ನವದೆಹಲಿ, ಆ. 12 (ಪಿಟಿಐ)– ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ನ ಸೂಪರ್ ಸ್ಪೆಷಾಲಿಟಿ ಅಧ್ಯಯನದ ತರಗತಿಗಳಿಗೆ ಭರ್ತಿಯು ಅರ್ಹತೆಯ ಆಧಾರದಲ್ಲಿ ಮಾತ್ರವೇ ನಡೆಯಬೇಕು. ಇದಕ್ಕೆ ಮೀಸಲಾತಿ ಕೂಡದು ಎಂದು ಸುಪ್ರೀಂ ಕೋರ್ಟ್
ಇಂದು ಮಹತ್ವದ, ಚಾರಿತ್ರಿಕ ತೀರ್ಪು ನೀಡಿದೆ.
‘ಸೂಪರ್ ಸ್ಪೆಷಾಲಿಟಿ ಹಂತದಲ್ಲಿ ಅರ್ಹತೆಯ ಆಧಾರದಲ್ಲಿ ಮಾತ್ರ ಪ್ರವೇಶ, ಮೀಸಲಾತಿ ಕೂಡದು’ ಎಂದು ಐವರು
ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ಅವಿರೋಧವಾಗಿ ತೀರ್ಪು ಕೊಟ್ಟಿತು.
ಅಲ್ಲದೆ ವೈದ್ಯಕೀಯದ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಸಾಮಾನ್ಯ ವರ್ಗ ಹಾಗೂ ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಕನಿಷ್ಠ ಅಂಕಗಳ ನಡುವೆ ಭಾರಿ ವ್ಯತ್ಯಾಸ ಇರಬಾರದು ಎಂದು ನಾಲ್ಕು ಪರ ಹಾಗೂ ಒಂದು ವಿರೋಧ ಮತಗಳಿಂದ ಪೀಠವು ಆದೇಶಿಸಿತು.