ಮಂಗಳವಾರ, ಏಪ್ರಿಲ್ 20, 2021
31 °C
ಮಹಾರಾಷ್ಟ್ರ– ಕರ್ನಾಟಕದ ಗಡಿ ಭಾಗದಲ್ಲಿನ ಪೆಡ್ಡ ಎಂಬ ಗ್ರಾಮದಲ್ಲಿ ಅಸ್ಪೃಶ್ಯತೆ ಪಿಡುಗನ್ನು ಪೂರ್ಣವಾಗಿ ತೊಡೆದು ಹಾಕಲಾಗಿದೆ. ಅದು ಸಾಧ್ಯವಾದದ್ದಾದರೂ ಹೇಗೆ?

ಅಸ್ಪೃಶ್ಯತೆ: ಹೀಗೂ ಸಾಧ್ಯ ಪರಿವರ್ತನೆ!

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಚನ್ನದಾಸ ಸಮಾಜದ ಸಮಾವೇಶ ಈಚೆಗೆ ನಡೆಯಿತು. ಅತ್ಯಂತ ಕೆಳಸ್ತರಕ್ಕೆ ಸೇರಿದ, ಕಡುಬಡತನದ ಬದುಕು ಸಾಗಿಸುವ ಚನ್ನದಾಸ ಸಮಾಜದ ಸಾವಿರಾರು ಕುಟುಂಬಗಳು ಈ ಭಾಗದಲ್ಲಿವೆ. ಇವರೆಲ್ಲ ಸೇರಿ ಏರ್ಪಡಿಸಿದ್ದ ಈ ಸಮಾವೇಶ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ- ‘ನಾನು ಕೂಡ ವೃತ್ತಿಯಿಂದ ದಾಸಯ್ಯನೇ. ನಾನು ಸರ್ಕಾರಿ ನೌಕರಿಗೆ ಸೇರುವ ಮೊದಲು ದಾಸಯ್ಯನ ವೃತ್ತಿ ಮಾಡುತ್ತಿದ್ದೆ. ಗೋಪಾಳ ಬುಟ್ಟಿ ಹಿಡಿದು ಮನೆ ಮನೆಗೆ ತಿರುಗುತ್ತಿದ್ದೆ. ನಿಮ್ಮ ಕಷ್ಟ-ನೋವುಗಳಲ್ಲಿ ಹಾದು ಬಂದಿದ್ದೇನೆ’ ಎಂದು ತುಂಬ ಭಾವುಕರಾಗಿ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡು, ತಾವು ಎಲ್ಲ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನನಗೆ, ದಲಿತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ತುಂಬಾ ಪರಿಶ್ರಮದಿಂದ ದೊಡ್ಡ ಉದ್ಯಮಿಯಾಗಿ ಬೆಳೆದು ಒಂದು ಒಳ್ಳೆಯ ಪರಿವರ್ತನೆಗೆ ಕಾರಣನಾದ ಅಪರೂಪದ ಸಂಗತಿ ಇಲ್ಲಿ ನೆನಪಾಗುತ್ತದೆ.

ಆ ಯುವಕನ ಹೆಸರು ಪ್ರಕಾಶ ಖಾಡೆ. ಓದಿದ್ದು ಐ.ಟಿ.ಐ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್ ತಾಲ್ಲೂಕಿನಲ್ಲಿ ಪೆಡ್ಡ ಎಂಬ ಹಳ್ಳಿ ಪ್ರಕಾಶ ಖಾಡೆಯವರ ಹುಟ್ಟೂರು. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಈ ಊರಿನಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕನ್ನಡ ಮಾತನಾಡುವವರು. ಈ ಗ್ರಾಮದ ಮಧ್ಯದಲ್ಲಿ ನೂರಾರು ವರ್ಷಗಳ ಹಿಂದೆ ಕಟ್ಟಿದ ಸಿದ್ಧೇಶ್ವರ ದೇವಾಲಯವಿದೆ. ಈ ಗುಡಿಯ ಕಟ್ಟಡ ತುಂಬ ಶಿಥಿಲ ಗೊಂಡಿದ್ದರಿಂದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ನಿರ್ಧರಿಸಿದರು.

ಈ ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಖಾಡೆ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಮುಂಬೈನಲ್ಲಿ ವಾರ್ಷಿಕ ₹ 1,600 ಕೋಟಿ ವ್ಯವಹಾರ ನಡೆಸುವ ಬೃಹತ್ ಸಂಸ್ಥೆಯನ್ನು ಕಟ್ಟಿದ್ದಾರೆ. ಅವರು ಸ್ಥಾಪಿಸಿದ ದಾಸ್ ಆಫ್‍ಶೋರ್ ಎಂಜಿನಿಯರಿಂಗ್ ಕಂಪನಿಯಲ್ಲಿ 4,500 ಜನ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ದೇಶ ವಿದೇಶಗಳಲ್ಲಿ ತೈಲ ಬಾವಿ ತೋಡುವುದು, ಮೇಲ್ಸೇತುವೆ ನಿರ್ಮಾಣ, ಕಟ್ಟಡ ನಿರ್ಮಾಣದಂತಹ ಕೆಲಸಗಳನ್ನು ಮಾಡುತ್ತಿದೆ. ಅವರಿಂದ ಗುಡಿಯ ಜೀರ್ಣೋದ್ಧಾರಕ್ಕೆ ₹ 10 ಲಕ್ಷ ದೇಣಿಗೆ ಕೇಳಲು ಜೀರ್ಣೋದ್ಧಾರ ಸಮಿತಿಯ ಕೆಲವು ಹಿರಿಯರು ಮುಂಬೈಗೆ ತೆರಳಿದ್ದರು.

ತಮ್ಮ ಹುಟ್ಟೂರಿನಿಂದ ಬಂದಿದ್ದ ಹಿರಿಯರನ್ನು ಪ್ರಕಾಶ ಖಾಡೆ ತುಂಬ ಪ್ರೀತಿ, ಗೌರವದಿಂದ ಸ್ವಾಗತಿಸಿದರು. ಸ್ವತಃ ಉಪಾಹಾರ, ಟೀ ಕೊಟ್ಟು ಅತಿಥಿ ಸತ್ಕಾರ ಮಾಡಿದರು. ಹಿರಿಯರು ತಾವು ಬಂದ ಉದ್ದೇಶ ವಿವರಿಸಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹ 10 ಲಕ್ಷ ದೇಣಿಗೆ ನೀಡಬೇಕು ಎಂದು ಮನವಿಪತ್ರ ಸಲ್ಲಿಸಿದರು.

ಪ್ರಕಾಶ ₹ 1 ಕೋಟಿಯ ಚೆಕ್ ಬರೆದು ಹಿರಿಯರ ಕೈಗೆ ನೀಡಿದರು. ₹ 10 ಲಕ್ಷ ಕೇಳಿದರೆ ₹ 5 ಲಕ್ಷ ಆದರೂ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರಿಗೆ ತುಂಬ ಅಚ್ಚರಿಯಾಯಿತು. ‘ಸಿದ್ಧೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಚೆನ್ನಾಗಿ ಆಗಬೇಕು. ಇನ್ನೂ ಹೆಚ್ಚಿಗೆ ಹಣ ಬೇಕಾದರೆ ಕೊಡಲು ಸಿದ್ಧ’ ಎಂದು ಪ್ರಕಾಶ ಹೇಳಿದರು. ಸ್ವಲ್ಪ ತಡೆದು ‘ನನ್ನದೊಂದು ಸಣ್ಣ ಸಲಹೆ ಇದೆ. ನೀವು ಹಿರಿಯರು ಮನಸಾರೆ ಪಾಲಿಸಬೇಕು’ ಎಂದು ಕೇಳಿಕೊಂಡರು.

‘ಖಂಡಿತವಾಗಿ ಪಾಲಿಸುತ್ತೇವೆ ಹೇಳಿ’ ಎಂದು ಹಿರಿಯರು ಒಂದೇ ಧ್ವನಿಯಲ್ಲಿ ಕೇಳಿದರು. ಪ್ರಕಾಶ ಒಂದು ಕ್ಷಣ ಮೌನವಾಗಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ನಿಧಾನವಾಗಿ ಹೇಳಿದರು. ‘ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ಧೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿರಲಿಲ್ಲ. ನನಗೆ ಸಿದ್ಧೇಶ್ವರನ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಗಲಿಲ್ಲ. ‘ಗುಡಿಯಲ್ಲಿ ಎಲ್ಲರ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿರಿ’ ಎಂದು ಪ್ರಕಾಶ ಹೇಳಿದರು.

ಜೀರ್ಣೋದ್ಧಾರದ ಕೆಲಸ ಸಕಾಲಕ್ಕೆ ಮುಗಿಯಿತು. ಈಗ ಗುಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಲಭ್ಯವಾಗಿದೆ. ಊರ ಹಿರಿಯರೆಲ್ಲ ಸೇರಿ ಪ್ರಕಾಶ ಅವರನ್ನು ಗ್ರಾಮಕ್ಕೆ ಆಮಂತ್ರಿಸಿ ಗುಡಿಯಲ್ಲಿಯೇ ಸನ್ಮಾನಿಸಿದರು. ವಿದ್ಯಾರ್ಥಿಯಾಗಿದ್ದಾಗ ಗುಡಿ ಪ್ರವೇಶ ನಿರಾಕರಿಸಿದವರೇ ಈಗ ಗುಡಿಯ ಒಳಗಡೆ ಕರೆದು ಸನ್ಮಾನಿಸಿದ್ದಕ್ಕೆ ಪ್ರಕಾಶ ಅವರಿಗೆ ಬಹಳ ಸಂತೋಷವಾಗಿದೆ. ಅವರು ಗ್ರಾಮದ ನೂರಾರು ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಪೂರ್ಣ ತೊಡೆದು ಹಾಕಲಾಗಿದೆ.

ಪ್ರಕಾಶ ಅವರ ತಂದೆ ಮೋಚಿಯಾಗಿ ಕೆಲಸ ಮಾಡಿ ಬದುಕು ಸಾಗಿಸಿದವರು. ಒಂದು ಮರದ ಕೆಳಗೆ ಕುಳಿತು ಅವರು ಕೆಲಸ ಮಾಡುತ್ತಿದ್ದರು. ಪ್ರಕಾಶ ಇಂದಿಗೂ ಆ ಮರವನ್ನು ಸ್ಮರಿಸುತ್ತಾರೆ ಮತ್ತು ಆರಾಧಿಸುತ್ತಾರೆ.

ಮುಂಬೈ ವಿಶ್ವವಿದ್ಯಾಲಯ ಪ್ರಕಾಶ ಅವರಿಗೆ ಈಚೆಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈಗ ಅವರು ಕರ್ನಾಟಕ- ಮಹಾರಾಷ್ಟ್ರದ ಗಡಿಭಾಗದ ಹಳ್ಳಿಗಳಿಗೆ ಹೋಗಿ ಅಲ್ಲಿಯ ದಲಿತ ಯುವಕರು ಉದ್ಯಮಿಗಳಾಗುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ದಲಿತರು ಆರ್ಥಿಕವಾಗಿ ಸಬಲರಾದರೆ ಎಲ್ಲ ಸಂಕೋಲೆಗಳನ್ನು ಕಳಚಿಕೊಳ್ಳಬಹುದು ಎಂಬುದು ಅವರ ಸಂದೇಶವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು