ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75| ಪ್ರಜಾವಾಣಿ ಕವಿ: ಓದುಗರ ಪ್ರತಿಕ್ರಿಯೆ

Last Updated 21 ಅಕ್ಟೋಬರ್ 2022, 11:04 IST
ಅಕ್ಷರ ಗಾತ್ರ

ಪ್ರಜಾವಾಣಿ ಕವಿ!

'ಪ್ರಜಾವಾಣಿ'ಗೆ 75, ಹಾಗೆಯೇ ಅದರೊಂದಿಗೆ ನಮ್ಮ ಮನೆಯ ನಂಟಿಗೂ 75. ಏಕೆಂದರೆ ನಮ್ಮ ತಂದೆ ರಾಜಾರಾಯರು 'ಪ್ರಜಾವಾಣಿ' ಪ್ರಾರಂಭವಾದಾಗಿನಿಂದಲೂ ಅದರ ನಿಷ್ಠಾವಂತ ಅಭಿಮಾನಿಗಳು. ಅವರ ನಂತರ ನಾನೂ ಅಷ್ಟೇ. ಈ ಅಭಿಮಾನಕ್ಕೆ ಕಾರಣ 'ಪ್ರಜಾವಾಣಿ'ಯು ವಾರ್ತಾಪತ್ರಿಕೆಯಾಗಿ ಅಂದಿನಿಂದ ಇಂದಿನವರೆಗೆ ಅನೂಚಾನವಾಗಿ ಉಳಿಸಿಕೊಂಡು ಬಂದಿರುವ ಓದುಗಸ್ನೇಹ, ವಸ್ತುನಿಷ್ಠತೆ ಮತ್ತು ವಿಶ್ವಾಸಾರ್ಹತೆ.
ನನ್ನನ್ನು ಕವಿಯಾಗಿ ಗುರುತಿಸಿ, ಬೆಳೆಸಿದ ಪ್ರಮುಖ ಪತ್ರಿಕೆಯೂ 'ಪ್ರಜಾವಾಣಿ'ಯೇ. ನನಗೆ 'ಪ್ರಜಾವಾಣಿ ಕವಿ' ಎಂಬ ಅಡ್ಡಹೆಸರೂ ಇದೆ. ಏಕೆಂದರೆ ಈವರೆಗೆ ನನ್ನ ನೂರಕ್ಕೂ ಹೆಚ್ಚು ಕವಿತೆಗಳು 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿವೆ. ಇದೊಂದು ದಾಖಲೆಯೂ ಇರಬಹುದು. ಇದಕ್ಕಾಗಿ 'ಪ್ರಜಾವಾಣಿ'ಗೆ ನಾನು ಸದಾ ಕೃತಜ್ಞ.
ಅಮೃತ ಮಹೋತ್ಸವವನ್ನು ಆರಿಸಿಕೊಳ್ಳುತ್ತಿರುವ ನನ್ನ ನೆಚ್ಚಿನ, ಮೆಚ್ಚಿನ 'ಪ್ರಜಾವಾಣಿ'ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದರ ಶತಮಾನೋತ್ಸವವನ್ನು ನೋಡುವ ಭಾಗ್ಯವೂ ನನ್ನದಾಗಲಿ ಎಂದು ಹಾರೈಸುತ್ತೇನೆ.

- ಬಿ.ಆರ್.ಲಕ್ಷ್ಮಣರಾವ್

***

ಪತ್ರಿಕಾ ರಂಗಕ್ಕೆ ಹೊಸ ಆಯಾಮ ನೀಡಿದ ಶ್ರೇಯಸ್ಸು ಪ್ರಜಾವಾಣಿಗೆ

ಕನ್ನಡ ಪತ್ರಿಕಾ ಲೋಕಕ್ಕೆ ಹೊಸ ಆಯಾಮ ನೀಡಿದ ಶ್ರೇಯಸ್ಸು ಪ್ರಜಾವಾಣಿಗೆ ಸಲ್ಲುತ್ತದೆ. ಯಾವುದೇ ರೀತಿಯ ದಾಕ್ಷಿಣ್ಯ ಮತ್ತು ಭಿಡೆಗೆ ಒಳಗಾಗದೆ, ನಿರ್ಭೀತಿಯಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಇಂತಹ ಪತ್ರಿಕೆ ಕನ್ನಡದಲ್ಲಿ ಮತ್ತೊಂದಿಲ್ಲ. ಬಹುಜನ ಹಿತಾಯ ಬಹುಜನ ಸುಖಾಯ ಎಂಬ ಜನಪರ ನೀತಿಗೆ ಪ್ರಜಾವಾಣಿ ಇನ್ನಷ್ಟು ಬಧ್ಧವಾಗಬೇಕಿದೆ. ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಧಕ್ಕೆ ಬಂದಾಗ ಕನ್ನಡಿಗರನ್ನು ಹೋರಾಟಕ್ಕೆ ಅಣಿಗೊಳಿಸುವಲ್ಲಿ ಅದು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದು ಹೀಗೆಯೇ ಮುಂದುವರೆಯಲಿ.

- ಮಲ್ಲಿಕಾರ್ಜುನ್ ಹುಲಗಬಾಳಿ, ಬನಹಟ್ಟಿ

***

ನನ್ನ ಪತ್ರ ನೋಡಿ ಸಾಪ್ತಾಹಿಕದ ಭಾಷೆ ಎಂದಿದ್ದ ಸ್ನೇಹಿತ

1960ರ ದಶಕದಲ್ಲಿ ನಾನು ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿ. ಸ್ಕೂಲಿಗೆ ಹಿಂದು, ತಾಯಿನಾಡು, ಪ್ರಜಾವಾಣಿ, ಪ್ರಜಾಮತ ಬರುತ್ತಿದ್ದವು. ನಮ್ಮ ವಿಜ್ಞಾನ ಮೇಷ್ಟ್ರು ಕೆ. ಬೀಮಾಚಾರ್ ‘ಪ್ರಜಾವಾಣಿ’ ಓದ್ರಿ ಎಂದು ಹೇಳುತ್ತಿದ್ದರು. ಆಗಿನಿಂದ ಪ್ರಜಾವಾಣಿ ಓದಿನ ಗೀಳು ಹಿಡಿಯಿತು. ತುಮಕೂರಿನಲ್ಲಿ ಬಿ.ಎ. ಮುಗಿಸಿ 1961 ರಲ್ಲಿ ಮೈಸೂರಿಗೆ ಹೋದೆ. ಅದು ಜೂನ್-ಜುಲೈ ಕಾಲ. ಹೂವರಳಿ ನಿಂತ ಸಾಲು ಮರಗಳು. ಅವುಗಳ ನೆರಳಲ್ಲಿ ಹೂಮೇದು ಮಲಗಿದ ದನಕರುಗಳು. ಇನ್ನು ಅರಮನೆಯೆ? ನೀನೇ ಒಂದು ಬಾರಿ ಬಂದು ನೋಡು ಎಂದು ವರ್ಣಿಸಿ ಗೆಳೆಯನಿಗೆ ಒಂದು ದೀರ್ಘ ಪತ್ರ ಬರೆದೆ. ಅವನು ಮರು ಪತ್ರದಲ್ಲಿ ‘ನಿನ್ನ ಕಾಗದ ಪ್ರಜಾವಾಣಿಯ ಪುರವಣಿಯಂತಿದೆ’ ಎಂದಿದ್ದ.

ಆ ಕಾಲಕ್ಕೆ ಇನ್ನೂ ಡಿಜಿಟಲ್ ಯುಗ ಕಾಲಿಟ್ಟಿರಲಿಲ್ಲ. ಹೊತ್ತು ಮೂಡುವ ಮುನ್ನವೆ ಪತ್ರಿಕೆ ಬೆಂಗಳೂರಿನಿಂದ ರವಾನೆಯಾಗುತ್ತಿದ್ದವು. ಏನಾದರೂ ಕಳ್ಳಂಬೆಳ್ಳದಿಂದ ಬೆಂಗಳೂರಿಗೆ ಬರಬೇಕಿದ್ದರೆ ಪ್ರಜಾವಾಣಿ ಪೇಪರ್ ವ್ಯಾನ್ ಹತ್ತುತ್ತಿದ್ದೆವು.

ನಾನು ಆಗಾಗ ‘ಸಂಗತ’, ‘ವಾಚಕರ ವಾಣಿ’ಗೆ ಬರೆಯುತ್ತಿದ್ದೆನೆ. ಒಮ್ಮೆ ದಾಂಡೇಲಿ ಅರಣ್ಯದ ಕಾಡಿಗೆ ಪ್ರವಾಸ ಹೋಗಿದ್ದಾಗ ಅಲ್ಲಿ ನಮ್ಮ ಗೈಡ್ ಚಾಪ್‌ಖಂಡ್ ಎಂಬಾತ ‘ನೀವೇನಾ ವಾಚಕರ ವಾಣಿ ಶಿವರಾಮಯ್ಯ?’ ಎಂದು ಕೇಳಿದರು. ಕವನ, ಪ್ರಬಂಧ, ವಿಮರ್ಶೆ ಇತ್ಯಾದಿ ಲೆಕ್ಕಕ್ಕಿಲ್ಲ. ‘ವಾಚಕರವಾಣಿಯಿಂದ ನಾನು ಗುರ್ತಿಸಲ್ಪಡುತ್ತಿದ್ದೆ. ಅಮೆರಿಕಾಕ್ಕೆ ಹೋಗಿದ್ದಾಗಲೂ ನಮ್ಮ ಸೊಸೆಯಿಂದ ಪ್ರಜಾವಾಣಿಯನ್ನು ಡೌನ್ ಲೋಡ್ ಮಾಡಿಸಿಕೊಂಡು ಓದದಿದ್ದರೆ ಸಮಾಧಾನವಿರುತ್ತಿರಲಿಲ್ಲ. ಹೆಸರಿಗೆ ಅನ್ವರ್ಥವಾಗಿ ‘ಪ್ರಜಾವಾಣಿ’ ಸಾಮಾಜಿಕ ನ್ಯಾಯದ ಸಂವಹನವಾಣಿ . ಅದರ ಅಮೃತ ಹಾದಿಗೆ ಅಭಿನಂದನೆಗಳು.

- ಪ್ರೊ.ಶಿವರಾಮಯ್ಯ, ಬೆಂಗಳೂರು

***

ಲೇಖನಕ್ಕೆ ಅನಿರೀಕ್ಷಿತವಾಗಿ ಸಂಭಾವನೆ

'ಪ್ರಜಾವಾಣಿ' ಹಾಗೂ 'ಡೆಕ್ಕನ್ ಹೆರಾಲ್ಡ್ ' ಪತ್ರಿಕೆಗಳ ಜೊತೆಗಿನ ನನ್ನ ಒಡನಾಟ ಆರಂಭವಾಗಿದ್ದು ಮನೆಮನೆಗೆ ಪತ್ರಿಕೆಗಳನ್ನು ಹಂಚುವ ವೃತ್ತಿಯೊಂದಿಗೆ (1950-53). ಆಗ ನನ್ನ ಹಳ್ಳಿಯಿಂದ ದಾವಣಗೆರೆಗೆ 5ನೇ ತರಗತಿ ಓದಲು ಬಂದಿದ್ದೆ . ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿತ್ತು. ಪತ್ರಿಕೆಯ ಪ್ರತಿನಿಧಿಗಳಾದ ಜೋಯಿಸರು ಹಾಗೂ ಬೇತೂರು ಮಹಾಲಿಂಗಪ್ಪನವರ ಬಳಿ ಕೆಲಸ ಮಾಡಿದೆ. ಬೆಂಗಳೂರಿಂದ ಮೀರಜ್‌ಗೆ ಹೋಗುವ ರೈಲು ಬೆಳಗ 8 ಗಂಟೆಗೆ ದಾವಣಗೆರೆಗೆ ಬರುತ್ತಿತ್ತು . ಆಗ ವಿವಿಧ ಪತ್ರಿಕೆಗಳಾದ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ದಿ ಹಿಂದು ,ತಾಯಿನಾಡು ,ಪ್ರಜಾಮತ, ಕೊರವಂಜಿ ಇತ್ಯಾದಿ ಪತ್ರಿಕೆಗಳನ್ನು ಮಾರಾಟ ಮಾಡುತಿದ್ದೆ. ನಾನು ಪತ್ರಿಕೆ ಓದುವುದನ್ನು ರೂಢಿಸಿಕೊಂಡದ್ದೇ ಆಗ .

‘ಮೌಲ್ಯ ಮಾಪನದ ಮೌಲ್ಯ’ ಎಂಬ ನನ್ನ ಲೇಖನ 1993ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ನಿರೀಕ್ಷೆಯೇ ಮಾಡದಂತೆ ಆ ಲೇಖನಕ್ಕೆ ಪ್ರಜಾವಾಣಿಯಿಂದ ₹40 ಸಂಭಾವನೆಯ ಚೆಕ್‌ ಅನ್ನು ಪ್ರಜಾವಾಣಿ ರವಾನಿಸಿತ್ತು. ಆ ಹಣದಲ್ಲಿ ನನ್ನ ಹೆಂಡತಿ ಸೀರೆ ಕೊಂಡಿದ್ದರು. 'ವಾಚಕರವಾಣಿ'ಗೆ ಬರೆದ ನನ್ನಕೆಲವು ಪತ್ರಗಳು ಪ್ರಕಟವಾಗಿವೆ.

- ಧರ್ಮರಾಜ ಎಂ ಕಲ್ಯಾಣಿ, ಬೆಂಗಳೂರು

***

ಕನ್ನಡಿಗರ ಹೆಮ್ಮೆ!

ಪ್ರಜಾವಾಣಿಗೂ ನನಗೂ ಸುಮಾರು ನಲವತ್ತು ವರ್ಷಗಳ ನಂಟು. ನಾನು ಬೆಂಗಳೂರಿನ ತೆಕ್ಕೆಗೆ ಬಂದು ಬಿದ್ದ ಹೊಸತರಲ್ಲಿ ಮೆಜೆಸ್ಟಿಕ್ ಸುತ್ತವೇ ಸುಧೀರ್ಘ ಲಲಿತ ಪ್ರಬಂಧವೊಂದನ್ನು ಬರೆದು ರವಾನಿಸಿದಾಗ ಅದು ಎರಡು ಕಂತುಗಳಲ್ಲಿ ಪ್ರಕಟವಾಗಿತ್ತು. ಇನ್ನೂ ಉಳಿದದ್ದನ್ನು ಕೈಬಿಡಲಾಯಿತೆಂದು ನಂತರ ತಿಳಿಯಿತು. ಬರವಣಿಗೆ ಚಿಕ್ಕದೂ ಚೊಕ್ಕವೂ ಆಗಿರಬೇಕೆಂಬ ಕಾರಣಕ್ಕೆ. ಇದು ಪ್ರಜಾವಾಣಿಯ ಆದ್ಯತೆ. ಸ್ವತಃ ‘ಸಂಯುಕ್ತ ಕರ್ನಾಟಕ’ದಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡಿದ್ದ ಗೆಳೆಯರೊಬ್ಬರು, ’ಪ್ರಜಾವಾಣಿಯಲ್ಲಿ ಪ್ರಕಟವಾದಾಗಲೆ ನೀವೊಬ್ಬ ಲೇಖಕರೆಂದು ಗುರುತಿಸಿಕೊಂಡಂತೆ’ ಎಂದು ಹೇಳುತ್ತಿದ್ದರು. ಹೀಗೆ ಬರಹಗಾರರನ್ನು ಬೆಳೆಸಿದ ಹೆಗ್ಗಳಿಕೆ ಪ್ರಜಾವಾಣಿಯದ್ದು.
ನಾಗರಿಕ ಪ್ರಪಂಚ ಓದುವ ಸುಖದಿಂದಲೆ ವಿಮುಖವಾಗುತ್ತಿರುವ ದಿನಗಳಲ್ಲಿ 'ಪ್ರಜಾವಾಣಿ' ತನ್ನ ಹೆಸರನ್ನು ಸಾರ್ಥಕಪಡಿಸಿಕೊಂಡಂತೆ, ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಪ್ರಜೆಗಳ ಆಶೋತ್ತರಗಳಿಗೆ ಮಿಡಿಯುವ ವೇದಿಕೆಯಾದದ್ದು ನಿಜ. ನಮ್ಮ ದೇಶದಲ್ಲಿ ಯಾವುದು ತಾನೆ ನೆಟ್ಟಗಿದೆ ಈಗ? ಜನಪ್ರಿಯ ಮಾಧ್ಯಮಗಳೆಲ್ಲ ಮಾಲೀಕರ ಬಾಲಬಡಿಯುವ ದಿನಮಾನದಲ್ಲಿ, ಮರ್ಜಿ ಹಿಡಿಯದ ನಿಷ್ಪಕ್ಷಪಾತ-ನಿಷ್ಠುರ ವರದಿಗಳಿಂದ ಪ್ರಜಾವಾಣಿ ತನ್ನತನ ಕಾಪಾಡಿಕೊಂಡಿದೆ.

- ಈರಪ್ಪ ಎಂ ಕಂಬಳಿ, ಬೆಂಗಳೂರು

***

ಸ್ಪರ್ಧೆಗೆ ಸ್ಪೂರ್ತಿ ನೀಡುವ ಪ್ರಜಾವಾಣಿ

ಸ್ಪರ್ಧಾ ಜಗತ್ತಿನಲ್ಲಿ ಪ್ರಚಲಿತ ವಿಷಯಗಳನ್ನು ರಾಜ್ಯ, ರಾಷ್ಟ್ರ ,ಅಂತರಾಷ್ಟ್ರೀಯ ಮಟ್ಟ ವಿಷಯಗಳನ್ನು ಪ್ರಜಾವಾಣಿ ಅತ್ಯಂತ ಸರಳವಾಗಿ ಮತ್ತು ಆಕರ್ಷಕವಾಗಿ ತಿಳಿಸುತ್ತದೆ. ನನಗೆ ಒಮ್ಮೆಗೆ ಎರಡರಿಂದ ಮೂರು ಸರ್ಕಾರಿ ನೇಮಕಾತಿ ಹೊಂದಲು, ಪ್ರಜಾವಾಣಿಯ ಪ್ರಚಲಿತ ವಿಷಯಗಳು ಸಹಾಯಕವಾದವು. ಪ್ರಜಾವಾಣಿಯಲ್ಲಿ ಬರುವ ಪ್ರತಿಯೊಂದು ವಿಷಯಗಳು ಸಾಮಾನ್ಯ ಜನರಿಂದ ಹಿಡಿದು ಮಕ್ಕಳ ವರೆಗೆ ಅತ್ಯಂತ ಉಪಯುಕ್ತವಾಗಿದೆ.

- ಡಾ.ಅಂಬಿಕಾ ಲಗಟಗೇರ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಕಣಮುಚನಾಳ

***

ಮನವು ಹಂಬಲಿಸುವುದು ಪ್ರಜಾವಾಣಿ

ಪ್ರಜಾವಾಣಿ ಕನ್ನಡ ದಿನಪತ್ರಿಕೆಗೂ ನನಗೂ ನಾಲ್ಕು ದಶಕಗಳ ನಂಟು. ಬಾಲ್ಯದಿಂದಲೂ ಇಂದಿನವರೆಗೆ, ಮುಂದೆಯೂ ಸಹ ನಾನಿಷ್ಟಪಡುವ ಕನ್ನಡ ದೈನಿಕ ಪ್ರಜಾವಾಣಿ. ಕರ್ನಾಟಕದಲ್ಲಿರಲಿ ಹೊರರಾಜ್ಯದಲ್ಲಿರಲಿ ದಿನಪತ್ರಿಕೆಯ ವಿಷಯಕ್ಕೆ ಬಂದಲ್ಲಿ ಮನವು ಹಂಬಲಿಸುವುದು ಪ್ರಜಾವಾಣಿ ದಿನಪತ್ರಿಕೆಯನ್ನು. ಅದೊಂದು ರೀತಿಯ ವ್ಯಸನದಂತೆ, ಓದದೇ ಇರಲಾರದು ಮನಸ್ಸು. ಕನ್ನಡ ಬಾರದವರೂ ಸಹ ಕನ್ನಡ ಕಲಿಯುವಂತಹ ಉತ್ಸಾಹವನ್ನು ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಶುದ್ಧ ಭಾಷೆ- ಅಚ್ಚುಕಟ್ಟಾದ ಮುದ್ರಣ ಶೈಲಿ, ಅಪರಿಮಿತ ಜ್ಞಾನವನ್ನು ಕೊಡಬಲ್ಲ ವಿಶ್ವದ ಏಕೈಕ ಕನ್ನಡ ದಿನಪತ್ರಿಕೆಯಂದರೆ ಅದು ಪ್ರಜಾವಾಣಿ. ವಸ್ತುನಿಷ್ಟತೆ- ನಿಖರತೆ ಮತ್ತು ವಿಶ್ವಾಸಾರ್ಹಗಳನ್ನು ಮೈಗೂಡಿಸಿಕೊಂಡು, ವಿನ್ಯಾಸಗಳನ್ನು ಆಕರ್ಷಕ ರೀತಿಯಲ್ಲಿ ಕಾಲಕಾಲಕ್ಕೆ ಬದಲಾಯಿಸಿದರೂ ಸಹ ನಂಬಿಕೆಗೆ ಚ್ಯುತಿ ಬರದಂತೆ ಎಲ್ಲರ ಮನೆಮಾತಾಗಿರುವ ಪ್ರಜಾವಾಣಿ ಅಮೃತ ಮಹೋತ್ಸವ ಸಡಗರದಲ್ಲಿ ನಾನೂ ಲೀನಲಾಗಲು ಬಯಸುತ್ತೇನೆ. ಮತ್ತಷ್ಟು ಗುಣಮಟ್ಟದಿಂದ ನೂರ್ಕಾಲ ಓದುಗರ ಒಡನಾಡಿಯಾಗಲಿ ಎಂದು ಮನ ತುಂಬಿ ಹಾರೈಸುವೆ.

ಡಾ. ಜಿ. ಎಸ್. ವೇಣುಮಾಧವ , ಕರ್ನಾಟಕ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ ವಿಭಾಗದ ಮುಖ್ಯಸ್ಥರು, ಧಾರವಾಡ

***

ಉದ್ಯೋಗ ಸಿಕ್ಕಿದ್ದು ಪ್ರಜಾವಾಣಿಯಿಂದ

ನನಗೆ ಪತ್ರಿಕೆ ಓದಬೇಕೆನಿಸುವಷ್ಟರ ಪ್ರಾಯದಲ್ಲಿ(1977) ಕೊಳ್ಳಲು ಶಕ್ತಿ ಇರಲಿಲ್ಲ. ಎರವಲಾಗಿ ದೊರಕಿದ್ದು ಪ್ರಜಾವಾಣಿ. ಆಸಕ್ತಿಯಿಂದ ಓದುತ್ತಾ ಅಭಿಮಾನಿಯಾದೆ. ಬೆಂಗಳೂರಿನಲ್ಲಿ ಅಪ್ರೆಂಟಿಸ್ ತರಬೇತಿ ಮುಗಿಸಿ ರಜೆಗೆ ನಮ್ಮೂರಿಗೆ (ಅದು ಆಗ ಒಂದು ಕುಗ್ರಾಮ) ಹೋಗಿದ್ದಾಗ ಹೊರಗಿನ ವರ್ತಮಾನ ಮತ್ತು ಉದ್ಯೋಗ ಮಾಹಿತಿಗಾಗಿ ಕಷ್ಟ ಪಟ್ಟು ಪ್ರಜಾವಾಣಿಯನ್ನು ಕೊಳ್ಳಲು ಶುರು ಮಾಡಿದೆ. ಎರಡೇ ದಿನದಲ್ಲಿ ಪ್ರಜಾವಾಣಿಯಲ್ಲಿ ಬಂದ ಉದ್ಯೋಗ ಜಾಹೀರಾತಿನಿಂದ ನನಗೆ ತಾತ್ಕಾಲಿಕ ಕೆಲಸ ಸಿಕ್ಕಿ ನಂತರ ಖಾಯಂ ಆಗಿ ಅತ್ಯುತ್ತಮ ಜೀವನ ರೂಪಿಸಿಕೊಂಡೆ. ನನ್ನ ಭಾಷೆ ಮತ್ತು ಜ್ಞಾನ ವಿಕಾಸದಲ್ಲಿ ಪ್ರಜಾವಾಣಿಯ ಪಾತ್ರ ಅವಿಸ್ಮರಣೀಯ. ಜೀವನ ರೂಪಿಸಿದ ಮತ್ತು ಭಾಷೆಯ ಮೇಲಿನ ಹಿಡಿತ ಸಾಧಿಸಲು ನೆರವಾದ ಪ್ರಜಾವಾಣಿಯ ಅಭಿಮಾನಿ ನಾನು. ತಪ್ಪದೇ ಓದುತ್ತಲೇ ಇದ್ದೇನೆ. ಪ್ರಜಾವಾಣಿಗೆ ಶುಭವಾಗಲಿ

- ನಾಗರಾಜಯ್ಯ. ಬಿ , ನಿಟ್ಟರಹಳ್ಳಿ, ಮಧುಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT