ಭಾನುವಾರ, ಜೂನ್ 26, 2022
25 °C
ನೀತಿ– ನಿಯಮಗಳನ್ನು ರೂಪಿಸುವ ಜನಪ್ರತಿನಿಧಿಗಳಿಗೆ ಜನರ ಅಸಲಿ ಸಮಸ್ಯೆಗಳ ದರ್ಶನವಾಗಬಾರದೇ?

ಸಂಗತ | ಅಧಿಕಾರಿಶಾಹಿ ಹೊದಿಸುವ ‘ಗಣ್ಯ’ ಮುಸುಕು

ಎಚ್.ಕೆ. ಶರತ್ Updated:

ಅಕ್ಷರ ಗಾತ್ರ : | |

Prajavani

ಈ ತಿಂಗಳ 19ರಂದು ಮಧ್ಯಾಹ್ನ ಕೆಲಸದ ಸ್ಥಳದಿಂದ ಮನೆಗೆ ಊಟದ ವಿರಾಮದ ವೇಳೆ ತೆರಳುವಾಗ ರಸ್ತೆಯಲ್ಲಿ ಮೂರ್ನಾಲ್ಕು ಪೊಲೀಸ್ ವಾಹನಗಳು ಹಾಗೂ ಅಲ್ಲಲ್ಲಿ ಪೊಲೀಸರು ನಿಂತಿದ್ದರು. ರಸ್ತೆಯ ಒಂದು ಭಾಗವನ್ನು ಬಂದ್ ಮಾಡಿ, ಮತ್ತೊಂದು ಕಡೆ ಹೋಗುವಂತೆ ಜನರಿಗೆ ಸೂಚಿಸುತ್ತಿದ್ದರು. ಹಾಸನ ಹೊರವಲಯದಲ್ಲಿರುವ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಈ ವರ್ತುಲ ರಸ್ತೆಯ ಎರಡೂ ಕಡೆ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದರೂ ಅದುವರೆಗೂ ತಲೆಕೆಡಿಸಿಕೊಳ್ಳದ ಸ್ಥಳೀಯ ಆಡಳಿತ, ಅಂದು ತೀರಾ ತರಾತುರಿಯಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ವಿಧಿಸಿ, ರಸ್ತೆಯಲ್ಲಿ ಸಾಗುವವರ ಕಣ್ಣಿಗೆ ರಾಚುವಂತೆ ಬಿದ್ದಿದ್ದ ಕಸದ ರಾಶಿತೆರವುಗೊಳಿಸಲು ಇನ್ನಿಲ್ಲದ ಮುತುವರ್ಜಿ ತೋರುತ್ತಿತ್ತು. ಇನ್ನೇನು ಈ ರಸ್ತೆಯಲ್ಲಿ ಯಾರೋ ಮಂತ್ರಿಯೋ ಮುಖ್ಯಮಂತ್ರಿಯೋ ಹೋಗಬಹುದೆಂಬ ಗುಮಾನಿ ಅಲ್ಲಿನ ಚಿತ್ರಣ ಗಮನಿಸಿದಾಗಲೇ ಮೂಡಿತ್ತು.

ಅದೇ ದಿನ ರಾತ್ರಿ ಎಂಟು ಗಂಟೆ ವೇಳೆಯಲ್ಲಿ ಮನೆಗೆ ಅಗತ್ಯವಿದ್ದ ವಸ್ತುಗಳನ್ನು ತರಲೆಂದು ಮತ್ತೆ ಇದೇ ರಸ್ತೆಗೆ ಹೋದಾಗ, ಸುರಿಯುವ ಮಳೆಯಲ್ಲೂ ಕಾರ್ಯೋನ್ಮುಖರಾಗಿದ್ದ ಪೊಲೀಸರು ಕಾಣಸಿಕ್ಕರು. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಲು ಮುಂದಾಗುವವರಿಗೆ ‘ಇಲ್ಲಿ ನಿಲ್ಲಿಸಬೇಡಿ, ಬೇಕಿದ್ದರೆ ಒಳರಸ್ತೆಯಲ್ಲಿ ನಿಲ್ಲಿಸಿಕೊಳ್ಳಿ’ ಎಂದು ಆಗ್ರಹಿಸುತ್ತಿದ್ದರು. ಸುರಿಯುವ ಮಳೆಯಿಂದ ರಕ್ಷಣೆ ಪಡೆಯಲೆಂದು ತರಾತುರಿಯಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿ ಸಮೀಪದ ಕಟ್ಟಡಗಳೆಡೆಗೆ ಬರುತ್ತಿದ್ದವರಿಗೆ ಕೂಡ ಪೊಲೀಸರು ಇದೇ ಸೂಚನೆ ನೀಡುತ್ತಿದ್ದರು. ‘ಇಷ್ಟೊತ್ತಲ್ಲಿ ಯಾವತ್ತೂ ಈ ಕಡೆ ಬಾರದ ನೀವು ಈಗೇಕೆ ಬಂದು ಮಳೆಯಲ್ಲಿ ನಮ್ಗೆ ಕಾಟ ಕೊಡ್ತಿದ್ದೀರ’ ಅಂತ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರನ್ನು ಯುವಕನೊಬ್ಬ ಪ್ರಶ್ನಿಸಿಯೇ ಬಿಟ್ಟ. ‘ಸಿಎಂ ಬೊಮ್ಮಾಯಿ ಸಾಹೇಬ್ರು ಚಿಕ್ಕಮಗಳೂರಿಂದ ಬೆಂಗ್ಳೂರ್‍ಗೆ ವಾಪಸ್ ಹೋಗ್ತಾವ್ರೆ. ಇನ್ನೇನು ಅವ್ರ ಕಾರು ಇಲ್ಲೇ ಪಾಸ್ ಆಗುತ್ತೆ’ ಎಂದು ಅವರು ವಿಷಯ ತಿಳಿಸಿದರು. ‘ಅಲ್ಲ, ನಾವು ಆರಿಸೋ ರಾಜಕಾರಣಿಗಳು ರಸ್ತೇಲಿ ಹೋಗೋಕೆ ನಾವೇ ಈ ಪಾಟಿ ಹಿಂಸೆ ಅನುಭವಿಸ್ಬೇಕಾ? ಅವ್ರೂ ನಮ್ಮ ಹಾಗೆ ಅಲ್ವಾ?’ ಅಂತ ಆ ಯುವಕ ತನ್ನ ಅಸಮಾಧಾನ ಹೊರಹಾಕಿದ. ಮತ್ತೊಬ್ಬರು ‘ಇವ್ರು ತಾನೆ ಏನ್ ಮಾಡ್ತಾರೆ, ಅವ್ರ ಡ್ಯೂಟಿ ಅವ್ರು ಮಾಡ್ತಿದ್ದಾರೆ. ಹೋಗ್ಲಿ ಬಿಡಿ ಪಾಪಾ’ ಅಂತ ಅಲ್ಲಿದ್ದ ಕಾನ್‌ಸ್ಟೆಬಲ್‌ ಕುರಿತು ಕಾಳಜಿ ತೋರಿದರು.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯದ ಸಚಿವರು ಸಂಚರಿಸುವ ಎಲ್ಲೇ ಆದರೂ ಇಂತಹದ್ದೇ ಸನ್ನಿವೇಶ ನಿರ್ಮಾಣವಾಗುವುದು ಸರ್ವೇ ಸಾಮಾನ್ಯ. ಗಣ್ಯ ವ್ಯಕ್ತಿಗಳು ಸಾಗುವರೆಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಿಸುವುದು, ರಸ್ತೆ ಬದಿಯ ಕಸದ ರಾಶಿ ತೆರವುಗೊಳಿಸುವುದು, ಜನರ ಸಂಚಾರಕ್ಕೆ ತಡೆಯೊಡ್ಡುವುದು ಇವೆಲ್ಲವನ್ನೂ ನಮ್ಮ ಆಡಳಿತ ವ್ಯವಸ್ಥೆ ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದೆ. ಇದನ್ನು ಬಹುತೇಕ ಅಧಿಕಾರಸ್ಥರು ಕೂಡ ಸಹಜವೆಂದೇ ಭಾವಿಸಿದ್ದಾರೆ. ಇಲ್ಲಿ ಮೂಡುವ ಸರಳ ಪ್ರಶ್ನೆ ಎಂದರೆ, ಜನಪ್ರತಿನಿಧಿಯಾದವರಿಗೆ, ಕೋಟ್ಯಂತರ ಜನರ ಬದುಕಿನ ಮೇಲೆ ಪ್ರಭಾವ ಬೀರುವಂತಹ ನೀತಿಗಳನ್ನು ರೂಪಿಸುವವರಿಗೆ ಜನರ ಅಸಲಿ ಸಮಸ್ಯೆಗಳ ದರ್ಶನವಾಗಬಾರದೇ? ಜನ ಬಿದ್ದು ಸತ್ತರೂ ಹಾಗೇ ಉಳಿದುಬಿಡುವ ರಸ್ತೆಗುಂಡಿಗಳು ಅತಿಗಣ್ಯ ವ್ಯಕ್ತಿಗಳಿಗೆ ಎದುರಾಗಲೇಬಾರದೇ? ಜನ ಮೂಗು ಮುಚ್ಚಿಕೊಂಡು ಸಾಗುವ ಹಾಗೆ ಮಾಡುವ ಕಸದ ರಾಶಿಯು ಮಂತ್ರಿ, ಮುಖ್ಯಮಂತ್ರಿ ಕಣ್ಣಿಗೆ ಬೀಳಬಾರದೇ? ಒಟ್ಟಾರೆ ಸಾಮಾನ್ಯ ಜನರು ಮತ್ತು ಅವರ ಸಮಸ್ಯೆಗಳು ಕಣ್ಣಿಗೆ ರಾಚದಂತೆ ನೋಡಿಕೊಳ್ಳುವುದರಲ್ಲೇ ತಮ್ಮ ಹಿತ ಅಡಗಿದೆ ಎಂದು ಆಳುವವರು ಭಾವಿಸುವರೇ? ಸಾಮಾನ್ಯ ಜನರೊಂದಿಗೆ ಒಡನಾಡದೆ ದಂತಗೋಪುರಗಳಲ್ಲಿ ಕುಳಿತವರ ನೀತಿಗಳು ಸಾಮಾನ್ಯ ಜನರ ಬದುಕು ಹಸನುಗೊಳಿಸುವ ವಿಶ್ವಾಸ ಹೊಂದಬಹುದೇ?

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಜನಪ್ರಿಯವಾಗಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಅಧಿಕಾರಿಗಳು ನಡೆಸುತ್ತಿದ್ದ ಸಿದ್ಧತೆಯೂ ಹೆಚ್ಚು ಸುದ್ದಿಯಾಗುತ್ತಿತ್ತು. ರಸ್ತೆಗಳನ್ನೇ ಕಾಣದ ಮನೆಗಳಿಗೆ ತರಾತುರಿಯಲ್ಲಿ ರಸ್ತೆ, ಶೌಚಾಲಯವಿಲ್ಲದ ಮನೆಗೆ ಸುಸಜ್ಜಿತ ಶೌಚಾಲಯ ನಿರ್ಮಿಸುವುದು... ಹೀಗೆ ಮುಖ್ಯಮಂತ್ರಿ ವಾಸ್ತವ್ಯ ಹೂಡುತ್ತಾರೆಂಬ ಕಾರಣಕ್ಕೆ ಸೌಲಭ್ಯಗಳೆಲ್ಲವೂ ದಿಢೀರನೆ ಒದಗಿ ಬರುತ್ತಿದ್ದವು. ಆಳುವವರು ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳುವಲ್ಲಿ ಹೆಚ್ಚು ಮುತುವರ್ಜಿ ತೋರುವ ಅಧಿಕಾರಿಶಾಹಿಯ ಧೋರಣೆಯಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ.

ಸಮಸ್ಯೆಗಳಿಗೆ ಆಳುವವರು ಕಂಡುಕೊಳ್ಳುವ ಸುಲಭ ಪರಿಹಾರ, ಸಮಸ್ಯೆಗಳೇ ಇಲ್ಲವೆನ್ನುವುದಲ್ಲವೇ? ಅವರ ಈ ಪರಿಹಾರಸೂತ್ರವನ್ನು ಅನುಷ್ಠಾನಗೊಳಿಸಲು ಅಧಿಕಾರಿಶಾಹಿ ತೋರುವ ಮುತುವರ್ಜಿಯ ಒಂದಿಷ್ಟು ಭಾಗವಾದರೂ ಜನರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ತೋರುವುದೇ? ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ ಡೊನಾಲ್ಡ್ ಟ್ರಂಪ್ ಅವರು ಗುಜರಾತಿನ ಅಹಮದಾಬಾದ್ ನಗರಕ್ಕೆ ಆಗಮಿಸುವ ವೇಳೆಯಲ್ಲಿ ಕೊಳೆಗೇರಿಗಳು ಅವರ ಕಣ್ಣಿಗೆ ಬೀಳಬಾರದೆಂದು ರಸ್ತೆ ಬದಿಯಲ್ಲಿ ಕಟ್ಟಿದ ಎತ್ತರದ ಗೋಡೆ ನಮ್ಮನ್ನಾಳುವವರ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು