ಇಸ್ಲಾಮಾಬಾದ್, ಸೆ. 3 (ರಾಯಿಟರ್ಸ್)– ಕಾಶ್ಮೀರದಲ್ಲಿ ಸೆರೆ ಹಿಡಿಯಲಾಗಿರುವ ಇಬ್ಬರು ಭಾರತೀಯ ಸೈನಿಕರನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿರುವ ಪಾಕಿಸ್ತಾನ, ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗೆ ಹೇಳಿದೆ.
ಬಂಧಿತ ಈ ಇಬ್ಬರು ಸೈನಿಕರ ವಿಡಿಯೊ ಚಿತ್ರಣದ ತುಣುಕುಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಒಂದು ದಿನದ ನಂತರ ವಿದೇಶಾಂಗ ಸಚಿವಾಲಯ ಈ ಪ್ರಕಟಣೆ ಹೊರಡಿಸಿದೆ. ಉತ್ತರ ಕಾಶ್ಮೀರದಲ್ಲಿ ಸೋಮವಾರ ನಡೆದ ಆಕ್ರಮಣದ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ರಾಂ ಸಿಂಗ್ ಮತ್ತು ಸಿಪಾಯಿ ಬಾಜಿಂದರ್ ಸಿಂಗ್ ಅವರನ್ನು ಬಂಧಿಸಿರುವುದಾಗಿ ಸಚಿವಾಲಯ ಇದಕ್ಕೆ ಮುಂಚೆ ಹೇಳಿತ್ತು.
ಸೇನಾ ವಾಹನದ ಮೇಲೆ ಬಾಂಬ್: ಇಬ್ಬರ ಸಾವು
ಗುವಾಹಟಿ, ಸೆ. 3 (ಪಿಟಿಐ, ಯುಎನ್‌ಐ)– ಅಸ್ಸಾಮಿನ ನಾಗಾಂಗ್ ಜಿಲ್ಲೆಯ ಧಿಂಗ್ ಎಂಬಲ್ಲಿ ನಿನ್ನೆ ರಾತ್ರಿ ಶಂಕಿತ ಉಲ್ಫಾ ಉಗ್ರರು ಸೇನಾ ವಾಹನವೊಂದರ ಮೇಲೆ ಕೈಬಾಂಬ್ ಎಸೆದ ಘಟನೆಯಲ್ಲಿ ಸಿಆರ್‌ಪಿಎಫ್‌ನ ಒಬ್ಬ ಯೋಧ ಸಹಿತ ಇಬ್ಬರು ಸತ್ತಿದ್ದಾರೆ.
ಘಟನೆಯಲ್ಲಿ ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್ ಯೋಧರು ಮಾಮೂಲಿ ಗಸ್ತು ನಡೆಸುತ್ತಿದ್ದ ವೇಳೆ ಈ ದುಷ್ಕೃತ್ಯ ಸಂಭವಿಸಿತ್ತು.