ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕದ ದನಿ ಹೊಮ್ಮುವುದೆಂದು?

ಕೊಂದವರ ಪರ ವಕಾಲತ್ತಿಗೆ ನಿಲ್ಲಲು ಸಮಾಜದ ಬಳಿಯೂ ಈಗ ನೆಪಗಳಿವೆ!
Last Updated 25 ಜುಲೈ 2019, 19:51 IST
ಅಕ್ಷರ ಗಾತ್ರ

ದಿನಗಳು ಉರುಳಿದಂತೆ, ಗುಂಪು ಹಲ್ಲೆಯ ಹೆಸರಿನಲ್ಲಿ ಸಿಕ್ಕ ಸಿಕ್ಕವರನ್ನು ಬಡಿದು ಬಿಸಾಕಲು, ನೆಪಗಳ ಪಟ್ಟಿಗೆ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ. ದೇಶಭಕ್ತಿಯ ಅಪವ್ಯಾಖ್ಯಾನವನ್ನೇ ಬುನಾದಿಯಾಗಿಸಿಕೊಂಡಿರುವ ಈ ನೆಪಗಳಿಗೆ, ಮನುಷ್ಯರನ್ನು ಕೊಂದೂ ಗಿಟ್ಟಿಸಿಕೊಳ್ಳಬಹುದಾದಷ್ಟು ಶಕ್ತಿ ದಕ್ಕಿಬಿಟ್ಟಿದೆ.

ತಾನು ಬಿತ್ತಿದ್ದರ ಫಲವೇ ಇವೆಲ್ಲ ಎನ್ನುವುದನ್ನು ಅರಿತಿರುವ ಪ್ರಭುತ್ವವು ಜಾಣ ಕುರುಡು ಮತ್ತು ಕಿವುಡು ಪ್ರದರ್ಶಿಸುವುದರಲ್ಲೇ ತನ್ನ ಹಿತ ಅಡಗಿದೆ ಎಂಬುದನ್ನು ಬಲ್ಲದು. ಹಾಗಾಗಿಯೇ ದೇಶದಾದ್ಯಂತ ಗುಂಪು ಹಲ್ಲೆ ಪ್ರವೃತ್ತಿ ಉನ್ಮಾದದ ರೂಪದಲ್ಲಿ ಹಬ್ಬುತ್ತಿದ್ದರೂ ಅದಕ್ಕೆ ತಡೆಯೊಡ್ಡುವ ಬದಲು, ಈ ಉನ್ಮಾದವನ್ನು ಮತ್ತಷ್ಟು ತೀವ್ರಗೊಳಿಸಲು ರವಾನಿಸಬೇಕಿರುವ ಸಂದೇಶಗಳನ್ನು ನಾಜೂಕಾಗಿ ರವಾನಿಸುವ ಕಾರ್ಯದಲ್ಲಿ ಪ್ರಭುತ್ವ ಕಾರ್ಯನಿರತವಾಗಿದೆ.

ಪ್ರಭುತ್ವದ ತಾಳಕ್ಕೆ ತಕ್ಕಂತೆ ಕುಣಿಯದವರನ್ನು ಹಣಿಯಲು ಬಳಸುತ್ತಿರುವ ಹತಾರಗಳು ಮತ್ತಷ್ಟು ಹರಿತವಾಗುತ್ತಿವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಮಾತನಾಡಬೇಕಿದ್ದವರು ಮೌನ ತಾಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ದನಿ ಎತ್ತಲಿ ಎನ್ನುವ ಆಗ್ರಹ ಮತ್ತೆ ಕೇಳಿ ಬರುತ್ತಿದೆ. ‘ಜೈ ಶ್ರೀರಾಮ್’ ತರಹದ ಘೋಷಣೆಗಳನ್ನು ಗುರಾಣಿಯಾಗಿಸಿಕೊಂಡು ನಡೆಸುತ್ತಿರುವ ಗುಂಪು ಹತ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿ ರಾಮಚಂದ್ರ ಗುಹಾ, ಆಶಿಷ್‌ ನಂದಿ, ಶ್ಯಾಮ್ ಬೆನಗಲ್, ಅಪರ್ಣಾ ಸೇನ್ ಒಳಗೊಂಡಂತೆ ವಿವಿಧ ಕ್ಷೇತ್ರಗಳ 49 ಗಣ್ಯರು ಪ್ರಧಾನಿಗೆ ಪತ್ರವನ್ನೂ ಬರೆದಿದ್ದಾರೆ. ತನ್ನ ಕಾರ್ಯಸೂಚಿಯ ಮೂಲಕ ಒತ್ತಡದ ಗುಂಪುಗಳನ್ನು ಚದುರಿಸುವಲ್ಲಿಯೂ ಯಶಸ್ಸು ಕಂಡಿರುವ ಕೇಂದ್ರ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಮೋದಿಯವರು, ಇಂತಹ ಆಗ್ರಹ
ಗಳನ್ನು ಹೇಗೆ ಪರಿಗಣಿಸಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನಲ್ಲ.

ಈ ನೆಲದ ಕಾನೂನುಗಳನ್ನು ಗೌರವಿಸಲು ಇಚ್ಛಿಸದ ತಿಳಿಗೇಡಿ ಮನಃಸ್ಥಿತಿಯುಳ್ಳ ಜನರ ಗುಂಪುಗಳ ಅಟಾಟೋಪಕ್ಕೆ ಕಡಿವಾಣ ಹೇರುವಂತೆ, ಪ್ರಭುತ್ವದ ಮೇಲೆ ಒತ್ತಡ ಹೇರಲು ಒಗ್ಗಟ್ಟಾಗಿ ನಿಲ್ಲಬೇಕಿದ್ದ ಸಮಾಜದಲ್ಲೇ ಇದೀಗ ಒಡಕು ದನಿ ಹೊರಹೊಮ್ಮಲಾರಂಭಿಸಿದೆ. ಕೊಂದವರ ಪರವಾಗಿ ವಕಾಲತ್ತಿಗೆ ನಿಲ್ಲಲು ಸಮಾಜದ ಬಳಿಯೂ ಈಗ ನೆಪಗಳಿವೆ. ಆ ನೆಪಗಳಿಗೆ ಗೋಪ್ರೇಮ, ತೋರಿಕೆಯ ರಾಷ್ಟ್ರಭಕ್ತಿ, ಧರ್ಮ ರಕ್ಷಣೆಯೇ(?) ಮೂಲದ್ರವ್ಯವೂ ಆಗಿವೆ.

ನಾವೆಲ್ಲರೂ ಒಂದು ಸಮಾಜವಾಗಿ ಒಂದುಗೂಡಿ ಬಾಳಲು ರೂಪಿಸಿಕೊಂಡಿರುವ ನೀತಿ-ನಿಯಮಗಳು ಕಾನೂನು ವ್ಯವಸ್ಥೆಯನ್ನೇ ಹಿನ್ನೆಲೆಗೆ ಸರಿಸಿ, ತಪ್ಪೇ ಮಾಡಿರದವರನ್ನೂ ಶಿಕ್ಷಿಸುವ ಸ್ಥೈರ್ಯವನ್ನು ಪೂರ್ವಗ್ರಹಪೀಡಿತ ರೋಗಗ್ರಸ್ತ ಮನಃಸ್ಥಿತಿಯುಳ್ಳ ಜನರಲ್ಲಿ ತುಂಬುತ್ತಲೇ ಇದ್ದೇವೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ನಾವೇ ರೂಪಿಸಿಕೊಂಡಿರುವ ಪೊಲೀಸು ಮತ್ತು ನ್ಯಾಯದಾನ ವ್ಯವಸ್ಥೆ ಇದೆ ಎಂಬುದನ್ನು ಕೂಡ ನಿರ್ಲಕ್ಷಿಸುವ ಹೊಣೆಗೇಡಿತನ ನಮ್ಮನ್ನು ಆವರಿಸಿಕೊಳ್ಳುತ್ತಿದೆ.

ಉನ್ಮಾದಿಗಳ ಗುಂಪು ಬೀದಿಯಲ್ಲಿ ಯಾರನ್ನೋ ಹಿಡಿದು ಬಡಿದು ಕೊಂದರೆ, ಕೊಲೆಗೀಡಾದವನು ಮಾಡಿದ್ದು ಸರಿಯೇ ಎಂದು ಪ್ರಶ್ನಿಸುವ ಮಟ್ಟಕ್ಕೆ ಈ ಸಮಾಜ ಅಸೂಕ್ಷ್ಮವಾಗತೊಡಗಿರುವುದು ದುರಂತದೆಡೆಗೆ ಸಾಗಲು ಹೊರಟಿರುವುದರ ಸೂಚನೆಯಲ್ಲದೆ ಮತ್ತಿನ್ನೇನು? ತಿನ್ನುವ ಆಹಾರವೂ ದ್ವೇಷ ಬಿತ್ತಲು ಬಳಸಲಾಗುತ್ತಿರುವ ನಂಜಾಗಿ, ಆರಾಧಿಸುವ ದೇವರು, ಅನುಸರಿಸುವ ಧರ್ಮವೇ ಮತ್ತೊಬ್ಬರನ್ನು ಕೊಲ್ಲಲು ನೆಪವಾಗುತ್ತಿರುವುದು ಆಘಾತಕಾರಿ ವಿದ್ಯಮಾನವೆಂದು ಒಟ್ಟಾರೆ ಸಮಾಜ ಭಾವಿಸುತ್ತಿಲ್ಲವೇಕೆ?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಲ್ಪಟ್ಟ ವಿಡಿಯೊವೊಂದನ್ನು ಗಮನಿಸಿದರೂ ಸಾಕು, ಇವೆಲ್ಲ ಅಂತಿಮವಾಗಿ ನಮ್ಮನ್ನು ಕರೆದೊಯ್ದು ನಿಲ್ಲಿಸುವುದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಉತ್ತರ ದೊರೆಯಬಹುದು. ಇನ್ನೂ ಸರಿಯಾಗಿ ಮಾತನಾಡಲೂ ಬಾರದ ಪುಟ್ಟ ಮಗುವಿನ ಬಾಯಲ್ಲಿ ‘ಜೈ ಶ್ರೀರಾಮ್’ ಎಂದು ಹೇಳಿಸಲು ವ್ಯಕ್ತಿಯೊಬ್ಬ ಆ ಮಗುವನ್ನು ಗೋಳು ಹೊಯ್ದುಕೊಳ್ಳುವುದು ಆ ವಿಡಿಯೊದಲ್ಲಿದೆ. ಅಧಿಕಾರ ಹಿಡಿಯುವ, ಮತ್ತದನ್ನು ಉಳಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷ ಮತ್ತು ಅದನ್ನು ಸಲಹುವ ಸಂಘವು ಬಿತ್ತುತ್ತಿರುವ ನಂಜನ್ನೇ ಮೌಲ್ಯವಾಗಿ ಸ್ವೀಕರಿಸುತ್ತಿರುವ ಜನರ ಗುಂಪಿಗೆ, ಮಗುವನ್ನು ಕೂಡ ಅದರ ಪಾಡಿಗದು ಇರಲು ಬಿಡುವ ಮನಸ್ಸು ಇಲ್ಲ.

ಘೋಷಣೆಗಳ ಮೂಲಕವೇ ದೇಶಭಕ್ತಿ ಪ್ರದರ್ಶಿಸುವ ಮತ್ತು ಘೋಷಣೆಗಳಲ್ಲೇ ದೇಶಭಕ್ತಿ ಅರಸುತ್ತಿರುವವರಿಗೆ ಈ ದೇಶ ಎದುರಿಸುತ್ತಿರುವ ಮತ್ತು ಎದುರಿಸಬೇಕಿರುವ ಅಸಲಿ ಸಮಸ್ಯೆ ಮತ್ತು ಸವಾಲುಗಳೆಡೆಗೆ ಗಮನವೇ ಹರಿದಂತಿಲ್ಲ. ಹೀಗೆ ಜನರ ದಿಕ್ಕು ತಪ್ಪಿಸುವಲ್ಲೇ ತನ್ನ ಗೆಲುವು ಕಂಡುಕೊಳ್ಳುತ್ತಿರುವ ಪ್ರಭುತ್ವಕ್ಕೂ ಬೇಕಿರುವುದು ಇದೇ ಎಂಬುದು ಕೂಡ ಸ್ಪಷ್ಟವಾಗುತ್ತಿದೆ.

ದೇಹವನ್ನೇ ಕೊಳೆಸಿ ಹಾಕಬಹುದಾದ ಗಂಭೀರ ಕಾಯಿಲೆಯೊಂದರ ಗುಣಲಕ್ಷಣಗಳೆಲ್ಲವೂ ಗೋಚರಿಸುತ್ತಿದ್ದರೂ ಅವನ್ನೆಲ್ಲ ನಿರ್ಲಕ್ಷಿಸುತ್ತಲೇ ಮುಂದುವರಿಯುತ್ತಿರುವ ಈ ಸಮಾಜದ ಸ್ವಾಸ್ಥ್ಯ ಯಾವ ಮಟ್ಟಕ್ಕೆ ಕುಸಿಯಬಹುದು? ಧಾರ್ಮಿಕ ಮೂಲಭೂತವಾದದೆಡೆಗೆ ಒಲವು ಹೊಂದಿರುವ ನೆರೆಹೊರೆಯ ದೇಶಗಳ ದುಃಸ್ಥಿತಿ ಕಂಡಾದರೂ ನಾವು ತಪ್ಪು ತಿದ್ದಿಕೊಳ್ಳಬಾರದೇ? ಪ್ರಭುತ್ವವನ್ನು ಎಚ್ಚರಿಸಲು ಬಯಸುವ ಜಾಗೃತ ಮನಸ್ಸುಗಳಿಗೆ ‘ಅವಾರ್ಡ್ ವಾಪ್ಸಿ ಗ್ಯಾಂಗ್’ ಅಂತಲೋ, ‘ಲದ್ದಿಜೀವಿಗಳು’ ಎಂದೋ ಅಪಹಾಸ್ಯ ಮಾಡುತ್ತಾ ಹೋಗುವುದು ಆತ್ಮಘಾತುಕ ನಡವಳಿಕೆಯಲ್ಲದೆ ಬೇರೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT