ಚುನಾವಣಾ ಸಮೀಕ್ಷೆ ನಿಷೇಧ ಅಧಿಕಾರ ಆಯೋಗಕ್ಕೆ ಇಲ್ಲ: ಸುಪ್ರೀಂ ಕೋರ್ಟ್
ನವದೆಹಲಿ, ಸೆ.14 (ಪಿಟಿಐ, ಯುಎನ್‌ಐ): ‘ಚುನಾವಣಾ ಸಮೀಕ್ಷೆ ಮತ್ತು ಫಲಿತಾಂಶ ಪೂರ್ವ ಸಮೀಕ್ಷೆ ಪ್ರಕಟಣೆ ಮೇಲೆ ನಿಷೇಧ ಹೇರುವ ಮೂಲಕ ಚುನಾವಣಾ ಆಯೋಗವು ತನ್ನ ಅಧಿಕಾರವ್ಯಾಪ್ತಿ ಮೀರಿ ವರ್ತಿಸಿದೆ’ ಎಂದು ತೀವ್ರ ತರಾಟೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದ ಮರುಗಳಿಗೆಯೇ ಆಯೋಗವು ಈ ಸಂಬಂಧದ ತನ್ನ ವಿವಾದಾತ್ಮಕ ಆದೇಶವನ್ನು ಹಿಂತೆಗೆದುಕೊಂಡಿತು.
ಮಾರ್ಗದರ್ಶಿ ಸೂತ್ರಗಳ ಜಾರಿಗೆ ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದವರಿಗೆ ಆದೇಶ ನೀಡಬೇಕೆಂಬ ಚುನಾವಣಾ ಆಯೋಗದ ಅರ್ಜಿಯನ್ನು ಐವರು ಸದಸ್ಯರ ಸಂವಿಧಾನ ಪೀಠವು ತಳ್ಳಿ ಹಾಕಿತು. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ ಚುನಾವಣಾ ಆಯೋಗದ ಕ್ರಮಗಳಿಗೆ ತೀವ್ರ ಹಿನ್ನಡೆಯಾದಂತಾಗಿದೆ.
***
ಬೆಳ್ಳೂರು ಘರ್ಷಣೆ: ಗಾಳಿಯಲ್ಲಿ ಗುಂಡು, ನಿಷೇಧಾಜ್ಞೆ ಜಾರಿ
ಮಂಡ್ಯ: ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ನಿನ್ನೆ ಸಂಜೆ ಎರಡು ರಾಜಕೀಯ ಪಕ್ಷಗಳ ನಡುವೆ ಮಾರಾಮಾರಿ ಘರ್ಷಣೆ ಸಂಭವಿಸಿದ ಪರಿಣಾಮ ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು ಹಾರಿಸಿದ್ದು ಐದು ದಿನಗಳವರೆಗೆ(ಸೆಪ್ಟಂಬರ್ 17ರವರೆಗೆ) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿನ್ನೆ ಸಂಜೆ ಜನತಾದಳ(ಎಸ್) ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಬೆಂಬಲಿಗರು ಜೈಕಾರ ಕೂಗುತ್ತಾ ಹೋಗುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡರ ಬೆಂಬಲಿಗರು ಪ್ರತಿ ಜೈಕಾರ ಕೂಗಿ, ವಾಗ್ವಾದ ನಡೆಸಿದ್ದರು.