ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ತತ್ವಪದ: ಸಹೃದಯದ ಸುದೀಪ್ತ ಸಂಬಂಧ

ಈ ಲೋಕಮೀಮಾಂಸೆಯ ಸಮಗ್ರ ಅಧ್ಯಯನಕ್ಕೆ ಪ್ರಾಧಿಕಾರ ರಚನೆಯಾಗಬೇಕಿದೆ
Last Updated 16 ಫೆಬ್ರುವರಿ 2022, 21:17 IST
ಅಕ್ಷರ ಗಾತ್ರ

ಕನ್ನಡ ಸಂಸ್ಕೃತಿಯ ಲೌಕಿಕ ಮತ್ತು ಅಲೌಕಿಕ ಕಸುವನ್ನು ಮೆರೆದುದು ತತ್ವಪದ ಸಾಹಿತ್ಯ. ಪ್ರಪಂಚ ಮತ್ತು ಪಾರಮಾರ್ಥ, ಇಹ ಪರ ಗೆಲ್ಲುವ ‘ಅಚಲ’ ಶಕ್ತಿ ತತ್ವಪದಗಳದ್ದು. ಇಂತಹ ತತ್ವಪದ ಸಾಹಿತ್ಯಕ್ಕೆ ಚಾರಿತ್ರಿಕವಾಗಿ ದಕ್ಕಲೇಬೇಕಿದ್ದ ಪ್ರಧಾನ ಸಾಂಸ್ಕೃತಿಕ ಧಾರೆಯ ಸ್ಥಾನಮಾನ ದಕ್ಕಿಲ್ಲ. ಅದಕ್ಕೆ ಬದಲು ತತ್ವಪದ ಸಾಹಿತ್ಯ ಬಾಹುಳ್ಯದ ಕಾಲಮಾನವನ್ನು ಗಂಭೀರವಾಗಿ ಗುರುತಿಸಲಾಗದೇ ಅದೊಂದು ‘ಕತ್ತಲೆಯುಗ’ ಎಂದು ಬಿಂಬಿಸುವ ಬೀಸುನಿರ್ಲಕ್ಷ್ಯ ತೋರಿದುದು ಚಾರಿತ್ರಿಕ ದುರಂತವೇ ಸೈ! ಹೀಗಂತಲೇ ಇವತ್ತಿಗೂ ಅಮಾವಾಸ್ಯೆಯ ಕತ್ತಲು, ಸತ್ತವರ ಮನೆಯ ಹೆಣದ ಸಾನ್ನಿಧ್ಯದಲ್ಲಿ ಏಕತಾರಿ ನಾದಗಳ ನಡುವೆ ಅಹೋರಾತ್ರಿ ಕೇಳಿಬರುವ ಭಜನೆ ಪದಗಳವು.

ಕಾವ್ಯಮೀಮಾಂಸಕರ ವಿದ್ವತ್‌ಲೋಕ ಮರೆತರೇ ನಂತೆ, ಜನಸಾಮಾನ್ಯರ ಮಾನಸಲೋಕ ಶತಮಾನಗಳ ಕಾಲ ತತ್ವಪದಗಳನ್ನು ತಮ್ಮ ಜೀವಹೃದಯ, ನಾದ ನಾಭಿಗಳ ತುಂಬಾ ತುಂಬಿಸಿಕೊಂಡು, ಹರಿಗಡಿಯದೆ ಹರಿಸುತ್ತಲೇ ಬಂದಿದೆ. ಅದೊಂದು ಸಹೃದಯದ ಸುದೀಪ್ತ ಸಂಬಂಧ. ತನ್ಮೂಲಕ ನೆಲದ ಪರಿಮಳ ಬದುಕಿ ತೋರಿದೆ. ಅಂತೆಯೇ ಲೋಕಮೀಮಾಂಸೆಯು ಪಂಡಿತ ಮೀಮಾಂಸೆಗಿಂತ ಹಿರಿದಾದುದು. ಅಷ್ಟುಮಾತ್ರವಲ್ಲ ಅದಕ್ಕೆ ವರ್ತಮಾನದಲ್ಲೂ ಪ್ರಜಾಸತ್ತಾತ್ಮಕ ಹಿರಿಮೆ ಗರಿಮೆಯ ಪಟ್ಟ ಕಟ್ಟಿಟ್ಟ ರೊಟ್ಟಿಬುತ್ತಿಯಂತಿದೆ.

ಹಾಡುಗಬ್ಬದ ಮೌಖಿಕ ಸಂಸ್ಕೃತಿಯ ತರಹೇವಾರಿ ಭಜನೆಗಳ ಮೂಲಕ ತತ್ವಪದಗಳನ್ನು ಜನಪದರು ಕಾಪಿಟ್ಟುಕೊಂಡು ಬಂದವರು. ಪ್ರಾಯಶಃ ಈ ಕಾರಣಕ್ಕೆಂದೇ ತತ್ವಪದ ಸಾಹಿತ್ಯವು ಜನಪದ ಸಾಹಿತ್ಯ ಪ್ರಕಾರಕ್ಕೆ ಸೇರಿರಬಹುದೆಂಬ ಕೆಲವು ಹಳೆಯ ಜಿಜ್ಞಾಸುಗಳ ಅನುಮಾನಗಳು. ಇವತ್ತಿಗೂ ಆಕಾಶವಾಣಿ, ದೂರದರ್ಶನದಲ್ಲಿ ಜನಪದ ಸಂಗೀತ ಕಾರ್ಯಕ್ರಮದ ಹೆಸರಲ್ಲಿ ತತ್ವಪದಗಳು ಪ್ರಸಾರಗೊಳ್ಳು ವುದನ್ನು ಗಮನಿಸಬಹುದು. ಅದೇನೇ ಇರಲಿ ತತ್ವಪದ ಸಂಸ್ಕೃತಿಯು ಸಾಹಿತ್ಯ ಚರಿತ್ರೆಕಾರರ ಅವಜ್ಞೆಗೊಳಗಾದುದು ಸುಳ್ಳಲ್ಲ. ಶಾಸ್ತ್ರೀಯ ಸಂಗೀತದ ಎಲೈಟ್ ಮಂದಿಯ ವೀಣೆ, ತಂಬೂರಿ ತಂತಿನಾದಗಳ ಮೇಲ್ಪಂಕ್ತಿಯ ಭರಾಟೆಯಲ್ಲಿ ತತ್ವಪದ ಭಜನೆಕಾರರ ಕರಿ ಕುಂಬಳಕಾಯಿಯ ಏಕತಾರಿ ತಂತಿನಾದಗಳು ಮುನ್ನೆಲೆಗೆ ಬಾರದಂತಾಗಿ ಬಿಟ್ಟವು.

ಬಸವಪ್ರಣೀತ ವಚನ ಚಳವಳಿ ಮತ್ತು ಹರಿದಾಸ ಭಕ್ತಿ ಜಾಗರಣೆಯ ತರುವಾಯ ಸಾಮಾಜಿಕ, ಧಾರ್ಮಿಕ ಮತ್ತು ಅನುಭಾವದ ಅನುಸಂಧಾನದಂತೆ ಗುರುಮಾರ್ಗ ಪಂಥ ಪರಂಪರೆಯ ಜನಸಂಸ್ಕೃತಿ ರೂಪಿಸಿದ್ದು ತತ್ವಪದ ಸಾಹಿತ್ಯ ಚಳವಳಿ. ಬ್ರಾಹ್ಮಣ, ಲಿಂಗಾಯತ, ಮುಸಲ್ಮಾನ, ದಲಿತರಾದಿಯಾಗಿ ಸಮಾಜದ ಬಹುಪಾಲು ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ್ದನ್ನು ಮಾಹಿತಿಯೊಂದು ಶ್ರುತಪಡಿಸುತ್ತದೆ.

ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ಅಪಸವ್ಯ ಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ ಪದಕಟ್ಟಿ ಹಾಡಿದವರು. ಅಂತೆಯೇ ಅವರು ಭವರೋಗ ವೈದ್ಯರು. ನಮ್ಮ‌ ಬಹುತೇಕ ವೀರಶೈವ ಮಠಗಳು ವಚನ ಸಾಹಿತ್ಯಕ್ಕೆ ತೋರಿದ ಅದಮ್ಯ ಪ್ರೀತಿಯನ್ನು ತತ್ವಪದ ಸಾಹಿತ್ಯಕ್ಕೆ ತೋರಲಿಲ್ಲ. ಅದರಲ್ಲೂ ಕೆಲವು ಮಠಗಳು ವೀರಶೈವ ಪುಣ್ಯಪುರುಷರ ತತ್ವಪದಗಳನ್ನು ಹುಡುಕಿ ಪ್ರಕಟಿಸುವಲ್ಲಿ ಆಸಕ್ತಿ ತೋರಿದವು.

ಇನ್ನುಳಿದ ಹತ್ತಾರು ಹಿಂದುಳಿದ ಜಾತಿಯ ನೂರಾರು ಮಹಿಳೆ ಮತ್ತು ಪುರುಷ ತತ್ವಪದಕಾರರ ಸಾವಿರಾರು ತತ್ವಪದಗಳು ಸಾಮಾನ್ಯ ಜನರ ಸಿರಿಕಂಠದಲ್ಲೇ ಉಳಿದುಕೊಂಡವು. ವಿಶ್ವವಿದ್ಯಾಲಯಗಳ ಕೆಲವು ಪ್ರಾಧ್ಯಾಪಕರ ಪಿಎಚ್‌.ಡಿ ಮತ್ತು ವಿದ್ವಾಂಸರ ಜ್ಞಾನಾರ್ಜನೆಯ ಹಸಿವು ತೀರಿಕೆಯ ಪುಸ್ತಕ ಸಂಗ್ರಹಗಳಾಗಿ ಪದಗಳು ಪ್ರಕಟಗೊಂಡವು. ಮತ್ತೆ ಕೆಲವು ತತ್ವಪದ ಮತ್ತು ಸೂಫಿ ಸಂತಲೋಕದ ಮೇಲೆ ಒಳಬೆಳಕು ಚೆಲ್ಲಿದ ಪುಸ್ತಕಗಳು ಬಂದಿವೆ. ಅದನ್ನು ಹೊರತುಪಡಿಸಿದರೆ ಸಂಸ್ಕೃತಿ ಇಲಾಖೆಯ ಕನಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ತತ್ವಪದಗಳ ಸಂಗ್ರಹ ಮಾಡಿದೆ. ಅಜಮಾಸು ಮೂವ ತ್ತೆರಡು ಪುಸ್ತಕಗಳನ್ನು ಪ್ರಕಟಿಸಿದೆ. ಆ ಎಲ್ಲ ಪುಸ್ತಕಗಳು ಮಾಲಿಕೆ ರೂಪ ಧರಿಸಿದ್ದು ಸಹಜವಾಗಿ ಮಾಲಿಕೆ ಸಂಪಾದಕ ಮಂಡಳಿಯ ಸಾಮಾನ್ಯ ಪ್ರಸ್ತಾವನೆಯ ಏಕರೂಪದ ಸಂಪಾದಕೀಯಗಳು ಪ್ರಕಟಗೊಂಡಿವೆ. ಇದು ಒಂದು ಹಂತದ ಆರಂಭ ಮಾತ್ರ.

ಆದರೆ ತತ್ವಪದಗಳ ನಿಗೂಢ ಅಸ್ಮಿತೆ ಕುರಿತು, ತತ್ವಪದಕಾರರ ಬದುಕು, ಬರಹ, ಸಿದ್ಧಿ ಸಾಧನೆಯ ಸಂವೇದನೆಗಳ ಕುರಿತು ಆಮೂಲಾಗ್ರವಾಗಿ ತಿಳಿಯುವ ಕೆಲಸ ಆಗಬೇಕು. ನಾನಾ ಜ್ಞಾನಸಾರ ಶಿಸ್ತು ಮತ್ತು ಅವುಗಳ ಒಳಹೊಳಹುಗಳ ಆಳ ಅಗಲದ ಸಂಶೋಧನೆ ಹಾಗೂ ಸಮಗ್ರ ಅಧ್ಯಯನ ಆಗಲೇಬೇಕಿದೆ. ಬಹುಳಪ್ರಜ್ಞೆಯ ಜೀವಧಾತುವುಳ್ಳ ತತ್ವಪದಗಳು ಬಹುಮುಖಿ ಭಾರತದ ವರ್ತಮಾನಕ್ಕೆ ಅತ್ಯಗತ್ಯವಾಗಿವೆ. ಶಿಶುನಾಳ ಶರೀಫನ ಖಾದರಲಿಂಗ ಪ್ರಜ್ಞೆ ಹಾಗೂ ಕಡಕೋಳ ಮಡಿವಾಳಪ್ಪನ ಫಕೀರ ಪ್ರಜ್ಞೆ ಇಂದಿನ ತುರ್ತುಅಗತ್ಯ. ಕೋಮು ಸೌಹಾರ್ದ, ಪರಿಣಾಮಕಾರಿ ಭಾವೈಕ್ಯ ಬಿತ್ತಿ ಬೆಳೆಯುವ ಬೀಜಪೈರಿನ ಜವಾರಿಗುಣ ಅವಕ್ಕಿದೆ. ಅಂತೆಯೇ ಕನ್ನಡದ ಈ ತತ್ವಪದಗಳು ಭಾರತದ ಎಲ್ಲ ಭಾಷೆಗಳಿಗೂ ತರ್ಜುಮೆಗೊಂಡು ಆಯಾ ಭಾಷೆಯಲ್ಲಿ ವಾಚಿಕೆಗಳಾಗುವುದು ವಾಜಿಮಿ.

ಕನ್ನಡದ ಸಮಗ್ರ ತತ್ವಪದಗಳು ಹಾಗೂ ತತ್ವಪದಕಾರರ ಕುರಿತು ಆಳದ ಸಂಶೋಧನೆ, ಸಮಗ್ರ ಅಧ್ಯ ಯನದ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಸೂಫಿ ಮತ್ತು ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಪ್ರಸ್ತುತ ಮುಂಗಡಪತ್ರದಲ್ಲಿ ಪ್ರಾಧಿಕಾರ ಸ್ಥಾಪನೆಯ ವಿಚಾರ ಮಂಡನೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT