ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ಮತ್ತು ನಿರಾಶಾವಾದ

Last Updated 6 ಜನವರಿ 2020, 20:00 IST
ಅಕ್ಷರ ಗಾತ್ರ

ಆರು ವರ್ಷಗಳಿಂದ ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ನೇಹಿತ, ಕೆಲಸ ತೊರೆದಿರುವುದಾಗಿ ತಿಳಿಸಿದ. ಕಾರಣವೇನೆಂದು ವಿಚಾರಿಸಿದಾಗ, ತಾನು ಕಾರ್ಯನಿರ್ವಹಿಸುತ್ತಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ 240 ಸೀಟುಗಳಲ್ಲಿ 23 ಮಾತ್ರ ಭರ್ತಿಯಾಗಿವೆ. ಅಲ್ಲಿ ಮಾಡಲು ಕೆಲಸವೇ ಇರಲಿಲ್ಲ, ಕಾಲೇಜಿನವರು ಹೊರಗೆ ಕಳಿಸುವ ಮೊದಲೇ ಕೆಲಸ ಬಿಡುವುದು ಸೂಕ್ತವೆನಿಸಿ ಕೆಲಸ ತೊರೆದೆ ಎಂದ.

ತಯಾರಿಕಾ ವಲಯದಲ್ಲಿನ ಉದ್ಯೋಗಾವಕಾಶಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಮೆಕ್ಯಾನಿಕಲ್, ಆಟೊಮೊಬೈಲ್ ಮತ್ತು ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದೆಡೆಗೆ ಹೊರಳುತ್ತಿರುವುದು ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಚಿತರಿಂದ ತಿಳಿದುಬಂದಿತ್ತು. ಇದರಿಂದ, ಸ್ನೇಹಿತನಿಗೆ ಕೆಲಸ ತೊರೆಯದೆ ಬೇರೆ ಆಯ್ಕೆಯೂ ಇರಲಿಲ್ಲ ಎಂಬುದು ಮನದಟ್ಟಾಯಿತು.

ಎರಡು ವರ್ಷಗಳಿಂದ ಕುಸಿತದತ್ತ ಮುಖ ಮಾಡಿರುವ ದೇಶದ ಆರ್ಥಿಕ ಪರಿಸ್ಥಿತಿ ಇನ್ನೇನು ಸುಧಾರಿಸಲಿದೆ ಎನ್ನುವ ಆಶಾಭಾವವು ಹೀಗೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ದಿನದೂಡುತ್ತಿರುವ ಸ್ನೇಹಿತರ ವಲಯದಲ್ಲಿತ್ತು. ಆದರೆ ಈಗ ಭರವಸೆ ಹೊಂದಲು ಯಾವ ಸಕಾರಣಗಳೂ ಗೋಚರಿಸುತ್ತಿಲ್ಲ. ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಅದೆಷ್ಟೋ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನೇ ಕೈಬಿಡಲಾಗುತ್ತಿದೆ.

ಒಂದೆಡೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಿರಲಿ, ಇರುವ ಉದ್ಯೋಗಗಳೇ ಇನ್ನಿಲ್ಲವಾಗುತ್ತಿವೆ. ಹೀಗಿರುವಾಗ, ಇಡೀ ದೇಶ ಯಾವುದರ ಕುರಿತು ಚರ್ಚಿಸುವ, ಕಳವಳಗೊಳ್ಳುವ ಸಂದರ್ಭ ಬಂದೊದಗಿದೆ ಎಂಬುದನ್ನು ಗಮನಿಸಿದರೆ ದಿಗಿಲು ಮೂಡದೇ ಇರದು.

ದೇಶದ ಆರ್ಥಿಕತೆಯ ಮೇಲೆ ಕವಿಯತೊಡಗಿರುವ ನಿರಾಶೆಯ ಕಾರ್ಮೋಡ, ಓದಿ ಉತ್ತಮ ಬದುಕು ಕಟ್ಟಿಕೊಳ್ಳುವ ಯುವ ಸಮುದಾಯದ ಕನಸನ್ನೇ ಚಿವುಟುವಷ್ಟು ಗಾಢವಾಗಿ ಆವರಿಸುತ್ತಿದೆ.

ಮೈಸೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿದ ಪರಿಚಿತ ರೈತರ ಮಗನೊಬ್ಬನಿಗೆ, ಮೂರು ತಿಂಗಳು ಅಲೆದರೂ ತನ್ನ ಓದಿಗೆ ಸೂಕ್ತವಾದ ಕೆಲಸ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲಸವಿಲ್ಲದೆ ಕಾಲ ತಳ್ಳುವ ಬದಲು ಓದು ಮುಂದುವರಿಸುವುದೇ ಸೂಕ್ತವೆಂದು ಭಾವಿಸಿದ ಆತ ಎಂ.ಟೆಕ್‌ಗೆ ಪ್ರವೇಶ ಪಡೆದಿದ್ದಾನೆ. ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಹಂತ ತಲುಪುತ್ತಿರುವುದು ಹಾಗೂ ಉತ್ಪಾದನಾ ವಲಯದ ಪರಿಸ್ಥಿತಿ ಕೂಡ ನಿರಾಶಾದಾಯಕ ಆಗಿರುವುದರಿಂದ, ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಏನು ಮಾಡುವುದು ಎನ್ನುವ ಪ್ರಶ್ನೆ ಅವನನ್ನು ಬಾಧಿಸುತ್ತಿದೆ.

ಓದಿಗೆ ತಕ್ಕ ಉದ್ಯೋಗ ದೊರಕದೆ ಹತಾಶರಾಗುತ್ತಿರುವ ಯುವ ಸಮುದಾಯ ಮತ್ತು ಸದ್ಯ ಇರುವ ನೌಕರಿಯೂ ಎಲ್ಲಿ ಕೈತಪ್ಪುವುದೋ ಎನ್ನುವ ಆತಂಕದಲ್ಲೇ ದಿನದೂಡುತ್ತಿರುವ ಖಾಸಗಿ ಉದ್ಯಮ ಹಾಗೂ ಶೈಕ್ಷಣಿಕ ವಲಯದ ಉದ್ಯೋಗಿಗಳಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆಯೇ? ಜನಸಾಮಾನ್ಯರ ಮೂಲಭೂತ ಅಗತ್ಯಗಳಾದ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಕುರಿತು ಗಮನ ಕೇಂದ್ರೀಕರಿಸುವ ಬದಲು, ಸಮಾಜದ ಸ್ವಾಸ್ಥ್ಯಕ್ಕೆ ಎರವಾಗುವಂತಹ ಧರ್ಮಾಧಾರಿತ ವಿಚಾರಗಳಿಗೆ ಇನ್ನಿಲ್ಲದ ಮನ್ನಣೆ ನೀಡುತ್ತಾ ಸಾಗುತ್ತಿರುವುದು ವಿಪರ್ಯಾಸ.

ದೇಶದ ಜನರು ಉದ್ಯೋಗಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಸಂದರ್ಭ ಎದುರಾಗಿರುವ ಈ ಹೊತ್ತಿನಲ್ಲಿ, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)... ಹೀಗೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಕಿಂಚಿತ್ತೂ ನೆರವಾಗದ, ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದಾದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಎಷ್ಟು ಸರಿ?

ಶಿಕ್ಷಣದ ಮೂಲಕ ಸಾಮಾಜಿಕ ಚಲನೆಯನ್ನು ದಕ್ಕಿಸಿಕೊಳ್ಳಬಹುದು ಎನ್ನುವ ಆಶಾಭಾವದಿಂದ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣ ಪೂರೈಸುತ್ತಿರುವವರು ಎಷ್ಟೋ ಮಂದಿ ಇದ್ದಾರೆ. ಅಂತಹವರಲ್ಲಿ ನಿರುದ್ಯೋಗ ಸಮಸ್ಯೆ ಉಂಟು ಮಾಡುತ್ತಿರುವ ತಲ್ಲಣ, ಯುವ ಸಮುದಾಯವು ಉನ್ನತ ಶಿಕ್ಷಣಕ್ಕೆ ಬೆನ್ನು ತೋರುವ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಕಾಲೇಜುಗಳಲ್ಲಿ ಮುಚ್ಚಲಾಗುತ್ತಿರುವ ಸ್ನಾತಕೋತ್ತರ ಪದವಿ ವಿಭಾಗಗಳು, ವರ್ತಮಾನದ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT