ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಂಚೆ ಇಲಾಖೆಯ ಅಧ್ವಾನ

ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ವಿಶ್ವಾಸ ಇನ್ನೂ ಪೂರ್ತಿ ನಶಿಸಿಲ್ಲ. ನಂಬಿಕೆ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ
Last Updated 25 ಆಗಸ್ಟ್ 2020, 20:32 IST
ಅಕ್ಷರ ಗಾತ್ರ

ಭಾರತದ ಹಲವು ಹೆಮ್ಮೆಯ ಸಾರ್ವಜನಿಕ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯೂ ಒಂದು. ವಿಶ್ವಾಸ-ನಂಬಿಕೆಗೆ ಮತ್ತೊಂದು ಹೆಸರು ಅಂಚೆ ಇಲಾಖೆಯೆಂದರೂ ತಪ್ಪಿಲ್ಲ. ಆದರೆ ಆಡಳಿತಗಾರರ ಅಸಡ್ಡೆಯೋ ಇಲಾಖಾ ಸಿಬ್ಬಂದಿಯ ಸೋಮಾರಿತನವೋ ಇಂದು ಈ ಇಲಾಖೆಯು ಜನಸಾಮಾನ್ಯರಿಂದ ಕ್ರಮೇಣ ದೂರವಾಗುತ್ತಿದೆ. ದುಬಾರಿಯಾದರೂ ಶೇ 100ರಷ್ಟು ಖಚಿತತೆ ಇಲ್ಲದಿದ್ದರೂ ಜನ ಅನಿವಾರ್ಯವಾಗಿ ಕೊರಿಯರ್ ಸಂಸ್ಥೆಗಳನ್ನು ಅವಲಂಬಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಸಾರಿಗೆ-ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಪ್ರತಿಯೊಂದು ಅಂಚೆಯನ್ನೂ ಕಾಲ್ನಡಿಗೆಯಲ್ಲಿ, ಸೈಕಲ್ ಮೇಲೆ ಭೌತಿಕವಾಗಿಯೇ ಸಾಗಿಸಬೇಕಾದ ಅನಿವಾರ್ಯ ಇತ್ತು. ಹಾಗಾಗಿ ಅಂದಿನ ದಿನಮಾನಗಳಿಗೆ ಅನುಗುಣವಾಗಿ ಅಂಚೆ ಕಚೇರಿಗಳ ಕೆಲಸದ ಸಮಯವನ್ನು ನಿಗದಿಪಡಿಸಲಾಗಿತ್ತು. ಇಂದು ಕ್ಷಣಾರ್ಧದಲ್ಲಿ ದೇಶ-ವಿದೇಶಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದ್ದರೂ ಅಂಚೆ ಕಚೇರಿಗಳ ಸಮಯ ಮಾತ್ರ ಇನ್ನೂ ದಶಕಗಳ ಹಿಂದಿನ ಕಾಲದ್ದೇ ಇದೆ! ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನ 12 ಗಂಟೆಯ ನಂತರ, ಪ್ರಧಾನ ಅಂಚೆ ಕಚೇರಿಗಳಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ನೋಂದಾಯಿತ ಅಂಚೆಗಳನ್ನು ಸ್ವೀಕರಿಸುವುದಿಲ್ಲ. ಹಣಕಾಸು ವ್ಯವಹಾರ ಮಾಡುವುದಿಲ್ಲ.

ಇನ್ನು ‘ಸ್ಪೀಡ್ ಪೋಸ್ಟ್’ ಹೆಸರಿನ ಹೆಚ್ಚುವರಿ ದರದ ಸೇವೆ ಶೀಘ್ರವಾಗಿ ತಲುಪುವ ಖಾತರಿಯನ್ನೇನೂ ನೀಡುವುದಿಲ್ಲ. ನೋಂದಾಯಿತ ಅಂಚೆಗೂ ಸ್ಪೀಡ್ ಪೋಸ್ಟ್‌ಗೂ ದರ ಮಾತ್ರ ವ್ಯತ್ಯಾಸ! ಅದೂ ವಿಳಾಸದಾರರ ದೂರವನ್ನು ಆಧರಿಸಿಯೇ ಬಟವಾಡೆಯಾಗುತ್ತದೆ!

ಇನ್ನು ಈ ಇಲಾಖೆಯಲ್ಲಿ ಸೇವೆಗಳು ಬಹುತೇಕ ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆಯ ಆಧಾರದಲ್ಲಿ ನೇಮಿಸಿಕೊಂಡವರನ್ನು ಆಧರಿಸಿವೆ. ಇವರಿಗೆ ಸೇವಾ ಭದ್ರತೆ ಇಲ್ಲ. ಅಂತೆಯೇ ಗ್ರಾಹಕರ ಸೇವೆಗಳಿಗೂ ಭದ್ರತೆ ಇಲ್ಲ. ಅಂಚೆ ಬಟವಾಡೆ ಸಮರ್ಪಕವಾಗಿ ಆಗದೇ ಇದ್ದರೆ ಸಾಮಾನ್ಯವಾಗಿ ಪೋಸ್ಟ್‌ಮನ್‌ಗಳನ್ನೇ ಪ್ರಶ್ನಿಸಬೇಕಿರುತ್ತದೆ. ಅವರ ಉತ್ತರ: ‘ಇಲಾಖೆ ನೀಡುವ ಜುಜುಬಿ ಸಂಬಳಕ್ಕೆ ಇನ್ನೆಷ್ಟು ಕೆಲಸ ಮಾಡಲಾಗುತ್ತದೆ?’ ಇವರಲ್ಲಿ ಬಹುತೇಕರು ಪೂರ್ಣಾವಧಿ ಸಿಬ್ಬಂದಿಯಲ್ಲ. ಅವರಿಗೆ ಸಮಗ್ರ ಹೊಣೆಗಾರಿಕೆಯೂ ಇರುವುದಿಲ್ಲ.

ಕೆಲವರು ವಾರ್ಷಿಕ ₹ 400 ಖರ್ಚು ಮಾಡಿ, ಅಂಚೆ ಪೆಟ್ಟಿಗೆಯನ್ನು ಬಾಡಿಗೆಗೆ ಪಡೆದು, ತಮ್ಮ ಮನೆ ವಿಳಾಸದ ಪತ್ರಗಳನ್ನು ಅಂಚೆ ಪೆಟ್ಟಿಗೆಗಾದರೂ ಹಾಕುವಂತೆ ವಿನಂತಿ ಮಾಡಿಕೊಂಡರೆ ಅದೂ ಪ್ರಯೋಜನವಿಲ್ಲವಾಗಿದೆ. ಸಮರ್ಪಕವಾಗಿ ಅಂಚೆ ವಿತರಿಸಲು ಸಾಧ್ಯವಿಲ್ಲವೆಂದಾದರೆ, ಪ್ರತ್ಯೇಕ ಅಂಚೆ ಪೆಟ್ಟಿಗೆಗೆ ಹಾಕುವುದೂ ಅಂಚೆ ಇಲಾಖೆಗೆ ಕಷ್ಟವೆಂದರೆ ಗ್ರಾಹಕರು ಇನ್ನೇನು ಮಾಡಲು ಸಾಧ್ಯ?‌

ನೋಂದಾಯಿತ ಅಂಚೆ ಸ್ವೀಕೃತಿ ಪತ್ರಗಳಿಗೆ ವಿಳಾಸದಾರರ ಸಹಿ ಪಡೆಯುವುದು ಕಡ್ಡಾಯ. ಆದರೆ ಬಹಳಷ್ಟು ಪತ್ರಗಳು ಕಾಂಪೌಂಡ್ ಒಳಗೆ ಬಿದ್ದಿರುತ್ತವೆ, ಅದೂ ಸ್ವೀಕೃತಿ ಚೀಟಿಯ ಸಮೇತ! ಹೀಗೆ ಪತ್ರಗಳನ್ನು ಎಸೆದು ಹೋಗುವುದಾದರೆ ಗ್ರಾಹಕರು ಹೆಚ್ಚುವರಿ ಹಣವನ್ನೇಕೆ ಪಾವತಿಸಬೇಕು? ದೇಶದ ಬಹುತೇಕ ಸಾರ್ವಜನಿಕ ಸಂಸ್ಥೆಗಳು ನಷ್ಟದ ಕಾರಣಕ್ಕಾಗಿ ಬಾಗಿಲು ಮುಚ್ಚುತ್ತಿರುವ ಈ ಸನ್ನಿವೇಶದಲ್ಲಿ, ಅಂಚೆ ಇಲಾಖೆ ಏಕೆ ಹೀಗೆ ವರ್ತಿಸುತ್ತಿದೆ?

ದಶಕಗಳ ಹಿಂದೆ ಯಾವುದಾದರೂ ಪತ್ರವು ವಿಳಂಬವಾಗಿ ತಲುಪಿದರೆ ಮಾಧ್ಯಮಗಳಲ್ಲಿ ಅದೊಂದು ದೊಡ್ಡ ಸುದ್ದಿಯಾಗುತ್ತಿತ್ತು. ‘ಆರು ವರ್ಷಗಳ ನಂತರ ಕೈಸೇರಿದ ಪತ್ರ!’ ಎಂಬ ಶೀರ್ಷಿಕೆಯಡಿ ವರದಿಯಾಗುತ್ತಿತ್ತು. ಎಷ್ಟೇ ವಿಳಂಬವಾದರೂ ಶತಾಯಗತಾಯ ವಿಳಾಸದಾರರಿಗೆ ಪತ್ರಗಳನ್ನು ತಲುಪಿಸುವ ಜವಾಬ್ದಾರಿಯನ್ನು ಇಲಾಖೆ ಮೆರೆಯುತ್ತಿತ್ತು. ತಂತಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದಾಗ ಅಪರಾತ್ರಿಯಲ್ಲಿಯೂ ಅಸಾಮಾನ್ಯ ಪರಿಸ್ಥಿತಿಯಲ್ಲಿಯೂ ಗ್ರಾಹಕರಿಗೆ ತಂತಿ ಸಂದೇಶ ತಲುಪಿಸಿದ ಹೆಗ್ಗಳಿಕೆ ಇದರದ್ದಾಗಿತ್ತು.

ನೋಂದಾಯಿತ ಅಂಚೆಗಳನ್ನೇ ಸಮರ್ಪಕವಾಗಿ ವಿತರಿಸಲು ಸಾಧ್ಯವಾಗದ ಇಲಾಖೆಯು ಇನ್ನು ಸಾಧಾರಣ ಅಂಚೆಗಳನ್ನು ಎಷ್ಟು ಶ್ರದ್ಧೆ-ಬದ್ಧತೆಯಿಂದ ವಿತರಿಸಬಲ್ಲದು? ಈ ಮೊದಲು ಸಾಧಾರಣ ಅಂಚೆಗಳಿಗೆ ಬಿಳಿಹಾಳೆಯ ಮೇಲೆ 3 ರೂಪಾಯಿಯ ಅಂಚೆ ಚೀಟಿ ಹಚ್ಚಿ, ಠಸ್ಸೆ ಹಾಕಿ, ಅಂಚೆ ಸ್ವೀಕೃತವಾಗಿದೆಯೆಂದು ದೃಢೀಕರಿಸಲಾಗುತ್ತಿತ್ತು. ಬಡವರು, ಕೇವಲ ದಾಖಲೆಗಾಗಿ ಅಂಚೆ ರವಾನಿಸುವವರಿಗೆ ಇದೊಂದು ಅನುಕೂಲಕರ ವ್ಯವಸ್ಥೆಯಾಗಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ. ಅಂಚೆ ರವಾನಿಸಿದ್ದಕ್ಕೆ ದಾಖಲೆ ಬೇಕೆಂದರೆ ಪ್ರತ್ಯೇಕವಾಗಿ ₹ 25 ಖರ್ಚು ಮಾಡಿ ನೋಂದಾಯಿತ ಅಂಚೆಯನ್ನೇ ಕಳಿಸಬೇಕು!

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ವಿತರಣೆಯು ಬಹಳ ಲೋಪದಿಂದ ಕೂಡಿದೆ. ಮಾಸಪತ್ರಿಕೆಗಳು, ಆಮಂತ್ರಣಪತ್ರಿಕೆಗಳು, ವಿಮಾ ಕಂಪನಿಯ ತಿಳಿವಳಿಕೆ ಪತ್ರಗಳು, ಅದರಲ್ಲೂ ನೂರಾರು ಸಂಖ್ಯೆಯ ಗಂಟಿನಲ್ಲಿ ಅಂಚೆಗೆ ಹಾಕುವ ಪತ್ರಗಳು ವಿಳಾಸದಾರರಿಗೆ ತಲುಪುವುದೇ ಇಲ್ಲ. ಅಂಚೆ ವಿತರಣೆಯ ಲೋಪ ಎಲ್ಲಿ ಉಂಟಾಗಿದೆ ಎಂಬುದನ್ನು ಪರಿಶೀಲಿಸಲು ಸಾಧ್ಯವಿದೆ. ಅಂಥ ಲೋಪಗಳು ಮರುಕಳಿಸದಂತೆ ಮಾಡಿದಲ್ಲಿ ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಎಲ್ಲೋ ಕೆಲವರು ಆರ್.ಡಿ. ಖಾತೆ, ಉಳಿತಾಯ ಖಾತೆಯ ಹಣವನ್ನು ಲಪಟಾಯಿಸಿದ ವರದಿಗಳು ಅಲ್ಲಲ್ಲಿ ಬರುತ್ತವೆಯಾದರೂ ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ವಿಶ್ವಾಸ ಇನ್ನೂ ನಶಿಸಿಲ್ಲ. ಏನೇ ಆದರೂ ಅಧಿಕಾರಿಗಳ ಜೊತೆಗೆ ಸಿಬ್ಬಂದಿಯ ಕಾರ್ಯಕ್ಷಮತೆಯೂ ಸೇರಿದಲ್ಲಿ ಇಲಾಖೆಯು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT