ಶನಿವಾರ, ಜೂನ್ 25, 2022
24 °C

ಗೆದ್ದ ‘ಜನರ ಸೇವಕ’!

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಉಕ್ರೇನ್ ಎಂಬ ದೇಶದ ಹೆಸರು ನೀವು ಕೇಳಿರಬಹುದು. ಅಲ್ಲಿ ಈಚೆಗೆ ಒಂದು ದೊಡ್ಡ ‘ಸ್ಫೋಟ’ ಆಯಿತು! ಅದು, ಇಡೀ ವಿಶ್ವವನ್ನು ಬೆರಗುಗೊಳಿಸು ವಂತಹ ‘ಸ್ಫೋಟ’ವಾಗಿದ್ದರೂ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ಒಬ್ಬರಿಗೆ ಬಿಟ್ಟರೆ ಬೇರೆ ಯಾರಿಗೂ ಅನಾಹುತ ಸಂಭವಿಸಿರಲಿಲ್ಲ. ಹ್ಞಾಂ! ಅಂದಹಾಗೆ ಸ್ಫೋಟ ಅಂದ ಕೂಡಲೇ ಬಾಂಬ್ ಸ್ಫೋಟ ಎಂದು ಭಾವಿಸಬೇಡಿ. ಇದೊಂದು ‘ಹಾಸ್ಯ ಸ್ಫೋಟ’!

ಕಳೆದ ನಾಲ್ಕು ವರ್ಷಗಳಿಂದ ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಹಾಸ್ಯನಟರೊಬ್ಬರು ತಮಾಷೆಗೆಂದು ಅಧ್ಯಕೀಯ ಚುನಾವಣೆಗೆ ನಿಂತರೆ, ಜನ ಅವರಿಗೆ ನೇರವಾಗಿ ದೇಶದ ಅಧ್ಯಕ್ಷ ಸ್ಥಾನ ಕೊಟ್ಟುಬಿಡುವುದೇ?!

ಉಕ್ರೇನಿನ ಹೊಸ ಅಧ್ಯಕ್ಷ ವೊಲೊಡಿಮೆರ್ ಝಿಲೆನ್ಸ್‌ಕಿ ಅವರ ಹೆಸರಿನ ಉಚ್ಚಾರಣೆ ಕಷ್ಟವಾದರೂ ನೆನಪಿಡಲೇಬೇಕಾಗಿದೆ. ಯಾಕೆಂದರೆ ಜನಪ್ರಿಯ ಹಾಸ್ಯ ಟಿ.ವಿ. ಧಾರಾವಾಹಿ ‘ಸರ್ವೆಂಟ್ ಆಫ್ ದ ಪೀಪಲ್‌’ನಲ್ಲಿ (ಜನರ ಸೇವಕ) ನಾಯಕನಾಗಿ ನಟಿಸಿದ ಝಿಲೆನ್ಸ್‌ಕಿ ಈಗ ಇತಿ-ಹಾಸ್ಯವನ್ನೇ ಸೃಷ್ಟಿಸಿರುವುದು ತಮಾಷೆಯ ವಿಚಾರವಲ್ಲ.

ಚುನಾವಣೆಗೆ ನಿಲ್ಲುವ ಎಲ್ಲ ಅಭ್ಯರ್ಥಿಗಳೂ ‘ನಾನು ಜನರ ಸೇವಕ’ ಅಂದುಕೊಂಡೇ ನಮ್ಮಲ್ಲಿ ಮತಭಿಕ್ಷೆ ಕೇಳುತ್ತಾರೆ. ಅಷ್ಟೇ ಅಲ್ಲ, ಅದೇನೇನೋ ತಂತ್ರ– ಕುತಂತ್ರಗಳನ್ನು ಹೆಣೆದು, ಆಪದ್ಬಾಂಧವರ ಕೈಯಲ್ಲಿ ಹಣದ ಮೂಟೆ ಕೊಟ್ಟು, ಕಾರಿನ ಸ್ಟೆಪ್ನಿಯೊಳಗೆ ಹಣ ತುರುಕಿಸಿಟ್ಟು, ಪ್ರಚಾರದ ಬದಲು ಅಪಪ್ರಚಾರಗಳನ್ನೇ ಮಾಡಬೇಕಾಗಿರುವಾಗ, ಒಬ್ಬ ಹಾಸ್ಯನಟ ಅದೇನನ್ನೂ ಮಾಡದೆ ಹಾಗೇ ಸುಖಾಸುಮ್ಮನೆ ತನ್ನ ದೇಶದಲ್ಲಿ ‘ಹಿಸ್ ಹೈನೆಸ್’ ಆಗಿಬಿಟ್ಟರಲ್ಲ! ಭ್ರಷ್ಟಾಚಾರ ವಿರೋಧಿ ಶಾಲಾ ಮಾಸ್ತರನೊಬ್ಬ ದೇಶದ ಅಧ್ಯಕ್ಷನಾಗಿ ಏನೇನೆಲ್ಲಾ ಮಾಡುತ್ತಾನೆ ಎಂಬುದೇ ಆ ಟಿ.ವಿ. ಧಾರಾವಾಹಿಯ ಕಥಾವಸ್ತು. ಪಾತ್ರಧಾರಿ ಝಿಲೆನ್ಸ್‌ಕಿ ನಿಜಜೀವನದಲ್ಲೂ ಹಾಗೇ ಮಾಡಿ ತೋರಿಸಲಿ ಎಂಬುದು ಉಕ್ರೇನ್ ಜನರ ಸವಾಲೋ ಅಥವಾ ಅತಿವಿಶ್ವಾಸವೋ ಎಂದು ಇನ್ನೂ ತಿಳಿದುಬಂದಿಲ್ಲ. ಪಾಪ, ಸೋತ ಅಧ್ಯಕ್ಷ ಪೆಟ್ರೊ ಅವರಿಗೆ ಮುಂದಿನ ಧಾರಾವಾಹಿಗಳಲ್ಲಿ ನಟಿಸಲು ಬೇಡಿಕೆ ಬರಬಹುದೇನೋ!

ನಮ್ಮ ದೇಶದಲ್ಲೂ ಎಂಜಿಆರ್, ಎನ್‌ಟಿಆರ್‌, ಜಯಾಲಲಿತಾರಂತಹ ನಟ–ನಟಿಯರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಒಂದು ದೇಶದ ಅಗ್ರಸ್ಥಾನದಲ್ಲಿ ಕೂರುವುದು ಬೇರೆ ಮಾತು. ಅದರಲ್ಲೂ ಸಾಮಾನ್ಯವಾಗಿ ಯಾರೂ ಗಂಭೀರವಾಗಿ ತೆಗೆದುಕೊಳ್ಳದ ಒಬ್ಬ ಹಾಸ್ಯನಟ ಆ ಸ್ಥಾನಕ್ಕೇರುವುದೇ? ‘ಹೆಚ್ಚೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಬಹುದಪ್ಪಾ’ ಎಂದು ಉಮಾಕ್ಕ ಹೇಳಬಹುದು. ‘ಯಾಕೆ ಸ್ವಾಮಿ, ನಾನು ‘ಮುಖ್ಯಮಂತ್ರಿ’ ನಾಟಕದಲ್ಲಿ ನಟಿಸಿ ಅಷ್ಟೊಂದು ಪ್ರಖ್ಯಾತನಾದರೂ ರಾಜ್ಯದ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ತಾ?’ ಎಂದು ನಮ್ಮ ಚಂದ್ರಣ್ಣ ಕೂಡಾ ಗುನುಗುಟ್ಟಬಹುದು. ಇನ್ನು ನವರಸ ನಾಯಕರಿದ್ದಾರೆ. ಅವರಿಗೆ ಈಗ ‘ಜನ ಸೇವಕ’ ಎಂಬ ಟಿ.ವಿ. ಧಾರಾವಾಹಿ ಮಾಡುವ ಯೋಚನೆ ಬಂದರೂ ಆಶ್ಚರ್ಯವಿಲ್ಲ.

ನಮ್ಮ ನಟರ ಕತೆ ಬಿಡಿ. ಇಂಗ್ಲೆಂಡ್‌ನಲ್ಲಿ ಹಿಂದೊಮ್ಮೆ ಟಿ.ವಿ. ಧಾರಾವಾಹಿ ‘ಎಸ್, ಪ್ರೈಮ್ ಮಿನಿಸ್ಟರ್’ ಬಹಳ ಜನಪ್ರಿಯತೆ ಗಳಿಸಿತ್ತು. ಹಾಗೆಂದು ಅದರ ಪ್ರಧಾನಿ ಪಾತ್ರಧಾರಿ ಪಾಲ್ ಎಡ್ಡಿಂಗ್ಟನ್, ಬ್ರಿಟನ್‌ನ
ಪ್ರಧಾನಮಂತ್ರಿಯಾದರೇ? ಇಲ್ಲ.

ಹಾಗೆ ನೋಡಿದರೆ ಭಾರತದ ಪ್ರಜಾಪ್ರಭು ಗಳು ಬಹಳಷ್ಟು ‘ಜೋಕರ್ಸ್’ಗಳನ್ನು ಪಾರ್ಲಿಮೆಂಟಿಗೆ ಕಳಿಸಿಕೊಡುತ್ತಾರೆ. ಅದಕ್ಕಲ್ಲವೇ ಲೋಕಸಭೆಯನ್ನು ನಾವೆಲ್ಲಾ ಪ್ರೀತಿಯಿಂದ ‘ಜೋಕ್ ಸಭೆ’ ಎಂದು ಕರೆಯುವುದು. ಅದಿರಲಿ, ಚುನಾವಣೆ ಘೋಷಣೆಯಾದ ನಂತರ ಇಲ್ಲಿಯವರೆಗೆ ವಿವಿಧ ಪಕ್ಷಗಳ ಮುಖಂಡರು ಅದೆಷ್ಟು ‘ಕಾಮಿಡಿ’ ಮಾಡಲಿಲ್ಲ ಹೇಳಿ!

ಉಕ್ರೇನಿನ ಫಲಿತಾಂಶ ನೋಡಿದ ಮೇಲೆ, ನಮ್ಮ ದೇಶದ ‘ಪ್ರಧಾನ್ ಸೇವಕ್’, ತಮ್ಮ ಪ್ರಾಸಬದ್ಧ ಹಾಸ್ಯ ಚಟಾಕಿಗಳಿಂದ ಮತ್ತೊಮ್ಮೆ ಗೆದ್ದರೂ ಗೆಲ್ಲಬಹುದು ಎಂದು ಸ್ವತಃ ವಿರೋಧ ಪಕ್ಷಗಳಿಗೇ ಅನಿಸತೊಡಗಿದೆಯಂತೆ. ಕಳೆದ ಐದು ವರ್ಷಗಳಿಂದ ಅವರು ಅಚ್ಛೇ ದಿನ್, ವಿಕಾಸ್, ಬೇಟಿ ಬಚಾವೊ, ಸ್ಮಾರ್ಟ್ ಸಿಟಿಗಳಂತಹ ಭ್ರಮಾಲೋಕದಲ್ಲಿ ಸುತ್ತಾಡಿಸಿ ಜನರನ್ನು ನಕ್ಕು ನಗಿಸಲಿಲ್ಲವೇ?

ಈ ನಿಟ್ಟಿನಲ್ಲಿ ಕೈ-ಕಮಾಂಡರ್‌ಗೆ ಕೂಡಾ ಗೆಲ್ಲುವ ಸಾಧ್ಯತೆ ಇಲ್ಲವೆಂದೇನಿಲ್ಲ. ಅವರ ಪ್ರಸಿದ್ಧ ‘ಅಪ್ಪುಗೆ’, ಗಬ್ಬರ್ ಸಿಂಗ್ ಟ್ಯಾಕ್ಸ್ , ಬೆಂಗಳೂರು ರಾಜ್ಯದ ಹೇಳಿಕೆ, ಭಾಷಣ ಭಾಷಾಂತರಗಳ ಎಡವಟ್ಟು, ಪ್ರಧಾನಿ ಅವರನ್ನು ತಬ್ಬಿಬ್ಬು ಮಾಡಿದ ‘ಮೇರಾ ಜವಾಬ್ ಕೊ ಸವಾಲ್ ದೀಜಿಯೇ’ (ನನ್ನ ಉತ್ತರಗಳಿಗೆ ಪ್ರಶ್ನೆ ಕೊಡಿ!) ಹೇಳಿಕೆ...  ಹೀಗೆ ತಮ್ಮ ನೈಜ ಹಾಸ್ಯದ ಮೂಲಕ ಅವರು ಬೇಕಾದಷ್ಟು ರಂಜಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆಗೆ ಒಂದಿಷ್ಟು ಹಾಸ್ಯದ ಮಜಾ ತಂದುಕೊಟ್ಟಿದ್ದರೆ, ಅದು ಲಿಂಬೆಯಣ್ಣ. ನಿಜ ಸಂಗತಿ ಏನೆಂದರೆ, ನಮ್ಮ ರಾಜಕಾರಣಿಗಳಲ್ಲಿ ಅನೇಕರನ್ನು ಜನ ಯಾವುದಾದರೂ ಟಿ.ವಿ. ಹಾಸ್ಯ ಧಾರಾವಾಹಿಯಲ್ಲಿ ಹಾಸ್ಯ ನಟರನ್ನಾಗಿ ನೋಡ ಬಯಸುತ್ತಾರೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು