ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ವನ್ಯಪ್ರಭೇದ: ಕಳ್ಳದಂಧೆ ತಡೆಗೀಗ 50 ವರ್ಷ

ಅಕ್ರಮವಾಗಿ ವ್ಯಾಪಾರವಾಗುತ್ತಿರುವ ವನ್ಯಜೀವಿ, ಸಸ್ಯ ಸಂತತಿಗಳು ವಿನಾಶಗೊಳ್ಳದಂತೆ ತಡೆಯುವ ಮುಖ್ಯ ಉದ್ದೇಶ
Last Updated 1 ಮಾರ್ಚ್ 2023, 22:45 IST
ಅಕ್ಷರ ಗಾತ್ರ

ವಿಶೇಷ ವನ್ಯಸಂಪತ್ತು ಇರುವ ರಾಷ್ಟ್ರಗಳ ಅನುಕೂಲ ಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವನ್ಯಜೀವಿ ಹಾಗೂ ಸಸ್ಯ ಪ್ರಭೇದಗಳ ಕಳ್ಳಮಾರಾಟವನ್ನು ನಿಷೇಧಿಸಲು ರೂಪಿಸಲಾದ ‘ಸೈಟ್ಸ್‌’ಗೆ (ಕನ್ವೆನ್ಷನ್‌ ಆನ್‌ ಇಂಟರ್‌
ನ್ಯಾಷನಲ್‌ ಟ್ರೇಡ್‌ ಇನ್‌ ಎನ್‌ಡೇಂಜರ್ಡ್‌ ಸ್ಪೀಶೀಸ್‌ ಆಫ್‌ ವೈಲ್ಡ್‌ ಫೋನ ಆ್ಯಂಡ್‌ ಫ್ಲೋರ) ಈಗ ಐವತ್ತು ವರ್ಷ ತುಂಬುತ್ತಿದೆ. 3 ಮಾರ್ಚ್, 1973ರಂದು ಸಹಿ ಹಾಕಿದ 20 ದೇಶಗಳು ಈ ಐದು ದಶಕಗಳಲ್ಲಿ ಬಿಗಿ ಕಾನೂನು ರೂಪಿಸಿ ಅಕ್ರಮಗಳನ್ನು ತಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿವೆ.

ಕಾನೂನಿನ ಕಣ್ಣು ತಪ್ಪಿಸಿ ವ್ಯಾಪಾರವಾಗುತ್ತಿರುವ ವನ್ಯಜೀವಿ ಮತ್ತು ಸಸ್ಯ ಸಂತತಿಗಳು ವಿನಾಶ ಗೊಳ್ಳದಂತೆ ತಡೆಯುವುದು ಸೈಟ್ಸ್‌ನ ಮುಖ್ಯ ಉದ್ದೇಶ. ಯುಎನ್‍ಇಪಿ (ಯುನೈಟೆಡ್ ನೇಶನ್ಸ್ ಎನ್ವಿರಾನ್‍ಮೆಂಟ್ ಪ್ರೋಗ್ರಾಂ) ಮಾರ್ಗದರ್ಶನದಲ್ಲಿ ಜಿನಿವಾದಿಂದ ಕೆಲಸ ಮಾಡುವ ‘ಸೈಟ್ಸ್’ಗೀಗ ವಿಶ್ವದ 183ಕ್ಕೂ ಹೆಚ್ಚು ದೇಶಗಳ ಸದಸ್ಯತ್ವವಿದೆ. ಇಲ್ಲಿ ನಿರ್ಧರಿಸಲಾಗುವ ಕಾರ್ಯಸೂಚಿಯನ್ನು ಸದಸ್ಯ ದೇಶಗಳೆಲ್ಲ ರಾಷ್ಟ್ರಮಟ್ಟದಲ್ಲಿ ಕಾನೂನು ರೂಪಿಸಿಕೊಂಡು ಅನುಸರಿಸಲೇಬೇಕು. ಆಮದು, ರಫ್ತು ಎಲ್ಲವೂ ಪರವಾನಗಿಯ ಮೂಲಕವೇ ಆಗಬೇಕು. ಸದಸ್ಯ ದೇಶ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿಕೊಂಡು, ವೈಜ್ಞಾನಿಕ ಮಂಡಳಿಯೊಂದರ ಮಾರ್ಗದರ್ಶನ
ದಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಪಟ್ಟಿಯಲ್ಲಿರುವ ಪ್ರಭೇದಗಳನ್ನಷ್ಟೇ ಆಮದು, ರಫ್ತು ಮಾಡಬೇಕು. ಯಾವ್ಯಾವ ವನ್ಯಪ್ರಾಣಿ ಮತ್ತು ಸಸ್ಯಗಳನ್ನು ವ್ಯಾಪಾರ, ಸಂಶೋಧನೆ, ಮುದ್ದುಪ್ರಾಣಿಯಂತೆ ಸಾಕಲು ಬಳಸ ಬಹುದೆಂದು ಮೂರು ಅನುಬಂಧಗಳಲ್ಲಿ ಪಟ್ಟಿ ಮಾಡಲಾಗಿದೆ.

ಮೊದಲ ಅನುಬಂಧದಲ್ಲಿ ಸಾವಿರದಷ್ಟು ಪ್ರಭೇದಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳನ್ನು ಯಾವ ಕಾರಣಕ್ಕೂ ವ್ಯಾಪಾರ ಮಾಡುವಂತಿಲ್ಲ. ಉದಾಹರಣೆಗೆ, ಹುಲಿ, ಆನೆ, ಏಷ್ಯಾಟಿಕ್ ಲಯನ್, ಗೊರಿಲ್ಲ, ಸಮುದ್ರ ಆಮೆ, ಲೇಡಿ ಸ್ಲಿಪ್ಪರ್ ಆರ್ಕಿಡ್ (ಹೆಣ್ಣಿನ ಚಪ್ಪಲಿ ಆಕಾರದ ಆರ್ಕಿಡ್), ದೈತ್ಯ ಪಾಂಡಗಳು ಅಳಿವಿನಂಚಿಗೆ ಸಿಲುಕಿರುವುದರಿಂದ ಸಂಶೋಧನೆಯ ಕಾರಣಗಳಿಗೆ ಮಾತ್ರ ಬಳಸಬಹುದು. ಅನಿವಾರ್ಯ ಹಾಗೂ ವಿಶೇಷ ಸಂದರ್ಭಗಳಲ್ಲಿ ಇವುಗಳ ರಫ್ತಿಗೆ ಅವಕಾಶ ಕಲ್ಪಿಸಬಹುದಾಗಿದೆ.

ಅನುಬಂಧ ಎರಡರಲ್ಲಿ ಮೂವತ್ತೈದು ಸಾವಿರ ಪ್ರಭೇದಗಳನ್ನು ಪಟ್ಟಿ ಮಾಡಲಾಗಿದೆ. ಇವು ಸದ್ಯಕ್ಕೆ ಅಳಿವಿನಂಚಿಗೆ ಸರಿದಿಲ್ಲವಾದರೂ ಇವುಗಳ ವ್ಯಾಪಾರ ವನ್ನು ನಿಯಂತ್ರಿಸದಿದ್ದರೆ ಶೀಘ್ರವಾಗಿ ಅನುಬಂಧ ಒಂದಕ್ಕೆ ಸೇರ್ಪಡೆಯಾಗಬಹುದೆಂಬ ಕಾರಣಕ್ಕೆ ತೀವ್ರ ನಿಗಾ ವಹಿಸಬೇಕೆಂಬ ಒತ್ತಾಯವಿದೆ. ಈ ಪ್ರಭೇದಗಳನ್ನು ಹೋಲುವ ತದ್ರೂಪಿ ಪ್ರಾಣಿ, ಸಸ್ಯಗಳ ವ್ಯಾಪಾರವೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜೋರಾಗಿದೆ. ಅದನ್ನೂ ತಡೆಯಬೇಕಿದೆ. ಇವುಗಳ ರಫ್ತು, ಆಮದಿಗೆ ಸಕ್ಷಮ ಪ್ರಾಧಿಕಾರದ ಪರವಾನಗಿ ಇರಲೇಬೇಕೆಂಬ ನಿಯಮವಿದೆ. ಅಮೆರಿಕದ ಜಿನ್ಸೆಂಗ್ (ಅಶ್ವಗಂಧ) ಬೇರು, ಪ್ಯಾಡಲ್‍ಫಿಶ್, ಸಿಂಹ, ಅಮೆರಿಕನ್ ಅಲಿಗೇಟರ್, ಮಹೋಗನಿ ಮರ ಮತ್ತು ಹಲವು ಜೀವಂತ ಹವಳಗಳು ಈ ಅನುಬಂಧದಲ್ಲಿವೆ.

ಅನುಬಂಧ ಮೂರರಲ್ಲಿ ನೂರೈವತ್ತು ಪ್ರಭೇದ ಗಳಿವೆ. ಇವುಗಳ ವ್ಯಾಪಾರಕ್ಕೆ ಆಮದು, ರಫ್ತು ಮಾಡಿ ಕೊಳ್ಳುವ ಉಭಯ ದೇಶಗಳ ಸಂಪೂರ್ಣ ಒಪ್ಪಿಗೆ, ಬೇಡಿಕೆ ಮತ್ತು ಸೂಕ್ತ ಪರವಾನಗಿ ಇರಬೇಕು. ಅನು ಬಂಧ ಒಂದು ಮತ್ತು ಎರಡರಲ್ಲಿ ಪ್ರಾಣಿ, ಸಸ್ಯಗಳನ್ನು ಸೇರಿಸುವ ಇಲ್ಲವೇ ಕೈಬಿಡುವ ಅಧಿಕಾರ ‘ಸೈಟ್ಸ್‌’ಗೆ ಮಾತ್ರ ಇದೆ. ಅನುಬಂಧ ಮೂರರಲ್ಲಿರುವ ಪ್ರಭೇದ
ಗಳನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರ ಆಯಾ ದೇಶಗಳಿಗಿದೆ.

ಸೈಟ್ಸ್‌ನ ಅಡಿಯಲ್ಲಿ ಸಾವಿರಾರು ಪ್ರಾಣಿ ಹಾಗೂ ಸಸ್ಯ ಪ್ರಭೇದಗಳನ್ನು ಗುರುತಿಸಿ ಅಕ್ರಮ ವ್ಯಾಪಾರದಿಂದ ರಕ್ಷಿಸಲಾಗಿದೆ. ವಿಶ್ವದ ಶೇಕಡ 7–8ರಷ್ಟು ಜೀವಿ ಪ್ರಭೇದಗಳಿರುವ ನಮ್ಮಲ್ಲಿ ಅಪಾಯದಂಚಿನ ಪ್ರಾಣಿ, ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ನಕ್ಷತ್ರ ಆಮೆ, ಸಣ್ಣ ಉಗುರು ಮತ್ತು ಮೃದು ಚರ್ಮದ ನೀರುನಾಯಿಗಳ ಕಳ್ಳವ್ಯಾಪಾರ ಜಾಸ್ತಿಯಾಗಿರುವುದರಿಂದ ಅವನ್ನು ಅನುಬಂಧ ಎರಡರಿಂದ ಒಂದಕ್ಕೆ ಸ್ಥಳಾಂತರಿಸುವಂತೆ ಸೈಟ್ಸ್‌ ಅನ್ನು ಕೋರಿದ್ದೇವೆ. ಅಪಾಯದಲ್ಲಿರುವ ಗೆಕೊ ಹಲ್ಲಿ ಮತ್ತು ಬೆಣೆ ಮೀನುಗಳನ್ನು ಅನುಬಂಧ ಎರಡಕ್ಕೆ ಸೇರಿಸಬೇಕಿದೆ. ವಿಶ್ವದಲ್ಲೇ ಅತಿಹೆಚ್ಚು ಆನೆ ದಂತದ ಕಳ್ಳವ್ಯಾಪಾರ ಮಾಡುವ ವಿಯೆಟ್ನಾಂ, ಮೊಜಾಂಬಿಕ್‍ ಅನ್ನು ನಿಯಂತ್ರಿಸಬೇಕಿದೆ. ಹುಲಿಯ ದೇಹದ ಭಾಗ, ರೈನೋದ ಕೊಂಬು, ಆನೆಯ ದಂತದ ಕಳ್ಳವ್ಯಾಪಾರಕ್ಕೆ ಕುಖ್ಯಾತಿಯಾಗಿರುವ ವಿಯೆಟ್ನಾಂ ಮತ್ತು ಅಕ್ರಮ ವ್ಯಾಪಾರಕ್ಕಾಗಿ ಹುಲಿಗಳ ಸಂಖ್ಯೆಯನ್ನು ‘ಟೈಗರ್ ಫಾರ್ಮ್‌’ಗಳಲ್ಲಿ ಸಾಕುಪ್ರಾಣಿಗಳಂತೆ ವೃದ್ಧಿಸುತ್ತಿರುವ ಚೀನಾ, ಲಾವೋಸ್, ಥಾಯ್ಲೆಂಡ್‍ಗಳನ್ನು ನಿಯಂತ್ರಿಸಲೇಬೇಕಿದೆ.

ಹುಲಿ ಸಂರಕ್ಷಿತ ಅರಣ್ಯ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಹರಿಸಿ, ಬಲೆ ಹಾಕಿ ವನ್ಯಜೀವಿ ಗಳನ್ನು ಕೊಲ್ಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಂರಕ್ಷಿತ ಪ್ರದೇಶಗಳ ಹೊರಗೂ ಹುಲಿಯ ಕಳೇಬರಗಳು ಸಿಗುತ್ತಿದ್ದು, ಕಳ್ಳಬೇಟೆ ಮತ್ತು ಅಕ್ರಮ ಮಾರಾಟದ ಬಗ್ಗೆ ಅನುಮಾನಗಳು ಹುಟ್ಟುತ್ತಿವೆ. ಈ ಮಧ್ಯೆ, ತಾನು ನಿರ್ದೇಶನ ನೀಡಿದ್ದರೂ ವನ್ಯಜೀವಿಗಳ ಕಳ್ಳಬೇಟೆ ತಡೆ ಕಾರ್ಯಾಚರಣೆಯ ಬಗ್ಗೆ ಕರ್ನಾಟಕ ವರದಿ ನೀಡಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆಕ್ಷೇಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT