ಮಂಗಳೂರು, ಆ. 29– ಸಮ್ಮಿಶ್ರ ಸರ್ಕಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಖಚಿತ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಆಗ್ರಹಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಅವರು, ಸಮ್ಮಿಶ್ರ ಸರ್ಕಾರ ಕುರಿತಂತೆ ‘ಅನುಕೂಲಸಿಂಧು’ ಮತ್ತು ‘ಪ್ರಜಾಸತ್ತೆಗೆ ವಿರೋಧಿ’ಯಾದ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ ಎಂದರು.
‘ಬಿಜೆಪಿಯ ಸಮ್ಮಿಶ್ರ ಸರ್ಕಾರವನ್ನು ಟೀಕಿಸುವುದರ ಜತೆಗೆ ತಮ್ಮ ಪಕ್ಷವೇ ಬೆಂಬಲ ನೀಡಿ ನಂತರ ಉರುಳಿಸಿದ್ದ ಸಂಯುಕ್ತ ರಂಗದ ಸರ್ಕಾರದ ವಿರುದ್ಧವೂ ಸೋನಿಯಾ ಟೀಕಿಸಿದ್ದಾರೆ. ಅವುಗಳಿಂದ ಸ್ಥಿರತೆ ಸಾಧ್ಯವಿಲ್ಲ, ಕಾಂಗ್ರೆಸ್ ಒಂದರಿಂದಲೇ ಸ್ಥಿರ ಸರ್ಕಾರ ಸಾಧ್ಯ ಎಂದು ಹೇಳಿದ್ದಾರೆ. ಇದು ಅವರ ಗೊಂದಲದ ದ್ಯೋತಕ’ ಎಂದು ವಾಜಪೇಯಿ ಹೇಳಿದರು.
ಸಂವಿಧಾನ ಉಲ್ಲಂಘನೆ: ಪ್ರಧಾನಿ ವಿರುದ್ಧ ಕಾಂಗ್ರೆಸ್ ಆರೋಪ
ನವದೆಹಲಿ, ಆ. 29 (ಪಿಟಿಐ)– ವಿದೇಶಿ ಮೂಲದ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಹೇಳುವುದರ ಮೂಲಕ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಂವಿಧಾನವು ಯಾವುದೇ ಪ್ರಜೆಗೆ ಜನಾಂಗ, ಧರ್ಮ, ಜಾತಿ, ಸ್ಥಳಗಳ ಆಧಾರದ ಮೇಲೆ ಪಕ್ಷಪಾತ ಮಾಡುವುದಿಲ್ಲ ಎಂದು ಹೇಳುತ್ತದೆ; ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರ ಹೇಳಿಕೆ ಸಂವಿಧಾನದ ಉಲ್ಲಂಘನೆ ಎಂದು ಕಾಂಗ್ರೆಸ್ಸಿನ ವಕ್ತಾರ ಕಪಿಲ್ ಸಿಬಲ್ ಅವರು ಸುದ್ದಿಗಾರರಿಗೆ ಹೇಳಿದರು.