ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಕೃತಿಯೆಂಬ ಬೆರಗಿನ ಶಿಕ್ಷಕ

ಪ್ರಾಪಂಚಿಕ ಹಂಗಿಲ್ಲದ ಪ್ರಕೃತಿಯಲ್ಲಿ ನಾವು ನಿಜವಾದ ಗುರುವನ್ನು ಕಾಣಬಹುದು
Last Updated 2 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಶಿಕ್ಷಕರ ದಿನಾಚರಣೆ (ಸೆ. 5) ಸಮೀಪಿಸುತ್ತಿರುವಂತೆ, ಶಿಕ್ಷಕ ವೃತ್ತಿಯ ಹಿರಿಮೆ ಮತ್ತು ವರ್ತಮಾನ ಕಾಲದಲ್ಲಿ ಅದರ ಪ್ರಸ್ತುತತೆಯ ಕುರಿತುಸಾರ್ವಜನಿಕ ವೇದಿಕೆಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಆದರ್ಶ ಶಿಕ್ಷಕ ಯಾರು, ಗುರು- ಶಿಷ್ಯ ಸಂಬಂಧಗಳು ಹೇಗಿರಬೇಕು ಎನ್ನುವ ಸಾಂದರ್ಭಿಕ ಪ್ರಶ್ನೆಗಳು ಏಳುತ್ತವೆ.

ಈ ಪ್ರಸ್ತುತತೆಯಲ್ಲಿ, ವರ್ತಮಾನದ ವಸ್ತುನಿಷ್ಠ ಮತ್ತು ಯಾಂತ್ರಿಕ ಪ್ರಪಂಚದಲ್ಲಿ ನಿಸ್ವಾರ್ಥದಿಂದ ವಿದ್ವತ್ತನ್ನು ಧಾರೆಯೆರೆಯುವ ಗುರುಗಳನ್ನು, ಜ್ಞಾನಾ ರ್ಜನೆಯ ಖುಷಿಗಾಗಿ ಕಲಿಯುವ ಹೆಬ್ಬಯಕೆಯನ್ನು ಬೆಳೆಸಿಕೊಂಡ ಶಿಷ್ಯಂದಿರನ್ನು ನಾವು ಕಾಣಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ, ಗುರು- ಶಿಷ್ಯರಿಬ್ಬರೂ ಕಲಿಕಾ ಪ್ರಕ್ರಿಯೆಯಲ್ಲಿ ಪರಕೀಯತೆ ಅನುಭವಿಸುತ್ತಿರುವುದನ್ನು ಕಾಣುತ್ತೇವೆ.

ಗುರುವೇ ಜ್ಞಾನದ ಮೂಲವೆಂದು ಪರಿಗಣಿಸಿದ್ದ ಕಾಲದಲ್ಲಿ, ಹಲವಾರು ವರ್ಷಗಳ ನಿರಂತರ ಶ್ರದ್ಧೆಯಿಂದ ಕಲಿತ ವಿದ್ಯೆಯು ಶಿಷ್ಯಂದಿರನ್ನು ಮುಂದಿನ ಬದುಕಿಗೆ ಅಣಿಯಾಗಿಸುತ್ತಿತ್ತು. ಆದರೆ, ನಾಗರಿಕತೆ ವಿಸ್ತಾರವಾದಂತೆ, ವಿದ್ಯಾರ್ಜನೆಗೊಂದು ನಿರ್ದಿಷ್ಟ ಚೌಕಟ್ಟು ದೊರೆತು ಪ್ರಕೃತಿಯಿಂದ ಮನುಷ್ಯ ದೂರವಾಗುತ್ತಾ, ಈ ಮೂಲಕ ಬದುಕನ್ನು ಸೀಮಿತ ದೃಷ್ಟಿಯಿಂದ ನೋಡುತ್ತಾ, ಬಹುತೇಕ ಸಂಬಂಧಗಳು ವ್ಯಾವಹಾರಿಕ ಆಗಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಯ ಏಳ್ಗೆಯಲ್ಲಿ ತನ್ನ ಜೀವನದ ಸಾರ್ಥಕತೆಯನ್ನು ಕಾಣುವ ಗುರುವಾಗಲೀ, ಶಿಕ್ಷಣದಿಂದ ಸಿಗುವ ಆರ್ಥಿಕ ಉಪಯೋಗವನ್ನು ಪರಿಗಣಿಸದೆ ಜ್ಞಾನ ಉದ್ದೀಪನ ಕ್ಕಾಗಿ ಕಲಿಯುವುದರಲ್ಲಿ ಖುಷಿ ಕಾಣುವ ಶಿಷ್ಯಂದಿ ರಾಗಲೀ ಕಾಣಸಿಗುವುದು ಅಪರೂಪ ಎನ್ನಬಹುದು.

ಮಹಾಭಾರತದಲ್ಲಿ, ‘ಸರಿಯಾದ ಜೀವನಮಾರ್ಗ ಯಾವುದೆಂದು ಹೇಗೆ ತಿಳಿಯುವುದು’ ಎನ್ನುವ ಯಕ್ಷ ಪ್ರಶ್ನೆಗೆ, ಯುಧಿಷ್ಠಿರ ಹೀಗೆ ಉತ್ತರಿಸುತ್ತಾನೆ: ‘ವಾದ- ವಿವಾದಗಳಿಂದಲ್ಲ- ಅವು ಎಂದಿಗೂ ನಮ್ಮನ್ನು ಅಂತಿಮ ನಿರ್ಣಯದತ್ತ ಕೊಂಡೊಯ್ಯುವುದಿಲ್ಲ. ಗುರು ಗಳಿಂದಲ್ಲ- ಅವರು ತಮ್ಮ ಅಭಿಪ್ರಾಯಗಳನ್ನಷ್ಟೇ ಕೊಡ ಬಲ್ಲರು. ಸರಿಯಾದ ಮಾರ್ಗವನ್ನು ತಿಳಿದುಕೊಳ್ಳ ಬೇಕೆಂದರೆ, ಮನುಷ್ಯನು ಮೌನ ಮತ್ತು ಏಕಾಂತದಲ್ಲಿ ತನ್ನ ಬದುಕನ್ನು ಪರಾಮರ್ಶಿಸಬೇಕು’. ಈ ನೆಮ್ಮದಿಯ ಮೌನ ಮತ್ತು ಏಕಾಂತ ನಮಗೆ ಪ್ರಕೃತಿಯ ಮಡಿಲಲ್ಲಿ ಸಿಗುತ್ತವೆ. ಕಲಿಯುವ ಆಸಕ್ತಿಯಿರುವ ಎಲ್ಲರಿಗೂ ಶ್ರೇಷ್ಠ ಗುರುಗಳ ಮಾರ್ಗದರ್ಶನ ಸಿಗುತ್ತದೆಯೆಂದು ಹೇಳಲಾಗದು. ಈ ದಿಸೆಯಲ್ಲಿ, ಎಲ್ಲರಿಗೂ ಲಭ್ಯವಿರುವ ಪ್ರಕೃತಿಯನ್ನು ಗುರುವಿನ ಸ್ಥಾನದಲ್ಲಿಟ್ಟು ತದೇಕಚಿತ್ತದಿಂದ ಗಮನಿಸಿದರೆ, ತರಗತಿಗಿಂತ ಹೆಚ್ಚಿನ ಜೀವನ ಕೌಶಲ ಮತ್ತು ಜ್ಞಾನ ಗಳಿಸಲು ಸಾಧ್ಯವಾಗಬಹುದು.

ಪ್ರಕೃತಿಯಲ್ಲಿನ ಪ್ರತೀ ಮಾನವೇತರ ಜೀವಿಯು ಕಲಿಸುವ ಶ್ರೇಷ್ಠ ಜೀವನ ಮೌಲ್ಯಗಳೆಂದರೆ, ಶಾಂತಿ, ಮೌನ, ತಾಳ್ಮೆ, ಸಂಯಮ, ಪುನರಾವರ್ತನೆ, ನಿರಂತ ರತೆ, ಹೋರಾಟದ ಛಲ, ವರ್ತಮಾನದಲ್ಲಿ ಬದುಕುವ ಅಗತ್ಯ, ಆಲಸ್ಯರಹಿತ ಬದುಕು, ಸಮಯಪ್ರಜ್ಞೆ, ಕೂಡಿ ಬಾಳುವುದು ಇತ್ಯಾದಿ. ಉದಾಹರಣೆಗೆ: ಮರ. ಇದು, ಹೂವು, ಹಣ್ಣು, ನೆರಳು, ಆಮ್ಲಜನಕ, ಜೀವಿಗಳಿಗೆ ಆಶ್ರಯತಾಣ, ಪುನರ್‌ಸೃಷ್ಟಿಗೆ ಕಾರಣವಾಗುವುದಲ್ಲದೆ ಹಲವಾರು ಜೀವನಮೌಲ್ಯಗಳನ್ನು ಕೊಡುತ್ತದೆ. ಇನ್ನೊಬ್ಬರಿಂದ ಏನನ್ನಾದರೂ ನಿರೀಕ್ಷಿಸುವ ಬದಲು, ಸ್ವತಃ ನೀಡುವುದು ಉದಾತ್ತ ಎನ್ನುತ್ತದೆ. ಆಕಾಶಕ್ಕೆ ಕೈಚಾಚಿದಷ್ಟೂ ಬೇರು ಆಳಕ್ಕಿಳಿಯುತ್ತಾ ಹೋಗುತ್ತದೆ. ಈ ಮೂಲಕ ಸಮತೋಲನ ಕಾಪಾಡಿಕೊಳ್ಳಬೇಕು ಎನ್ನುತ್ತದೆ.

ಹೂವು, ಹಣ್ಣಿನಂತಹ ಫಲಗಳು ತಕ್ಷಣ ಸಿಗುವು ದಿಲ್ಲ, ದೀರ್ಘಾವಧಿ ಕಾಯುವ ತಾಳ್ಮೆ ಮುಖ್ಯ ಎನ್ನು ತ್ತದೆ. ಋತುಗಳು ಬದಲಾದಂತೆ ತನ್ನನ್ನು ತಾನು ಮಾರ್ಪಡಿಸಿಕೊಳ್ಳುತ್ತಿರಬೇಕು ಎನ್ನುತ್ತದೆ (ಎಲೆಗಳನ್ನು ತ್ಯಜಿಸುವುದು ಅಥವಾ ಹೆಚ್ಚಿಸಿಕೊಳ್ಳುವುದರ ಮೂಲಕ). ಬಾಹ್ಯ ಪ್ರಪಂಚದ ಬದಲಾವಣೆಗೆ ಸ್ಪಂದಿಸಿ ಮಾರ್ಪಡಿಸಿಕೊಳ್ಳದೇ ಹೋದರೆ ಅಪ್ರಸ್ತುತವಾಗಬಹುದು ಎನ್ನುತ್ತದೆ. ಬದುಕು ಮಳೆಯನ್ನೂ ಕೊಡುತ್ತದೆ, ಬಿಸಿಲನ್ನು ಕೂಡ. ಎರಡನ್ನೂ ಸಮಾನವಾಗಿ ಸ್ವೀಕರಿಸ ಬೇಕು ಎನ್ನುತ್ತದೆ. ಬಾಹ್ಯಜಗತ್ತು ತನ್ನನ್ನು ಎಷ್ಟು ಸಾರಿ ಮುಗಿಸಲು ಪ್ರಯತ್ನ ಮಾಡಿದರೂ ಪುನಃ ಪುನಃ ಚಿಗುರುವ ಇಚ್ಛಾಶಕ್ತಿ ಉಳಿಸಿಕೊಂಡಿರಬೇಕು ಎನ್ನುತ್ತದೆ.

ಹೀಗೆ, ಮನುಷ್ಯೇತರ ಪ್ರತೀ ಜೀವಿಯಲ್ಲಿ ನಾವು ಅಪ್ರತಿಮ ಜೀವನ್ಮುಖಿ ಹೋರಾಟವನ್ನು ಕಾಣ ಬಹುದು. ನಿತ್ಯ ಮರುಹುಟ್ಟು ಮತ್ತು ನವೀಕರಣಗೊಳ್ಳಬೇಕಾದ ಅನಿವಾರ್ಯವನ್ನು ಕಲಿಸುವ ಪ್ರಕೃತಿಯ ವಿಸ್ಮಯವು ಕವಿ ಬೇಂದ್ರೆಯವರ ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ...’ ಎನ್ನುವ ಸಾಲಿನಲ್ಲಿ ಅಡಕವಾಗಿದೆ. ಪ್ರಾಪಂಚಿಕ ಹಂಗಿಲ್ಲದ ಪ್ರಕೃತಿಯಲ್ಲಿ ನಾವು ನಿಜವಾದ ಗುರುವನ್ನು ಕಾಣಬಹುದು.

ಹಾಗೆಯೆ, ನದಿಗಳು ತಾವು ತಲುಪಬೇಕಾದ ಹಾದಿ ಯಲ್ಲಿ ಸಿಗುವ ಎಲ್ಲಾ ಅಡೆತಡೆಗಳು, ಜೊತೆಯಾಗುವ ಮಾಲಿನ್ಯಗಳನ್ನೆಲ್ಲಾ ಮೀರಿ ಸಮುದ್ರ ಮುಟ್ಟುವಂತೆ, ನಮ್ಮ ಪ್ರಯತ್ನಗಳಲ್ಲಿ ನಿರಂತರತೆ ಕಾಯ್ದುಕೊಳ್ಳುತ್ತಾ ಅರ್ಥಪೂರ್ಣವಾಗಿ ಬದುಕುವುದನ್ನು ಅಥವಾ ಅರಣ್ಯ ನ್ಯಾಯದಲ್ಲಿ ದುರ್ಬಲರು ಮೊದಲು ಬೇಟೆಯಾಗುವುದನ್ನು ಗಮನಿಸುತ್ತಾ, ನಾವು ಎಚ್ಚರ ಕಾಯ್ದುಕೊಳ್ಳಬೇಕು ಎನ್ನುವುದನ್ನು ಕಲಿಯಬಹುದು.

ಆದ್ದರಿಂದ, ಭೂಮಿ- ಆಕಾಶ, ಕಾಡು- ಹೊಲ, ಸರೋವರ- ನದಿಗಳು, ಪರ್ವತ- ಸಮುದ್ರ ಇವೆಲ್ಲವೂ ಅತ್ಯುತ್ತಮ ಶಿಕ್ಷಕರು. ನಾವು ಪುಸ್ತಕಗಳಿಂದ ಕಲಿಯುವುದಕ್ಕಿಂತ ಹೆಚ್ಚಿನದನ್ನು ಕಲಿಸುತ್ತವೆ. ಅನನ್ಯವಾದ ಜೀವನತಾತ್ಪರ್ಯ ಕಲಿಸುವ ಜಗತ್ತಿನ ಮೊದಲ ಶಿಕ್ಷಕ ಎಂದರೆ ಪ್ರಕೃತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT