ಭುವನೇಶ್ವರ, ಸೆ. 2 (ಪಿಟಿಐ, ಯುಎನ್‌ಐ)– ಒರಿಸ್ಸಾದ ಮಯೂರ್‌ಭಂಜ್ ಜಿಲ್ಲೆಯ ಜಮಾಬನಿ ಹಳ್ಳಿಯಲ್ಲಿ ಇಂದು ಮುಂಜಾನೆ ರೋಮನ್ ಕ್ಯಾಥೊಲಿಕ್ ಧರ್ಮ ಗುರುಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡ ಲಾಗಿದ್ದು, ಚರ್ಚ್‌ಗೆ ಬೆಂಕಿಯಿಡಲಾಗಿದೆ.
ಕಳೆದ ವಾರ ಇದೇ ಜಿಲ್ಲೆಯ ಪರೈಬೇಡ ಹಳ್ಳಿಯಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಕೊಂದ ಕಹಿ ಘಟನೆ ಇನ್ನೂ ಹಸಿರಾಗಿರುವಾಗಲೇ ಈ ಅಮಾನುಷ ಪ್ರಕರಣ ನಡೆದಿದೆ.
ಸ್ಥಳದಲ್ಲೇ ಸಾವು: ಕೇವಂಜಾರ್ ಜಿಲ್ಲೆಯ ಆನಂದಪುರದಲ್ಲಿರುವ ರೋಮನ್ ಕ್ಯಾಥೊಲಿಕ್ ಚರ್ಚ್‌ನ ಧರ್ಮಗುರು ಅರುಳ್ ದಾಸ್ ಅವರು ಜಮಾಬನಿ ಹಳ್ಳಿಯಲ್ಲಿ ತಂಗಿದ್ದರು. ಇಂದು ಮುಂಜಾನೆ ಎರಡು ಗಂಟೆ ಹೊತ್ತಿಗೆ 15ರಿಂದ 20ರಷ್ಟಿದ್ದ ಅಪರಿಚಿತ ದುಷ್ಕರ್ಮಿಗಳು ಬಿಲ್ಲು ಬಾಣಗಳೊಂದಿಗೆ ಬಂದು ದಾಸ್ ಅವರ ಮೇಲೆ ದೊಣ್ಣೆಗಳಿಂದ ತೀವ್ರವಾಗಿ ಹಲ್ಲೆ ನಡೆಸಿದರು. ದಾಸ್ ಅವರು ಜೀವಭಯದಿಂದ ತಪ್ಪಿಸಿಕೊಂಡು ಓಡಿದಾಗ ಅವರ ಮೇಲೆ ಹರಿತವಾದ ಬಾಣ ಬಿಡಲಾಯಿತು. ಅವರು ಘಟನಾ ಸ್ಥಳದಲ್ಲೇ ಮೃತಪಟ್ಟರು.
ಸಚಿವರ ರಾಜೀನಾಮೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ನವದೆಹಲಿ, ಸೆ. 2 (ಯುಎನ್‌ಐ)– ಕರ್ನಾಟಕದ ಇಬ್ಬರು ರಾಜ್ಯ ಮಂತ್ರಿಗಳೂ ಸೇರಿದಂತೆ ಹದಿಮೂರು ಮಂದಿ ಶಾಸಕರಿಗೆ ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆಯನ್ನು ಹೊರಡಿಸಿದೆ.
ಅಧಿಕಾರ ಗ್ರಹಣ ಮಾಡುವ ಮೊದಲು ಈ ಶಾಸಕರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲರಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ರಾಜೀನಾಮೆ ನೀಡುವಂತೆ ಆದೇಶಿಸಿತ್ತು.