ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪೂರ್ವಗ್ರಹದ ಮೇಲಾಟ ಯಾಕಾಗಿ?

ಧರ್ಮಾಂಧತೆಯ ಶಮನಕ್ಕೆ ನಿಸರ್ಗಕ್ಕಿಂತ ಸಮರ್ಥವಾದ ಗುರುವಿಲ್ಲ
Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮದುವೆ ಮನೆಯಲ್ಲಿ ಆ ಅವಳಿ ಕಂದಮ್ಮಗಳು ಎಲ್ಲರ ಗಮನ ಸೆಳೆದಿದ್ದವು. ‘ಇವನ್ನು ನೀವು ಹೇಗೆ ಗುರುತಿಸುತ್ತೀರಿ?’ ಅಂತ ಮಾತೆಯನ್ನು ಪ್ರಶ್ನಿಸಿದವರೇ ಎಲ್ಲ. ವಾಸ್ತವವೆಂದರೆ, ಇದು ತಿಳಿದೂ ತಿಳಿದೂ ಸಲ್ಲುವ ಔಪಚಾರಿಕ ಪ್ರಶ್ನೆ! ಏಕೆಂದರೆ ಹೆತ್ತವರಿಗೆ ಮಾತ್ರವೇನು, ತುಸು ಸೂಕ್ಷ್ಮವಾಗಿ ನೋಡಿದರಾಯಿತು, ಅವಳಿ ಮಕ್ಕಳ ನಡುವಿನ ವ್ಯತ್ಯಾಸ ಯಾರಿಗಾದರೂ ಗೊತ್ತಾದೀತು.

ಪ್ರಕೃತಿ ತದ್ರೂಪಕ್ಕೆ ಮಣೆ ಹಾಕದು. ಒಂದೊಂದು ಸೃಷ್ಟಿಯೂ ಭಿನ್ನ, ವಿಭಿನ್ನ. ಕೈ ಬೆರಳುಗಳು ವಿನ್ಯಾಸ, ಗಾತ್ರ, ಆಕಾರದಲ್ಲಿ ಭಿನ್ನ ಭಿನ್ನ. ಹೌದು, ಆ ವೈವಿಧ್ಯ ದಿಂದಲೇ ಕೈಗೆ ಕಾರ್ಯಕ್ಷಮತೆ. ಒಂದು ವೇಳೆ ಬೆರಳು ಗಳೆಲ್ಲ ಒಂದೇ ಸಮನಾಗಿದ್ದಿದ್ದರೆ ಯಾವ ಹಿಡಿತ, ಯಾವ ಬಿಗಿತ? ಬೆರಳುಗಳು ಮೇಲ್ನೋಟಕ್ಕೆ ಬೇರೆ ಬೇರೆ ಅನ್ನಿಸಿದರೂ ಅವು ಹೊಂದಾಣಿಕೆಯಲ್ಲಿವೆ.

ವೃಕ್ಷದ ಎಲೆಗಳು ಕೈಗಾರಿಕಾ ಉತ್ಪನ್ನಗಳಂತೆ ಏಕನಮೂನೆಯವಾದರೆ ಅವಕ್ಕೆ ಸಮಸಮವಾಗಿ, ಸಮರ್ಪಕವಾಗಿ ಸೂರ್ಯರಶ್ಮಿಗಳೇ ತಲುಪವು. ವೈವಿಧ್ಯವೇ ಸಕಲ ಜೀವರಾಶಿಗಳ ಸಹಬಾಳ್ವೆ, ಸಂಸರ್ಗದ ಗುಟ್ಟು ಎನ್ನುವುದು ಸಾರಾಂಶ. ಭಾರತ ದಲ್ಲಿ ವಿವಿಧತೆಯಲ್ಲಿ ಏಕತೆ ಪರಂಪರಾಗತವಾಗಿ ವಿಜೃಂಭಿಸಿದೆ ಎನ್ನುವುದು ಇತಿಹಾಸದ ಪುಟಗಳಿಗೆ ಸೀಮಿತವಲ್ಲ. ಈ ಕಾರಣಕ್ಕೇ ವಿದೇಶಿ ಪ್ರವಾಸಿಗರು ನಮ್ಮ ದೇಶಕ್ಕೆ ಪುಂಖಾನುಪುಂಖವಾಗಿ ಭೇಟಿ ನೀಡುತ್ತಾರೆ, ಕಣ್ಣಾರೆ ಕಂಡಿದ್ದನ್ನು ಬರೆಯುತ್ತಾರೆ.

ದುರ್ದೈವವಶಾತ್, ಕೆಲ ದಿನಗಳಿಂದ ದಿನಕ್ಕೊಂದು ವಿವಾದ ಭುಗಿಲೇಳುತ್ತಿದೆ. ಭಿನ್ನಾಭಿಪ್ರಾಯಗಳನ್ನು ಮಾತುಕತೆ, ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ಹೇಳಿಕೆಗಳಿಗೆ ಬರವಿಲ್ಲ. ಆ ಕುರಿತು ಸಭೆಗಳೂ ಏರ್ಪಡುತ್ತವೆ. ಆಗುವುದಾದರೂ ಏನು? ತಾನು ಹೇಳುವುದೇ ಸರಿ ಎನ್ನುವ ಅಹಮಿಕೆ, ಮತ್ತೊಬ್ಬರು ಏನು ಹೇಳುತ್ತಿದ್ದಾರೆ ಎಂದು ಆಲಿಸದಷ್ಟು ಅಸಹನೆ, ಪೂರ್ವಗ್ರಹದ ಮೇಲಾಟ ಇನ್ನಷ್ಟು ಗೌಜು, ಗದ್ದಲ ಸೃಷ್ಟಿಸಿರುತ್ತವೆ.

ವಿರೋಧಗಳನ್ನು ಗೌರವಿಸಿದರೆ ಹೆಚ್ಚು ಆತ್ಮೀಯ ರಾಗುತ್ತೇವೆ. ಮತಭೇದವಿರಲಿ, ಆದರೆ ಮತಿ ಭೇದ ಸಲ್ಲದು. ನೆಲ, ಜಲ, ಗಾಳಿ, ಆಗಸ, ಅಗ್ನಿ- ಪಂಚಭೂತಗಳು ಧರ್ಮನಿರಪೇಕ್ಷತೆಯಿಂದ ತಮ್ಮ ಕೈಂಕರ್ಯದಲ್ಲಿ ಮಗ್ನವಾಗಿವೆ. ಧರ್ಮಾಂಧತೆಯ ಶಮನಕ್ಕೆ ನಿಸರ್ಗಕ್ಕಿಂತ ಸಮರ್ಥವಾದ ಗುರುವಿಲ್ಲ.

ಸರ್ವಜನಾಂಗದ ನೆಮ್ಮದಿಯ ಬೀಡೆನಿಸಬೇಕಿದ್ದ ನಮ್ಮ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ.

ಸೇನಾಪಡೆಗೆ ದಾಖಲಿಸಿಕೊಳ್ಳುವ ಸಂದರ್ಶನ ಅದು. ಅಭ್ಯರ್ಥಿಯೊಬ್ಬನಿಗೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ‘ಪೊಲೀಸ್‌ ಅಧಿಕಾರಿ, ಸೇನಾಧಿಕಾರಿ- ಇವೆರಡರ ಪೈಕಿ ನೀನು ಏನಾಗುಬಯಸುವೆ ಕಾರಣ ಸಮೇತ ಹೇಳು’ ಎಂದು ಕೇಳಿದರು. ಅದಕ್ಕೆ ಅಭ್ಯರ್ಥಿ ‘ಸಾರ್, ಪೊಲೀಸ್‌ ಅಧಿಕಾರಿಯಾದರೆ ನಮ್ಮ ದೇಶದ ಮಂದಿಯೊಡನೆಯೇ ಹೋರಾಟ, ಹಾಗಾಗಿ ಸೇನಾಧಿಕಾರಿ ಆಗಬಯಸುವೆ’.

ಕಾಯಾ, ವಾಚಾ, ಮನಸಾ ‘ಬದುಕೋಣ, ಬದುಕಗೊಡೋಣ’ ತಾರಕ ಮಂತ್ರವೊಂದೇ ಸುಸ್ಥಿರ ಆಂತರಿಕ ಶಾಂತಿಗೆ ಮಾರ್ಗ. ಶಾಲಾ ಕಾಲೇಜುಗಳಲ್ಲಿ ಅರ್ಜಿಸಿದ ಜ್ಞಾನ ಎಂದರೆ ಉನ್ನತ ವ್ಯಾಸಂಗಕ್ಕೆ, ಉತ್ತಮ ನೌಕರಿಗಷ್ಟೇ ರಹದಾರಿಯಾದರೆ ಸಮಾಜಕ್ಕಿರಲಿ, ಸ್ವತಃ ಅರ್ಜಿಸಿದವರಿಗೂ ಏನು ತಾನೇ ಪ್ರಯೋಜನ? ಕೆಲವರ ಪಾಲಿಗಾದರೂ ಕಲಿತದ್ದು ಸದ್ವರ್ತನೆಗೆ ಪ್ರೇರಣೆಯಾದರೆ ಜಗತ್ತು ಈಗಿರು
ವುದಕ್ಕಿಂತ ಮತ್ತೂ ಸುಂದರವಾಗಿದ್ದೀತು. ಸಾಮಾಜಿಕ ಬದುಕನ್ನು ಸಾಧ್ಯವಾಗಿಸುವ ಮನುಷ್ಯತ್ವವೇ ಅತಿ ಶ್ರೇಷ್ಠಧರ್ಮ. ‘ಪರರು ನಿನಗೇನು ಕೇಡು ಮಾಡ ಬಾರದಾಗಿ ನೀನು ಬಯಸುತ್ತೀಯೊ ಅದನ್ನು ನೀನು ಪರರಿಗೆ ಎಸಗದಿರು’ ಎನ್ನುವುದು ಒಂದೇ ವಾಕ್ಯದಲ್ಲಿ ಹಿಡಿದಿಡಬಹುದಾದ ಧರ್ಮದ ವ್ಯಾಖ್ಯೆ.

ಶಿಕ್ಷಣವು ಜ್ಞಾನ ವಿಜ್ಞಾನದ ಪ್ರಮುಖ ಭಾಗವಾಗಿ ಮಾನವ ಧರ್ಮವನ್ನು ಸಾದರಪಡಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಸೃಜಿಸಬೇಕು. ಆಹಾರಕ್ಕೆ ಧರ್ಮವಿಲ್ಲ, ಏಕೆಂದರೆ ಆಹಾರವೇ ಒಂದು ಧರ್ಮ. ಈ ಮಾತು ಕಲೆ, ವೈದ್ಯಕೀಯ ಚಿಕಿತ್ಸೆ, ಬೆಳೆದ ಫಸಲು, ನೇದ ವಸ್ತ್ರ, ಕಟ್ಟಿದ ಮನೆ, ದುರಸ್ತಿಪಡಿಸಿದ ಯಂತ್ರ... ಎಲ್ಲಕ್ಕೂ ಅನ್ವಯಿಸುತ್ತದೆ. ಇಡೀ ದಿನ ಪೂಜೆ, ಪ್ರಾರ್ಥನೆ ಸಲ್ಲಿಸಿ ಕೊನೆಯಲ್ಲಿ ಅಮಾನವೀಯವಾಗಿ ನಡೆದರೆ ಏತರ ಸಾಧನೆ ಎಂದು ಎಲ್ಲ ಧರ್ಮಗಳೂ ಟೀಕಿಸುತ್ತವೆ. ಧರ್ಮವು ಪಕ್ಷಪಾತವನ್ನು ಸಹಿಸದು, ಪ್ರಮಾದವನ್ನು ಕ್ಷಮಿಸದು. ಸೂಫಿ ಸಂತರು ಬೋಧಿಸಿದ್ದು ಏಕತೆಯನ್ನೇ. ಕವಿ, ದಾರ್ಶನಿಕ ಅರಬಿ ‘ನನ್ನ ಹೃದಯವೊಂದು ಮಸೀದಿ, ಒಂದು ಇಗರ್ಜಿ, ಒಂದು ಮಂದಿರ ಮತ್ತು ಒಂದು ದೇಗುಲ’ ಎಂದರು. ಧರ್ಮಗಳ ಸ್ಥಾಪನೆಗೂ ಪ್ರಾಚೀನ ಯುಗದಲ್ಲಿ ಒಂದು ನೀತಿಪದ್ಧತಿ ಇದ್ದೇ ಇತ್ತು. ಯಾವುದು ಒಪ್ಪು, ಯಾವುದು ತಪ್ಪು, ಸಮಾಜದಲ್ಲಿ ಸರ್ವರೂ ಸರಿಯೆನ್ನುವಂತೆ ನಡೆದುಕೊಳ್ಳುವಂಥ ಶಿಸ್ತು, ನೈತಿಕ ಮನಃಸ್ಥಿತಿಯ ಅನಿವಾರ್ಯ ಮನುಷ್ಯನಿಗೆ ಮನದಟ್ಟಾಗಿಯೇ ಇತ್ತು. ಹಾಗಾಗಿ ಧರ್ಮಕ್ಕಿಂತಲೂ ನೈತಿಕಾಚರಣೆಯ ಸಂಹಿತೆ ಹಳೆಯದೆನ್ನಬಹುದು. ಅದು ಆದಿರೂಪದ ಧರ್ಮವೆನ್ನೋಣ. ಧರ್ಮ ಸಮನ್ವಯ ಸಾಧ್ಯವೇ? ಮರೀಚಿಕೆಯೇ ಎನ್ನುವಷ್ಟರಮಟ್ಟಿಗೆ ಹಿಂದಿಗಿಂತಲೂ ಇಂದು ಸಂದೇಹ, ಆತಂಕ ದಟ್ಟವಾಗುತ್ತಿದೆ.

ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ನುಡಿಯಿಂದ ಕುವೆಂಪು ಅವರ ‘ಮನುಜ ಮತ, ವಿಶ್ವ ಪಥ’ ಸಂದೇಶದವರೆಗೆ ಎಲ್ಲ ಘನ ಉದ್ಗಾರಗಳೂ ಮನುಷ್ಯನ ಎದೆಗೆ ಬೀಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT