ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಮತ್ತು ಸತ್ಯದ ನೆಲೆಗಟ್ಟು

ದೇಶದ ಭವಿಷ್ಯ ರೂಪಿಸಬೇಕಾದ ಮಕ್ಕಳು ಹಾಗೂ ಯುವಪೀಳಿಗೆಯು ಟಿಪ್ಪು ಆಡಳಿತ ವೈಖರಿಯ ನೈಜ ಅಂಶಗಳನ್ನು ತಿಳಿದುಕೊಳ್ಳುವುದು ಬೇಡವೇ?
Last Updated 31 ಅಕ್ಟೋಬರ್ 2019, 20:04 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಮೂರು ತಿಂಗಳ ಹಿಂದೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ, ಈ ಹಿಂದೆ ಬಹುದೊಡ್ಡ ಸಂಘರ್ಷಕ್ಕೆ ಕಾರಣವಾಗಿದ್ದ ಸರ್ಕಾರಿ ಪ್ರಾಯೋಜಿತ ಟಿಪ್ಪು ಜಯಂತಿಯನ್ನು ರದ್ದು ಮಾಡಿತು. ಶಾಸಕ ಅಪ್ಪಚ್ಚು ರಂಜನ್ ಮನವಿ ಮೇರೆಗೆ, ಶಿಕ್ಷಣ ಸಚಿವರು ಟಿಪ್ಪು ಪಠ್ಯ ರದ್ದತಿಯ ಬಗ್ಗೆ ಪರಿಶೀಲನೆ ಮಾಡುವ ಭರವಸೆ ನೀಡಿದ್ದರಿಂದ ವಿವಾದದ ಕಿಡಿ ಹೊತ್ತಿಕೊಂಡಿತು. ಆದರೆ, ಪಠ್ಯ ರದ್ದತಿಯ ಬಗ್ಗೆ ಇದೀಗ ಮುಖ್ಯಮಂತ್ರಿ ಹೇಳಿಕೆ ನೀಡಿದ ನಂತರ, ವಿವಾದ ತೀವ್ರ ಸ್ವರೂಪ ಪಡೆದಿದೆ. ರಾಜಕೀಯ ಕಾರಣಕ್ಕೆ ಪರ– ವಿರೋಧದ ಚರ್ಚೆಗಳು ನಡೆದಿವೆ. ಹಾಗಾದರೆ, ಪಠ್ಯದಲ್ಲಿ ಟಿಪ್ಪುವಿನ ಅಧ್ಯಾಯ ರದ್ದಾಗುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಭಾರತದಲ್ಲಿ ಪ್ರತಿಯೊಂದು ನಡಾವಳಿಯೂ ಸಾಂವಿಧಾನಕ್ಕೆ ಅನುಗುಣವಾಗಿಯೇ ನಡೆಯಬೇಕು. ಕಾರ್ಯಾಂಗಕ್ಕೆ ಹಾಗೂ ಶಾಸಕಾಂಗಕ್ಕೆ ತಮ್ಮದೇ ಅಧಿಕಾರವಿದ್ದಾಗ್ಯೂ ಸಂವಿಧಾನವನ್ನು ವ್ಯಾಖ್ಯಾನಿಸುವ ಅಧಿಕಾರವಿರುವುದು ನ್ಯಾಯಾಂಗಕ್ಕೆ ಮಾತ್ರ. ಸರ್ಕಾರ ರೂಪಿಸುವ ನಿಯಮ ಅಥವಾ ಶಾಸನವು ಸಂವಿಧಾನ ದ ಮೂಲ ಸ್ವರೂಪಕ್ಕೆ ವಿರೋಧವಾಗಿದ್ದರೆ, ಅದನ್ನು ಅಸಿಂಧುಗೊಳಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ.

ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ, ಅದಕ್ಕೆ ಸಂಬಂಧಿಸಿದಂತೆ ಶಾಸನ ಮಾಡುವ ಅಧಿಕಾರವು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಇದೆ. ಆದರೆ, ಕೇಂದ್ರದ ಕಾನೂನು ಅಂತಿಮ ಎಂಬ ನಿಯಮ ಇದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದೆಯಾದರೂ ಪಠ್ಯ ವಿಷಯವೊಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಸಾಧ್ಯದ ಮಾತೇ ಸರಿ. ಕಾರಣವಿಷ್ಟೆ, 2013ರಲ್ಲಿ ಕೇಂದ್ರವು ಎನ್‌ಸಿಇಆರ್‌ಟಿ ನಿರ್ದೇಶನದ ಅಡಿ ಎಲ್ಲಾ ರಾಜ್ಯಗಳು ಪಠ್ಯಪರಿಷ್ಕರಣೆಯನ್ನು ಏಕರೂಪದಲ್ಲಿ ಮಾಡಬೇಕೆಂದು ಆದೇಶಿಸಿದೆ. ಗುಜರಾತ್, ಕರ್ನಾಟಕ ಸೇರಿ ಕೆಲವು ರಾಜ್ಯಗಳು, ಸಿಬಿಎಸ್‌ಇ ಪಠ್ಯವನ್ನೇತುಸು ಪರಿಷ್ಕೃತ ರೂಪದಲ್ಲಿ ಬಹುಮಟ್ಟಿಗೆ ಅಳವಡಿಸಿಕೊಂಡಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಇಂದು ಗ್ರೇಡ್‌- 1ರಿಂದ ಗ್ರೇಡ್‌- 12ರವರೆಗೂ ಏಕರೂಪ ಪಠ್ಯವಿದೆ. 2013ರ ಆದೇಶದಲ್ಲಿ ಸ್ಥಳೀಯ ಆದ್ಯತೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ ಎಲ್ಲಾ ರಾಜ್ಯಗಳು ಏಕರೂಪದಲ್ಲಿ ಪಠ್ಯ ಪರಿಷ್ಕರಣೆ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಟಿಪ್ಪು ಪಠ್ಯವನ್ನು ರದ್ದುಗೊಳಿಸಬೇಕು ಎಂದು ಒಂದು ವೇಳೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಮತ್ತು ಅದಕ್ಕೆ ಕೇಂದ್ರ ಅನುಮೋದನೆ ನೀಡಿದರೆ ಅದು ಬೇರೆ ರೀತಿಯ ಸಂದೇಶ ರವಾನಿಸುವ ಸಾಧ್ಯತೆ ಇದೆ. ಮುಂದೆ ಅದನ್ನೇ ನೆಪವಾಗಿ ಇರಿಸಿಕೊಂಡು ಇತರ ಕೆಲವು ರಾಜ್ಯಗಳು ಏಕರೂಪ ಪರಿಷ್ಕರಣೆಗೆ ಹಿಂದೇಟು ಹಾಕುವ ಅಪಾಯ ಇದ್ದೇ ಇದೆ.

ಶಿಕ್ಷಣವು ಮೂಲಭೂತ ಹಕ್ಕಾಗಿರುವುದರಿಂದ, ಯಾವುದೇ ವ್ಯಕ್ತಿ ಈ ಪಠ್ಯ ರದ್ದತಿಯ ವಿರುದ್ಧ ನ್ಯಾಯಾಲಯದ ಮೊರೆ ಹೋದರೆ, ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ಸಂವಿಧಾನದ 24ನೇ ತಿದ್ದುಪಡಿಯ ಅನ್ವಯ ಮೂಲಭೂತ ಹಕ್ಕುಗಳ ವಿಚಾರದಲ್ಲಿ ತಿದ್ದುಪಡಿ ತರಲು ಅವಕಾಶವಿದೆ. ಆದರೆ, ಸಂವಿಧಾನದ ಮೂಲ ಸ್ವರೂಪಕ್ಕೆ ಚ್ಯುತಿ ಆಗದ ರೀತಿಯಲ್ಲಿ ಈ ತಿದ್ದುಪಡಿ ಇರಬೇಕು.1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಈ ಅಂಶವನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಇಲ್ಲಿ ಪರಿಗಣಿಸಬೇಕಾದ ಮತ್ತೊಂದು ಪ್ರಮುಖ ಅಂಶವೂ ಇದೆ. ಯಾವುದೋ ಒಂದು ಪಕ್ಷದ ನೇತೃತ್ವದ ಸರ್ಕಾರವು ರದ್ದು ಮಾಡಿದ ಆದೇಶವನ್ನು ಮುಂದೆ ಬರುವ ಮತ್ತೊಂದು ಪಕ್ಷದ ನೇತೃತ್ವದ ಸರ್ಕಾರವು ತೆರವು ಮಾಡಲು ಅವಕಾಶವಿದೆ. ಹಾಗಾದರೆ, ದೇಶದ ಭವಿಷ್ಯ ರೂಪಿಸಬೇಕಾದ ಮಕ್ಕಳು ಹಾಗೂ ಯುವಪೀಳಿಗೆಯು ಟಿಪ್ಪು ಆಡಳಿತ ವೈಖರಿಯ ನೈಜ ಅಂಶಗಳನ್ನು ತಿಳಿದುಕೊಳ್ಳುವುದು ಬೇಡವೇ? ಟಿಪ್ಪು ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿದೆಯೇ ಇಲ್ಲವೇ ಅವುಗಳು ನಿರಾಧಾರವಾದವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯುವ ಸಮುದಾಯಕ್ಕೆ ಸತ್ಯದ ನೆಲೆಗಟ್ಟಿನ ಇತಿಹಾಸವನ್ನು ಅರ್ಥೈಸುವ ಅನಿವಾರ್ಯ ಇದೆ ಎಂದು ಭಾವಿಸಿದರೂ ಆ ಅರ್ಥೈಸುವಿಕೆಯ ಬಗೆ ಹೇಗೆ ಎಂಬುದನ್ನು ನಿರ್ಧರಿಸಬೇಕಾದುದು ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT