ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗ‌ತ| ಆತ್ಮಹತ್ಯೆ ಯತ್ನ: ಬದುಕುಳಿದಾಗ...

ಬದುಕಿನ ಒತ್ತಡಗಳನ್ನು ಎದುರಿಸಲು ಮನೋವೈದ್ಯಕೀಯ ಸಲಹೆಯನ್ನು ‍ಪಡೆಯುವುದು ಅಗತ್ಯ. ಖಿನ್ನತೆ, ಉನ್ಮಾದವನ್ನು ಚಿಕಿತ್ಸೆಯಿಂದ ನಿಯಂತ್ರಿಸಬಹುದು
Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಇಡೀ ಸಮಾಜದಲ್ಲಿ ಹಲವು ರೀತಿಗಳಲ್ಲಿ ದುಃಖವನ್ನು ಹರಡುವ ಆತ್ಮಹತ್ಯೆಗೆ ಪರಿಹಾರೋಪಾಯಗಳನ್ನು ಜಗತ್ತು ಹುಡುಕುತ್ತಲೇ ಇದೆ. 2021-23ರ ಮೂರು ವರ್ಷಗಳ ಧ್ಯೇಯವಾಗಿ ವಿಶ್ವ ಆತ್ಮಹತ್ಯಾ ತಡೆ ದಿನವು (ಸೆ. 10) ಕ್ರಿಯೆ ಮೂಲಕ ಭರವಸೆ ಮೂಡಿಸುವ ಉದ್ದೇಶವನ್ನು ಇರಿಸಿಕೊಂಡಿದೆ.

ಆತ್ಮಹತ್ಯೆಗಳನ್ನು ತಡೆಯುವ ವಿಧಾನಗಳನ್ನು ‘ಪ್ರಥಮ ಚಿಕಿತ್ಸೆ’ ರೀತಿಯಲ್ಲಿ ಪ್ರತಿಯೊಬ್ಬರೂ ಕಲಿಯಬೇಕು ಎಂದು ಅಧ್ಯಯನಗಳು ಶಿಫಾರಸು ಮಾಡಿವೆ. ಇದನ್ನು ಅನುಷ್ಠಾನಕ್ಕೆ ತರುವುದು ಸುಲಭವಲ್ಲ. ಏಕೆಂದರೆ ಆತ್ಮಹತ್ಯೆಯ ಬಗೆಗಿನ ತಪ್ಪು ನಂಬಿಕೆಗಳು, ಉಡಾಫೆಯ ಧೋರಣೆ ನಮ್ಮನ್ನು ಹಿಂದಕ್ಕೆ ಎಳೆಯುತ್ತವೆ. ಇಂತಹ ಸಮಯದಲ್ಲಿಯೇ ಸಮಾಜದಲ್ಲಿ ಆತ್ಮಹತ್ಯೆಯನ್ನು ಇಲ್ಲವಾಗಿಸಲು ನಾವು ಹಲವು ರೀತಿಗಳಿಂದ ಶ್ರಮಿಸಬೇಕಾಗುತ್ತದೆ.

ಆತ್ಮಹತ್ಯೆಗೆ ಪ್ರಯತ್ನಿಸಿಯೂ ಬದುಕುಳಿದ ವ್ಯಕ್ತಿಗಳು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಬಗೆಗೆ ವಿಜ್ಞಾನ ನಮ್ಮನ್ನು ಎಚ್ಚರಿಸುತ್ತದೆ.
ಆದರೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ನಾವು ಕುತೂಹಲ, ಹೆದರಿಕೆಗಳಿಂದ ಗಮನಿಸುವಷ್ಟು, ಆತ್ಮಹತ್ಯೆ ಪ್ರಯತ್ನಗಳ ಬಗ್ಗೆ ಗಮನಿಸುವ ಸಾಧ್ಯತೆ ಕಡಿಮೆ. ಆತ್ಮಹತ್ಯೆಗಳನ್ನು ಇಲ್ಲವಾಗಿಸುವಲ್ಲಿ ಈ ವರ್ಗವನ್ನೂ ವಿಶೇಷವಾಗಿ ನಾವು ಗಮನಿಸಲೇಬೇಕು.

ಆತ್ಮಹತ್ಯೆಯ ಪ್ರಯತ್ನಗಳಿಗೆ ಮುಖ್ಯ ಕಾರಣಗಳು ಖಿನ್ನತೆ, ವ್ಯಕ್ತಿತ್ವ ದೋಷ ಮತ್ತು ಹಠಾತ್ ತೀವ್ರ ಒತ್ತಡ. ಇವುಗಳಲ್ಲಿ ಆತ್ಮಹತ್ಯೆಯ ಪ್ರಯತ್ನ ನಡೆದಿರುವ ಸಂದರ್ಭದ ವಿವರಗಳು ಅದರ ಹಿಂದಿರುವ ಕಾರಣವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಸಾಯುವ ಆಲೋಚನೆಯನ್ನು ದೀರ್ಘಕಾಲದಿಂದ ಹೊಂದಿದ್ದು, ತಕ್ಕ ಸಿದ್ಧತೆ ಮಾಡಿಕೊಂಡು, ಪ್ರಾಣವನ್ನು ಕಳೆದು
ಕೊಳ್ಳಲೇಬೇಕು ಎಂಬ ಖಚಿತ ಉದ್ದೇಶದಿಂದ ಖಿನ್ನತೆಯಲ್ಲಿ ಆತ್ಮಹತ್ಯೆಯ ಪ್ರಯತ್ನ ನಡೆಯುತ್ತದೆ. ಇಲ್ಲಿ ಅಂತಹ ವ್ಯಕ್ತಿಯ ಉದ್ದೇಶ ತೀವ್ರವಾಗಿದ್ದು, ಸಾಯಲು ಖಚಿತ ವಿಧಾನಗಳನ್ನು ಆತ ಹುಡುಕಿಕೊಳ್ಳುತ್ತಾನೆ.
ಇನ್ನೊಂದು ವರ್ಗದಲ್ಲಿ ‘ಸಾಯಬೇಕು’ ಎಂಬ ಭಾವನೆ ಆ ಕ್ಷಣದಲ್ಲಿನ ಉದ್ವೇಗ-ಆಕ್ರೋಶಗಳಿಂದ ಮೂಡುತ್ತದೆ. ಕಡಿಮೆ ತೀವ್ರತೆಯಿಂದ ಕೂಡಿರುವ ಇಲ್ಲಿನ ಪ್ರಯತ್ನಗಳು ಎಲ್ಲರೆದುರೇ ನಡೆಯುತ್ತವೆ.

ವಿಧ ಯಾವುದೇ ಆಗಲಿ, ತೀವ್ರತೆ ಎಷ್ಟೇ ಇರಲಿ, ಆತ್ಮಹತ್ಯೆಯ ಪ್ರಯತ್ನದ ನಂತರ ಬದುಕಿ ಬಂದವರು ಅನುಭವಿಸುವ ಭಾವನೆಗಳು ವೈವಿಧ್ಯಮಯ. ಇವರಲ್ಲಿ ಮತ್ತೆ ಸಾಯಲು ಪ್ರಯತ್ನಿಸುವವರು ಶೇಕಡ 10ರಷ್ಟು ಮಂದಿಯೇ ಆದರೂ, ಇವರು ಮಾನಸಿಕ ಸಮಸ್ಯೆಗಳಿಂದ ನರಳುವುದು ಮುಂದುವರಿ
ಯುತ್ತದೆ. ನಿರಾಳ ಭಾವ, ಭರವಸೆ, ದುಃಖ, ಕೋಪ, ಪಶ್ಚಾತ್ತಾಪ ಮೊದಲಾದ ಮಿಶ್ರ ಭಾವಗಳು ಅವರನ್ನು ಕಾಡುತ್ತವೆ. ದುರದೃಷ್ಟವೆಂದರೆ, ಮನೋವೈದ್ಯಕೀಯ ಅಧ್ಯಯನಗಳ ಪ್ರಕಾರ, ಇವರು ಅತ್ಯವಶ್ಯವಾದ ಆಪ್ತಸಲಹೆ- ಚಿಕಿತ್ಸೆಗಳಿಗೆ ಮನೋವೈದ್ಯಕೀಯ ಸೇವೆಗಳನ್ನು ಬಳಸಿಕೊಳ್ಳುವ ಸಾಧ್ಯತೆ ಬಲು ಕಡಿಮೆ. ಹಾಗಾಗಿಯೇ ಸಾಮಾನ್ಯ ಜನರಲ್ಲಿ ಹತ್ತು ಸಾವಿರಕ್ಕೆ ಒಬ್ಬರು ಆತ್ಮಹತ್ಯೆಯಿಂದ ಮೃತಪಟ್ಟರೆ, ಮೇಲಿನ ವರ್ಗದಲ್ಲಿ ನೂರಕ್ಕೆ ಒಬ್ಬರಂತೆ ಆತ್ಮಹತ್ಯೆಯಿಂದ
ಸಾವಿಗೀಡಾಗುತ್ತಾರೆ.

ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ ಬಹುಜನರಿಗೆ ತತ್‍ಕ್ಷಣದಲ್ಲಿ ಕೃತಜ್ಞತಾ ಭಾವನೆಯೇನೋ ಮೂಡುತ್ತದೆ. ಸಾಯುವತೀವ್ರ ಆಲೋಚನೆಗಳಿಂದಲೇ
ಆತ್ಮಹತ್ಯೆಗೆ ಪ್ರಯತ್ನಿಸಿದ್ದರೂ ‘ನನಗೆ ನಿಜವಾಗಿ ಸಾಯುವುದು ಬೇಕಿರಲಿಲ್ಲ’ ಎಂದು ಅವರಿಗೆ ಅರಿ
ವಾಗಿಬಿಡುತ್ತದೆ. ಆದರೆ ಹಾಗೆಂದು ಅವರ ಸಮಸ್ಯೆಗಳು, ಜೀವನದ ಒತ್ತಡಗಳು ಮರೆಯಾಗಿರುವು
ದಿಲ್ಲ. ಇಂಥ ಸಂದರ್ಭಗಳಲ್ಲಿ ಮನೋವೈದ್ಯಕೀಯ ಸಲಹೆಯನ್ನು ಪಡೆಯುವುದು ಅತಿ ಮುಖ್ಯ ಸಂಗತಿ
ಯಾಗುತ್ತದೆ. ಖಿನ್ನತೆ ಹಾಗೂ ಉನ್ಮಾದವು ಚಿಕಿತ್ಸೆಯಿಂದ ನಿಯಂತ್ರಿಸಿ, ಆರಾಮದಾಯಕ ಜೀವನ ನಡೆಸಲು ಸಾಧ್ಯವಾಗುವ ಕಾಯಿಲೆಗಳ ಪಟ್ಟಿಯನ್ನು ಸೇರಿ ಎಷ್ಟೋ ವರ್ಷಗಳೇ ಆಗಿವೆ.

ಹಾಗೆಯೇ ವ್ಯಕ್ತಿತ್ವದೋಷಗಳದ್ದು ಆತ್ಮಹತ್ಯೆಯಪ್ರಯತ್ನಗಳಲ್ಲಿ ದೊಡ್ಡ ಪಾಲು. ಭಾವನಾತ್ಮಕ ಅಸ್ಥಿರತೆಯ ವ್ಯಕ್ತಿತ್ವದೋಷದಿಂದ ನರಳುವ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಕುಡಿದು, ಬಹಳಷ್ಟು ಮಾತ್ರೆಗಳನ್ನು ನುಂಗಿ, ಕೈಯ ಮೇಲೆ ಬ್ಲೇಡಿನಿಂದ ಹಲವು ಬಾರಿ ಕೊಯ್ದುಕೊಂಡು ದಿನನಿತ್ಯ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಗಳಿಗೆ ಬರುತ್ತಲೇ ಇರುತ್ತಾರೆ. ಮೇಲ್ನೋಟಕ್ಕೆ ‘ಇದು ಗಂಭೀರ ಆತ್ಮಹತ್ಯೆಯ
ಪ್ರಯತ್ನವಲ್ಲ, ಇವರಿಗೆ ನಿಜವಾಗಿ ಸಾಯಬೇಕೆಂದಿಲ್ಲ, ಇತರರನ್ನು ಹೆದರಿಸುವುದಷ್ಟೇ ಇದರ ಹಿಂದಿನ ಉದ್ದೇಶ’ ಎಂಬ ಕಾರಣಕ್ಕೆ ದೇಹಕ್ಕಷ್ಟೇ ಪ್ರಥಮ ಚಿಕಿತ್ಸೆ ದೊರೆತು, ‘ಗುಣಮುಖ’ ಎಂಬ ಹಣೆಪಟ್ಟಿ ಹೊತ್ತು ಇವರು ಹಿಂದಿರುಗುತ್ತಾರೆ. ಆದರೆ ಇವರ ವ್ಯಕ್ತಿತ್ವದೋಷ, ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳಲ್ಲಿನ ಸಮಸ್ಯೆಗಳಿಗೆ ಯಾವ ಚಿಕಿತ್ಸೆಯೂ ದೊರೆಯುವುದಿಲ್ಲ.

‘ಮನೋವೈದ್ಯಕೀಯ ಸಲಹೆ ಪಡೆಯಿರಿ’ ಎಂಬ ಕಿವಿಮಾತನ್ನು ಯಾವ ಕುಟುಂಬದವರೂ ಕೇಳದಿರುವ ಸಾಧ್ಯತೆಯೇ ಹೆಚ್ಚು. ಹಾಗೆಯೇ ಮದ್ಯದ ಮತ್ತಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುವವರಲ್ಲಿ ‘ಮದ್ಯವ್ಯಸನ’ದ ಚಿಕಿತ್ಸೆಗೆ ಮುಂದಾಗುವವರು ಕಡಿಮೆ.

ಇಂತಹ ಕಾರಣಗಳಿಂದ, ಆತ್ಮಹತ್ಯೆಯ ಪ್ರಯತ್ನಗಳತ್ತ ನಾವು ಗಮನಹರಿಸಲೇಬೇಕಾಗಿದೆ. ಅಂಥ ಅವಲೋಕನವು ಆತ್ಮಹತ್ಯೆಗಳನ್ನು ತಡೆಯುವುದಷ್ಟೇ ಅಲ್ಲ, ಮಾನಸಿಕ ಸ್ವಾಸ್ಥ್ಯ, ತನ್ಮೂಲಕ ದೈಹಿಕ ಆರೋಗ್ಯ, ಇವುಗಳಿಂದ ಜೀವನದ ಗುಣಮಟ್ಟ ಏರಿಕೆಗೆ ದಾರಿಯಾಗುತ್ತದೆ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT