ವಿದ್ಯಾರ್ಥಿ ಸಂಘಗಳ ಚುನಾವಣಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಉನ್ನತ ಶಿಕ್ಷಣಮತ್ತು ವೈದ್ಯಕೀಯ ಶಿಕ್ಷಣ ಸಚಿವರು ವಿವಿಧ ಪಕ್ಷಗಳ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿ ಘಟಕಗಳು ಮತ್ತು ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಚುನಾವಣೆ ನಡೆಸುವಂತೆ ವಿದ್ಯಾರ್ಥಿ ಸಂಘಗಳು ಒತ್ತಾಯಿಸಿರುವುದಾಗಿ ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು 1980ರ ದಶಕದ ಕೊನೆಯಲ್ಲಿ ನಿಷೇಧಿಸಲಾಯಿತು. ವಿದ್ಯಾರ್ಥಿ ಸಂಘಗಳ ಚುನಾವಣಾ ಕಣದಲ್ಲಿ ಹಣದ ಹರಿದಾಟ, ವಿದ್ಯಾರ್ಥಿ ಗುಂಪುಗಳ ಮಧ್ಯೆ ಹೊಡೆದಾಟ, ಸಾವು, ಮುಂತಾದ ಅಹಿತಕರ ಘಟನೆಗಳು ಸಂಭವಿಸಿದ್ದರ ಹಿನ್ನೆಲೆಯಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸಲಾಯಿತು. ಈ ನಾಲ್ಕು ದಶಕಗಳಲ್ಲಿ ರಾಜಕಾರಣ ಮತ್ತು ಶಿಕ್ಷಣ ಕ್ಷೇತ್ರ ಎರಡರಲ್ಲೂ ಸಾಕಷ್ಟು ನೀರು ಹರಿದುಹೋಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣಾ ವಾತಾವರಣ ಇಲ್ಲದ ಪರಿಣಾಮ ವಿದ್ಯಾರ್ಥಿ ಸಮೂಹದಲ್ಲಿ ರಾಜಕೀಯ ಪ್ರಜ್ಞೆ ಕುಂಠಿತಗೊಂಡಿದೆ. ಒಂದು ಕಾಲದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಭವಿಷ್ಯದ ರಾಜಕೀಯ ನಾಯಕರನ್ನು ರೂಪಿಸಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಹಣಬಲ, ತೋಳ್ಬಲ ಮತ್ತುಜಾತಿಬಲದಿಂದ ಕಲುಷಿತಗೊಂಡಿರುವ ರಾಜಕಾರಣವನ್ನು ಶುದ್ಧಗೊಳಿಸುವುದು ತುರ್ತು ಅಗತ್ಯವಾಗಿದೆ. ರಾಜಕಾರಣ ಈಗ ಸಮಾಜ ಸೇವೆಯಾಗಿ ಉಳಿದಿಲ್ಲ. ಅದು ಬಂಡವಾಳ ಹೂಡಿ ಲಾಭಗಳಿಸುವ ಕ್ಷೇತ್ರ ಎನ್ನುವ ಭಾವನೆ ಬಲವಾಗಿದೆ. ಆರ್ಥಿಕವಾಗಿ ಬಲಾಢ್ಯರಿರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸುವಂಥ ವಾತಾವರಣ ಸೃಷ್ಟಿಯಾಗಿದೆ. ರಾಜಕಾರಣಿಗಳ ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ಅರಸೊತ್ತಿಗೆ ಯಂತೆ ಭಾಸವಾಗುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ವಿದ್ಯಾವಂತರು, ವೈಚಾರಿಕ ಪ್ರಜ್ಞೆ ಉಳ್ಳವರು, ಸಾಮಾಜಿಕ ಕಾಳಜಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣವನ್ನು ಪ್ರವೇಶಿಸಿ ಕಲುಷಿತಗೊಂಡಿರುವ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಬೇಕಾಗಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪುನರಾರಂಭಿಸುತ್ತಿರುವ ಹೊತ್ತಿನಲ್ಲಿ, ವಿದ್ಯಾರ್ಥಿ ಸಮೂಹ ಈ ಹೊಸ ಬೆಳವಣಿಗೆಗೆ ಹೇಗೆ ಸ್ಪಂದಿಸಬಲ್ಲದು ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಕಳೆದ ಮೂರೂವರೆ ದಶಕಗಳಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣಾ ವಾತಾವರಣವಿಲ್ಲ. ಎಂಬತ್ತರ ದಶಕದ ಶೈಕ್ಷಣಿಕ ಪರಿಸರಕ್ಕೂ ಸದ್ಯದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗ ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದಂತಹ ಒಟ್ಟಾರೆ ಮಾನವಿಕ ಜ್ಞಾನಶಿಸ್ತುಗಳನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಇಂದಿನ ವಿದ್ಯಾರ್ಥಿಗಳಲ್ಲಿ ರಾಜಕಾರಣದ ಕುರಿತು ಆಸಕ್ತಿಇಲ್ಲ. ವೈದ್ಯರು ಇಲ್ಲವೇ ಎಂಜಿನಿಯರರಾಗಿ ಕಂಫರ್ಟ್ ಜೋನ್ನಲ್ಲಿ ಬದುಕಲು ಇಚ್ಛಿಸುವ ವಿದ್ಯಾರ್ಥಿಗಳು ಸಮಾಜದಲ್ಲಿನ ಆಗುಹೋಗುಗಳಿಗೆ ಕಣ್ಣಿದ್ದೂ ಕುರುಡರಂತಿದ್ದಾರೆ.

ಮಾನವಿಕ ವಿಷಯಗಳಿಗಿಂತ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಅರಿವು ವಿದ್ಯಾರ್ಥಿಗಳಲ್ಲಿ ಇಲ್ಲವಾಗುತ್ತಿದೆ. ಈ ಕ್ಷೇತ್ರಗಳ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿಜ್ಞಾನ, ವಾಣಿಜ್ಯ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳಲ್ಲಿ ಸಂವಿಧಾನವನ್ನು ಅಧ್ಯಯನದ ವಿಷಯವಾಗಿಸಿ ಪಠ್ಯಕ್ರಮ ರೂಪಿಸಲಾಗಿದೆ. ಆದರೆ, ವೃತ್ತಿಪರ ಕೋರ್ಸ್ಗಳಲ್ಲಿ ಸಂವಿಧಾನ ವಿಷಯದ ಬೋಧನೆ ಮತ್ತು ಅಧ್ಯಯನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ವಿದ್ಯಾರ್ಥಿಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪುನರಾರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಈ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಚುನಾವಣೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಬಾರದು. ಚುನಾವಣೆಯನ್ನು ಕ್ರೀಡೆ ಮತ್ತುಓದಿನಂತೆ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಪರಿಗಣಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದು. ಚುನಾವಣೆಯು ಧನಬಲ, ತೋಳ್ಬಲ ಮತ್ತು ಜಾತಿಬಲದ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ಪ್ರಕ್ರಿಯೆಯಿಂದ ಭವಿಷ್ಯದ ರಾಜಕೀಯ ನೇತಾರರು ರೂಪುಗೊಳ್ಳಬೇಕೇ ವಿನಾ ರಾಜಕೀಯ ಪಕ್ಷಗಳ ಅನುಯಾಯಿಗಳಲ್ಲ.

ಸಮಾಜದ ಸ್ವಾಸ್ಥ್ಯಕ್ಕಾಗಿ ರಾಜಕಾರಣದಲ್ಲಿ ಬೌದ್ಧಿಕನಾಯಕರ ಅಗತ್ಯವಿದೆ. ವಾಚಾಳಿತನವೇ ಬಂಡವಾಳವಾಗಿರುವ ಇಂದಿನ ರಾಜಕಾರಣದಲ್ಲಿ ಬೌದ್ಧಿಕಪ್ರಜ್ಞೆ ಗೋಚರಿಸುತ್ತಿಲ್ಲ. ವಿದ್ಯಾರ್ಥಿ ಚುನಾವಣೆಯ ಮೂಲಕವಾದರೂ ರಾಜಕಾರಣಕ್ಕೆ ಬೌದ್ಧಿಕ ನಾಯಕರು ದಕ್ಕುವಂತಾಗಲಿ.

ನೊಬೆಲ್ ಬಹುಮಾನ ಸ್ವೀಕರಿಸುವಾಗ ಕವಿ ಬ್ರಾಡ್ಸ್ಕೀ ಹೇಳಿದ್ದು ಹೀಗೆ: ‘ನಾವು ನಮ್ಮ ನಾಯಕರನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ ದುಃಖವಿರುತ್ತಿತ್ತು’. ಈ ಮಾತು ರಾಜಕಾರಣದಲ್ಲಿರುವ ಬೌದ್ಧಿಕ ಕೊರತೆಯನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ರಾಜಕಾರಣಕ್ಕೆ ಬೌದ್ಧಿಕದೀಕ್ಷೆ ನೀಡಲು ವಿದ್ಯಾರ್ಥಿ ಚುನಾವಣೆಯನ್ನು ಬಳಸಿಕೊಳ್ಳಬಹುದು. ಆದರೆ, ಈ ಚುನಾವಣಾ ಪ್ರಕ್ರಿಯೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.