ಒತ್ತಡ ಮತ್ತು ಮಾನಸಿಕ ಆರೋಗ್ಯ

7
ವಿವಿಧ ಒತ್ತಡಗಳಿಗೆ ಸಿಲುಕಿ, ಕ್ಷೋಭೆಗೆ ಒಳಗಾಗುವ ಯುವ ಸಮೂಹಕ್ಕೆ ಜೀವನ ಕೌಶಲ ಕಲಿಸುವುದು ಅಗತ್ಯ. ಇಂದು ‘ವಿಶ್ವ ಮಾನಸಿಕ ಆರೋಗ್ಯ ದಿನ’...

ಒತ್ತಡ ಮತ್ತು ಮಾನಸಿಕ ಆರೋಗ್ಯ

Published:
Updated:

ಸುಮಾರು ಇಪ್ಪತ್ತೆರಡು ವರ್ಷ ವಯಸ್ಸಿನ ಸುಮಾ, ಎಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿನಿ. ಓದಿನಲ್ಲಿ ಜಾಣೆ ಎನಿಸಿಕೊಂಡವಳು. ಒಂದು ದಿನ ಬೆಳಿಗ್ಗೆ ನಗುನಗುತ್ತಾ ಕಾಲೇಜಿಗೆ ಹೋದವಳು ಸಾಯಂಕಾಲ ಮನೆಗೆ ಹಿಂದಿರುಗುವಾಗ ಅಳು ಮುಖ. ಬಂದವಳೇ, ಪುಸ್ತಕಗಳ ಚೀಲವನ್ನು ಒಂದೆಡೆ ಎಸೆದು ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡಳು.

ಜೋರಾಗಿ ಅಳಲು ಪ್ರಾರಂಭಿಸಿದಳು. ತಾಯಿ ರಮಾ, ಬಾಗಿಲು ತೆಗೆದು ‘ಏನಾಯಿತು’ ಎಂದು ಕೇಳಿದರೆ, ‘ನನಗೆ ಜೀವವೇ ಬೇಡಮ್ಮಾ’ ಎಂದು ಅಳುತ್ತಾ ಉತ್ತರಿಸಿದಳು. ಯಾಕೆಂದರೆ, ಅಂದು ನಡೆದಿದ್ದ ಕ್ಯಾಂಪಸ್ ಆಯ್ಕೆಯಲ್ಲಿ ಆಕೆಯ ಗೆಳತಿಯರೆಲ್ಲರೂ ಆಯ್ಕೆಯಾಗಿದ್ದರು. ತಾನು ಅವರೆಲ್ಲರಿಗಿಂತ ಬುದ್ಧಿವಂತೆಯಾಗಿದ್ದರೂ ತನ್ನನ್ನು ಆಯ್ಕೆ ಮಾಡಲಿಲ್ಲ ಎಂಬುದು ಆಕೆಯ ದುಃಖಕ್ಕೆ ಕಾರಣವಾಗಿತ್ತು. ತಾಯಿಯ
ಸಾಂತ್ವನದ ಮಾತುಗಳು ಸುಮಾಳ ದುಃಖವನ್ನು ಕಡಿಮೆ ಮಾಡಲಿಲ್ಲ. ಮಾರನೇ ದಿನದಿಂದ ಕಾಲೇಜಿಗೆ ಹೋಗುವುದನ್ನೇ ಬಿಟ್ಟಳು. ಖಿನ್ನತೆಗೊಳಗಾಗಿ, ಅದು ತೀವ್ರವಾದಾಗ ಸುಮಾಳನ್ನು ಮನೋವೈದ್ಯರ ಹತ್ತಿರ ಕರೆದೊಯ್ಯಬೇಕಾಯಿತು.

ಹದಿನೇಳು ವರ್ಷದ ಕಿಶನ್ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿ. ಹಾಸ್ಟೆಲ್‍ನಲ್ಲಿ ಇದ್ದುಕೊಂಡು ಓದುತ್ತಿದ್ದವನು, ಒಂದು ದಿನ ಏಕಾಏಕಿ ಮನೆಗೆ ಬಂದ. ‘ನಾನು ಹಾಸ್ಟೆಲ್‍ನಲ್ಲಿರಲಾರೆ, ಕಾಲೇಜಿಗೂ ಹೋಗಲಾರೆ’ ಎಂದು ಹಟ ಹಿಡಿದ. ಕಾರಣ ಕೇಳಿದರೆ, ‘ಗೆಳೆಯನೊಂ
ದಿಗೆ ಯಾವುದೋ ವಿಷಯಕ್ಕಾಗಿ ಚರ್ಚೆ ಆಯಿತು.

ಅವನು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ವಾಟ್ಸ್ ಆ್ಯಪ್‌ನಲ್ಲಿ ಹಾಕಿದ್ದಾನೆ. ಅದನ್ನು ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ಎಲ್ಲರೂ ಓದಿದ್ದು, ನನಗೆ ಅವಮಾನವಾಗಿದೆ’ ಎಂದು ವಿವರಿಸಿದ. ಇದು ಯಾವ ಹಂತಕ್ಕೆ ತಲುಪಿತೆಂದರೆ ಕಿಶನ್, ಕ್ರಮೇಣ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಹಗಲಿಡೀ ಮೊಬೈಲ್ ಫೋನಿನಲ್ಲಿ ಮೆಸೇಜ್ ಮಾಡುವುದನ್ನೇ ಕೆಲಸವಾಗಿಸಿಕೊಂಡ. ಅದೊಂದು ವ್ಯಸನವಾಗಿ ಕಿಶನ್‍ನನ್ನು ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗಬೇಕಾಯಿತು.

ಅಧ್ಯಯನಗಳು: ಯುವಕರ ಮಾನಸಿಕ ಆರೋಗ್ಯವನ್ನು ಕುರಿತು ಹಲವು ಅಧ್ಯಯನಗಳು ನಡೆದಿವೆ. ಸುಮಾರು ಮೂವತ್ತೇಳು ಕೋಟಿ ಯುವಕರಿರುವ ನಮ್ಮ ದೇಶದಲ್ಲಿ ಶೇ 12 ರಿಂದ 16ರಷ್ಟು ಯುವಕರು ಒಂದಲ್ಲಾ ಒಂದು ಬಗೆಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಂಬುದು ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹರೆಯದವರು ಮತ್ತು ತರುಣರನ್ನು ಸೇರಿಸಿ, 15ರಿಂದ 24 ವಯಸ್ಸಿನೊಳಗಿನವರನ್ನು ‘ಯುವಕರು’ ಎಂದು ಪರಿಗಣಿಸಿದೆ. ಇವರು ಎದುರಿಸುವ ಮಾನಸಿಕ ಒತ್ತಡ, ಇವರ ಮುಂದಿರುವ ಸವಾಲುಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯು ಇವರನ್ನು ಒಂದೇ ಗುಂಪಿಗೆ ಸೇರಿಸಿದೆ. ಈ ವಯಸ್ಸಿನಲ್ಲಿ ಮನಸ್ಸು ದುರ್ಬಲವಾಗಿರುತ್ತದೆ. ಅಲ್ಲದೆ ಈ ವಯಸ್ಸಿನಲ್ಲೇ ಹಲವು ಸವಾಲುಗಳನ್ನು ಎದುರಿಸಬೇಕಾದ ಯುವಕರು ಸಹಜವಾಗಿಯೇ ಒತ್ತಡಕ್ಕೊಳಗಾಗುತ್ತಾರೆ. ಎಷ್ಟೋ ಯುವಕರು ಒತ್ತಡ ಎದುರಿಸಲಾಗದೇ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ.

ಏಕೆ ಲಕ್ಷ್ಯ ಕೊಡಬೇಕು?: ಈ ವಯಸ್ಸಿನಲ್ಲಿ ದೈಹಿಕವಾಗಿ ಯುವಕರಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ದೇಹದ ಗಾತ್ರ, ರೂಪ, ಶರೀರದ ಉಬ್ಬುತಗ್ಗುಗಳು, ಅವರವರ ಲಿಂಗಾನುಸಾರವಾಗಿ ರೂಪುಗೊಳ್ಳುತ್ತವೆ. ಮನೋ ವಿಕಾಸದಿಂದ ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಪುಟಿದೇಳುತ್ತವೆ.

ಲೈಂಗಿಕ ಅಂಗಾಂಗಳು ವಿಕಾಸಗೊಂಡು ಯುವಕರ ಭಾವನೆಗಳನ್ನು ಅಲ್ಲೋಲಕಲ್ಲೋಲ ಮಾಡುತ್ತವೆ. ಸಾಮಾಜಿಕವಾಗಿಯೂ ಕುಟುಂಬವನ್ನು ತೊರೆದು ಹೊರ ಹೋಗಬೇಕಾದ ಒತ್ತಡ. ಹೊಸ ಹೊಸ ಸ್ನೇಹಿತರ ಜೊತೆಗೂಡಿ ಹೊಂದಿಕೊಂಡು ಹೋಗಬೇಕಾದ ಸಂದರ್ಭ. ಇವೆಲ್ಲ ಮನಸ್ಸಿನಲ್ಲಿ ಒತ್ತಡವನ್ನು ಉಂಟುಮಾಡುತ್ತವೆ. ಇವುಗಳೊಂದಿಗೆ ಕಲಿಕೆ, ಪರೀಕ್ಷೆ, ಪಾಲಕರು– ಸಂಬಂಧಿಗಳ ನಿರೀಕ್ಷೆಗಳು... ಹೀಗೆ ಯುವಕರ ಮನಸ್ಸನ್ನು ಸದಾ ಒತ್ತಡದ ಸುಳಿಯಲ್ಲಿ ಸಿಲುಕಿಸುತ್ತವೆ.

ಇವುಗಳ ಜೊತೆಗೆ ಇಂಟರ್‌ನೆಟ್, ಫೇಸ್‍ಬುಕ್, ವಾಟ್ಸ್‌ ಆ್ಯಪ್‌ ಮುಂತಾದ ಸಾಮೂಹಿಕ ಮಾಧ್ಯಮಗಳು ತಮ್ಮದೇ ಆದ ರೀತಿಯಲ್ಲಿ ಒತ್ತಡಗಳನ್ನು ಉಂಟು ಮಾಡುತ್ತವೆ. ಇವುಗಳ ಸ್ವರೂಪ ಬೇರೆ ಬೇರೆ ಆಗಿರಬಹುದು. ಆದರೆ ಮನಸ್ಸಿನ ಮೇಲೆ ಉಂಟುಮಾ
ಡುವ ಒತ್ತಡ, ಸೃಷ್ಟಿಸುವ ಆತಂಕಗಳು ಯುವಕರನ್ನು ಖಿನ್ನತೆಯತ್ತ ನೂಕಬಲ್ಲವು.

ಮೇಲೆ ತಿಳಿಸಿದ ವಿವಿಧ ಕಾರಣಗಳಿಂದಾಗಿ ನಮ್ಮಲ್ಲಿ ಶೇ 18ರಷ್ಟು ಯುವಕರು ಒಂದಲ್ಲ ಒಂದು ಮನೋಕ್ಷೋಭೆಯಿಂದ ಬಳಲುವಂತಾಗಿದೆ ಎಂದು ವರದಿಗಳು ಹೇಳುತ್ತವೆ. ಖಿನ್ನತೆ ಇವುಗಳಲ್ಲಿ ಮುಖ್ಯವಾದದ್ದು. ಖಿನ್ನತೆ ಆತ್ಮಹತ್ಯೆಗೂ ಪ್ರೇರಣೆ ನೀಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ನಮ್ಮ ಯುವ ಸಮುದಾಯದಲ್ಲೂ ಈಚೆಗೆ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಮರೆಯುವಂತಿಲ್ಲ. ಕೆಲವರು ಒತ್ತಡ ಶಮನಕ್ಕಾಗಿ ಮಾದಕ ವ್ಯಸನಿಗಳಾಗುತ್ತಾರೆ. ಇಂಥವರಲ್ಲಿ ಕೆಲವರು ಸಮಾಜಕ್ಕೆ ಕಂಟಕವಾಗಿಯೂ ರೂಪುಗೊಳ್ಳುತ್ತಾರೆ.

ಪರಿಹಾರ: ಯುವ ಸಮುದಾಯವನ್ನು ಹೆಜ್ಜೆ ಹೆಜ್ಜೆಗೆ ಕಾಡುವ ಒತ್ತಡವನ್ನು ನಿವಾರಿಸಲು ಅವರ ಮನಸ್ಸನ್ನು ಸದೃಢಗೊಳಿಸುವುದು ಅಗತ್ಯ.

ಸಮಗ್ರವಾಗಿ ಚಿಂತಿಸುವುದು, ಸೃಜನಶೀಲತೆ ಬೆಳೆಸುವುದು, ಸಮಸ್ಯೆಗಳನ್ನು ಎದುರಿಸುವ ಧೈರ್ಯ ತುಂಬುವುದು, ಭಾವನೆಗಳ ಮೇಲೆ ಹಿಡಿತ ಸಾಧಿಸುವುದನ್ನು ಕಲಿಸುವುದು, ಒತ್ತಡ ಬಂದಾಗ ಅದನ್ನು ವಿಶ್ಲೇಷಿಸಿ ಸಮರ್ಥವಾಗಿ ಬಗೆಹರಿಸುವುದು, ಸಂಬಂಧಗಳ ನಿರ್ವಹಣೆ ಮುಂತಾದ ವಿಚಾರಗಳ ಬಗ್ಗೆ ಹದಿಹರೆಯದವರಿಗೆ ತರಬೇತಿ ನೀಡಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಸುವತ್ತ ಗಮನ ಕೊಟ್ಟರೆ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಯುವಕರು ಸಿದ್ಧರಾಗುತ್ತಾರೆ.

ಇವೆಲ್ಲವನ್ನೂ ಮನಗಂಡ ತಜ್ಞರು ಪ್ರತೀ ವರ್ಷ ಅಕ್ಟೋಬರ್ ಹತ್ತನ್ನು ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನಾಗಿ ಆಚರಿಸಲು ಮುಂದಾದರು. ‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ ಆರೋಗ್ಯ’ ಎಂಬುದು 2018ನೇ ಸಾಲಿನ ಘೋಷವಾಕ್ಯ.

ಯುವ ಮತ್ತು ಆರೋಗ್ಯಕರ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ, ಪೋಷಕರು, ಶಿಕ್ಷಕರು, ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳು ನಿರಂತರವಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಯುವ ಸಮುದಾಯವನ್ನು ಒತ್ತಡಗಳಿಂದ ಪಾರು ಮಾಡಿ, ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !