ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಶಿಬಿರದ ಮೇಲೆ ಉಗ್ರರ ದಾಳಿಗೆ ನಾಲ್ವರ ಸಾವು

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜಮ್ಮು: ಇಲ್ಲಿನ ಸುಂಜುವಾನ್ ಸೇನಾ ಶಿಬಿರದ ಮೇಲೆ ಶನಿವಾರ ಬೆಳಿಗ್ಗೆ ಉಗ್ರರು ನಡೆಸಿದ ದಾಳಿಯಲ್ಲಿ ಕಿರಿಯ ಶ್ರೇಣಿಯ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಸುಬೇದಾರ್ ಮದನ್‌ಲಾಲ್ ಚೌಧರಿ ಮತ್ತು ಸುಬೇದಾರ್ ಮೊಹಮ್ಮದ್ ಅಶ್ರಫ್ ಮಿರ್ ಸಾವನ್ನಪ್ಪಿದ ಅಧಿಕಾರಿಗಳು. ದಾಳಿಯಲ್ಲಿ ಚೌಧರಿ ಅವರ ಮಗಳು ಹಾಗೂ ಒಬ್ಬ ಕರ್ನಲ್‌ ಸೇರಿ ಆರು ಮಂದಿಗೆ ಗಾಯಗಳಾಗಿವೆ.

‘ಶ್ರೀನಗರ– ಜಮ್ಮು– ಪಠಾಣ್‌ಕೋಟ್ ಹೆದ್ದಾರಿಯ ಆಯಕಟ್ಟಿನ ಸ್ಥಳದಲ್ಲಿರುವ ಶಿಬಿರದ ಮೇಲೆ ಬೆಳಗಿನ ಜಾವ 4.55ರ ವೇಳೆಗೆ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಆಗ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಪರಿಶೀಲಿಸಲು ಮುಂದಾದಾಗ ಉಗ್ರರು ದಾಳಿ ನಡೆಸಿದ್ದಾರೆ’ ಎಂದು ಐಜಿಪಿ ಎಸ್‌.ಡಿ. ಸಿಂಗ್‌ ಜಮ್ವಾಲ್‌ ತಿಳಿಸಿದ್ದಾರೆ.

‘ಸೇನಾ ಶಿಬಿರದ ಹಿಂಭಾಗದಲ್ಲಿರುವ ವಸತಿ ಪ್ರದೇಶದ ಕಡೆಯಿಂದ ಉಗ್ರರು ನುಗ್ಗಿದ್ದಾರೆ. ಮೂರರಿಂದ ನಾಲ್ವರು ಉಗ್ರರು ಇರುವ ಶಂಕೆಯಿದ್ದು, ವಸತಿ ಸಮುಚ್ಚಯವೊಂದರಲ್ಲಿ ಅವರು ಸೇರಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ  ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯ ಹಿಂದೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಕೈವಾಡವಿರುವ ಶಂಕೆಯಿದೆ’ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಶಿಬಿರದ ಸಮೀಪದ ಶಾಲೆಗಳನ್ನು ಮುಚ್ಚಲಾಗಿದೆ. ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ವರ್ಷಾಚರಣೆ ದಿನವಾದ ಫೆಬ್ರುವರಿ 9ರಂದು ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT