ನವದೆಹಲಿ, ಸೆ. 17 (ಪಿಟಿಐ)– ಎಲ್ಲ ಸಂದರ್ಭದಲ್ಲಿ ಪ್ರಾಪ್ತ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ನಿಗದಿಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇಂದು ಕೈಗೊಂಡಿದೆ.
ಸಾಮಾನ್ಯ ಹಾಗೂ ದತ್ತು ತೆಗೆದುಕೊಳ್ಳುವ, ಆಸ್ತಿವರ್ಗಾವಣೆ ಮತ್ತಿತರ ಸಂದರ್ಭಗಳಲ್ಲಿ ಪ್ರಾಪ್ತ ವಯಸ್ಸಿನ ಮಿತಿ ಈವರೆಗೆ 21 ಆಗಿತ್ತು.
ಈಗ ಕೇಂದ್ರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಎಲ್ಲ ಸಂದರ್ಭಗಳಲ್ಲೂ ಪ್ರಾಪ್ತ ವಯಸ್ಸು 18 ಎಂದೇ ಪರಿಗಣಿಸಲಾಗುವುದು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದರು.
––––
‘ಮೈಸೂರು ದಸರಾ ಉತ್ಸವ ಖಚಿತ’
ಮೈಸೂರು, ಸೆ. 17– ‘ಚಿನ್ನದ ಅಂಬಾರಿ ವಿಚಾರ ದೊಡ್ಡ ವಿಷಯವಲ್ಲ. ದಸರಾ ಉತ್ಸವ ನಡೆದೇ ನಡೆಯುತ್ತದೆ’ ಎಂದು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರು ಅಂಬಾರಿ ನೀಡುವ ಬಗ್ಗೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ದಸರಾ ಉತ್ಸವಕ್ಕೆ ತೊಂದರೆಯಾಗುವುದಿಲ್ಲವೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು ‘ಎಂದಿನಂತೆ ದಸರಾ ಉತ್ಸವ ನಡೆಯುವುದಕ್ಕೆ ಯಾವುದೇ ಅಡಚಣೆಯಾಗಲಾರದು’ ಎಂದರು.
ಅಂಬಾರಿಯನ್ನು 18ರೊಳಗೆ ಸರ್ಕಾರಕ್ಕೆ ಒಪ್ಪಿಸುವಂತೆ ಜಿಲ್ಲಾ ವಿಭಾಗಾಧಿಕಾರಿ ರಾಜು ಪ್ರೇಮ್‌ಕುಮಾರ್ ಹಾಗೂ ಅರಮನೆಯ ಭದ್ರತಾ ಸಹಾಯಕ ಆಯುಕ್ತ ಇಕ್ಬಾಲ್ ಖಾನ್ ಒಡೆಯರ್ ಅವರನ್ನು ಬುಧವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದರು.
==========
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.