ಅದು ನಿರಂತರ ಪ್ರವಾಹ. ಯಾವ ಒಡ್ಡುಗಳೂ ಅದನ್ನು ಹಿಡಿದಿಡಲು ಸಾಧ್ಯವೇ ಇಲ್ಲ. ಅದಕ್ಕೆ ಕೊನೆಯೆಂಬುದೂ ಇಲ್ಲ. ಅದು ಬತ್ತಿ ಹೋದೀತೆಂಬುದು ಭ್ರಮೆ. ಎಷ್ಟೇ ಬಲವಾದ ಗಾಳಿ ಬೀಸಿದರೂ ಅದು ಸುಳಿಯನ್ನು ಸೃಷ್ಟಿಸುವುದಿಲ್ಲ. ಎಂಥದ್ದೇ ಬಿಸಿಲು ಭಾರಿಸಿದರೂ ಅದು ಆರಿ ಹೋಗುವುದಿಲ್ಲ. ಮೇಲ್ನೋಟಕ್ಕೆ ಇಂಥವೆಲ್ಲ ಅನುಭವ ನಮಗಾದಂತೆ ಕಂಡರೂ ಹೃದಯದಡಿಯಲ್ಲಿ ಸದ್ದಿಲ್ಲದೇ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುತ್ತದೆ.

ಹೌದು, ಪ್ರೀತಿಯೆಂಬುದೇ ಹಾಗೆ; ಅದನ್ನು ಗುರುತಿಸುವ ಸೂಕ್ಷ್ಮ ಒಳಗಣ್ಣು ನಮ್ಮಲ್ಲಿರುವುದಿಲ್ಲ. ಅಂಥವರು ಮಾತ್ರವೇ ಪ್ರೇಮ ಕುರುಡೆಂದು ಬೊಬ್ಬಿರಿಯುವುದು; ಅದು ಅಶಾಶ್ವತವೆಂದು ವ್ಯರ್ಥಾಲಾಪಗೈಯ್ಯುವವರು.

ಪ್ರೀತಿಯಷ್ಟು ಚಲನಶೀಲ ಸೃಷ್ಟಿ ಈ ಜಗತ್ತಿನಲ್ಲಿ ಈವರೆಗೆ ಆಗಿಲ್ಲ. ಅದರಷ್ಟು ನಿಸ್ಪಕ್ಷ ಸಂಗತಿ ಇನ್ನಾವುದೂ ಇರಲಿಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಗಂಡು-ಹೆಣ್ಣು, ಜಾತಿ-ಮತ, ಎಳೆಯ-ಹಿರಿಯ, ಕಟುಕ-ದುರುಳ, ಸಾಧು-ಸಜ್ಜನ ಇಂಥ ಯಾವ ಭೇದವೂ ಇಲ್ಲ. ಜೀವನದಲ್ಲಿ ಹಣ, ಅಧಿಕಾರ, ಅಂತಸ್ತು, ಸಾಧನೆ, ಸಿರಿವಂತಿಕೆಗಳೇ ಮುಖ್ಯ. ಪ್ರೀತಿಯ ಭಾವನೆಗಳ ಪ್ರವಾಹದಲ್ಲಿ ಸಿಲುಕಿದರೆ ಈ ಎಲ್ಲವೂ ಕೊಚ್ಚಿ ಹೋಗುತ್ತದೆ. ಎಮೋಷನಲ್ ಫೂಲ್ಗಳಾಗಿ ಬದುಕನ್ನು ಮುಳುಗಿಸಿಕೊಳ್ಳುವುದಕ್ಕಿಂತ, ಬುದ್ಧೀವಂತರಾಗಿ ದಡ ಸೇರುವುದು ಒಳಿತು ಎಂದು ವಾದಿಸುವವರೂ ಇದ್ದಾರೆ. ಇಂಥವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ; ಹಣ ಇದ್ದ ಮಾತ್ರಕ್ಕೆ ಜೀವನ ಚೆಂದವಾಗಿದೆ ಎಂದರ್ಥವೇ? ತಿರುಗಿ ನೀವೂ ಕೇಳಬಹುದು; ಪ್ರೀತಿಯನ್ನು ನಿಭಾಯಿಸಲು ಸಾಧ್ಯವಾಗದಷ್ಟು ಹಣ ಇಲ್ಲದಿದ್ದರೆ ಏನು ಪ್ರಯೋಜನ ಹಾಗಾದರೆ? ಹೌದು, ಸಿರಿವಂತಿಕೆ ಹಾಗೂ ಪ್ರೀತಿ ಎರಡಕ್ಕೂ ಜೀವನದಲ್ಲಿ ಅದರದ್ದೇ ಆದ ಪ್ರಾಮುಖ್ಯ ಇದೆ. ಆದರೆ, ಇವೆರಡನ್ನು ನಾವು ಹೇಗೆ ನಿಭಾಯಿಸುತ್ತೇವೆ, ಯಾವ ಸನ್ನಿವೇಶವದು ಎಂಬ ವಿವೇಚನೆಯನ್ನು ಯಾರೂ ಹೇಳಿಕೊಡಲಾಗದು. ಎರಡನ್ನೂ ಮ್ಯಾನೇಜ್ ಮಾಡುವುದು ಬುದ್ಧಿವಂತಿಕೆ, ವಿವೇಕ ಎನಿಸಿಕೊಳ್ಳುತ್ತದೆ.

ಇವರಡನ್ನೂ ಹೋಲಿಸಲಾಗದಿದ್ದರೂ, ಪ್ರೀತಿ ಇದ್ದಲ್ಲಿ ಸಂತೋಷ, ತೃಪ್ತಿ ಇರುತ್ತದೆ. ಹಣ ಇದ್ದಲ್ಲಿ ಸುಖ, ಸೌಕರ್ಯಗಳು ಇರುತ್ತವೆ. ಪ್ರೀತಿ ಕೊಟ್ಟಷ್ಟು ಹೆಚ್ಚಾಗುತ್ತದೆ. ಹಣ..? ಗೊತ್ತಿಲ್ಲ. ನಾವು ಯಾರನ್ನು, ಎಷ್ಟು ಪ್ರೀತಿಸಬೇಕು ಎಂಬುದು ನಮಗೆ ಸೇರಿದ್ದು. ಹಾಗೆಯೇ ಯಾವಾಗ, ಹೇಗೆ, ಎಷ್ಟು ಹಣ ಗಳಿಸಬೇಕು ಎಂಬುದು ನಮ್ಮದೇ ನಿರ್ಧಾರವಾದರೂ ಪರಿಣಾಮ ನಮ್ಮ ಕೈನಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ‘ಸಿರಿವಂತರ ಮನೆಯ ನಾಯಿ ಬಂಗಾರದ ಬೋನಿನಲ್ಲಿ ಕೂತು, ಬಡವರ ಮನೆಯ ನಾಯಿ ಮಕ್ಕಳ ಜೊತೆ ಆಟವಾಡುವುದನ್ನು ನೋಡಿ ಕಣ್ಣೀರು ಹಾಕುತ್ತಾ ಇತ್ತಂತೆ.’

ಒಂದಂತೂ ಸತ್ಯ, ನಾವು ಮನುಷ್ಯರನ್ನು ಪ್ರೀತಿಸಿ ಹಣವನ್ನು ಬಳಸಬೇಕಿತ್ತು. ಆದರೆ ನಾವಿಂದು ಹಣವನ್ನು ಪ್ರೀತಿಸಿ ಮನುಷ್ಯರನ್ನು ಬಳಸುತ್ತಿದ್ದೇವೆ.

ಸ್ವಭಾವತಃ ಜೀವ ಕಾರುಣ್ಯವೇ ಇಲ್ಲದ, ಕಟುಕಾತಿಕಟುಕನನ್ನು ಕೇಳಿ ನೋಡಿ ಜೀವನದ ಯಾವುದೋ ಕ್ಷಣದಲ್ಲಿ ಪ್ರೀತಿಗೆ ಸಿಲುಕಿ ತೊಳಲಾಡಿರುತ್ತಾನೆ. ಸಿಕ್ಕಸಿಕ್ಕದ್ದನ್ನು ಬೇಟೆಯಾಡಿ ಬೇಯಿಸಿ ತಿನ್ನುವ ಬೇಡನನ್ನು ಕೇಳಿನೋಡಿ, ಅದ್ಯಾವುದೋ ಗಳಿಗೆಯಲ್ಲಿ ಆತನೊಳಗಿಂದ ಜೀವ ಕಾರುಣ್ಯ ಉಕ್ಕಿ ಹರಿದಿರುತ್ತದೆ. ದಿನವೂ ಹತ್ತಾರು ಹೆಣವನ್ನು ಹೂಳುವ ಸ್ಮಶಾನ ಸೇವಕನನ್ನು ಒಮ್ಮೆ ವಿಚಾರಿಸಿ, ಒಂದಲ್ಲ ಒಂದು ಸಲವಾದರೂ ಆತ ಸಾವಿಗೆ ಮರುಗಿರುತ್ತಾನೆ. ಇವರಾರೂ ಪ್ರೀತಿಗೆ ಹೊರತಲ್ಲ ಎಂದ ಮೇಲೆ ಇಂಥ ಪ್ರೀತಿ ಬರಡಾಗಲು ಸಾಧ್ಯವೇ? ಹೃದಯದಿಂದ ಹೃದಯಕ್ಕೆ ಅದರ ಹರಿವು ನಿರಂತರ. ಒಂದೆಡೆ ಅದನ್ನು ನಿರ್ಲಕ್ಷಿಸಿದರೆ, ಅದನ್ನು ತಿರಸ್ಕರಿಸಿದರೆ, ಬಲವಂತವಾಗಿ ಹತ್ತಿಕ್ಕಲು ನೋಡಿದರೆ, ತೀರಾ ಪ್ರಸಾಯಪಟ್ಟರೆ ದಿಕ್ಕು ಬದಲಿಸಬಹುದೇ ಹೊರೆತು ಪ್ರೀತಿಗೆ ಕೊನೆ ಎಂಬುದಿಲ್ಲ. ವೃಥಾ ಅದನ್ನು ತಡೆಯುತ್ತೀರೇಕೆ ? ಮೊಗೆಮೊಗೆದು ಹಂಚಿ. ಪ್ರೀತಿಯೆಂಬುದು ಸಿಹಿನೀರ ಬುಗ್ಗೆ ಮೊಗೆದು ಹಂಚಿದಷ್ಟೂ ಹೊಸನೀರು ಉಕ್ಕುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.