ಸೋಮವಾರ, ಆಗಸ್ಟ್ 2, 2021
25 °C
ಕೊರೊನಾದಿಂದ ಸೃಷ್ಟಿಯಾಗಿರುವ ಅನಿವಾರ್ಯ ಪರಿಸ್ಥಿತಿಯನ್ನು ಒಂದು ಅವಕಾಶವನ್ನಾಗಿ ಬಳಸಿಕೊಳ್ಳಲು ಶಾಲಾ ಕಾಲೇಜುಗಳು ಸೃಜನಶೀಲತೆಯನ್ನು ತೋರಬೇಕಿದೆ

ಸಂಗತ: ಆನ್‍ಲೈನ್ ತರಗತಿ: ನಾವೀನ್ಯದಿಂದ ಸಹ್ಯ

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಲಾಕ್‍ಡೌನ್ ರಜೆಯಲ್ಲಿ ಆನ್‍ಲೈನ್ ಮೂಲಕ ಯೋಗ ಕಲಿಯುವ ಕೋರ್ಸ್ ಒಂದಕ್ಕೆ ದಾಖಲಾಗಿರುವೆ. ಯೋಗ ಕೌಶಲವನ್ನು ಕೆಲವು ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ ಕಲಿಸುತ್ತಿದ್ದಾರೆ. 70ಕ್ಕೂ ಅಧಿಕ ಕಲಿಕಾರ್ಥಿಗಳಿಗೆ ನಾಲ್ವರು ಶಿಕ್ಷಕರು ಯೋಗ ಕಲಿಕೆಗೆ ಅನುಕೂಲ ಕಲ್ಪಿಸುತ್ತಿದ್ದಾರೆ.

ಒಬ್ಬರು ಶಿಕ್ಷಕರು ಯೋಗಾಸನ ಮಾಡುವ ವಿಧಾನವನ್ನು ಸರಳ ಸೂಚನೆಗಳ ಸಹಿತ ವಿವರಿಸಿದರೆ, ಉಳಿದ ಶಿಕ್ಷಕರು ಕಲಿಕಾರ್ಥಿಗಳು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ಗಮನಿಸಿ, ದೋಷಗಳನ್ನು ತಿದ್ದಿಕೊಳ್ಳಲು ಸಲಹೆ ಸೂಚನೆ ನೀಡುತ್ತಾರೆ. ಎಲ್ಲಾ ಕಲಿಕಾರ್ಥಿಗಳು ತಾವು ಶಿಕ್ಷಕರಿಗೆ ಕಾಣಿಸಲು ಅನುಕೂಲವಾಗುವಂತೆ ತಮ್ಮ ಮೊಬೈಲ್ ಅಥವಾ ಲ್ಯಾಪ್‍ಟಾಪ್‍ನ ವಿಡಿಯೊವನ್ನು ಕಡ್ಡಾಯವಾಗಿ ಆನ್ ಮಾಡಲೇಬೇಕು. ಆ ಮೂಲಕ ಪ್ರತೀ ಕಲಿಕಾರ್ಥಿಯನ್ನುನಿಗಾದಲ್ಲಿ ಇರಿಸಿ, ಮೃದು ಮಾತುಗಳಿಂದ ಸಲಹೆ, ಸೂಚನೆಗಳನ್ನು ನೀಡಿ ಕಲಿಸಲಾಗುತ್ತದೆ.

ಕೊನೆಯ 10 ನಿಮಿಷಗಳಲ್ಲಿ ಎಲ್ಲಾ ಕಲಿಕಾರ್ಥಿಗಳನ್ನು ಝೂಮ್ ತಂತ್ರಾಂಶದಲ್ಲಿ ಲಭ್ಯವಿರುವ ಆಯ್ಕೆ ಬಳಸಿ, ಹಲವು ಗುಂಪುಗಳನ್ನಾಗಿ ಮಾಡಿ, ಅವರ ಅನುಭವಗಳನ್ನು ಹಂಚಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಪ್ರತಿದಿನವೂ ಒಂದೊಂದು ಸರಳ ಚಟುವಟಿಕೆಗಳನ್ನು ಮಾಡಲು ಕಲಿಕಾರ್ಥಿಗಳನ್ನು ಪ್ರೇರೇಪಿಸಿ, ಅದನ್ನು ಗುಂಪಿನಲ್ಲಿ ಹಂಚಿಕೊಳ್ಳಲು ತಿಳಿಸಲಾಗುತ್ತದೆ. ಆನ್‍ಲೈನ್ ಮೂಲಕ ಆಸಕ್ತಿಯುತವಾಗಿ ಕಲಿಕೆಯನ್ನುಂಟು ಮಾಡಲು ಸಾಧ್ಯವಿದೆ ಎಂಬುದನ್ನು ಇದರಿಂದ ನಾನು ಗಮನಿಸಿದೆ.

ಕೋವಿಡ್‍ನಿಂದ ಉದ್ಭವಿಸಿರುವ ಶೈಕ್ಷಣಿಕ ಬಿಕ್ಕಟ್ಟು ಇನ್ನೂ ಹಲವು ತಿಂಗಳುಗಳ ಕಾಲ ಮುಂದುವರಿಯುವ ಲಕ್ಷಣಗಳಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಮುಂದಿನ ಶೈಕ್ಷಣಿಕ ಸಾಲಿನ ತರಗತಿಗಳನ್ನು ಆನ್‍ಲೈನ್ ಮೂಲಕ ಪ್ರಾರಂಭಿಸಿವೆ. ಪ್ರತಿದಿನ 5ರಿಂದ 6 ಗಂಟೆಗಳ ಕಾಲ ಆನ್‍ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಹೆಚ್ಚಿನ ಶಾಲೆಗಳ ತರಗತಿಗಳು ಏಕತಾನತೆಯಿಂದ ಕೂಡಿರುತ್ತವೆ. ಮೊದಲೇ ಲಾಕ್‍ಡೌನ್ ಕಾರಣ ಮನೆಯಲ್ಲಿದ್ದು ಬೇಸರದಲ್ಲಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ತೀವ್ರ ಸಪ್ಪೆ, ನೀರಸ ಎನಿಸುವ ಸಾಧ್ಯತೆ ಇದೆ.

ಈ ಸನ್ನಿವೇಶ ಬಹು ದಿನ ಮುಂದುವರಿದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವ ಅಪಾಯವಿದೆ. ಪಠ್ಯಾಂಶಗಳನ್ನು ಪೂರೈಸಿ, ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಏಕೈಕ ಉದ್ದೇಶವನ್ನು ಈ ತರಗತಿಗಳು ಹೊಂದಿವೆ. ಕಳೆದ ವರ್ಷದಿಂದಲೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದರೂ ತಾವು ಕಲಿಸುವ ವಿಧಾನದಲ್ಲಿ ಯಾವುದೇ ರೀತಿಯ ನಾವೀನ್ಯ, ಪ್ರಯೋಗಶೀಲತೆಯನ್ನು ಉಪಯೋಗಿಸುತ್ತಿರುವುದು ಕಂಡುಬರುತ್ತಿಲ್ಲ.

ಪ್ರಸ್ತುತ ಕೋವಿಡ್ ಸನ್ನಿವೇಶವು ಲಭ್ಯವಿರುವ ಮಿತಿಗಳಲ್ಲಿ ಪರ್ಯಾಯ ಕಲಿಕಾ ವಿಧಾನಗಳನ್ನು ಬಳಸಲು ಶಾಲಾ ಕಾಲೇಜುಗಳಿಗೆ ಅವಕಾಶ ಕಲ್ಪಿಸ ಬೇಕಿದೆ. ಈಗ ಸೃಷ್ಟಿಯಾಗಿರುವ ಅನಿವಾರ್ಯ ಪರಿಸ್ಥಿತಿಯನ್ನು ಒಂದು ಅವಕಾಶವನ್ನಾಗಿ ಬಳಸಿಕೊಳ್ಳಲು ಶಾಲಾ ಕಾಲೇಜುಗಳು ಸೃಜನಶೀಲತೆಯನ್ನು ತೋರಬೇಕಿದೆ. ತಂತ್ರಜ್ಞಾನದಿಂದ ಕಲಿಕೆ ಸಾಗಬೇಕಾದ ಕಾರಣ, ಆಫ್‍ಲೈನ್ ತರಗತಿಗಳಿಗಿಂತ ಆನ್‍ಲೈನ್ ತರಗತಿಗಳ ಅವಧಿ ಕಡಿಮೆ ಇರಬೇಕಾಗುತ್ತದೆ. ಈ ಕುರಿತು ಈಗಾಗಲೇ ಸರ್ಕಾರವೇ ಹೊರಡಿಸಿರುವ ಮಾರ್ಗಸೂಚಿಗಳಂತೆ ಕಲಿಕಾ ಅವಧಿಯನ್ನು ಸೀಮಿತಗೊಳಿಸುವುದು ಪರಿಣಾಮಕಾರಿ.

ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದನ್ನು ಗಮನದಲ್ಲಿ ಇಟ್ಟುಕೊಂಡು ಆನ್‍ಲೈನ್ ತರಗತಿಯ ಚಟುವಟಿಕೆಗಳನ್ನು ರೂಪಿಸಲು ಸಾಧ್ಯವಿದೆ. ಪ್ರತೀ ವಿದ್ಯಾರ್ಥಿಯನ್ನು ನಿಗಾದಲ್ಲಿರಿಸಿ, ತರಗತಿಯಲ್ಲಿ ವಿದ್ಯಾರ್ಥಿಗಳು ತೋರುವ ವರ್ತನೆ, ಅವರ ಕಲಿಕಾ ಮಟ್ಟ, ಅವರು ತೋರುವ ಸ್ಪಂದನೆಯನ್ನು ವಿಶ್ಲೇಷಿಸಿ, ಅವರ ಪಾಲ್ಗೊಳ್ಳುವಿಕೆ ಆಧಾರದ ಮೇಲೆ ವಿದ್ಯಾರ್ಥಿವಾರು ಕಾರ್ಯತಂತ್ರವನ್ನು ರೂಪಿಸಬೇಕು.

ಶಿಕ್ಷಕರು ಅರ್ಧ ಗಂಟೆ ಪಾಠ ಬೋಧನೆ ಮಾಡಿ ನಂತರ ವಿದ್ಯಾರ್ಥಿಗಳ ಚಿಕ್ಕ ಗುಂಪುಗಳಲ್ಲಿ ಪರಸ್ಪರ ಚರ್ಚೆ, ಸಂವಹನಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಪಾಠಕ್ಕೆ ಸಂಬಂಧಿಸಿದಂತೆ ಸರಳ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಿರ್ವಹಿಸಿ, ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕು.

ಆನ್‍ಲೈನ್ ತರಗತಿಗಳು ಒಂದಷ್ಟು ಹಾಸ್ಯ, ಲಘು ಮಾತುಕತೆ, ಹರಟೆಗಳಿಂದ ಕೂಡಿದ್ದಲ್ಲಿ ವಿದ್ಯಾರ್ಥಿಗಳು ಸಹಜವಾಗಿ ಅವುಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ, ಉತ್ಸಾಹ ತೋರುತ್ತಾರೆ ಹಾಗೂ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ತರಗತಿಯ ನಂತರ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಾಯ, ಬೆಂಬಲ ಹಾಗೂ ಸಹಪಾಠಿಗಳ ಚಿಕ್ಕ ಗುಂಪುಗಳಲ್ಲಿ ದೂರವಾಣಿ ಮೂಲಕ ಸಂವಹನದಲ್ಲಿ ತೊಡಗಿಕೊಂಡು ಪಾಠಕ್ಕೆ ಪೂರಕವಾದ ಕಲಿಕೆ, ಚಟುವಟಿಕೆಗಳಲ್ಲಿ ಪಾಲ್ಗೊಂಡು, ತಮಗಾದ ಕಲಿಕೆಯ ಅನುಭವಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಯೋಜನೆ ರೂಪಿಸಬೇಕು. ಶಾಲೆಯ ಮೂರು– ನಾಲ್ಕು ಮಂದಿ ಶಿಕ್ಷಕರು ಕೂಡಿ ಪ್ರತೀ ಆನ್‍ಲೈನ್ ತರಗತಿಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸೂಕ್ತ ತಯಾರಿ ನಡೆಸಬೇಕು.

ತರಗತಿಗಳ ಸಂಖ್ಯೆ ಕಡಿಮೆಯಾದರೂ ಆನ್‍ಲೈನ್ ತರಗತಿಯು ನಾವೀನ್ಯ ಹಾಗೂ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕೂಡಿದ್ದಲ್ಲಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು