ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಗೀಳು: ಹೊರಬರಲು ಮಾರ್ಗವಿದೆ

ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ನಮಗೆ ಕೊಡುತ್ತಿದೆ ಈ ಕಾಮಧೇನು!
Last Updated 28 ಜನವರಿ 2021, 19:31 IST
ಅಕ್ಷರ ಗಾತ್ರ

ಮೊಬೈಲ್ ಎಂದಾಕ್ಷಣ ನಮಗೆಲ್ಲಾ ರೋಮಾಂಚನ. ಹಗಲು ರಾತ್ರಿಯೆನ್ನದೆ ಆಗಾಗ ಫೋಟೊ ಕ್ಲಿಕ್ಕಿಸದಿದ್ದರೆ, ಚಾಟ್ ಮಾಡದಿದ್ದರೆ, ವಿಡಿಯೊ ನೋಡದಿದ್ದರೆ, ಗೇಮ್ ಆಡದಿದ್ದರೆ ಅದೇನೋ ಕಳೆದುಕೊಂಡಂತೆ. ಮಗುವೊಂದು ಪೆನ್ಸಿಲ್‌ಗಿಂತ ಮೊದಲೇ ಫೋನ್ ಹಿಡಿದು, ನಿರಾಯಾಸವಾಗಿ ಅದನ್ನು ಬಳಸುವುದೆಂದರೆ ಪೋಷಕರಿಗೆ ಹಿಗ್ಗು. ಮೊಬೈಲ್ ಬಳಸುವ ಮಗುವಿನ ಕಲೆಯನ್ನು ಹತ್ತಾರು ಜನರ ಮುಂದೆ ಹೊಗಳಿದ್ದೇ ಹೊಗಳಿದ್ದು.

ಮೊಬೈಲ್ ನಮ್ಮ ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ತಂದಿದ್ದು ನಿಜ. ಆದರೆ ಅದರ ಸಾಧಕಗಳ ಮುಂದೆ ಬಾಧಕಗಳನ್ನು ಹೇಳುವುದು ಯಾರಿಗೂ ಒಗ್ಗದಿರುವ ವಿಷಯ. ಏಕೆಂದರೆ ಮೊಬೈಲ್ ಇಂದು ನಮಗೆ ಅಷ್ಟು ಅಗತ್ಯ ಮತ್ತು ಅನಿವಾರ್ಯ. ಚಿಕ್ಕ ಜರ್ನಿ ಎಂದರೂ ಕಿವಿಯಲ್ಲಿನ ಇಯರ್ ಫೋನ್‌ನಲ್ಲಿ ಹಾಡು ಬರುತ್ತಿರಬೇಕು, ಪ್ರವಾಸವೆಂದರೆ ಅಲ್ಲಿನ ಅನುಭವಕ್ಕಿಂತ ಸೆಲ್ಫಿಗಳು ಹೆಚ್ಚಿರಬೇಕು, ಮನರಂಜನೆ, ಮಾಹಿತಿ, ಸಂಪರ್ಕ, ವಹಿವಾಟು ಹೀಗೆ ಅನೇಕ ಕಾರ್ಯಗಳಿಗೆ ಮೊಬೈಲ್ ಬೇಕೇ ಬೇಕು. ಇನ್ನು ಕೊರೊನಾ ಕಾರಣದಿಂದ ಆನ್‌ಲೈನ್‌ ಪಾಠ ಆರಂಭವಾದ ಪರಿಣಾಮ, ವಿದ್ಯಾರ್ಥಿಗಳ ಕೈಯಲ್ಲೂ ಅನಿವಾರ್ಯವಾಗಿ ಮೊಬೈಲ್ ಇರುವಂತಾಗಿದೆ.

‘ಅಮೆರಿಕನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್’ ಪ್ರಕಾರ, 18 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗು ಯಾವುದೇ ರೀತಿಯ ಸ್ಕ್ರೀನ್ ಇರುವ ಸಾಧನ ನೋಡಬಾರದು. ಎರಡು ವರ್ಷ ಮೇಲ್ಪಟ್ಟ ಮಗು ಅರ್ಧಗಂಟೆ ನೋಡಬಹುದಷ್ಟೆ. ಆದರೆ ಇಂದಿನ ನಮ್ಮ ಪರಿಸ್ಥಿತಿ ಇದಕ್ಕೆ ತದ್ವಿರುದ್ಧ. ಮಗುವಿನ ಕೈಗೆ ಮೊಬೈಲನ್ನಿಟ್ಟು ಸುಮ್ಮನಾಗಿಸುತ್ತಿದ್ದೇವೆ. ಅದರಲ್ಲೇ ಹಾಡು ಕೇಳಿಸಿ ಮಲಗಿಸುತ್ತಿದ್ದೇವೆ. ಗೇಮ್ ಆಡಿಸಿ ಊಟ ಮಾಡಿಸುತ್ತಿದ್ದೇವೆ. ಹೀಗೆ ಪ್ರತಿಯೊಂದಕ್ಕೂ ಬೇಕಾಗಿರುವ ಮೊಬೈಲ್ ನಮಗೆ ಎಲ್ಲವನ್ನೂ ಕೊಡುತ್ತಿರುವ ಕಾಮಧೇನು! ಬೇರೇನನ್ನು ಬಿಟ್ಟರೂ ಬಿಡಲಾಗದ ಸಂಗಾತಿ. ವಾಟ್ಸ್‌ಆ್ಯಪ್‌, ಫೇಸ್‌ಬುಕ್, ಸೆಲ್ಫಿ, ಟಿಕ್‌ಟಾಕ್ ತರಹದ ಅಲೆಗಳು ನಮ್ಮನ್ನೆಲ್ಲಾ ಆವರಿಸಿವೆ.

ಅತಿಯಾಗಿ ಮೊಬೈಲ್ ಬಳಸುವಂತಾಗುವ ಮಾನಸಿಕ ಸ್ಥಿತಿಯೇ ‘ಮೊಬೈಲ್ ಮೇನಿಯಾ’. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಚಿತ್ರ ಬಿಡಿಸುವುದು, ಕಥೆ ಹೇಳುವುದು, ಆಟ ಆಡುವಂತಹ ಬಾಲ್ಯದ ಕ್ರಿಯಾತ್ಮಕ ಚಟುವಟಿಕೆಗಳು ಕಡಿಮೆಯಾಗಿ, ಅವರ ಕಲ್ಪನಾಶಕ್ತಿ ಕುಂದುತ್ತಿದೆ. ಮಕ್ಕಳಲ್ಲಿ ಸಾಮಾಜಿಕ ಕೌಶಲಗಳ ಕೊರತೆ, ಸಂಕುಚಿತ ಭಾವನೆಗೆ ಕಾರಣವಾಗುವುದಲ್ಲದೆ, ಏಕಾಗ್ರತೆಯ ಕೊರತೆ ಉಂಟುಮಾಡುತ್ತದೆ.

‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌’ನ ಸಂಶೋಧನೆ ಪ್ರಕಾರ, ಅತಿಯಾಗಿ ಮತ್ತು ಕತ್ತಲಲ್ಲಿ ಮೊಬೈಲ್ ನೋಡುವುದು ಕಣ್ಣುಗಳ ಮೇಲೆ ಒತ್ತಡ ತಂದು, ದೃಷ್ಟಿದೋಷದ ಸಮಸ್ಯೆಗೆ ಕಾರಣವಾಗುತ್ತದೆ. ಸ್ಕ್ರೀನ್ ಬೆಳಕು ಮಕ್ಕಳ ನಿದ್ದೆಯ ಮಟ್ಟವನ್ನು ಕಡಿಮೆ ಮಾಡಿ, ಮುಂಜಾನೆ ಏಳುವಾಗ ಕಿರಿಕಿರಿ ಮಾಡುವಂತಾಗುತ್ತದೆ. ಜೊತೆಗೆ ಬೆಳವಣಿಗೆಯ ಹಂತದಲ್ಲಿಯೇ ಬೊಜ್ಜು, ಕುತ್ತಿಗೆ ನೋವು, ಕಣ್ಣು ಒಣಗುವುದಲ್ಲದೆ ನಡವಳಿಕೆಯ ಸಮಸ್ಯೆಗೂ ಕಾರಣವಾಗುತ್ತದೆ.

‘ಮನೆಯಲ್ಲಿ ಮೊಬೈಲ್ ಹಾಳಾದರೆ ಮಕ್ಕಳೇ ಕಾರಣ, ಮಕ್ಕಳು ಹಾಳಾದರು ಎಂದರೆ ಮೊಬೈಲ್ ಕಾರಣ’ ಎಂಬ ಮಾತು ಈಗ ನಾಣ್ನುಡಿಯಾಗುತ್ತಿದೆ. ಮೊಬೈಲ್‌ನ ದುಷ್ಪರಿಣಾಮದ ಬಲೆಗೆ ಇಂದು ಬೇಗ ಬೀಳುತ್ತಿರುವುದು ಯುವಜನ. ಇದರಿಂದ ವಿದ್ಯಾರ್ಥಿಗಳ ಅಮೂಲ್ಯ ವಿದ್ಯಾಭ್ಯಾಸದ ಸಮಯ ವೃಥಾ ಕಳೆದುಹೋಗುತ್ತಿದೆ. ಇನ್ನು ಅಭ್ಯಾಸದ ಪುಸ್ತಕಗಳು, ನೋಟ್ಸ್‌ ಅನ್ನು ಮೊಬೈಲ್‌ನಲ್ಲಿ ಹಂಚಿಕೊಳ್ಳುವ ಪರಿಪಾಟವಿದೆ. ಆದರೆ ಮೊಬೈಲ್‌ನಲ್ಲಿನ ಓದಿನಿಂದ ಪುಸ್ತಕದಲ್ಲಿ ಓದಿದಂತೆ ಏಕಾಗ್ರತೆಯಿಂದಿರಲು, ಪೂರ್ಣ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ.

‘ದಿ ಗಾರ್ಡಿಯನ್‌’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಹದಿನಾರರಿಂದ ಇಪ್ಪತ್ತನೆಯ ವರ್ಷದ ನಾಲ್ವರು ಯುವಜನರಲ್ಲಿ ಮೂವರು ಫೋನಿನ ಮೂಲಕ ಸ್ವರ ರೂಪದ ಸಂವಾದಕ್ಕಿಂತ, ಅಕ್ಷರ ರೂಪದ ಸಂವಾದದಲ್ಲಿ ತೊಡಗುವುದನ್ನು ಇಷ್ಟಪಡುತ್ತಾರೆ. ಇದು ಮಾತಿಗಿಂತ ಹೆಚ್ಚು ಸಮಯವನ್ನು ತಿನ್ನುತ್ತದೆ. ಒಂದು ಪದದಿಂದ ಆರಂಭವಾಗುವ ಸಂವಾದ ತಾಸುಗಟ್ಟಲೆ ಹಿಂದು ಮುಂದು ಸಾಗುತ್ತದೆ. ಆದರೆ ಅವೆಲ್ಲ ಬರೀ ಪೊಳ್ಳು ಮಾತುಗಳಷ್ಟೇ ಎಂದು ಹೇಳುತ್ತದೆ. ಹಾಗೆಯೇ ಮೊಬೈಲ್‌ ನಿರಂತರವಾಗಿ ವಿಕಿರಣವನ್ನು ಹೊರ ಸೂಸುವುದರಿಂದ ಅದನ್ನು ಪಕ್ಕದಲ್ಲಿಟ್ಟುಕೊಂಡು ಮಲಗುವುದು, ತಡರಾತ್ರಿಯವರೆಗೆ ಮೊಬೈಲ್ ಪರದೆ ನೋಡುವಂತಹ ಕಾರ್ಯಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.

ಮನೋವೈದ್ಯರೊಬ್ಬರು ಹೇಳುವಂತೆ, ಕಳೆದ ವರ್ಷ ಅವರನ್ನು ಅತಿ ಹೆಚ್ಚು ಭೇಟಿ ಮಾಡಿದ ರೋಗಿಗಳಲ್ಲಿ ಮೊಬೈಲ್ ಗೀಳಿಗೆ ಒಳಗಾದವರ ಸಂಖ್ಯೆಯೇ ಹೆಚ್ಚು. ಮೊಬೈಲ್‌ ಮಾನವನ ಬುದ್ಧಿವಂತಿಕೆಯ ಅದ್ಭುತ ಫಲಿತಾಂಶ. ಅದರ ಹಿತಮಿತ ಬಳಕೆಯಿಂದ ಖಂಡಿತ ನಮಗೆ ಅನುಕೂಲ. ಆದರೆ ಇಂದು ನಾವು ಅದರ ದುಷ್ಪರಿಣಾಮಗಳನ್ನು ನಿರ್ಲಕ್ಷಿಸುತ್ತಿದ್ದೇವೆ, ಅದರ ಗುಲಾಮರಾಗುತ್ತಿದ್ದೇವೆ. ಈ ಸತ್ಯದ ಅರಿವಾದಾಗ ಮಾತ್ರ, ಈ ಚಟ ಯಾರನ್ನೂ ಆವರಿಸದಂತೆ ತನ್ನಿಂದ ತಾನೇ ದೂರವಿರುತ್ತದೆ. ಆಹ್ಲಾದಕಾರಕ ಜೀವನ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT