ಸಂಗತ| ವಾಲ್ಮೀಕಿ ಜಾತ್ರೆ: ಬೇಕು ಎಚ್ಚರ

ಹರಿಹರ ಬಳಿಯ ರಾಜನಹಳ್ಳಿಯಲ್ಲಿ ಇಂದು ಮತ್ತು ನಾಳೆ (ಫೆ. 8 ಮತ್ತು 9) ವಾಲ್ಮೀಕಿ ಜಾತ್ರೆ. ಇದು ಮೂರನೇ ವರ್ಷದ ಜಾತ್ರೆ. ಬೇಡ, ವಾಲ್ಮೀಕಿ, ನಾಯಕ ಸಮುದಾಯದ ಜಾಗೃತಿಗಾಗಿ ಈ ಜಾತ್ರೆ ಎಂದು ಬಣ್ಣಿಸಲಾಗುತ್ತಿದೆ. ಜಾತ್ರೆಯಿಂದ ಒಂದು ಸಮುದಾಯದ ಕಣ್ತೆರೆಸುವ, ಜಾಗೃತಿ ಮೂಡಿಸುವ ಅದರ ಸಾಧ್ಯಾಸಾಧ್ಯತೆಯ ಕ್ಷಿತಿಜ ಕುರಿತ ಚರ್ಚೆ ಹೆಚ್ಚು ಪ್ರಸ್ತುತವಲ್ಲ. ಆದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಬೇಡರ ಸಮುದಾಯವು ಜಾತ್ರೆಯ ನೆಪದಲ್ಲಿ ಒಂದೆಡೆ ಸೇರುವುದು, ಒಗ್ಗಟ್ಟು ಪ್ರದರ್ಶಿಸುವುದು ಸ್ವಾಗತಾರ್ಹ. ಕೊರೊನಾ ಸಾಂಕ್ರಾಮಿಕದ ಈ ದುರಿತಕಾಲದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವ ಲಕ್ಷಣಗಳು ಸಮಾಧಾನ ತಂದಿವೆ. ಮುಖ್ಯವಾಗಿ ವಾಲ್ಮೀಕಿ ಜಾತ್ರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯ ಮಂತ್ರಿಗಳು, ಅನೇಕ ಸಚಿವರು ಆಗಮಿಸುತ್ತಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಜಾರಿಗೆ ಒತ್ತಾಯಿಸುವ ಪ್ರಾಣಹೇತು ಪ್ರಸ್ತುತ ಜಾತ್ರೆಯ ಮುಖ್ಯ ಅಜೆಂಡಾ ಎಂಬುದು ಮೇಲ್ನೋಟಕ್ಕೆ ಭಾಸವಾಗುವ ಅಂಶ. ಸದರಿ ವರದಿ ಕುರಿತು ಮುಖ್ಯಮಂತ್ರಿ ಈಗಾಗಲೇ ರಚಿಸಿರುವ ಅನುಷ್ಠಾನ ಉಪಸಮಿತಿ ಏನು ವರದಿ ನೀಡಿದೆ? ನೀಡಿರದಿದ್ದರೆ ವರದಿ ಬಂದ ಮೇಲೆ ಜಾರಿಗೆ ತರುವ ಮಾತನ್ನು ಮುಖ್ಯಮಂತ್ರಿ ಹೇಳಬಹುದೇನೋ? ಈ ಹಿಂದೆ ಚುನಾವಣೆ ಸಂದರ್ಭದಲ್ಲಿ, ನಾಗಮೋಹನ ದಾಸ್ ವರದಿ ಸರ್ಕಾರದ ಕೈ ಸೇರಿದ ಇಪ್ಪತ್ನಾಲ್ಕು ತಾಸಲ್ಲೇ ಅದನ್ನು ಜಾರಿಗೊಳಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ ನೆನಪು ಮಾಸಿಲ್ಲ. ಆ ವರದಿ ಕೈ ಸೇರಿಯೇ ಅರ್ಧ ವರ್ಷ ಕಳೆದುಹೋಯಿತು. ಅಚ್ಚರಿಯೆಂದರೆ, ಅದರ ಅನುಷ್ಠಾನಕ್ಕಾಗಿ ಮತ್ತೊಂದು ಉಪಸಮಿತಿ ರಚನೆ. ಮತ್ತದರ ವರದಿಯ ನಿರೀಕ್ಷೆ!
ಇದೇ ಸಂದರ್ಭದಲ್ಲಿ ‘ತಮ್ಮನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ’ ಹೋರಾಟ ಕುರುಬ ಸಮಾಜದ್ದು. ಅದು ತನ್ನ ಸಮುದಾಯದ ಗುರುಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದೆ. ಕಬ್ಬಲಿಗ, ಗಾಣಿಗ ಇನ್ನೂ ಒಂದೆರಡು ಜಾತಿಗಳು ಎಸ್.ಟಿ. ಮೀಸಲಾತಿಗಾಗಿ ಹೋರಾಟದ ಹವಣಿಕೆಯಲ್ಲಿವೆ.
ಸಹಜವಾಗಿ ಹೋರಾಟದ ಬಿರುಸಿನ ಪೈಪೋಟಿಯೇ ಏರ್ಪಟ್ಟಂತೆ ಭಾಸವಾಗಿ ತಮಗೆ ಹಿನ್ನಡೆ ಆದೀತೆಂಬ, ತಮ್ಮ ಮೀಸಲಾತಿ ಅನ್ನದ ಪಾಲಿಗೆ ಕುತ್ತು ಬಂದೀತೆಂಬ ಕಾಕತಾಳೀಯ ಆತಂಕ ವಾಲ್ಮೀಕಿ ಸಮುದಾಯದ್ದು. ಇದೊಂದು ಬಗೆಯ ಅಪ್ರಸ್ತುತ ಭಯ. ಅನೇಕ ಸಂದರ್ಭಗಳಲ್ಲಿ ಇಂತಹ ಸಂಗತಿಗಳೇ ಹಿಂದುಳಿದ ಜಾತಿಗಳ ಸೌಹಾರ್ದಕ್ಕೆ ಕೊಡಲಿ ಪೆಟ್ಟು ಕೊಟ್ಟಿವೆ. ಕೆಲವು ಕಲ್ಪಿತ ಸಂಗತಿಗಳಿಂದ ಚಾರಿತ್ರಿಕ ಸಾಮರಸ್ಯಕ್ಕೆ ಧಕ್ಕೆ ತಂದುಕೊಳ್ಳದ ಸಾಂಸ್ಕೃತಿಕ ಮತ್ತು ರಾಜಕೀಯ ಎಚ್ಚರ ಎಂದಿಗಿಂತ ಇಂದು ಹೆಚ್ಚಿಗಿರಬೇಕಿದೆ.
ಬೇಡ, ವಾಲ್ಮೀಕಿ, ನಾಯಕ, ತಳವಾರ ಇನ್ನೂ ಕೆಲವು ಉಪ ಹೆಸರುಗಳ ಈ ಜನಾಂಗ ರಾಜ್ಯದ ಬಹುದೊಡ್ಡ ಸಮುದಾಯ. ಅಕ್ಷರಶಃ ಹಿಂದುಳಿದ ಜನಾಂಗ. ಅನಕ್ಷರತೆ, ಬಾಲ್ಯವಿವಾಹ, ದೇವದಾಸಿ, ಜೀತದಾಳು, ಹಟ್ಟಿ ಹಬ್ಬಗಳಲ್ಲಿ ಕೋಣ ಕಡಿಯುವುದು, ತಮ್ಮ ತಮ್ಮಲ್ಲೇ ತೋಳೇರಿಸಿ ತೊಡೆ ತಟ್ಟುವುದು ಇಂತಹ ಇನ್ನೂ ಹತ್ತಾರು ಅನಿಷ್ಟ ಮೌಢ್ಯಾಚರಣೆಗಳ ಪರಿಪಾಲನೆ ವಾಲ್ಮೀಕಿ ಸಮುದಾಯದಲ್ಲಿದೆ. ಅಜಮಾಸು ಕಳೆದ ಎರಡು ದಶಕಗಳ ಹಿಂದೆಯೇ ಈ ಸಮುದಾಯಕ್ಕೊಂದು ಮಠ ದೊರಕಿದೆ. ಮಠ ಇಂತಹ ಅನಿಷ್ಟಗಳ ನಿರ್ಮೂಲನೆಗೆ ಟೊಂಕಕಟ್ಟಿ ಸೆಟೆದು ನಿಂತು ಸಂಕಲ್ಪ ಮಾಡಬೇಕಿತ್ತು. ವಾಲ್ಮೀಕಿ ಮಠದ ಮೂಲಕ ಸಮುದಾಯ ಸಂಘಟಿತವಾಗಲು, ಮುಖ್ಯವಾಹಿನಿಗೆ ಬರಲು ಅವಕಾಶ ದೊರಕಿದೆಯೆಂಬುದು ಯಥಾರ್ಥ ನಂಬುಗೆ. ಆದರೆ ವಾಸ್ತವವು ಅಂದುಕೊಂಡಂತಿಲ್ಲ.
ಅದು ಎಲ್ಲ ಸಾಂಸ್ಥಿಕ ಧರ್ಮಪೀಠಗಳಂತೆ ಸಾಂಸ್ಥೀಕರಣದ ಹಾದಿ ಹಿಡಿದಿದೆ. ಅಂತೆಯೇ ಅಲ್ಲೀಗ ನಿರ್ಜೀವ ಕಟ್ಟಡಗಳ ಭೌತಿಕ ಸಮುಚ್ಚಯವೇ ನಿರ್ಮಾಣಗೊಂಡಿದೆ. ಹೆಚ್ಚೆಂದರೆ ಇಪ್ಪತ್ತೆರಡು ವರ್ಷ ಗಳ ಸುದೀರ್ಘ ಅವಧಿಯಲ್ಲಿ ಒಂದು ಪ್ರೌಢಶಾಲೆ ನಡೆಸುವ ಮಟ್ಟದವರೆಗೆ ಅದರ ಅಭಿವೃದ್ಧಿ. ಮಠವು ಯುವಕರಿಂದ ಅನತಿದೂರದ ಅಂತರ ಕಾಪಾಡಿ ದಂತಿದೆ. ಅದಲ್ಲದೇ ನಿರೀಕ್ಷೆಯಂತೆ ರಾಜಕಾರಣಿಗಳಿಗೆ ಸಮುದಾಯದ ಮೇಲೆ ಹಿಡಿತ ಸ್ಥಾಪಿಸಲು ತನ್ಮೂಲಕ ಸೂಕ್ತ ರಹದಾರಿಯೂ ದೊರಕಿದಂತಾಗಿದೆ.
ಬಹುಮುಖ್ಯ ಸಂಗತಿಯೆಂದರೆ, ನಾಯಕ ಸಮುದಾಯವು ಅಧಿನಾಯಕನ ತೀವ್ರ ಕೊರತೆಯಿಂದ ನರಳುತ್ತಿದೆ. ವಾಲ್ಮೀಕಿ ಜನಾಂಗ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅರ್ಧ ಕೋಟಿಗೂ ಮಿಕ್ಕ ಸಂಖ್ಯೆಯಲ್ಲಿ ಹರಡಿಕೊಂಡಿದೆ. ಬೇಡ ಸಮುದಾಯದ ಬೇಕು ಬೇಡಗಳ ದಟ್ಟಅರಿವು ಮತ್ತು ಸಾಮಾಜಿಕ ವಿವೇಚನೆ ಯುಳ್ಳ ಅಪ್ಪಟ ಕಳಕಳಿಯ ಅಧಿನಾಯಕನ ನಿರೀಕ್ಷೆ ಯಲ್ಲಿ ಸಮುದಾಯವು ಶಬರಿಯಂತೆ ಕಾದು ಕೂತಿದೆ.
ಅಂತಃಶ್ರೋತದ ಬಹುಳ ಸಂಸ್ಕೃತಿ ಪ್ರಜ್ಞೆಯನ್ನು ಬೇರುಮಟ್ಟದಲ್ಲಿ ಹಂಚುವ, ಹೊಸ ಎಚ್ಚರಗಳ ಕಿಚ್ಚು ಹಚ್ಚಿಸುವ ಗುರುಕಾರುಣ್ಯವು ಸಮುದಾಯದಲ್ಲಿ ಹೃದ್ಗೋಚರಿಸುವುದು ಯಾವಾಗ? ಅಂತಹ ಅನುಸಂಧಾನದೊಂದಿಗೆ ಮಹತ್ವದ ಅಧಿನಾಯಕತ್ವ ಹುರಿಗೊಳಿಸುವ ಸವಾಲು ಈಡೇರಬಲ್ಲದೇ? ಪ್ರಸ್ತುತ ವಾಲ್ಮೀಕಿ ಪೀಠ ಅದನ್ನು ಸವಾಲಿನಂತೆ
ಸ್ವೀಕರಿಸುವಷ್ಟು ಗಟ್ಟಿ ನೆಲೆಗಟ್ಟನ್ನು ಹುಟ್ಟುಹಾಕುವ ದಿಸೆಯಲ್ಲಿ ಹರಿಗಡಿಯದೆ ಮುನ್ನುಗ್ಗಬಲ್ಲದೇ ಕಾದು ನೋಡಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.