ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಗ್ರಾಮ ವಾಸ್ತವ್ಯ’-ಆರಂಭವಾಗಲಿ ಅಭಿಯಾನ

ವೃತ್ತಿಪರ ತರಬೇತಿ ಪಡೆದವರು ಹಳ್ಳಿಗಳಲ್ಲೇ ಉಳಿಯುವಂತಾದರೆ ಹಳ್ಳಿಗರ ಬವಣೆಯೂ ನೀಗುತ್ತದೆ, ನಗರಗಳಿಗೆ ವಲಸೆಯೂ ತಪ್ಪುತ್ತದೆ
Last Updated 27 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಿ ಕೊಡಲುಸರ್ಕಾರ ಸರ್ವರೀತಿಯಲ್ಲೂ ಪ್ರಯತ್ನಿಸುತ್ತಿದ್ದರೂ ಯಾಕೆ ಹಳ್ಳಿಗಳ ಜನ ನಗರಗಳಿಗೆ ವಲಸೆ ಹೋಗುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನವೊಂದು ಈಚೆಗೆ ದೊರೆಯಿತು.

ಹಿಂದಿನ ತಿಂಗಳು ಅವ್ಯಾಹತ ಮಳೆ ಸುರಿಯುತ್ತಿದ್ದ ಕಾಲದಲ್ಲೇ, ಮಲೆನಾಡಿನ ಮೂಲೆಯಲ್ಲಿರುವ ನಮ್ಮೂರಿಗೆ ಹೆಂಡತಿ, ಮಗಳ ಸಮೇತ ಹೋಗಿದ್ದೆ. ನಾವು ಹೋದ ದಿನವೇ ಸಂಜೆ ನಿರಂತರ ಜಡಿ ಮಳೆ ಹೊಡೆಯತೊಡಗಿತು. ಫಕ್ಕನೆ ಕರೆಂಟು ಹೋಯ್ತು. ಈ ಮಳೆಯಲ್ಲಿ ಇನ್ನು ಕರೆಂಟು ಬರುವುದು ಎಷ್ಟು ದಿನಕ್ಕೋ ಎಂದು ಆಯಿ ಸೂಚನೆ ನೀಡಿದಳು. ಸೌರ ವಿದ್ಯುತ್‌ ಇರುವುದರಿಂದ ಒಂದು ದಿನ ಪರವಾಗಿಲ್ಲ ಎಂದುಕೊಂಡೆವು. ಆದರೆ ಸೂರ್ಯನ ದರ್ಶನವೇ ಇಲ್ಲದ ಕಾರಣ ಸೌರಶಕ್ತಿಯೂ ಸೋಲುತ್ತಾ ಬಂತು. ಹೀಗಾಗಿ ಮೊದಲ ರಾತ್ರಿ ಕರೆಂಟು ಇರಲಿಲ್ಲವಾದರೂ ನಮ್ಮ ಫೋನುಗಳು ಕೆಲಸ ಮಾಡುತ್ತಿದ್ದವು. ಎರಡನೆಯ ದಿನ ನಮ್ಮ ಫೋನುಗಳಿಗೂ ಚಾರ್ಜ್‌ ಇಲ್ಲದ ಪರಿಸ್ಥಿತಿ ಬಂತು.

ಬಾವಿಗೆ ಪಂಪು ಇದೆ, ಆದರೆ ಕರೆಂಟು ಇಲ್ಲದೇ ಅದು ನಿಷ್ಪ್ರಯೋಜಕವಾಗಿತ್ತು. ಹಗ್ಗ ಇಳಿಸಿ ಬಾವಿಯಿಂದ ನೀರು ಎತ್ತಬೇಕಾಗಿ ಬಂತು. ಮೊದಲ ದಿನ ಬಾವಿಯಿಂದ ನೀರೆತ್ತುವಾಗ ನಮಗೆ ಖುಷಿಯಿತ್ತು. ಎರಡು ದಿನಗಳಾದರೂ ಕರೆಂಟು ಬಾರದೇ ಅಡುಗೆಗೆ, ಸ್ನಾನಕ್ಕೆ, ಶೌಚಕ್ಕೆ ಎಲ್ಲದಕ್ಕೂ ಬಾವಿಯಿಂದ ನೀರು ಎತ್ತಬೇಕಾಗಿ ಬಂದಾಗ ನಮಗೆ ಸಾಕು ಬೇಕಾಯ್ತು. ವಯಸ್ಸಾದ ಇಬ್ಬರೇ ಇಂಥ ದಿನಗಳಲ್ಲಿ ನೀರು ಸೇದಿಕೊಳ್ಳುವುದು ಎಷ್ಟು ಕಷ್ಟ ಎಂಬ ಸತ್ಯ ಅರಿವಾಗತೊಡಗಿತು.

ಮನೆಗೆ ಬಂದಾಗಲೇ ಗಮನಿಸಿದ್ದೆ. ಸ್ನಾನದ ಮನೆಯಲ್ಲಿ ಲೈಟು ಉರಿಯುತ್ತಿರಲಿಲ್ಲ. ಆಯಿ ಹೇಳಿದಳು: ‘ಎರಡು ತಿಂಗಳಿನಿಂದ ಕರೆಂಟು ರಿಪೇರಿಯವನಿಗೆ ಹೇಳಿದರೂ ಬಂದು ರಿಪೇರಿ ಮಾಡಿಲ್ಲ. ಅದು ಬರೀ ಬಲ್ಬು ಹೋಗಿರುವುದಲ್ಲ. ಸ್ವಿಚ್‌ ಬೋರ್ಡಿನಲ್ಲೇ ಏನೋ ತೊಂದರೆಯಿದೆ. ಆದರೆ ರಿಪೇರಿ ಮಾಡಿಕೊಡುವವರು ಯಾರೂ ಇಲ್ಲ. ಹಾಗೆಯೇ ಮನೆಯ ಒಂದು ಕಡೆಯ ಫೈಬರ್ ಬಾಗಿಲು ಮುರಿದು ಹೋಗಿದೆ. ಹೊಸತು ತಂದಿಟ್ಟು ಮೂರು ತಿಂಗಳಾಯಿತು. ಆ ಬಾಗಿಲನ್ನು ಫಿಕ್ಸ್ ಮಾಡಿಕೊಡಲು ಆಚಾರಿ ಬೇಕು. ನಾವು ಮುದುಕರ ಹತ್ತಿರ ಆಗದು. ಆದರೆ ಎಷ್ಟು ಹೇಳಿಕಳಿಸಿದರೂ ಆಚಾರಿ ಬರುತ್ತಿಲ್ಲ. ಹಳ್ಳಿಗಳಲ್ಲಿ ಸಣ್ಣ ಪುಟ್ಟ ಅಗತ್ಯ ಕೆಲಸಗಳನ್ನು ಮಾಡಿಕೊಡುವವರು ಯಾರೂ ಇರುವುದಿಲ್ಲ. ಅದೊಂದಕ್ಕಾಗಿ ಪೇಟೆಗೆ ಹೋಗಲಾಗದು. ಹೀಗಾಗಿ ಹಳ್ಳಿಯ ಬದುಕು ಯಾರಿಗೂ ಬೇಡ’.

ನಮ್ಮಲ್ಲಿ ವಿದ್ಯುತ್ ರಿಪೇರಿ, ಕುಶಲ ಕೆಲಸಗಳು, ಮೋಟರ್ ರಿಪೇರಿ, ವಾಹನ ರಿಪೇರಿಗಳನ್ನು ಕಲಿಸುವ ಕೈಗಾರಿಕಾ ತರಬೇತಿ ಸಂಸ್ಥೆಗಳು, ಪಾಲಿಟೆಕ್ನಿಕ್‍ಗಳು ಅನೇಕವಿವೆ. ಅಲ್ಲಿಗೆ ಬಂದು ಸೇರಿಕೊಳ್ಳುವ ವಿದ್ಯಾರ್ಥಿಗಳು ಕೂಡಾ ಬಹುತೇಕ ಹಳ್ಳಿಯವರೇ ಆಗಿರುತ್ತಾರೆ. ಆದರೆ ಅವರು ತರಬೇತಿಯ ನಂತರ ನಗರಗಳಲ್ಲೇ ಕೆಲಸ ಹುಡುಕಿ ಕೊಂಡು ನಗರವಾಸಿಗಳಾಗುವುದು, ಹಳ್ಳಿಗೆ
ಹಿಂದಿರುಗದಿರುವುದು ಸಮಸ್ಯೆಯ ಮೂಲ.

ನಗರಗಳಲ್ಲೇ ನೌಕರಿಗೆ ಸೇರುವ ಬದಲು ಅವರು ಹಳ್ಳಿಗೆ ಹಿಂತಿರುಗಿ ಸ್ವಂತವಾಗಿ ಸೇವೆ ಆರಂಭಿಸಿದರೆ ಇಂದು ಪ್ರತೀ ಹಳ್ಳಿಯಲ್ಲೂ ಬದುಕಲು ಅವಕಾಶವಿದೆ. ಈಗಂತೂ ಕೊರೊನಾ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ನಗರಗಳಲ್ಲಿದ್ದ ಅನೇಕ ಐ.ಟಿ., ಬಿ.ಟಿ.ಯವರು ಮನೆಯಿಂದಲೇ ಕೆಲಸ ಮಾಡುವ ಉಮೇದಿನಲ್ಲಿ ಊರುಗಳಿಗೆ ಹಿಂತಿರುಗಿದ್ದಾರೆ. ಅವರಿಗೆ ಮೊಬೈಲು ರಿಪೇರಿಯಿಂದ ಹಿಡಿದು, ವಿದ್ಯುತ್ತು, ಟಿ.ವಿ, ಫ್ಯಾನು ಮುಂತಾಗಿ ಏನೇ ತೊಂದರೆಯಾದರೂ ರಿಪೇರಿಗೆ
ಜನ ಬೇಕಾಗುತ್ತದೆ. ಅವರು ಸಾಕಪ್ಪಾ ಹಳ್ಳಿಯ ಸಹವಾಸ ಅಂತ ಮತ್ತೆ ನಗರಗಳಿಗೆ ಮರಳುವ ಮುನ್ನ ಒಂದಷ್ಟು ಜನ ಕುಶಲಕರ್ಮಿಗಳು ಹಳ್ಳಿಗಳಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕಿದೆ.

ನಗರಗಳಲ್ಲಾದರೆ ದುಡ್ಡು ಕೊಟ್ಟರೆ ನಡುರಾತ್ರಿ ಯಲ್ಲೂ ನಾಗರಿಕ ಸೇವೆ ಒದಗುತ್ತದೆ. ಹಳ್ಳಿಗಳಲ್ಲಿ ಆ ಪರಿಸ್ಥಿತಿ ಇಲ್ಲ. ದುಡ್ಡು ತೆರಲು ಸಿದ್ಧವಿದ್ದರೂ ಕೆಲಸ ಮಾಡಿಕೊಡುವವರು ಇಲ್ಲ. ಇರುವ ಒಬ್ಬರೋ ಇಬ್ಬರೋ ರಿಪೇರಿಯವರ ಮೇಲೆ ವಿಪರೀತ ಹೊರೆ. ಹೀಗಾಗಿ ತಿಂಗಳುಗಳು ಕಳೆದರೂ ಒಂದು ಸ್ವಿಚ್ಚು ರಿಪೇರಿ ಮಾಡುವವರು ಸಿಕ್ಕದೇ ಪರಿತಪಿಸಬೇಕಾಗುತ್ತದೆ.

ವಿದ್ಯುತ್ತು, ವಾಹನ ರಿಪೇರಿಯವರು, ಮೊಬೈಲೂ ಸೇರಿ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಮಾಡುವವರು ಪಾರಂಪರಿಕ ಕುಶಲಕರ್ಮಿಗಳನ್ನು ಹಳ್ಳಿಗಳಲ್ಲಿ ನೆಲೆಗೊಳಿಸಲು ಸರ್ಕಾರ ಯೋಜನೆಯನ್ನು ಹಾಕಿಕೊಳ್ಳಬೇಕು. ಹಾಗೆ ನೆಲೆಗೊಳ್ಳುವವರಿಗೆ ಸಾಲ ಸೌಲಭ್ಯಗಳನ್ನೂ ಸುಲಭ ರಹದಾರಿಗಳನ್ನೂ ಒದಗಿಸಿಕೊಡಬೇಕು. ಆಗಮಾತ್ರ ಜನ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಸಾಧ್ಯವಾದೀತು. ಇಲ್ಲವಾದರೆ ಯಾವುದೇ ವಿದ್ಯೆ ಕಲಿಯುವುದೂ ನಗರ ಸೇರಲಿಕ್ಕೆ ಎಂಬ ಪರಿಸ್ಥಿತಿ ಬರುತ್ತದೆ. ಹಳ್ಳಿಗಳು ಖಾಲಿಯಾಗುತ್ತವೆ. ನಗರಗಳ ಕೊಳೆಗೇರಿಗಳು ಬೆಳೆಯುತ್ತವೆ.

ಹಳ್ಳಿಗಳಲ್ಲಿ ಬದುಕುವ ಸ್ಥಿತಿಯನ್ನು ಸಹನೀಯಗೊಳಿಸುವುದು ಸರ್ಕಾರಗಳ ಮೊದಲ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT