ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಎಂಬ ರಾಜಕೀಯ ಹುನ್ನಾರ

Last Updated 31 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಪುರಾತನ ಮಹಾಪುರುಷರ ಪ್ರತಿಮೆ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿವಾದ ಸೃಷ್ಟಿಯು ಅವರ ಕೊಡುಗೆ, ತ್ಯಾಗ, ಬಲಿದಾನವನ್ನು ವಿಸ್ಮೃತಿಗೆ ಸರಿಸುವ ವ್ಯವಸ್ಥಿತ ವಿಧಾನ

ಬೆಳಗಾವಿಯಲ್ಲಿ ಸ್ವಾತಂತ್ರ್ಯ ವೀರರ ಅಭಿಮಾನಿಗಳೆಂದು ಹೇಳಿಕೊಳ್ಳುವವರು ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿಯ ಪ್ರತಿಮೆಗಳನ್ನು ಪೈಪೋಟಿಗೆ ಬಿದ್ದಂತೆ ಸ್ಥಾಪಿಸಲು ಹೋಗಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು ದುರ್ದೈವ. ಪುರಾತನರ ಬಗೆಗಿನ ನಮ್ಮ ಗೌರವ ಮತ್ತು ಅವರ ಪ್ರತಿಮೆ ಸ್ಥಾಪಿಸುವ ಇರಾದೆಯು ಅತ್ಯಂತ ಖಾಸಗಿಯಾದುದು. ನಮ್ಮ ಭಕ್ತಿ ಅಥವಾ ಆರಾಧನೆಯನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವ ಆಡಂಬರವನ್ನು ಬಸವಣ್ಣ 12ನೇ ಶತಮಾನದಲ್ಲೇ ತಿರಸ್ಕರಿಸಿದ್ದರು.

ಇಂದು ಯಾವುದೇ ಗತಕಾಲದ ಮಹಾಪುರುಷನ ಪ್ರತಿಮೆಯ ಪ್ರತಿಷ್ಠಾಪನೆಯು ಗೌರವ, ಸ್ಮರಣೆಯ ವಿಷಯವಾಗಿ ಉಳಿದಿಲ್ಲ. ಬಹುಪಾಲು ಸಂದರ್ಭಗಳಲ್ಲಿ ಮತ್ತೊಬ್ಬರ ಮೇಲಿನ ಪೈಪೋಟಿಗೆ ನೆವವಾಗಿ ಒದಗಿಬರುತ್ತಿದೆ. ಕೆಲವು ತಿಂಗಳ ಹಿಂದೆ ಕನ್ನಂಬಾಡಿಯ ಸಮೀಪ ವಿಶ್ವೇಶ್ವರಯ್ಯನವರ ಪ್ರತಿಮೆ ಸ್ಥಾಪಿಸಬೇಕೇ ಬೇಡವೇ ಎಂಬ ವಿಷಯದ ಪರವಾಗಿ ಮತ್ತು ವಿರೋಧವಾಗಿ ಒಂದಷ್ಟು ಮಂದಿ ವಿವಾದವೆಬ್ಬಿಸಿದ್ದರು. ಕೆಲವರಂತೂ ವಿಶ್ವೇಶ್ವರಯ್ಯನವರ ಪ್ರತಿಮೆ ನಿಲ್ಲಿಸಿದರೆ ಅದನ್ನು ಒಡೆದು ಹಾಕುತ್ತೇವೆ ಎಂದು ಅಬ್ಬರಿಸಿದ್ದರು. ಈ ವರ್ಷದ ಪ್ರಾರಂಭದಲ್ಲಿ ಕನಕಪುರ ಸಮೀಪದ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪನೆಯ ಪ್ರಯತ್ನವಾದಾಗಲೂ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಸಲಿಗೆ ಇಲ್ಲಿ ಪ್ರತಿಭಟಿಸುವವರು ಆಯಾ ಮಹಾಪುರುಷರ ವಿರೋಧಿಗಳೆಂದು ಮೇಲ್ನೋಟಕ್ಕೆ ಕಾಣಿಸುತ್ತದಾದರೂ ಅದು ಸತ್ಯವೇನೂ ಆಗಬೇಕಿಲ್ಲ. ಆ ಮಹಾಪುರುಷರು ಬದುಕಿದ್ದಿದ್ದರೆ ಅವರೂ ಪ್ರತಿಮೆ ನಿಲ್ಲಿಸುವುದರ ವಿರುದ್ಧ ಧ್ವನಿ ಎತ್ತುತ್ತಿದ್ದರು, ಪ್ರತಿಮಾ ನಿರ್ಮಾಣವನ್ನು ವಿರೋಧಿಸುವವರ ಜೊತೆಗೆ ಕೈಜೋಡಿಸುತ್ತಿದ್ದರು ಎನಿಸುತ್ತದೆ. ಅವರ ಚಾರಿತ್ರ್ಯವನ್ನು ಒಮ್ಮೆ ಅವಲೋಕಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಕಳೆದ ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿದ್ದ ಸರಸ್ವತಿಯ ಮೂರ್ತಿಯನ್ನು ತೆಗೆಸಿ ಆ ಜಾಗದಲ್ಲಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪ್ರಯತ್ನ ನಡೆದು, ವಿಶ್ವವಿದ್ಯಾಲಯದಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗಿತ್ತು.
ಕೆಲವು ದಿವಸಗಳ ಹಿಂದೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಗ್ರಾಮದಲ್ಲಿ ರಾತ್ರೋರಾತ್ರಿ ಶಿವಾಜಿ ಪ್ರತಿಮೆಯನ್ನು ನಿಲ್ಲಿಸಿದ್ದರಿಂದ, ಆ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಕೊನೆಗೆ ಅಲ್ಲಿಯ ಗ್ರಾಮ ಪಂಚಾಯಿತಿಯವರು ಸಭೆ ಸೇರಿ ಶಿವಾಜಿ, ಅಂಬೇಡ್ಕರ್, ವಾಲ್ಮೀಕಿ, ಬಸವಣ್ಣ ಈ ಎಲ್ಲ ಮಹಾಪುರುಷರ ಪ್ರತಿಮೆಗಳನ್ನೂ ಏಕಕಾಲಕ್ಕೆ ಪ್ರತಿಷ್ಠಾಪಿಸಬೇಕು, ಅಲ್ಲಿಯವರೆಗೆ ಯಾವುದೇ ಪ್ರತಿಮೆಯ ಪ್ರತಿಷ್ಠಾಪನೆ ಬೇಡ ಎಂಬ ನಿರ್ಣಯಕ್ಕೆ ಬಂದರು ಎಂದು ವರದಿಯಾಗಿತ್ತು.

ಕೆಲವು ದುರುಳ ಶಕ್ತಿಗಳು ಒಂದಷ್ಟು ಕೋಮಿನವರ ಬೆಂಬಲ ಪಡೆಯುವ ಸಲುವಾಗಿ ಅಪಮಾರ್ಗದಲ್ಲಿ ಆ ಕೋಮುಗಳನ್ನು ಒಗ್ಗೂಡಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತವೆ. ಬದುಕಿರುವವರನ್ನು ಈ ರೀತಿ ಮೂರ್ಖರನ್ನಾಗಿಸುವುದು ಮಾತ್ರವಲ್ಲ, ಸತ್ತವರಿಗೆ ಅಪಚಾರ ಮಾಡಲೂ ಅವು ಹಿಂಜರಿಯುವುದಿಲ್ಲ. ಜನಸಮುದಾಯವು ಅಂತಹ ದುರುಳ ಶಕ್ತಿಗಳ ಬಗ್ಗೆ ಜಾಗೃತವಾಗಬೇಕಲ್ಲದೆ ಅವರ ಉದ್ದೇಶ ಈಡೇರಿಸುವ ಕೆಲಸದಲ್ಲಿ ತೊಡಗಬಾರದು.

ಅತ್ತ ವಿಶ್ವವಿದ್ಯಾಲಯದಲ್ಲಿ ಹಾಗೂ ಕನ್ನಂಬಾಡಿಯಲ್ಲಿ ಪ್ರತಿಮೆಯ ವ್ಯಾಜ್ಯವು ಜಾತಿ ವ್ಯಾಜ್ಯದ ಬಣ್ಣ ಪಡೆದುಕೊಂಡರೆ, ಇತ್ತ ಯಮಕನಮರಡಿಯಲ್ಲಿ ಭಾಷಾ ವೈಷಮ್ಯದ ರೂಪ ಪಡೆದುಕೊಂಡಿತು. ಇನ್ನು ಕಪಾಲಬೆಟ್ಟದ ಯೇಸುವಿನ ಪ್ರತಿಮೆಯ ವಿವಾದವು ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಯಿತು.

ಪುರಾತನ ಮಹಾಪುರುಷರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಬೇಕೇ ಬೇಡವೇ ಎಂಬ ಈ ತರಹದ ಕಿತ್ತಾಟ, ಬೊಂಬೆಯಾಟ ಆಡುವ ಮಕ್ಕಳ ಕಿತ್ತಾಟಕ್ಕಿಂತಲೂ ಬಾಲಿಶವಾದುದು ಎನಿಸುತ್ತದೆ. ಆದರೆ ಹಾಗೆಂದು ಇದನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಏಕೆಂದರೆ ಜಾತಿ, ಭಾಷೆ, ಸಿದ್ಧಾಂತಗಳ ಹೆಸರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವ ಶಕ್ತಿಗಳು, ಪುರಾತನರ ಹೆಸರನ್ನು, ಪ್ರತಿಮೆಗಳನ್ನು ಹೀಗೆ ದುರ್ಬಳಕೆ ಮಾಡಿಕೊಂಡಲ್ಲಿ, ಮುಂಬರುವ ತಲೆಮಾರುಗಳಿಗೆ ಇಂತಹ ಸಾಂಕೇತಿಕತೆ ಬಗೆಗೇ ನಿರ್ಲಕ್ಷ್ಯ ಮೂಡಲಾರಂಭಿಸುತ್ತದೆ.

ಹೇಮಾ ಸಿಂಗಿಪಾಳ್ಯ, ಬೆಂಗಳೂರು

ಸದುದ್ದೇಶ ಅರಿಯಿರಿ

ನಾಡಿನ ಮಹಾನುಭಾವರ ನೆನಪು ನಾಡಿನ ಜನರ ಮನದಾಳದಲ್ಲಿ ಉಳಿದು, ಅವರಿಗೆ ಗೌರವ ತೋರಿಸಲೆಂಬ ಉದ್ದೇಶದಿಂದ ಸರ್ಕಾರಗಳು ಅವರ ಪ್ರತಿಮೆ ಸ್ಥಾಪಿಸುವ; ರಸ್ತೆ, ವರ್ತುಲ, ಬಡಾವಣೆಗಳಿಗೆ ಅವರ ಹೆಸರುಗಳನ್ನು ಇಡುವ ಪರಿಪಾಟವಿದೆ. ಆದರೆ ಇಂತಹ ಸದುದ್ದೇಶವನ್ನು ಮರೆತು ಕೆಲವು ವ್ಯಕ್ತಿಗಳು, ಶಕ್ತಿಗಳು, ಸಮಾಜಘಾತುಕರು ಪ್ರತಿಮೆಗಳಿಗೆ ಚಪ್ಪಲಿ ಹಾರ ಹಾಕುವುದು, ಮದ್ಯ ಸುರಿಯುವುದು, ವಿರೂಪಗೊಳಿಸಿ ಅವಮಾನ ಮಾಡುವ ಮೂಲಕ ಸಾಮಾಜಿಕ ನೆಮ್ಮದಿ, ಸಹಬಾಳ್ವೆಯನ್ನು ಹಾಳು ಮಾಡಲು ಮುಂದಾಗುತ್ತಾರೆ.

ಪ್ರತಿಮೆಗಳ ಸ್ಥಾಪನೆಗೆ ವೆಚ್ಚವಾಗುವ ಹಣವನ್ನು ಅವರು ಕಾಯಕ ಮಾಡಿದ ಸ್ಥಳದಲ್ಲಿ ಪವನಶಕ್ತಿ, ಸೌರಶಕ್ತಿ ಘಟಕ ಸ್ಥಾಪಿಸಲು ಬಳಸಬಹುದು. ಇಲ್ಲವೇ ಪ್ರತಿಮೆಗಳ ಬದಲಾಗಿ ರಸ್ತೆಗಳಿಗೆ, ವರ್ತುಲಗಳಿಗೆ ಆ ಮಹಾನುಭಾವರ ಹೆಸರಿಟ್ಟು, ವರ್ತುಲದ ಮಧ್ಯದಲ್ಲಿ ಹಾಗೂ ರಸ್ತೆಗಳ ಪಕ್ಕದಲ್ಲಿ ಅವರ ಸಾಧನಾ ಫಲಕಗಳನ್ನು ಅಳವಡಿಸಬಹುದು. ಇದರಿಂದ ಜನರಿಗೆ ಅವರ ಬಗ್ಗೆ ಹೆಚ್ಚಿನ ಅರಿವು ಮೂಡುವುದಲ್ಲದೆ ಅನಗತ್ಯ ವಿವಾದಗಳೂ ತಪ್ಪುತ್ತವೆ.

ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT