ರಾಷ್ಟ್ರೀಯ ಕ್ರೀಡೆಗೆ ಸಾಂಸ್ಕೃತಿಕ ಮೆರುಗು
ಇಂಫಾಲ, ಫೆ. 14– ‘ಈ ಶತಮಾನದ ಕೊನೆಯ ರಾಷ್ಟ್ರೀಯ ಕ್ರೀಡೆಗಳ ಮೂಲಕ ಕೋಮುಗಲಭೆ ಮತ್ತು ತೀವ್ರಗಾಮಿಗಳ ಬೆದರಿಕೆಯ ಹಿಂದಿನ ಕಹಿ ಘಟನೆಗಳನ್ನು ಮರೆತು ಎಲ್ಲರೂ ಒಂದಾಗಿ ಮುಂದಿನ ಶತಮಾನದ ಆರಂಭದಿಂದಲೇ ಶಾಂತಿಯ ಕಹಳೆ ಮೊಳಗಿಸೋಣ’ ಎಂಬ ಮನೋಭಾವದೊಂದಿಗೆ ರಾಷ್ಟ್ರದ ಎಲ್ಲೆಡೆಯಿಂದ ಬಂದ ಕ್ರೀಡಾಪಟುಗಳು ಐದನೇ ರಾಷ್ಟ್ರೀಯ ಕ್ರೀಡೆಗಳಿಗೆ ನಾಂದಿ ಹಾಡಿದರು.
ಬೆಳಗಿನ ಮಂಜು ಕರಗಿ ಇಂಫಾಲ್ ನಗರದ ಸುತ್ತಲಿನ ಬೆಟ್ಟಗಳು ಮೈ ತೊಳೆದು ಎದ್ದು ಕಾಣತೊಡಗುತ್ತಿದ್ದಂತೆಯೇ ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳ ಮನಸೂರೆಗೊಂಡ ಚಲನಚಿತ್ರ ನಿರ್ದೇಶಕ ಶ್ಯಾಮ್ ಶರ್ಮಾ ಅವರು ರೂಪಿಸಿದ ‘ಮಣಿಪುರ ನನ್ನ ಚಿನ್ನದ ಭೂಮಿ’ ಸಂಗೀತ ಇಡೀ ಕ್ರೀಡಾಂಗಣವೇ ತಲೆದೂಗುವಂತೆ ಮಾಡಿತು.
ಐದನೇ ರಾಷ್ಟ್ರೀಯ ಕ್ರೀಡೆಗಳ ಲಾಂಛನ ಇಲ್ಲಿಯ ಜನಪ್ರಿಯ ಪ್ರಾಣಿ ಕಡವೆ ‘ಪಾಂಗೈ’ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಅದನ್ನು ಮಣಿಪುರದ ತಾಯಂದಿರು ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಆದರದಿಂದ ಬರಮಾಡಿಕೊಂಡರು.