ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಋಣಸಂದಾಯದ ಹೊಣೆಯರಿಯುವ ಹೊತ್ತು

ನಮಗೆಲ್ಲ ಅನ್ನ, ಅರಿವು, ನೆರಳನ್ನು ನೀಡಿ ಪೊರೆವ ಸಮಾಜದ ಋಣಸಂದಾಯವು ನಮ್ಮೊಟ್ಟಿಗೇ ಸಾಗಬೇಕು
Last Updated 28 ಅಕ್ಟೋಬರ್ 2021, 22:57 IST
ಅಕ್ಷರ ಗಾತ್ರ

ಹೌದು, ನಾವೆಲ್ಲಾ ಋಣದ ಮೂಟೆಯನ್ನು ಹೊತ್ತು ಬಂದವರು. ನಿಂತ ನೆಲ, ತಿನ್ನುವ ಅನ್ನದ ಪ್ರತೀ ಅಗುಳು, ತೊಡುವ ಬಟ್ಟೆಯ ಎಳೆಎಳೆಯಲ್ಲೂ ಸಾವಿರಾರು ಜನರ ಶ್ರಮವಿದೆ, ಬೆವರಿದೆ, ಋಣವಿದೆ. ಇಲ್ಲಿ ನಾವೆಲ್ಲರೂ ಪರಾವಲಂಬಿಗಳೇ. ಒಬ್ಬರ ನಿತ್ಯ ಬಳಕೆಯ ವಸ್ತು, ಸೇವೆ, ಸೌಕರ್ಯಗಳೆಲ್ಲ ಮತ್ಯಾರದೋ ಅವಿರತ ದುಡಿತದ, ತ್ಯಾಗದ ಫಲವಾಗಿರುತ್ತವೆ. ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲುಗಳು ಕೂಡ ಧ್ವನಿಸುವುದು ಇದನ್ನೇ...

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ...

ದಿನೇದಿನೇ ಯಾಂತ್ರೀಕೃತಗೊಳ್ಳುತ್ತಿರುವ ಸ್ವಾರ್ಥಜಗತ್ತು ಅಶಕ್ತರು, ಅವಕಾಶವಂಚಿತರನ್ನು ಎಗ್ಗಿಲ್ಲದೆ ತುಳಿದುಕೊಂಡೇ ನಡೆಯುತ್ತಿರುವಾಗ, ಬದುಕಿನೆದುರು ಮುಕ್ತಿಮಾರ್ಗವೊಂದು ತೆರೆದುಕೊಳ್ಳಬೇಕಾದ ಜರೂರಿರುತ್ತದೆ. ಭೂತವನ್ನು ಮರೆತ ಭವಿಷ್ಯತ್ತಿನೆಡೆಗಿನ ಧಾವಂತದ ಹಾದಿಯಲ್ಲಿ ‘ಸೇವೆ’ ಎಂಬ ಸಾವಧಾನದ ತಂಗುದಾಣಗಳು ಅಗತ್ಯ. ಒಳಗಿನ ಆರ್ದ್ರತೆ, ಪ್ರೀತಿ- ಅಂತಃಕರಣಗಳ ಪಸೆಯಾರದಂತೆ ಕಾಪಿಡುವ ಮಾರ್ಗವಾಗಿ, ಮತ್ತಷ್ಟು ಮನುಷ್ಯರಾಗಿ ಉಳಿಯುವ ಸಲುವಾಗಿ...

ನಮಗೆಲ್ಲ ಅನ್ನ, ಅರಿವು, ನೆರಳನ್ನು ನೀಡಿ ಪೊರೆವ ಸಮಾಜದ ಋಣಸಂದಾಯವು ನಮ್ಮೊಟ್ಟಿಗೇ ಸಾಗಬೇಕು. ನಿಸ್ವಾರ್ಥ ಸೇವೆಯಲ್ಲಿಯೇ ದೈವತ್ವವನ್ನೂ ಮೋಕ್ಷವನ್ನೂ ಹುಡುಕಿಕೊಳ್ಳಬೇಕು. ಸೇವೆಯೆಂಬುದು ತನ್ನನ್ನು ತಾನು ಋಣಭಾರದಿಂದ ಮುಕ್ತಗೊಳಿಸಿಕೊಳ್ಳಲು ಸಾಗಬೇಕಾದ ದಾರಿಯೇ ಹೊರತು ಅದನ್ನು ಉಪಕಾರವೆಂದು ಭ್ರಮಿಸಬೇಕಾದ್ದಿಲ್ಲ.

ಹಾಗೆ ನೋಡಿದರೆ ನಿರುಪದ್ರವಿಗಳಾಗಿ ನಿರಾಡಂಬರದ ಬದುಕು ಸಾಗಿಸುವ ಇತರೆ ಪರಿಸರಸ್ನೇಹಿ ಜೀವಜಂತುಗಳಿಗಿಂತ ಮನುಷ್ಯನಿಗೇ ಹೆಚ್ಚು ಋಣಭಾರವಿದೆ. ಪ್ರೀತಿ, ತ್ಯಾಗ ಮತ್ತು ಋಣಸಂದಾಯದ ಮಾದರಿಯಿಂದಷ್ಟೇ ಮನುಷ್ಯ ಭೂಗ್ರಹದಲ್ಲಿ ವಿಭಿನ್ನನೂ ಅನನ್ಯನೂ ಆಗಿದ್ದಾನೆ. ‘ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿಯೂ ನಿನ್ನವಳಲ್ಲ. ಅವು ಜಗಕ್ಕಿಕ್ಕಿದ ವಿಧಿ...’ ಎಂದ ಅಲ್ಲಮನೂ ಲೌಕಿಕವನ್ನು ಧ್ಯಾನಿಸಿದ್ದ.

ಕೊರೊನೋತ್ತರ ಕಾಲಘಟ್ಟವಂತೂ ಜನಜೀವನ ವನ್ನು ಕಡುಕಷ್ಟಕ್ಕೆ ತಳ್ಳಿದೆ. ಕಸುವು- ಕಸುಬುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದವರನ್ನಿಲ್ಲಿ ಲೆಕ್ಕವಿಟ್ಟವರಿಲ್ಲ. ಸಂಕಟಕಾಲದಲ್ಲಿ ಬಲಿಷ್ಠರ ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ! ಇಲ್ಲದವರ ಅವಶ್ಯಕತೆಗಳಿಗೆ ಆಸರೆಯಾಗಿ ಉಳ್ಳವರು ಒದಗಬೇಕಾದ್ದು ಮಾನವೀಯ ಧರ್ಮ. ಅದಕ್ಕೆ ಸೇವೆ ಅನ್ನುವ ಹೆಸರಿದೆ. ‘ಸಂತೋಷಂ ಜನಯೇತ್ ಪ್ರಾಜ್ಞಃ ತದೇವ ಈಶ್ವರ ಪೂಜನಂ’– ಜನ್ಮವೆತ್ತಿದ ಪ್ರತಿಜೀವವೂ ದೇವರ ರೂಪವಾಗಿರುವುದರಿಂದ ಜೀವರಾಶಿಗಳನ್ನು ಸಂತೋಷಪಡಿಸುವುದೇ ಭಗವಂತನ ಪೂಜೆಯೆಂಬ ವಾಸ್ತವವನ್ನು ಪರಿಭಾವಿಸಬೇಕಿದೆ.

ಬೈಬಲ್‍ನಲ್ಲಿ ‘ಪ್ರಾರ್ಥಿಸುವ ನೂರು ಕೈಗಳಿಗಿಂತ ಸಹಾಯಕ್ಕೊದಗುವ ಕೈಗಳೆರಡು ಮೇಲು’ ಅಂತಿದೆ. ಸೇವೆಯಲ್ಲಿ ಚಿಕ್ಕದು ದೊಡ್ಡದೆಂಬ ಭೇದವಿಲ್ಲ. ರಾಮಾಯಣದ ಸೀತಾಪಹರಣದ ಸಮಯದಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟುವ ಕಾರ್ಯವು ಭರದಿಂದ ಸಾಗಿರುವ ಸಂದರ್ಭವದು. ಬಲಾಢ್ಯ ವಾನರ ಸೇನೆಯು ಅನಾಮತ್ತಾಗಿ ಕಲ್ಲುಬಂಡೆ, ಬೆಟ್ಟಗುಡ್ಡಗಳನ್ನು ತಂದೊಡ್ಡುತ್ತಿದ್ದರೆ ಪುಟ್ಟ ಅಳಿಲೊಂದು ಕೈಲಾದಷ್ಟು ಹಿಡಿ ಮರಳನ್ನು ತಂದುತಂದು ಸುರಿಯುತ್ತಿತ್ತು.

‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಕುವೆಂಪು ಕಂಡಂತೆ, ಪ್ರಭು ಶ್ರೀರಾಮನ ದೃಷ್ಟಿಯಲ್ಲಿ ಅವೆರಡಕ್ಕೂ ಒಂದೇ ಮಹತ್ವ. ಏಕೆಂದರೆ ರಾಮ ನೋಡಿದ್ದು ತೋಳ್ಬಲವನ್ನಲ್ಲ... ಎದೆಯಾಳವನ್ನು!

ಕುರಾನ್‍ನಲ್ಲೂ ಇಂಥದ್ದೇ ಘಟನೆಯೊಂದಿದೆ. ದುರಹಂಕಾರಿ ಚಕ್ರವರ್ತಿ ನಮ್ರಾಜ್‍ನ ಕೆಂಗಣ್ಣಿಗೆ ಗುರಿಯಾಗುವ ಇಬ್ರಾಹಿಂಗೆ ಹೊಡೆತದ ಶಿಕ್ಷೆಯೊಂದಿಗೆ ಬೆಂಕಿಗಾಹುತಿಗೆ ಈಡುಮಾಡಲಾಗುತ್ತದೆ. ಅಲ್ಲಿಯ ಉರಿಯುವ ಜ್ವಾಲೆಯ ಮೇಲೆ ‘ಅವಾಬಿಲ್’ ಎಂಬ ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಹನಿ ನೀರನ್ನು ತಂದು ಸುರಿದು ಬೆಂಕಿಯನ್ನಾರಿಸುವ ಪ್ರಯತ್ನ ಮಾಡುತ್ತಿರುತ್ತದೆ! ಕಡೆಗೆ ಬೆಂಕಿಯು ಹೂವಾಗಿ ಅರಳಿ ಇಬ್ರಾಹಿಂ ಮತ್ತಷ್ಟು ಪ್ರಖರನಾಗಿ ಹೊರಬರುತ್ತಾನೆ. ಇಲ್ಲಿಯೂ ಪುಟ್ಟಹಕ್ಕಿಯೊಂದು ತೋರಿದ್ದ ಸೇವಾಮನೋಭಾವವನ್ನು ಬಹು ಶ್ರೇಷ್ಠವಾದುದೆಂದು ನಂಬಲಾಗಿದೆ.

ಗೀತೆಯಲ್ಲಿ ‘ಕರ್ಮಣ್ಯೇ ವಾದಿಕಾರಸ್ಥೇ ಮಾಫಲೇಷು ಕದಾಚನಾ...’ ಎಂದಿದೆ. ಲಾಭದಾಸೆ, ಪ್ರತಿಫಲಾಪೇಕ್ಷೆ, ಕೀರ್ತಿಯಾಸೆಗಳನ್ನು ಮರೆತು, ಕ್ಯಾಮೆರಾಗಳನ್ನು ಮನೆಯಲ್ಲೇ ಬಿಟ್ಟು ಮಾಡುವ ಸೇವೆಯು ಹೆಚ್ಚು ಮೌಲ್ಯಯುತ. ಲಾಭದಾಸೆ ಮುಗಿವಲ್ಲಿಂದಲೇ ಮನುಷ್ಯತ್ವದ ಆರಂಭ. ‘ಕರ್ಮಕ್ಕಾಗಿ ಕರ್ಮ ಮಾಡುವ ಮಹನೀಯನನ್ನು ಕಾಣಲು, ನಾನು ಬೇಕಾದರೆ ನಾನು ನನ್ನ ಮೊಣಕೈ, ಮೊಣಕಾಲುಗಳ ಮೇಲೆ ಇಪ್ಪತ್ತು ಮೈಲಿ ನಡೆಯಲು ಸಿದ್ಧನಿದ್ದೇನೆ’ ಎಂಬ ಸ್ವಾಮಿ ವಿವೇಕಾನಂದರ ಮಾತೇ ನಿಸ್ವಾರ್ಥ ಕರ್ಮದ ಅಭಾವವನ್ನು ಸೂಚಿಸುತ್ತದೆ! ಸಮಾಜಸೇವೆಯೂ ಹೂಡಿಕೆಯಂತೆ ಒಂದು ದಂಧೆಯಂತಾಗಿರುವ ಹೊತ್ತಿನಲ್ಲಿ ಕೊಡುಗೆಗಳನ್ನು ಪ್ರಚಾರತಂತ್ರಗಳಾಗಿ ಬಳಸಿಕೊಳ್ಳುವ ಸ್ವಾರ್ಥಸಾಧಕರಿಗಿಲ್ಲಿ ಬರವಿಲ್ಲ.

ನೆನಪಿಡಬೇಕಾದ್ದು, ಜಗವ ಬೆಳಗುವ ನೇಸರ, ಇಳೆಗೆ ಜೀವಕಳೆ ತರುವ ಮಳೆ, ತನ್ನ ಪಾತ್ರದುದ್ದಕ್ಕೂ ಹಸಿರುಕ್ಕಿಸಿ ಹರಿವ ನದಿ, ಸುತ್ತ ಸುಳಿದಾಡಿ ಜೀವಾನಿಲ ಸೂಸುವ ಗಾಳಿ, ಹಣ್ಣು-ನೆರಳು ನೀಡಿ ಜೀವ ಪೊರೆವ ಮರಗಿಡಗಳೆಂದಿಗೂ ಸ್ವಾರ್ಥಕ್ಕಾಗಿ ಅಸ್ತಿತ್ವದಲ್ಲಿರವು, ಪರಹಿತಕ್ಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT