ಗೋವಾ ವಿದ್ಯಮಾನ: ಸಂಸತ್ ಕಲಾಪಕ್ಕೆ ಅಡ್ಡಿ
ನವದೆಹಲಿ, ಜುಲೈ 30 (ಪಿಟಿಐ, ಯುಎನ್‌ಐ)– ಗೋವಾದ ಪ್ರತಾಪ್ ಸಿಂಗ್ ರಾಣೆ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿದ ವಿಷಯ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಪ್ರಸ್ತಾಪವಾಗಿ, ಭಾರಿ ಕೋಲಾಹಲ ಉಂಟಾಯಿತಲ್ಲದೆ ಯಾವುದೇ ಕಲಾಪವನ್ನು ನಡೆಸದೆ ಸದನವನ್ನು ನಾಳೆಗೆ ಮುಂದೂಡಲಾಯಿತು.
ಗೋವಾ ಸರ್ಕಾರವನ್ನು ವಜಾ ಮಾಡಿದ್ದು ‘ಸಂವಿಧಾನ ವಿರೋಧಿ ಕ್ರಮ’ ಎಂದು ಆರೋಪಿಸಿದ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರು ಗೋವಾ ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆ.ಎಫ್.ಆರ್. ಜೇಕಬ್ ಅವರನ್ನು ವಾಪಸು ಕರೆಸಿಕೊಳ್ಳುವಂತೆ ಒತ್ತಾಯಿಸಿದರು. ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಬಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದ ಸದಸ್ಯರು ಸದನದಲ್ಲಿ ಯಾವುದೇ ಕಲಾಪ ನಡೆಯಲು ಅವಕಾಶ ನೀಡಲಿಲ್ಲ.
ಅಪಘಾತ: ಹಿಡಿದಿದ್ದ ಇಬ್ಬರು ಕಳ್ಳರು, ಪೇದೆ ಸೇರಿ ಐದು ಸಾವು
ತುಮಕೂರು, ಜುಲೈ 30– ಶ್ರೀಗಂಧದ ಮರದ ತುಂಡುಗಳ ಕಳ್ಳಸಾಗಣಿಕೆದಾರರನ್ನು ಮೆಟಡಾರ್‌ನಲ್ಲಿ ಪೊಲೀಸರು ಕರೆದುಕೊಂಡು ಬರುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಒಬ್ಬ ಕಾನ್‌ಸ್ಟೆಬಲ್ ಮತ್ತು ಇಬ್ಬರು ಆರೋಪಿಗಳು ಸೇರಿದಂತೆ ಐವರು ಮೃತಪಟ್ಟ ಘಟನೆ ಶಿರಾ ಸಮೀಪದ ಬುಕ್ಕಾಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಸಕಲೇಶಪುರದಿಂದ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಕೊಂಡು ಬಡಕಶಿರಾ ಕಡೆಗೆ ಹೋಗುತ್ತಿದ್ದ ಕಳ್ಳಸಾಗಣಿಕೆದಾರರ ಗುಂಪನ್ನು ನಿನ್ನೆ ರಾತ್ರಿ ಪೊಲೀಸರು ಬುಕ್ಕಾಪಟ್ಟಣ ಸಮೀಪ ಬಂಧಿಸಿದ್ದರು. ಇಂದು ಬೆಳಿಗ್ಗೆ 11 ಗಂಟೆಗೆ ಎಂಟು ಆರೋಪಿಗಳನ್ನು ವಶಪಡಿಸಿಕೊಂಡ ಮೆಟಡಾರ್‌ನಲ್ಲಿಯೇ ಪೊಲೀಸರು ಶಿರಾಕ್ಕೆ ಕರೆದುಕೊಂಡು ಬರುತ್ತಿದ್ದಾಗ ಬುಕ್ಕಾಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಮುಖಾಮುಖಿ ಡಿಕ್ಕಿ ಹೊಡೆಯಿತು.
ಅಪಘಾತದಲ್ಲಿ ಕಾನ್‌ಸ್ಟೆಬಲ್ ನಾಗರಾಜ್ (30), ಆರೋಪಿಗಳಾದ ಚಾಲಕ ಶೇಖರ್ (25) ಮತ್ತು ಉಮೇಶ್ ಹಾಗೂ ಪೊಲಿಸರು ತಮ್ಮ ಸಹಾಯಕ್ಕೆಂದು ಬುಕ್ಕಾಪಟ್ಟಣದಿಂದ ಕರೆದುಕೊಂಡು ಬಂದಿದ್ದ ತಿಪ್ಪೇಸ್ವಾಮಿ (45) ಹಾಗೂ ಚಿತ್ರಶೇಖರ್ (30) ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.