ಮಾಡುವಂತೆ ‘ಕಟ್ಟಿ ಹಾಕಿ’ ಓದಿಸಬಾರದೇಕೆ ಎಂದು ಪ್ರಶ್ನಿಸುತ್ತಾರೆ.

ಪದವಿ ಹಂತದಲ್ಲಾದರೂ ತಮ್ಮ ಮಕ್ಕಳು ಸ್ವಂತ ಆಸಕ್ತಿಯಿಂದ ಕಲಿಯುವ, ಸುತ್ತಲಿನ ಸಮಾಜವನ್ನು ಅರಿಯುವ, ಸಮಸ್ಯೆಗಳನ್ನು ಸ್ವತಃ ಎದುರಿಸುವ ಮುಕ್ತ ವಾತಾವರಣ ಇರಬೇಕೆಂಬ ಸಹಜ ತಿಳಿವಳಿಕೆಯನ್ನು ಹೊಸಕಿ ಹಾಕುವಲ್ಲಿ ಕೂಡ ಅಂಕ ಗಳಿಕೆಯ ಮಾರುಕಟ್ಟೆ ಯಶ ಕಂಡಿದೆ ಎಂಬುದು ಕಣ್ಣೆದುರಿನ ವಾಸ್ತವವೇ ಆಗಿದೆ. ಅಂಕ ಗಳಿಕೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ಜರುಗುವ ಕಲಿಕೆಯ ಮಿತಿಗಳತ್ತಲೂ ನಮ್ಮೆಲ್ಲರ ಗಮನ ಹರಿಯಬೇಕಿದೆ.

ಫಲಿತಾಂಶ ಸುಧಾರಣೆ ಎಂಬುದು ಕಲಿಕೆಯ ಗುಣಮಟ್ಟದ ಸುಧಾರಣೆಯಾಗಬೇಕೇ ವಿನಾ ಕೇವಲ ಅಂಕ ಗಳಿಕೆಯ ಪ್ರಮಾಣ ಹೆಚ್ಚಿಸುವುದರತ್ತ ಕೇಂದ್ರೀಕೃತವಾಗಬಾರದು. ಅಂಕ ಗಳಿಕೆಯ ತಂತ್ರಗಳಿಗೂ ಅಸಲಿ ಕಲಿಕೆಗೂ ಇರುವ ಅಂತರದ ಅರಿವಾಗಲು ಕಳೆದ ಕೆಲ ವರ್ಷಗಳಿಂದ ‘ಅಂಕ’ಗಳು ಕಳೆದುಕೊಳ್ಳತೊಡಗಿರುವ ಮೌಲ್ಯದತ್ತ ಕಣ್ಣಾಡಿಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT