ಶನಿವಾರ, ಸೆಪ್ಟೆಂಬರ್ 25, 2021
23 °C

25 ವರ್ಷಗಳ ಹಿಂದೆ, ಭಾನುವಾರ, 08.09.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು, ಸೆ. 7– ಮಾನಸ ಗಂಗೋತ್ರಿಯ ಹಸಿರ ಸಿರಿಯ ಹಿನ್ನೆಲೆಯಲ್ಲಿ, ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಕನ್ನಡ ಚಿತ್ರನಟ ಡಾ. ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಆಳೆತ್ತರದ ಗುಲಾಬಿಯ ಹಾರಗಳು, ಕುಸುರಿ ಕೆಲಸದ ರೇಶಿಮೆಯ ಮಾಲೆಗಳು, ನೆನಪಿನ ಕಾಣಿಕೆಗಳು, ಸಕಲಗುಣ ವಿಶೇಷಣಗಳನ್ನೂ ಹೊತ್ತ ಅಭಿನಂದನ ಪತ್ರ, ಅಭಿಮಾನಿಗಳ ಉತ್ಸಾಹ ಈ ಎಲ್ಲದರ ನಡುವೆ ಹೂತು ಹೋಗಿದ್ದ ರಾ. ರಾಜಕುಮಾರ್ ಅವರಿಗೆ ತವರೂರ ಪುಲಕ. ಹುಟ್ಟಿದ ಜಿಲ್ಲೆಯ ರೋಮಾಂಚನ. ಆನಂದ ಭಾಷ್ಪಗಳನ್ನು ತುಂಬಿಕೊಂಡು ನೆರೆದ ಅಭಿಮಾನಿಗಳ ಮುಂದೆ ಕೃತಜ್ಞತೆ ಹೇಳಿದ ಡಾ. ರಾಜ್, ಅಷ್ಟೇ ಹುರುಪಿನಿಂದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡನ್ನೂ ಹಾಡಿ ಅದಕ್ಕೆ ಹೆಜ್ಜೆಯನ್ನೂ ಹಾಕಿ, ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದರು.

ಮೈಸೂರು ಮಹಾನಗರ ಪಾಲಿಕೆ ಮೈಸೂರು ಜಿಲ್ಲೆಯ, ಡಾ. ರಾಜ್ ಅವರನ್ನು ಅಭಿನಂದಿಸಲು ಏರ್ಪಡಿಸಿದ್ದ ಪೌರ ಸನ್ಮಾನ ಸಹವಾಗಿಯೇ ಎಲ್ಲ ರಂಗುಗಳನ್ನೂ ಪಡೆದುಕೊಂಡಿತ್ತು.

ಬಾಹ್ಯಾಕಾಶ ತಂತ್ರಜ್ಞಾನ ಪರಿಪೂರ್ಣತೆಗೆ ಸಂಕಲ್ಪ

ಬೆಂಗಳೂರು, ಸೆ. 7– ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಯಂ ಪರಿಪೂರ್ಣತೆಯನ್ನು ಸಾಧಿಸುವ ಭಾರತದ ದೃಢಸಂಕಲ್ಪವನ್ನು ಇಂದು ಇಲ್ಲಿ ಪ್ರಕಟಿಸಿದ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಈ ನಿಟ್ಟಿನಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ಸರ್ಕಾರ ಸಂಪೂರ್ಣ ಸಹಕಾರ ನೀಡುವುದು ಎಂದು ಘೋಷಿಸಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಾಹ್ಯಾಕಾಶ ಸಂಶೋಧನೆ ಪೂರಕವಾಗಿದೆ. ಈ ವಲಯದಲ್ಲಿ ಭಾರತ ಹಿಂದೆ ಬೀಳುವುದು ಎಂದೆಂದಿಗೂ ಸಲ್ಲದು ಎಂದೇ ಎಲ್ಲಾ ಬಗೆಯ ಉತ್ತೇಜನ ನೀಡಿಕೆಗೆ ಸರ್ಕಾರ ದೃಢ ನಿಲುವು ತಾಳಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು