ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಸಾಕು, ಶಾಲೆ ತೆರೆಯಬೇಕು

ಸರ್ಕಾರಿ ಶಾಲೆಗಳು ಸಾಮಾಜಿಕ ನ್ಯಾಯದ ಕೇಂದ್ರಗಳು ಸಹ ಆಗಿರುತ್ತವಾದ್ದರಿಂದ, ಶೀಘ್ರದಲ್ಲಿ ಅವುಗಳನ್ನು ಪುನರಾರಂಭಿಸಬೇಕು
Last Updated 1 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಶಾಲೆಗಳನ್ನು ಪುನರಾರಂಭಿಸುವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಶಿಕ್ಷಣ ಸಚಿವರು ಎಲ್ಲಾ ಸಚಿವರು ಮತ್ತು ಶಾಸಕರಿಗೆ ಪತ್ರ ಬರೆದು, ಶಾಲೆಗಳನ್ನು ಯಾವಾಗ ಪ್ರಾರಂಭಿಸಬಹುದು, ಒಂದು ವೇಳೆ ಪ್ರಾರಂಭಿಸಿದರೆ ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬೇಕು, ಸಮುದಾಯ ಮತ್ತು ಜನಪ್ರತಿನಿಧಿಗಳಿಂದ ಯಾವ ರೀತಿಯ ಸಹಕಾರ ನಿರೀಕ್ಷಿಸಬಹುದು ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ವಿಷಯದಲ್ಲಿ ಈಗಾಗಲೇ ವಿಸ್ತೃತ ಚರ್ಚೆಗಳಾಗಿವೆ. ಇಲಾಖೆಯು ಪಾಲಕರ ಜೊತೆ ಶಾಲಾ ಹಂತದಲ್ಲಿ ನಡೆಸಿದ ಚರ್ಚೆ ಹಾಗೂ ಸಚಿವರು ಕ್ಷೇತ್ರದ ಎಲ್ಲಾ ವಾರಸುದಾರರು ಮತ್ತು ಮಾಜಿ ಶಿಕ್ಷಣ ಸಚಿವರ ಜೊತೆ ನಡೆಸಿದ ಚರ್ಚೆಗಳು ಇದರಲ್ಲಿ ಸೇರಿವೆ. ಇನ್ನು ಚರ್ಚೆಯಲ್ಲಿ ಹೆಚ್ಚು ಕಾಲ ಕಳೆಯದೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

ಎಲ್ಲಾ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳು, ಅದರಲ್ಲೂ ವಿಶೇಷವಾಗಿ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಬೇರೆಯೇ ಆಗಿರುತ್ತದೆ. ಅವರ ಅಭಿಪ್ರಾಯಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಕೂಲಿಕಾರ್ಮಿಕ– ಕೃಷಿಕ ತಂದೆ ತಾಯಂದಿರ ಅಭಿಪ್ರಾಯ ಮತ್ತು ಬವಣೆಗಳಿಗಿಂತ ಭಿನ್ನವಾಗಿರುತ್ತವೆ.

ಸರ್ಕಾರಿ ಶಾಲೆಗಳು ಕಲಿಕಾ ಕೇಂದ್ರಗಳು ಮಾತ್ರವಲ್ಲ, ಜೊತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಕ್ಕಳ ವಿವಿಧ ಅಗತ್ಯಗಳನ್ನು ಪೂರೈಸುವ ಸಾಮಾಜಿಕ ನ್ಯಾಯದ ಕೇಂದ್ರಗಳು ಸಹ ಆಗಿರುತ್ತವೆ. ಈ ಸಂಕಷ್ಟದ ಸಂದರ್ಭದಲ್ಲಿ ಇದು ಅತ್ಯಂತ ಮಹತ್ವದ ವಿಷಯವಾಗುತ್ತದೆ.

ಉದಾಹರಣೆಗೆ, ಶಾಲೆಯಲ್ಲಿ ಮಧ್ಯಾಹ್ನ ಒದಗಿಸುವ ಬಿಸಿಯೂಟವು ಲಕ್ಷಾಂತರ ಮಕ್ಕಳಿಗೆ ಬೇರೆ ಬಗೆಯ ಆತ್ಮವಿಶ್ವಾಸ, ಮನೋಬಲ ಹಾಗೂ ದೈಹಿಕ ಬಲವನ್ನು ಕಲ್ಪಿಸುತ್ತದೆ. ಸರ್ಕಾರ ಈ ಆಯಾಮಗಳಿಂದಲೂ ಆಲೋಚಿಸಬೇಕು. ಹಲವು ಕಾರಣಗಳಿಂದ ಶಾಲೆಯನ್ನೇ ತಮ್ಮ ಎರಡನೆಯ ಮನೆಯಾಗಿ ಕಾಣುವ ಲಕ್ಷಾಂತರ ಮಕ್ಕಳು ಮತ್ತು ಪಾಲಕರ ದೃಷ್ಟಿಕೋನದಿಂದ ಯೋಚಿಸಬೇಕು.

ಈ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳನ್ನು ಆದಷ್ಟು ಬೇಗ ತೆರೆಯುವುದು ಮಹತ್ವದ ನಿರ್ಧಾರವಾಗುತ್ತದೆ. ಇಲ್ಲವಾದಲ್ಲಿ ಅನೇಕ ಮಕ್ಕಳು ಶಾಲೆಯಿಂದ ದೂರವುಳಿದು ಬಾಲಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಮಕ್ಕಳನ್ನು ಇಂತಹ ಎಲ್ಲಾ ಅವಘಡಗಳಿಂದ ರಕ್ಷಿಸಿ ಅವರು ಬಾಲ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಬೇಕಾದರೆ, ಸರ್ಕಾರಿ ಶಾಲೆಗಳು ಶೀಘ್ರವಾಗಿ ತೆರೆಯಬೇಕು. ಈ ಮಕ್ಕಳ ಪಾಲಕರು ನೆಮ್ಮದಿಯಿಂದ ತಮ್ಮ ಜೀವನಾಧಾರದ ಕೆಲಸಕ್ಕೆ ಹೋಗಲು ಸಾಧ್ಯವಾಗುವಂತೆ ಆಗಬೇಕು.

ಈ ದಿಸೆಯಲ್ಲಿ ಕೆಳಕಂಡ ಅಂಶಗಳನ್ನು ಇಲಾಖೆ ಗಮನಿಸಬೇಕಿದೆ:

ಲಭ್ಯವಿರುವ ಸಂಶೋಧನೆಯ ಪ್ರಕಾರ, ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಏಕೆಂದರೆ ವಯಸ್ಸಾದವರಿಗೆ ಮತ್ತು ಬೇರೆ ಬೇರೆ ಕಾಯಿಲೆಯ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಈ ಅಂಶಗಳನ್ನು ಆಧರಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಆವರಣಗಳನ್ನು ಪೂರ್ಣವಾಗಿ ಸೋಂಕುನಿವಾರಣೆಗೊಳಿಸಬೇಕು. ಕೈ ತೊಳೆಯಲು ಸಾಬೂನು, ನಿರಂತರ ನೀರಿನ ಸೌಲಭ್ಯವನ್ನು ಖಾತರಿಪಡಿಸಿಕೊಳ್ಳಬೇಕು. ಎಲ್ಲ ಮಕ್ಕಳೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಕ್ಕಳಿಗೆ ತಿಳಿಹೇಳಬೇಕು. ಈ ಎಲ್ಲಾ ಅಂಶಗಳ ಬಗ್ಗೆ ಅಧಿಕಾರಿಗಳು ಮತ್ತು ಎಸ್‌ಡಿಎಂಸಿಗಳು ಮೇಲುಸ್ತುವಾರಿ ಮಾಡಬೇಕು.

ಬೆಳಗಿನ ಬಿಸಿ ಹಾಲು ಮತ್ತು ಮಧ್ಯಾಹ್ನದ ಪೌಷ್ಟಿಕಾಂಶಯುಕ್ತ ಬಿಸಿಯೂಟವನ್ನು ಮಕ್ಕಳಿಗೆ ಒದಗಿಸಬೇಕು. ಇದರೊಂದಿಗೆ, ಕೋವಿಡ್‌ ಎಚ್ಚರಿಕಾ ಸಾಧನಗಳನ್ನು ಉಚಿತವಾಗಿ ಪೂರೈಸಬೇಕು. ಕುಡಿಯಲು ಬಿಸಿನೀರಿನ ವ್ಯವಸ್ಥೆಯಾಗಬೇಕು. ಮಕ್ಕಳಿಗೆ ರೋಗನಿರೋಧಕ ವಿಟಮಿನ್‌ ಮಾತ್ರೆಗಳನ್ನು ನೀಡಬೇಕು. ಅವರಿಗೆ ಆರೋಗ್ಯ ಪರೀಕ್ಷೆಯನ್ನು ನಿಯತವಾಗಿ ಕೈಗೊಳ್ಳಬೇಕು. ರಾಜ್ಯದಾದ್ಯಂತ ಶಿಕ್ಷಕರು ಹಾಗೂ ಮಕ್ಕಳಿಗೆ ಮಾದರಿ ಸೋಂಕು ಪರೀಕ್ಷೆ ನಡೆಸಬೇಕು. ಒಂದುವೇಳೆ ಸೋಂಕು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸೇವೆಯನ್ನು ಒದಗಿಸಬೇಕು.

2020– 21 ಅನ್ನು ಪರೀಕ್ಷಾರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು. ಪರೀಕ್ಷಾರಹಿತ ಕಲಿಕಾ ವರ್ಷದಲ್ಲಿ ಶಾಲಾ ಹಂತದ ದಿನಚರಿ ಮತ್ತು ತರಗತಿವಾರು ಕಲಿಕಾ ದಿನಚರಿಯನ್ನು ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿ ಗೊತ್ತುಪಡಿಸಬೇಕು. ಮೊದಲು 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ– ಹಿರಿಯ ಶಾಲೆಗಳನ್ನು ಪ್ರಾರಂಭಿಸಬೇಕು. ಇವು ಮೊದಲ ಹದಿನೈದು ದಿನ ಅರ್ಧ ದಿವಸ ಕಾರ್ಯ ನಿರ್ವಹಿಸಬೇಕು. ಉಳಿದಂತೆ ಹೆಚ್ಚಿನ ಮಕ್ಕಳಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ, ಶಾಲೆ ತೆರೆಯುವ ತೀರ್ಮಾನವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಈ ಬಗೆಯ ತೀರ್ಮಾನಗಳನ್ನು ಶಾಲೆ ಮತ್ತು ಎಸ್‌ಡಿಎಂಸಿಯ ಸ್ಥಳೀಯ ನಿರ್ಧಾರಕ್ಕಾಗಿ ಬಿಡುವುದು ಹೆಚ್ಚು ಸೂಕ್ತವಾಗುತ್ತದೆ. ಈ ಎಲ್ಲ ಅಂಶಗಳ ಕಾರಣದಿಂದ ಪಾಲಕರು ಮತ್ತು ಮಕ್ಕಳಿಗೆ ಸರ್ಕಾರ ಮನೋಬಲ ತುಂಬಬೇಕು ಮತ್ತು ದುರ್ಬಲ ಸಮುದಾಯಗಳ ಜೊತೆ ನಿಲ್ಲಲು ತೀರ್ಮಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT